- ಬಹಿರಂಗ ಪತ್ರ : ಹರೀಶ್ ಪೂಜಾರಿ, ಬಂಟ್ವಾಳ
ಒಂದು ಕಾಲದಲ್ಲಿ ಬಜರಂಗಿಗಳ ಪಡೆಗೆ ದಂಡನಾಯಕನಾಗಿದ್ದ ಮಹೇಂದ್ರ ಕುಮಾರ್ ಈಗ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿ ದ್ದಾರೆ. ಚರ್ಚ್ ದಾಳಿಯ ಪ್ರಮುಖ ಆರೋಪಿ ಯೂ ಆಗಿದ್ದ ಮಹೇಂದ್ರ ಕುಮಾರ್ ಇದ್ದಕ್ಕಿದ್ದಂತೆ ತನ್ನ ಹಿಂದುತ್ವ ಸಿದ್ಧಾಂತಕ್ಕೆ ಬೆನ್ನು ಹಾಕಿ ಜಾತ್ಯತೀತ ಸಿದ್ದಾಂತವನ್ನು ಅಪ್ಪಿಕೊಳ್ಳಲು ಕಾರಣ ಏನೆಂಬುದನ್ನು ಈ ಮನುಷ್ಯನೇ ಆಗಾಗ ಟಿ.ವಿ. ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.
ಮಹೇಂದ್ರ ಪ್ರಕಾರ ಬಿಜೆಪಿಯದ್ದು ನಿಜ ವಾದ ಹಿಂದುತ್ವವಲ್ಲ, ಅದು ರಾಜಕೀಯ ಪ್ರಣೀತ ಹಿಂದುತ್ವ. ಈ ಮನುಷ್ಯ ಅದ್ಭುತ ಮಾತುಗಾರ. ಯಾವುದನ್ನು ಬೇಕಾದರೂ ಸಮ ರ್ಥಿಸುವ ಜಾಣ್ಮೆ ಹೊಂದಿರುವ ಯುವಕ. ಬಜ ರಂಗದಳದಂಥ ಹಾರ್ಡ್‌ಕೋರ್ ಕ್ರಿಮಿನಲ್ ಗಳೇ ಹೆಚ್ಚಾಗಿರುವ ಸಂಘಟನೆಗೆ ಮಹೇಂದ್ರ ಸಂಚಾಲಕನಾಗಿದ್ದು ಅದ್ಭುತವೇ ಆಗಿತ್ತು. ಈ ಮನುಷ್ಯನ ಬದಲಾಗುತ್ತಿರುವ ಸೈದ್ಧಾಂತಿಕ ಭಿನ್ನತೆಗಳನ್ನು ಗಮನಿಸಿದ್ದೇನೆ. ಈತ ತುಂಬಾ ಕಾಲ ಬಜರಂಗದಳದಲ್ಲಿ ಇರಲಾರ ಎಂದು ಆಗಲೇ ಅನ್ನಿಸಿತ್ತು. ಮಹೇಂದ್ರನ ಮನಸಿನಲ್ಲಿ ನಿಜವಾಗಿಯೂ ಹಿಂದು ಸಮುದಾಯಕ್ಕೆ ಏನಾ ದರೂ ಮಾಡಬೇಕೆಂಬ ತುಡಿತ ಇತ್ತು. ಆತ ಹೇಳುತ್ತಿದ್ದ ಹಿಂದುತ್ವ ಎಂದರೆ ಬ್ರಾಹ್ಮಣರು, ಮೇಲ್ವರ್ಗದವರ ಕಪಿಮುಷ್ಠಿಯಲ್ಲಿರುವ ಹಿಂದುತ್ವ ವಲ್ಲ, ಅದು ಈ ನೆಲದ ವಾರೀಸುದಾರರು ಪಾಲಿಸಿಕೊಂಡು ಬಂದಿರುವ ಹಿಂದುತ್ವ.
ಸಮಾಜದ ಕೆಳವರ್ಗದ ಬಗ್ಗೆ ಈ ಮನುಷ್ಯ ಮಾತಾಡುತ್ತಿದ್ದಾರೆ. ಹಾಗಾಗಿ ಬಜರಂಗದಳದಿಂದ ಸದ್ಯದಲ್ಲೇ ಈತನಿಗೆ ಗೇಟ್‌ಪಾಸ್ ಸಿಗುವುದು ಗ್ಯಾರಂಟಿ ಎಂದುಕೊಂಡಿದ್ದೆ. ಆದರೆ ವಿಚಿತ್ರ ಸನ್ನಿವೇಶದಲ್ಲಿ ಮಹೇಂದ್ರ ತನ್ನ ಸಂಘಟನೆಯ ಕಪಿಗಳ ಕಾರ‍್ಯಾಚರಣೆಯನ್ನು ಸಮರ್ಥಿಸಲು ಹೋಗಿ ಬಲಿಪಶುಕ್ಕೀಡಾದರು. ಮಂಗಳೂರಿನ ಚರ್ಚ್ ದಾಳಿ ಅಂತಾರಾಷ್ಟ್ರೀಯವಾಗಿ ಗಮನ ಸೆಳೆಯಿತು. ಬಜರಂಗದಳ ಮತಾಂತರ ಮಾಡು ತ್ತಿದ್ದ ಕೇಂದ್ರದ ಮೇಲೆ ದಾಳಿ ಮಾಡುವ ಆತುರದಲ್ಲಿ ಮಿಲಾಗ್ರಿಸ್‌ನಲ್ಲಿ ಕೆಥೊಲಿಕ್ಕರ ಕೇಂದ್ರಕ್ಕೂ ದಾಳಿ ಮಾಡಿತು. ಇದೊಂದೇ ತಪ್ಪು ಬಜರಂಗದಳವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿತು.
ಹಿಂದೂ ಗಳೊಂದಿಗೆ ಸೌಹಾರ್ದತೆಯಿಂದಿದ್ದ ಕೆಥೊಲಿಕ್ ಕ್ರೈಸ್ತರು ಈ ದಾಳಿಯ ನಂತರ ಹಿಂದೂ ಸಮಾಜವನ್ನು ಅನುಮಾನದಿಂದ ನೋಡುವಂತಾಯಿತು. ಇಲ್ಲಿರುವ ಮಾಧ್ಯಮ ಗಳು, ಕ್ರೈಸ್ತರಿಗಿಂತ ಅಂತರಾಷ್ಟ್ರೀಯ ನಂಟು ಚರ್ಚ್ ದಾಳಿಯನ್ನು ದೊಡ್ಡ ವಿಷಯವನ್ನಾಗಿ ಮಾಡಿತು. ಆದರೆ ಲೋಕಸಭೆಯಲ್ಲಿ ಇದನ್ನು ಎನ್‌ಕ್ಯಾಶ್ ಮಾಡಬಹುದೆಂದು ಯೋಚಿಸಿದ್ದ ಕಾಂಗ್ರೆಸ್ ಎಡವಿತು. ಕ್ರೈಸ್ತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಚರ್ಚ್‌ನಲ್ಲಿ ಹೇಳಿದಾಗ ಹಿಂದೂಗಳ ಹಿಂದುತ್ವ ಜಾಗೃತಿಗೊಂಡಿತು. ಪರಿಣಾಮ ನಳಿನ್ ಕುಮಾರ್ ಗೆದ್ದು ಬಂದರು.
ಆದರೆ ಇದರ ಹಿಂದೆ ಇದ್ದ ಮಹೇಂದ್ರ ಜೈಲು ಸೇರುವಂತಾಯಿತು. ಕೇಸುಗಳ ಮೇಲೆ ಕೇಸನ್ನು ಬಿಜೆಪಿ ಸರಕಾರವೇ ಮಹೇಂದ್ರನ ಮೇಲೆ ಹಾಕಿತು. ಮಹೇಂದ್ರಗೆ ಮಂಗಳೂರು ಜೈಲಿನಲ್ಲಿ ಜ್ಞಾನೋದಯವಾಯಿತು.
ಮಹೇಂದ್ರ ಸದಾ ಹೇಳುತ್ತಿದ್ದ ಹಿಂದೂ, ಮಹಿಳೆ, ಮತ್ತಾಕೆಯ ಕುಟುಂಬದ ಕ್ರೈಸ್ತ ಧರ್ಮ ಸ್ವೀಕಾರ ಕಥೆ ಹಿಂದೂಗಳ ಕಣ್ಣು ತೆರೆಸಬೇಕು. ಶ್ರೀಮಂತೆಯಾಗಿದ್ದ ಆಕೆಗೆ ಮೂವರು ಹೆಣ್ಣು ಮಕ್ಕಳಿದ್ದರು. ಗಂಡ ಇದ್ದಕ್ಕಿದ್ದಂತೆ ಸತ್ತು ಹೋದ. ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಜಗಳ ನಡೆಯಿತು. ಮಹಿಳೆಯನ್ನು ಸಲಹುವವರು ಯಾರೂ ಇರಲಿಲ್ಲ. ಮೂವರು ಹೆಣ್ಣು ಮಕ್ಕಳೊಂದಿಗೆ ಬೀದಿಗೆ ಬಿದ್ದ ಮಹಿಳೆ ಯಾರ‍್ಯಾರ ದೋ ಮನೆಯಲ್ಲಿ ಕಸ-ಮುಸುರೆ ತೊಳೆದು ಜೀವನ ಸಾಗಿಸಿದಳು. ಸಹಾಯಕ್ಕಾಗಿ ಮಠ ಮಂದಿರ, ಜಾತಿ ಸಂಘಟನೆಗಳತ್ತ ಕೈ ಚಾಚಿದಳು. ಆದರೆ ಅವರು ಯಾರೂ ಸಹಾಯ ಮಾಡಲಿಲ್ಲ. ಕೊನೆಗೆ ಆಕೆಯ ಕಷ್ಟಕ್ಕೆ ನೆರವಾದವರು ಕ್ರೈಸ್ತ ಧರ್ಮೀಯರು.
ಹಿಂದುತ್ವದ ಅಮಲು ದಯವಿಟ್ಟು ಬೇಡ. ನಮಗೆ ಮಸೀದಿ, ಚರ್ಚ್ ಅನ್ನು ಪುಡಿ ಮಾಡುವುದಕ್ಕಿಂತಲೂ ಮೊದಲು ಹಿಂದೂ ಧರ್ಮದೊಳಗಿರುವ ವಿಕಾರತೆಗಳನ್ನು ನಾಶ ಮಾಡಬೇಕು. ನೂರೆಂಟು ಸಮಸ್ಯೆಯಿಂದ ನರಳುತ್ತಿರುವ ಹಿಂದೂ ಧರ್ಮಕ್ಕೆ ಈಗ ಬೇಕಾಗಿರುವುದು ಕೋಟ್ಯಂತರ ವೆಚ್ಚದ ರಾಮ ಮಂದಿರವಲ್ಲ, ಅಸ್ಪೃಶ್ಯತೆ, ಜಾತಿ ಪದ್ಧತಿಯ ನಿವಾರಣೆ.
ಈಗ ಹಿಂದೂ ಮಹಿಳೆ ಮತ್ತಾಕೆಯ ಮೂವರು ಮಕ್ಕಳು ಕ್ರೈಸ್ತರಾಗಿದ್ದಾರೆ. ಮಹೇಂದ್ರ ಆಕೆಯನ್ನು ಭೇಟಿ ಮಾಡಿದಾಗ ಆಕೆ ಹೇಳಿದ್ದು ‘ನನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಮಾಡಿದ್ದು ಹಿಂದೂ ಧರ್ಮವೇ’ ಆಕೆಗೆ ಧರ್ಮಕ್ಕಿಂತ ಬದುಕು ಮುಖ್ಯವಾಗಿತ್ತು.
ಒಬ್ಬ ಮಹೇಂದ್ರನನ್ನು ಮಾತ್ರವಲ್ಲ, ಹಿಂದೂ ಸಂಘಟನೆಗಳಲ್ಲಿ ನೈಜ ಕಾಳಜಿಯಿಂದ ರಾತ್ರಿ, ಹಗಲು ಹಿಂದುತ್ವ ಎಂದು ದುಡಿಯುತ್ತಿರುವವರು ತಮ್ಮಲ್ಲಿಯೇ ಕೇಳಿಕೊಳ್ಳಬೇಕಾದ ಪ್ರಶ್ನೆ ಇದು. ಬಜರಂಗದಳ ಕೆಳವರ್ಗದ ಜನರನ್ನು ಆತ್ಮಗೌರವದಿಂದ ಬದುಕಿ ಎಂದು ಸಹಾಯ ಮಾಡಿದೆಯೇ? ಎಷ್ಟು ಮಂದಿ ಆರ್‌ಎಸ್‌ಎಸ್ ಮುಖಂಡರು ದಲಿತ ಕಾಲೊನಿಯಲ್ಲಿ ಬೈಠಕ್ ಮಾಡಿದ್ದಾರೆ? ಆರ್‌ಎಸ್‌ಎಸ್ ಮೂಲದಿಂದ ಬಂದವರು ಎಂದು ಹೇಳಿಕೊಳ್ಳುತ್ತಿರುವ ಯಡಿಯೂರಪ್ಪ, ಸದಾನಂದ ಗೌಡ, ಈಶ್ವರಪ್ಪ ಮೊದಲಾದ ನಾಯಕರು ಎಷ್ಟು ಕೆಳವರ್ಗದ, ಆರ್ಥಿಕ ಕಷ್ಟದ ಹಿಂದೂಗಳಿಗೆ ಸಹಾಯ ಮಾಡುತ್ತಿದ್ದಾರೆ? ಕೋಟಿಗಟ್ಟಲೆ ದುಡ್ಡು ಮಾಡಿರುವ ಯಡಿಯೂರಪ್ಪ ತಮ್ಮ ಮಕ್ಕಳ ಹೆಸರಿನಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಎಷ್ಟು ಜನ ಹಿಂದೂಗಳನ್ನು ಉಚಿತವಾಗಿ ಕಲಿಸುತ್ತಿದ್ದಾರೆ?
ಹಿಂದೂ ಸಂಘಟನೆಗಳಲ್ಲಿರುವ ಜನರಿಗೆ ಯಾಕೆ ಮುಸ್ಲಿಮರೇ ಶತ್ರುವಾಗಿ ಕಾಣುತ್ತಿದ್ದಾರೆ? ಹಿಂದೂ ಸಮಾಜದ ಅಸ್ಪೃಶ್ಯತೆ ಶತ್ರುವಾಗಿ ಕಾಡುವುದಿಲ್ಲವೇ? ಹಿಂದೂ ಸಮಾಜೋತ್ಸವ ಮಾಡಿದ ಕೂಡಲೇ ಹಿಂದೂ ಜಾಗೃತಿ ಆಗುತ್ತದೆಯೇ? ರಾಮ ಮಂದಿರ ಹಿಂದೂಗಳ ಸ್ವಾಭಿಮಾನದ ಪ್ರಶ್ನೆ ಹೇಗಾಗುತ್ತದೆ? ರಾಮ ಮಂದಿರಕ್ಕೆ ಆಗುವ ಅಷ್ಟೂ ಖರ್ಚನ್ನು ಬಡ ಹಿಂದೂಗಳ ಉದ್ಧಾರಕ್ಕೆ ಖರ್ಚು ಮಾಡಿ. ಆಗ ಹಿಂದೂ ಸಮಾಜದಲ್ಲಿ ಏನಾದರೂ ಬದಲಾವಣೆ ಆಗಬಹುದು.
ಹಿಂದೂ ಸಂಘಟನೆಗಳಲ್ಲಿರುವ ಹುಡುಗರೇ, ನಿಮ್ಮನ್ನು ನೀವೇ ಆತ್ಮವಿಮರ್ಶೆಗೆ ಒಡ್ಡಿಕೊಳ್ಳಿ. ಇಷ್ಟು ದಿನಗಳ ಕಾಲ ನಿಮ್ಮನ್ನು ಹಿಂದುತ್ವದ ಹೆಸರಿನಲ್ಲಿ ಯಾವುದಕ್ಕೆಲ್ಲಾ ಉಪಯೋಗಿಸಿ ಕೊಳ್ಳಲಾಯಿತು ಎನ್ನುವುದನ್ನು ಒಮ್ಮೆ ಮುಕ್ತ ಮನಸ್ಸಿನಿಂದ ಚಿಂತಿಸಿ. ನಿಮ್ಮನ್ನು ಮುಖಂಡರು ತಾವು ಬೆಳೆಯಲು ದಾಳವಾಗಿ ಉಪಯೋಗಿ ಸಿಕೊಂಡರು. ಆದರೆ ಅವರೆಲ್ಲರೂ ಇಂದು ಆರ್ಥಿಕವಾಗಿ ಗಟ್ಟಿಯಾಗಿದ್ದಾರೆ. ಅನ್ಯ ಧರ್ಮೀ ಯರೊಂದಿಗೆ ಅನೋನ್ಯತೆಯನ್ನೂ ಹೊಂದಿ ದ್ದಾರೆ. ನಿಮ್ಮಂಥ ಮೂರ್ಖರು ನಿತ್ಯ ಅನ್ಯ ಧರ್ಮೀಯರೊಂದಿಗೆ ದ್ವೇಷ ಕಟ್ಟಿಕೊ ಳ್ಳುವುದು. ನಿಮ್ಮನ್ನು ನಿಯಂತ್ರಿಸುವ ಮುಖಂಡರು ಅವರ ಜೊತೆ ವ್ಯವಹಾರ ಸಂಬಂಧ ಇಟ್ಟುಕೊಳ್ಳುತ್ತಾರೆ. ನೀವು ಒಮ್ಮೆ ಜೈಲಿಗೆ ಹೋದರೆ ನಿಮ್ಮನ್ನು ನೋಡಲು, ನಿಮ್ಮನ್ನು ಬಿಡುಗಡೆ ಮಾಡಲು ಜಾಮೀನಿಗೆ ವ್ಯವಸ್ಥೆ ಮಾಡುತ್ತಾರೆ. ಇದರಿಂದ ಖುಷಿಯಾಗಬೇಡಿ. ಅದು ನಿಮ್ಮನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಧಾನ.
ಒಮ್ಮೆ ಹತ್ಯೆಗೀಡಾದ ಹಿಂದೂ ಮುಖಂಡರ ಕುಟುಂಬವನ್ನು ನೋಡಿ. ಯಾವ ಬಿಜೆಪಿ ಮುಖಂಡ ಕೂಡಾ ಅವರನ್ನು ಸಾಕುತ್ತಿಲ್ಲ. ಅವರು ನಿತ್ಯದ ತುತ್ತಿಗೆ ಎಷ್ಟೊಂದು ಕಷ್ಟ ಪಡುತ್ತಿದ್ದಾರೆ ಎನ್ನುವುದನ್ನು ನಿಮಗೆ ಹೇಳಬೇಕೇ? ಹಿಂದುತ್ವದ ಅಮಲು ದಯವಿಟ್ಟು ಬೇಡ. ನಮಗೆ ಮಸೀದಿ, ಚರ್ಚ್ ಅನ್ನು ಪುಡಿ ಮಾಡುವುದಕ್ಕಿಂತಲೂ ಮೊದಲು ಹಿಂದೂ ಧರ್ಮದೊಳಗಿರುವ ವಿಕಾರತೆಗಳನ್ನು ನಾಶ ಮಾಡಬೇಕು. ನೂರೆಂಟು ಸಮಸ್ಯೆಯಿಂದ ನರಳುತ್ತಿರುವ ಹಿಂದೂ ಧರ್ಮಕ್ಕೆ ಈಗ ಬೇಕಾಗಿರುವುದು ಕೋಟ್ಯಂತರ ವೆಚ್ಚದ ರಾಮ ಮಂದಿರವಲ್ಲ, ಅಸ್ಪೃಶ್ಯತೆ, ಜಾತಿ ಪದ್ಧತಿಯ ನಿವಾರಣೆ.
ಇನ್ನೂ ನೀವು ಶತ್ರುಗಳೆಂದು ಕ್ರೈಸ್ತ, ಮುಸ್ಲಿಮರತ್ತಲೇ ನೋಡುತ್ತಿದ್ದೀರಿ ಎಂದಾದರೆ ನೀವು ಬಿಜೆಪಿಯ ಮತಬ್ಯಾಂಕ್‌ನ ಮತಭ್ರಾಂತರು ಎಂದೇ ಉಲ್ಲೇಖಿಸಬೇಕಾಗುತ್ತದೆ.
ಬಜರಂಗಿಗಳೇ, ಮಹೇಂದ್ರ ಹೇಳಿದ ಸತ್ಯ ಅರ್ಥವಾಯಿತೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ