ಸೋಮವಾರ, ಡಿಸೆಂಬರ್ 20, 2010

ಬಂಧಿತ ಪಿಎಫ್‌ಐ ನಾಯಕರಿಂದ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ

ಮಂಗಳೂರು,ಡಿ.20: ಡಿಸಿಐಬಿ ಮತ್ತು ಬಂಟ್ವಾಳ ಪೊಲೀಸರಿಂದ ಇತ್ತೀಚೆಗೆ ಬಂಧನಕ್ಕೊಳಗಾಗಿ ಮಂಗಳೂರಿನ ಜೈಲಿನಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿಯ ಸದಸ್ಯ ನವಾಫ್ ಉಳ್ಳಾಲ್ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದು, ಅದರಲ್ಲಿ ತನಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಜೈಲಿನಲ್ಲಿರುವ ಇತರ 8 ಮಂದಿ ಕೂಡ ಸಹಿ ಹಾಕಿದ್ದಾರೆ.
ಡಿ.8ರಂದು ರಾತ್ರಿ 1:30ಕ್ಕೆ ಮಾಸ್ತಿಕಟ್ಟೆಯಲ್ಲಿರುವ ನನ್ನ ಮನೆಗೆ ಬಂದ ಪೊಲೀಸರು ಅಲ್ಲಿ ನಾನಿಲ್ಲದ್ದನ್ನು ಕಂಡು ಪಕ್ಕದಲ್ಲಿರುವ ನನ್ನ ಸಹೋದರ ಶೌಕತ್‌ನ ಮನೆಗೆ ಹೋಗಿ ನನ್ನ ಬಗ್ಗೆ ವಿಚಾರಿಸಿ ಅವಾಚ್ಯ ಶಬ್ದದಿಂದ ಬೈದು ಹಿಂದಿರುಗಿದ್ದರು. ಡಿ.9ರಂದು ನಾನೇ ಉಳ್ಳಾಲ ಠಾಣೆಗೆ ತೆರಳಿದೆ. ಆವಾಗ ಕ್ರೈಂ ಎಸ್‌ಐ ಶ್ಯಾಮ್ ಸುಂದರ್, ಉಳ್ಳಾಲ ಠಾಣೆಯಿಂದ ಯಾರೂ ಬಂದಿಲ್ಲ ಎಂದಿದ್ದರು.
ಡಿ.10ರಂದು ಕಮಿಷನರ್‌ರನ್ನು ಭೇಟಿ ಮಾಡಿದಾಗ ಬಂಟ್ವಾಳ ಪೊಲೀಸರು ನನ್ನ ಮನೆಗೆ ಆಗಮಿಸಿದ್ದು ತಿಳಿಯಿತು. ಡಿ.11ರಂದು ಬಂಟ್ವಾಳ ಠಾಣೆಗೆ ಹೋದಾಗ, ಡಿ.12ರಂದು ಬರಲು ಸೂಚಿಸಿದರು. ಆದರೆ, ಡಿ,12ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ತೆರಳಲು ನಾನು ಡಿ.11ರ ರಾತ್ರಿ ಉಳ್ಳಾಲದಿಂದ ಹೊರಟೆ. 10:30ರ ವೇಳೆಗೆ ಬಿ.ಸಿ.ರೋಡ್ ಸಮೀಪದ ಕೈಕಂಬದ ಬಳಿ ನಮ್ಮ ವಾಹನವನ್ನು ತಡೆದ ಪೊಲೀಸರು ನಮ್ಮನ್ನು ಅಕ್ರಮವಾಗಿ ಬಂಧಿಸಿದರು.
ಅದರಲ್ಲಿ ಮುಹಮ್ಮದ್ ರಿಯಾಝ್ ಬಜ್ಪೆ ಪೋಲಿಯೋ ಪೀಡಿತರಾಗಿದ್ದರು. ಹಾಗೇ ಬಂಧಿಸಿ ಪೊಲೀಸರು ನಮ್ಮಲ್ಲಿದ್ದ ಮೊಬೈಲ್ ಫೋನ್ ಕಿತ್ತು, ಬಟ್ಟೆ ಬಿಚ್ಚಿಸಿ ಕಣ್ಣಿಗೆ ಬಟ್ಟೆ ಕಟ್ಟಿ ರೂಮಿನಲ್ಲಿ ಕೂಡಿ ಹಾಕಿದರು. ಅಲ್ಲದೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದರು ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.
ಡಿ.12ರಂದು ಜಿಲ್ಲಾ ಎಸ್‌ಪಿ ಸಹಿತ ಇತರ ಪೊಲೀಸರು ನಮ್ಮನ್ನು ವಿಚಾರಿಸಿದರು. ಬಳಿಕ ಗ್ರಾಮಾಂತರ ಠಾಣೆಗೆ ಕರೆದೊಯ್ದು ಅಲ್ಲೂ ಕೂಡ ಕುಂಪಲದ ಮಸೀದಿಗೆ ಮಾಂಸ ಎಸೆದದ್ದು ತಾನು ಅಂತ ಒಪ್ಪಿಕೊಳ್ಳಲು ಬಲವಂತ ಪಡಿಸಿದರು. ನಮ್ಮ ಕಣ್ಮುಂದೆಯೇ ಕುಡಿದ ಪೊಲೀಸರು ಮತ್ತೆ ಹಲ್ಲೆ ನಡೆಸಿದರು. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ನ್ಯಾಯಾಧೀಶರಲ್ಲಿ ಹೊಡೆದದ್ದನ್ನು ತಿಳಿಸಬಾರದು ಎಂದು ಒತ್ತಾಯಿಸಿದ್ದಾರೆ.
ಆದರೂ ನಾನು ನ್ಯಾಯಾಧೀಶರಲ್ಲಿ ನಮಗಾದ ಅನ್ಯಾಯವನ್ನು ಹೇಳಿದೆವು ಎಂದು ಪತ್ರದಲ್ಲಿ ಉಲ್ಲೇಖಿಸಿರುವ ನವಾಝ್, ತಮಗೆ ನ್ಯಾಯ ದೊರಕಿಸಿಕೊಡಲು ಮನವಿ ಮಾಡಿದ್ದಾರೆ. ಬಂಧನದಲ್ಲಿರುವ ಮುಹಮ್ಮದ್ ಶರೀಫ್, ನೂರುಲ್ಲಾ ಅಮೀನ್, ಮುಹಮ್ಮದ್ ರಿಯಾಝ್, ಮುಹಮ್ಮದ್ ನೌಷಾದ್, ಅಬ್ದುಲ್ ಖಾದರ್ ಅಶ್ರಫ್, ಮುಹಮ್ಮದ್ ಸೈಫುಲ್ಲಾ, ಅಬ್ದುಲ್ ರಶೀದ್, ಮುಹಮ್ಮದ್ ಅನ್ಸಾರ್ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ