ಮಂಗಳವಾರ, ಜನವರಿ 25, 2011

ಭಟ್ಕಳ: ಹೆದ್ದಾರಿ ಸ್ಥಳಾಂತರ ವಿರೋಧಿಸಿ ಧರಣಿ

ಭಟ್ಕಳ: ಹೆದ್ದಾರಿ ಸ್ಥಳಾಂತರ ವಿರೋಧಿಸಿ ಧರಣಿಭಟ್ಕಳ, ಜ.24: ಭಟ್ಕಳ ನಗರದಿಂದ 2 ಕಿ.ಮೀ. ದೂರಕ್ಕೆ ರಾಷ್ಟ್ರೀಯ ಹದ್ದಾರಿ ಸ್ಥಳಾಂತರವನ್ನು ವಿರೋಧಿಸಿ ಇಲ್ಲಿನ ಮಜ್ಲಿಸೆ ಇಸ್ಲಾಹ-ವ-ತಂಝೀಮ್ ಹಾಗೂ ನಗರದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಜನರು ಇಂದು ಸಂಜೆ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.

ಈ ಸಂದರ್ಭ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ತಂಝೀಮ್ ಮುಖಂಡ ಹಾಗೂ ಭಟ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಪರ್ವೇಝ್ ಖಾಶಿಂಜಿ, ಕೆಲವರು ತಮ್ಮ ಸ್ವಾರ್ಥಕ್ಕಾಗಿ ನಗರದ ಹಿತವನ್ನು ಬಲಿಗೊಡುತ್ತಿದ್ದಾರೆ. ರಾ.ಹೆದ್ದಾರಿ 17ನ್ನು ನಗರದಿಂದ 2 ಕಿ.ಮೀ. ದೂರದ ಬೈಪಾಸ್ ಮೂಲಕ ನಿರ್ಮಿಸುವಂತೆ ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಹೆದ್ದಾರಿ ಸ್ಥಳಾಂತರವನ್ನು ತಡೆಗಟ್ಟುತ್ತೇವೆ ಎಂದರು.
ತಂಝೀಮ್ ಅಧ್ಯಕ್ಷ ಡಾ.ಬದ್ರುಲ್ ಹಸನ್ ಮುಅಲ್ಲಿಮ್, ಉ.ಕ. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಾಮೋದರ್ ಗರ್ಡಿಕರ್, ಮಾಜಿ ಉಪಾಧ್ಯಕ್ಷ ರಾಮಾ ಮೊಗೇರ್ ಮತ್ತಿ ತರರು ಈ ಸಂದಭರ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಳಾಂತರಿ ಸುವುದು ಮೂರ್ಖತನದ ನಿರ್ಧಾರ. ಇದರ ವಿರುದ್ಧದ ಇಂದಿನ ಪ್ರತಿಭಟನೆ ಕೇವಲ ಸಾಂಕೇತಿಕ. ಇದಕ್ಕೂ ಹೆದ್ದಾರಿ ಇಲಾಖೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಬಳಿಕ ಸಹಾಯಕ ಕಮಿಶನರ್ ಡಾ.ಅನುರಾಧಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಕಮಿಶನರ್, ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ರವಾನಿಸಲಾಗುವುದು ಎಂದರು. ಈ ಸಂದರ್ಭ ಪುರಸಭೆೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಸೈಯದ್ ಪರ್ವೇಝ್, ಮೊಹೆತೆಶ್ಶಾಂ ಅಬ್ದುರ್ರಹ್ಮಾನ್, ತಂಝೀಮ್ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ, ಅಝೀಝರ್ರಹ್ಮಾನ್ ರುಕ್ನುದ್ದೀನ್, ಅಲ್ತಾಫ್ ಖರೂರಿ, ಎಸ್. ಎಂ.ಸೈಯದ್ ಅಬ್ದುಲ್ ಅಝೀಮ್ ಮತ್ತಿತರರು ಹಾಜರಿದ್ದರು.
ಸಂಜೆ 5 ಗಂಟೆಗೆ ಸುಲ್ತಾನ್ ಸ್ಟ್ರೀಟ್‌ನಲ್ಲಿ ಸೇರಿದ ಪ್ರತಿಭಟನಕಾರರು, ಚೌಕ್ ಬಝಾರ್, ಮುಖ್ಯ ರಸ್ತೆ, ಮಾರಿಕಟ್ಟೆ, ಪುರಸಭೆ ಮೂಲಕ ಹಾದು ಸಂಶುದ್ದೀನ್ ವೃತ್ತವಾಗಿ ತೆರಳಿ ಸಹಾಯಕ ಕಮಿಶನರ್ ಕಚೇರಿ ಎದುರು ಜಮಾಯಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ