ಮಂಗಳೂರು: ಜೂನ್ ೩೦ರ ಬಳಿಕ ಭಾರತದಲ್ಲಿ ಅತಿ ಕಡಿಮೆ ಮೌಲ್ಯದ ನಾಣ್ಯವಾಗಿ ೫೦ಪೈಸೆಯ ನಾಣ್ಯ ಚಲಾವಣೆಯಲ್ಲಿ ಇರಲಿದೆ. ಕೇಂದ್ರ ಸರಕಾರ ಹೊರಡಿಸಿರುವ ಆದೇಶದ ಪ್ರಕಾರ ಜೂನ್ ೩೦ರ ಬಳಿಕ ೨೫ಪೈಸೆ ಹಾಗೂ ಅದಕ್ಕಿಂತ ಕಡಿಮೆ ಮೌಲ್ಯದ ನಾಣ್ಯಗಳು ಚಲಾವಣೆಯಲ್ಲಿ ಇರುವುದಿಲ್ಲ. ಇನ್ನು ಮುಂದಿನ ದಿನಗಳಲ್ಲಿ ವ್ಯಾಪಾರದಲ್ಲಿ, ಲೆಕ್ಕಪತ್ರದಲ್ಲಿ ತೆರಿಗೆಗಳಲ್ಲಿ ೫೦ಪೈಸೆಯನ್ನು ಕನಿಷ್ಠ ಮೊತ್ತವನ್ನಾಗಿ ಮಾರ್ಪಡಿಸಬೇಕಾಗಿದೆ.
ಕಳೆದ ಮೂರು ನಾಲ್ಕು ವರ್ಷಗಳಿಂದ ಮಾರುಕಟ್ಟೆಯಲ್ಲಿ ೨೫ಪೈಸೆ ಬೆಲೆ ಕಳೆದು ಕೊಳ್ಳುತ್ತ ಬಂದಿದ್ದು, ಗ್ರಾಹಕರು ಹಾಗೂ ವ್ಯಾಪಾರಿಗಳು ೨೫ಪೈಸೆಯನ್ನು ಪಡೆಯಲು ಹಿಂಜರಿಯುತ್ತಿದ್ದರು. ಕೇಂದ್ರ ಸರಕಾರ ಈ ನಾಣ್ಯದ ಚಲಾವಣೆಯನ್ನು ತಡೆಯುವ ಮೊದಲೇ ಸಾರ್ವಜನಿಕರು ಅದರ ಮೌಲ್ಯವನ್ನು ನಿವಾಳಿಸಿದ್ದರು. ಈಗ ಅದಕ್ಕೆ ಸರಕಾರದ ಅಧಿಕೃತ ಮುದ್ರೆ ಬಿದ್ದಂತಾಗಿದೆ.
ಮಂಗಳೂರು ನಗರದ ಹೊರತಾಗಿ ಕೆಲವು ಒಳನಾಡಿನ ಪ್ರದೇಶಗಳಲ್ಲಿ ೨೫ಪೈಸೆಯ ನಾಣ್ಯಕ್ಕೆ ಕಿಮ್ಮತ್ತೇ ಇರಲಿಲ್ಲ. ೨೫ಪೈಸೆಯ ಚಿಲ್ಲರೆ ಕೊಡುವ ಅನಿವಾರ್ಯತೆ ಇದ್ದಲ್ಲಿ ಅದಕ್ಕೆ ಬದಲಾಗಿ ಚಾಕಲೇಟ್ ಕೊಡುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿತ್ತು. ಈಗ ೨೫ಪೈಸೆಗೆ ಬೆಲೆ ಇಲ್ಲದಂತಾಗಿರುವುದರಿಂದ ೨೫ಪೈಸೆಗೆ ಸಿಗುವ ಚಾಕಲೇಟ್ಗಳೂ ಮಾಯವಾಗುವ ಸಾಧ್ಯತೆಗಳಿವೆ. ಈಗ ಮಾರುಕಟ್ಟೆಯಲ್ಲಿರುವ ೨೫ಪೈಸೆಯ ಮೌಲ್ಯದ ವಸ್ತುಗಳು ಜೂನ್ ೩೦ರ ಬಳಿಕ ಹೆಚ್ಚಿನ ಮೌಲ್ಯ ಪಡೆದುಕೊಳ್ಳಲಿವೆ.
೨೫ಪೈಸೆಯನ್ನು ಕೆಜಿಯ ಲೆಕ್ಕದಲ್ಲಿ ಪಡೆಯುವ ಗುಜರಿ ವ್ಯಾಪಾರಿಗಳೂ ಇದ್ದಾರೆ. ಹೀಗೆ ಪಡೆದ ನಾಣ್ಯವನ್ನು ಕರಗಿಸಿ ಅದರಲ್ಲಿರುವ ಧಾತುಗಳನ್ನು ಬೇರ್ಪಡಿಸಿ ಲಾಭ ಪಡೆಯುವ ಪ್ರಕ್ರಿಯೆ ಕಳೆದ ಮೂರು ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ಇದೇ ಕಾರಣದಿಂದ ೨೫ಪೈಸೆ ನಾಣ್ಯದ ಅಭಾವ ಇತ್ತು ಎನ್ನುತ್ತಾರೆ ವ್ಯಾಪಾರಿಯೋರ್ವರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ