ಬೆಂಗಳೂರು, ಜ.24: ಕರ್ನಾಟಕ ಬಂದ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಡಿಜಿಪಿ ಸೇರಿದಂತೆ ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ವಕೀಲರಾದ ಬಿ. ಬೋಪಣ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾ ರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಹಾಗೂ ನ್ಯಾ. ಎ.ಎಸ್. ಬೋಪಣ್ಣ ಅವರಿದ್ದ ವಿಭಾ ಗೀಯ ಪೀಠ, ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಿತು.
ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದರ ವಿರುದ್ಧ ಜ.22ಕ್ಕೆ ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕಿ ‘ಕರ್ನಾಟಕ ಬಂದ್’ಗೆ ಕರೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಕ್ರಮವನ್ನು ಪ್ರಶ್ನಿಸಿ ಬಿಜೆಪಿ ಪಕ್ಷ ಹಾಗೂ ಅದರ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಯವರನ್ನು ಪ್ರತಿವಾದಿಗಳನ್ನಾಗಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಮತ್ತು ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದ ಸರಕಾರವೇ ಪ್ರತಿಭಟನೆಯಲ್ಲಿ ನಿರತವಾಗಿದ್ದು ಕಾನೂನುಬಾಹಿರ. ಸರಕಾರದ ಈ ಕ್ರಮ ಸಂವಿಧಾನದ ಪರಿಚ್ಛೇದ 19 ಹಾಗೂ 21ರ ಸ್ಪಷ್ಟ ಉಲ್ಲಂಘನೆಯಾಗಿದೆ. ಬಂದ್ ಅಥವಾ ಹರತಾಳಕ್ಕೆ ಕರೆ ನೀಡುವುದು ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ಆದೇಶವಿದ್ದರೂ, ರಾಜ್ಯ ಸರಕಾರ ಅದನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ರಾತ್ರೋ ರಾತ್ರಿ ಬಂದ್‌ಗೆ ಕರೆ ನೀಡಿದ್ದರ ಪರಿಣಾಮ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ವಾಹನ ಸಂಚಾರ ಹಠಾತ್ ಸ್ಥಗಿತಗೊಂಡಿತ್ತು. ಜನರು ಮೂಲಭೂತ ಸೌಕರ್ಯಗಳು ಲಭ್ಯವಾಗದೆ ಪರದಾಡಿದರು. ಸರಕಾರದ ಈ ಕ್ರಮ ಸಂಪೂರ್ಣ ಸಂವಿಧಾನ ಬಾಹಿರವಾಗಿದ್ದು, ಇದಕ್ಕೆ ರಾಜ್ಯ ಸರಕಾರ ಹಾಗೂ ಬಿಜೆಪಿ ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಬೇಕು ಮತ್ತು ಇದರಿಂದ ಉಂಟಾದ ಅಪಾರ ಪ್ರಮಾಣದ ಹಾನಿಯನ್ನು ಸರಕಾರವೇ ಭರಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ತಿದ್ದುಪಡಿ ಅರ್ಜಿ: ಏಕಾಏಕಿ ಕರೆ ನೀಡಿದ ಬಂದ್‌ನಿಂದ ಸಾರಿಗೆ, ಕೈಗಾರಿಕೆ, ಮಾರುಕಟ್ಟೆ ಮತ್ತು ಇತರ ಕ್ಷೇತ್ರಗಳಲ್ಲಿ ಒಟ್ಟು ಸುಮಾರು 5 ಸಾವಿರ ಕೋಟಿ ನಷ್ಟದ ಅಂದಾಜು ಮಾಡಲಾಗಿದೆ. ಈ ನಷ್ಟಕ್ಕೆ ಮೊದಲ ಮೂವರು ಪ್ರತಿವಾದಿಗಳಾದ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹಾಗೂ ಭಾರತೀಯ ಜನತಾ ಪಕ್ಷ ನೇರ ಬಾಧ್ಯಸ್ಥರಾಗಿದ್ದು, ಆ ನಷ್ಟವನ್ನು ಅವರಿಂದಲೆ ಭರಿಸಿಕೊಳ್ಳಬೇಕು.
ಇದಕ್ಕಾಗಿ ‘ ಜ.22ರ ಬಂದ್ ನಷ್ಟ ಪರಿಹಾರ ನಿಧಿ’ ಎಂಬ ಹೆಸರಲ್ಲಿ ಪ್ರತ್ಯೇಕ ಖಾತೆ ನಿರ್ಮಿಸಿ ಅದರಲ್ಲಿ ಜಮೆ ಮಾಡಬೇಕು ಎಂದು ಅರ್ಜಿದಾರರು ಮಧ್ಯಂತರ ತಿದ್ದುಪಡಿ ಸಲ್ಲಿಸಿದ್ದು, ಇದರಲ್ಲಿ ಬಂದ್ ನಂತರ ಪ್ರಕಟಗೊಂಡ ಸುದ್ದಿಗಳ ಪತ್ರಿಕಾ ಮತ್ತು ದೃಶ್ಯಮಾಧ್ಯಮದ ತುಣುಕುಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ತಿದ್ದುಪಡಿ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ