ಬಂಟ್ವಾಳ, ಡಿ.31: ಮತದಾರರಿಗೆ ಹಣ ಹಂಚುತ್ತಿದ್ದ ಆರೋಪದ ಮೇಲೆ ಬಂಟ್ವಾಳ ಪೊಲೀಸರ ತಂಡ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೇರಿದ 16 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಆರೋಪಿಗಳಿಂದ 1.23 ಲಕ್ಷ ರೂ. ನಗದು ಹಾಗೂ 20 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಗೋಳ್ತಮಜಲು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ಹಣ ಹಂಚಲಾಗುತ್ತಿತ್ತು ಎಂದು ಆರೋಪಿಸಲಾಗಿದ್ದು, ಕಾರ್ಯಾಚರಣೆ ನಡೆಸಿದ ಬಂಟ್ವಾಳ ವೃತ್ತ ನಿರೀಕ್ಷಕ ನಂಜುಂಡೇ ಗೌಡ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಮೂರು ವಾಹನಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕೇರಳ ನೋಂದಣಿಯ ಟಾಟಾ ಸುಮೋ ಹಾಗೂ ಸ್ಯಾಂಟ್ರೊ ಕಾರಿನಲ್ಲಿ ಒಟ್ಟು 54 ಸಾವಿರ ರೂ. ನಗದು ಪತ್ತೆಯಾಗಿದೆ. ಬಿಜೆಪಿಗೆ ಸೇರಿದ ಸ್ಕಾರ್ಫಿಯೋ ಕಾರಿನಲ್ಲಿ 69 ಸಾವಿರ ರೂ. ನಗದು ಪತ್ತೆಯಾಗಿದೆ.ಘಟನೆಗೆ ಸಂಬಂಧಿಸಿ ಪೊಲೀಸರು, ಕಾಂಗ್ರೆಸ್ ಬೆಂಬಲಿತರಾದ ಎಮ್ಮೆಕೆರೆ ಸಲಾಂ, ಹಸೈನಾರ್, ಶರೀಫ್, ನಝೀರ್, ಲೂಯಿಸ್ ಡಿಸೋಜ, ಓಸ್ವಾಲ್ಡ್ ಡಿಸೋಜ, ರೋಶನ್ ಡಿಸೋಜ, ಅಶೋಕ್ ಡಿಸೋಜ, ಸುರೇಶ್, ಅಶೋಕ್ ಹಾಗೂ ಜೀವನ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಬಿಜೆಪಿ ಬೆಂಬಲಿತರು ಎನ್ನಲಾದ ಜಯರಾಮ ಶೆಟ್ಟಿ, ಶ್ರೀಕಾಂತ್ ಶೆಟ್ಟಿ, ಸ್ವರೂಪ್ ಶೆಟ್ಟಿ, ಚರಣ್ ಕುಮಾರ್ ಹಾಗೂ ರಾಜ್ ಕಿರಣ್ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.ಅತಿ ಸೂಕ್ಷ್ಮ ಮತಗಟ್ಟೆಯೆಂದು ಗುರುತಿಸಲಾದ ಗೋಳ್ತಮಜಲುವಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದಾರೆ.ಕಳೆದ ರಾತ್ರಿಯಿಂದೀಚೆಗೆ ವಿವಿಧೆಡೆಗಳಲ್ಲಿ ಹಣ ಹಂಚಲಾಗುತ್ತಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಪೊಲೀಸರು ರಾತ್ರಿಯಿಡೀ ತನಿಖೆ ನಡೆಸಿದ್ದು, ಯಾವುದೇ ಪ್ರಕರಣ ಪತ್ತೆಯಾಗಿರಲಿಲ್ಲ, ಇಂದು ಹಾಡುಹಗಲೇ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡೆಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೆ ಆರೋಪಿಗಳಿಂದ 1.23 ಲಕ್ಷ ರೂ. ನಗದು ಹಾಗೂ 20 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ