ಮಂಗಳವಾರ, ಫೆಬ್ರವರಿ 01, 2011

ಕರ್ಪೆ ಎಂಬಲ್ಲಿನ ಮಸೀದಿಗೆ ಕಳೆದ ವಾರ ಕಲ್ಲು ತೂರಾಟ

ಬಂಟ್ವಾಳ: ಪುರಸಭೆಯ ಹಿರಿಯ ಸದಸ್ಯ, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಎ. ಗೋವಿಂದ ಪ್ರಭು ಮೇಲೆ ಪುತ್ತೂರು ಎಎಸ್ಪಿ ಡಾ. ಅಮಿತ್ ಸಿಂಗ್ ಹಲ್ಲೆ ನಡೆಸಿದ ಘಟನೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಠಾಣೆಗೆ ಮುತ್ತಿಗೆ ಹಾಕಿದ ಬಿಜೆಪಿಯ ಮುಖಂಡರು ಘಟನೆಯನ್ನು ಖಂಡಿಸಿದ್ದಾರೆ.
ಘಟನೆಯ ವಿವರ
ತಾಲೂಕಿನ ಸಂಗಬೆಟ್ಟು ಗ್ರಾಮದ ಕರ್ಪೆ ಎಂಬಲ್ಲಿನ ಮಸೀದಿಗೆ ಕಳೆದ ವಾರ ಕಲ್ಲು ತೂರಾಟ ನಡೆದಿತ್ತು. ಈ ಸಂಬಂಧ ಸ್ಥಳೀಯ ನಿವಾಸಿ ತಿಮ್ಮಪ್ಪ ಪೂಜಾರಿ ಸಹಿತ ಮೂವರನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಇವರ ವಿಚಾರಣೆಯ ಸಂದರ್ಭ ಠಾಣೆಗೆ ತೆರಳಿದ್ದ ಗೋವಿಂದ ಪ್ರಭುಗೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಠಾಣೆಗೆ ಹೋಗಿದ್ದವರ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂಬು ದು ಬಿಜೆಪಿಯವರ ಆರೋಪವಾಗಿದೆ. ಗೋವಿಂದ ಪ್ರಭು ಜೊತೆಗಿದ್ದ ನಾವೂರು ಗ್ರಾ. ಪಂ. ಅಧ್ಯಕ್ಷ ಹರೀಶ್ ಆಚಾರ್ಯ ಎಂಬವರ ಮೇಲೂ ಪೆಟ್ಟು ಬಿದ್ದಿದೆ.
ಠಾಣೆ ಎದುರು ಧರಣಿ ಘಟನೆ ನಡೆದ ಬೆನ್ನಿಗೆ ಠಾಣೆಗೆ ಮುತ್ತಿಗೆ ಹಾಕಿದ ಬಿಜೆಪಿ ಮುಖಂಡರು ಗೋವಿಂದ ಪ್ರಭು ಮೇಲೆ ನಡೆದ ಪೊಲೀಸ್ ಹಲ್ಲೆಯನ್ನು ಮೇಲಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. ಪೊಲೀಸ್ ಅಧಿಕಾರಿ ಡಾ. ಅಮಿತ್ ಸಿಂಗ್ ತಮ್ಮ ವರ್ತನೆಯ ಬಗ್ಗೆ ಕ್ಷಮೆಯಾಚಿಸಲಿ ಎಂದು ಒತ್ತಾ ಯಿಸಿದ್ದಾರೆ. ಠಾಣೆಗೆ ಧಾವಿಸಿದ ಬಿಜೆಪಿಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಉನ್ನತ ಪೊಲೀಸ್ ಅಧಿಕಾರಿಗಳು ಬಿಜೆಪಿ ಮುಖಂಡರಲ್ಲಿ ವಿಷಾದ ವ್ಯಕ್ತಪಡಿಸಿದ್ದರೂ, ಮುಖಂಡರು ಪಟ್ಟು ಬಿಡದೆ ಠಾಣೆಯಲ್ಲೇ ಕುಳಿತರು.
ನಳಿನ್ ಭೇಟಿ: ನಿನ್ನೆ ರಾತ್ರಿಯಿಡೀ ಠಾಣೆಯಲ್ಲೇ ಝಂಡಾ ಊರಿದ್ದ ಸಂಘಪರಿವಾರದ ಮುಖಂಡರು ಕಪಾಳಮೋಕ್ಷ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಅಮಿತ್ ಸಿಂಗ್ ಅವರ ವರ್ಗಾವಣೆಗೂ ಪ್ರಯತ್ನ ನಡೆಯುತ್ತಿದೆ. ಖಡಕ್ ಅಧಿಕಾರಿ ಎಂದೇ ಹೆಸರು ಮಾಡಿರುವ ಅಮಿತ್ ಸಿಂಗ್ ರಾಜಕಾರಣಿಗಳಲ್ಲಿ ಕ್ಷಮೆ ಕೇಳಲಾರೆ ಎಂದಿದ್ದಾರೆ. ಈ ನಡುವೆ ಸಂಸದ ನಳಿನ್‌ಕುಮಾರ್ ಠಾಣೆಗೆ ಧಾವಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಇಂದು ಸಿಂಗ್ ವಿರುದ್ಧ ಸಂಘಪರಿವಾರ ಪ್ರತಿಭಟನೆ ನಡೆಸುವ ಸಾಧ್ಯತೆಯೂ ಇದೆ.
‘ತನಿಖೆಗೆ ಅಡ್ಡಿ’
ಆರೋಪಿಗಳನ್ನು ನಿನ್ನೆಯಷ್ಟೇ ಬಂಧಿಸಿ ವಿಚಾರಣೆಗೊಳಪಡಿಸಿದ್ದೇವೆ. ಇನ್ನೂ ವಿಚಾರಣೆ ಮುಗಿದಿರಲಿಲ್ಲ. ಅಲ್ಲದೇ ಇದು ಕೋಮು ಸೂಕ್ಷ್ಮ ಪ್ರಕರಣವಾದ್ದರಿಂದ ಗಂಭೀರ ವಿಚಾರಣೆ ನಡೆಸಬೇಕೆನ್ನುವ ನಿರ್ದೇಶನವೂ ಮೇಲಧಿಕಾರಿಗಳಿಂದ ಇತ್ತು. ಈ ಸಂದಿಗ್ಧತೆಯ ನಡುವೆಯೂ ನಮ್ಮ ಸಿಬ್ಬಂದಿಗೆ ಆರೋಪಿಗಳನ್ನು ವಿಚಾರಿಸಲು ಗೋವಿಂದ ಪ್ರಭು ಹಾಗೂ ಇನ್ನಿತರು ಅಡ್ಡಿಪಡಿಸಿದ್ದರು. ಫೋನ್ ಮಾಡಿ ಕಿರುಕುಳ ನೀಡಿದ್ದರು. ಈ ವಿಚಾರದ ಬಗ್ಗೆ ಅವರಲ್ಲಿ ಚರ್ಚಿಸಿದ್ದೇನೆಯೇ ಹೊರತು ಹಲ್ಲೆ ನಡೆಸಿಲ್ಲ ಎಂದಿದ್ದಾರೆ ಪುತ್ತೂರು ಎಎಸ್ಪಿ ಡಾ. ಅಮಿತ್ ಸಿಂಗ್ ಅವರು. ಈ ಹಿಂದೆಯೂ ಕರ್ಪೆ ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿ ತಿಮ್ಮಪ್ಪ ಪೂಜಾರಿ ಎಂಬಾತ ಈ ಹಿಂದೆ ರಾಯಿ ಸಮೀಪದ ನಾರಾಯಣ ಗುರು ಮಂದಿರದ ಮೇಲೂ ಕಲ್ಲು ತೂರಾಟ ನಡೆಸಿ ಅಶಾಂತಿ ಸೃಷ್ಟಿಸಲು ಯತ್ನಿಸಿದ್ದ. ಇಂಥ ಸಮಾಜಘಾತುಕರಿಗೆ ಬೆಂಬಲ ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಇಲ್ಲಿನ ಕಾಂಗ್ರೆಸ್ ಮುಖಂಡರೋರ್ವರು ಗೋವಿಂದ ಪ್ರಭು ಈ ಹಿಂದೆ ತಾಲೂಕು ಕಚೇರಿಯ ಕರ್ತವ್ಯಕ್ಕೆ ಅಡ್ಡಿಪಡಿಸುವ ಕೃತ್ಯವೂ ನಡೆಸಿದ್ದರು ಎಂದು ಆರೋಪಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ