ಸೋಮವಾರ, ಜನವರಿ 24, 2011

ಭಯೋತ್ಪಾದನೆ ಕಳಂಕ ಹೊತ್ತ ಅಮಾಯಕರ ನೆರವಿಗೆ ಕೇಂದ್ರ

ಹೊಸದಿಲ್ಲಿ, ಜ.23: ಅಜ್ಮೀರ್‌ದರ್ಗಾ, ಮಕ್ಕಾ ಮಸೀದಿ ಹಾಗೂ ಮಾಲೆಗಾಂವ್,ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಗಳಲ್ಲಿ ಕೇಸರಿ ಭಯೋತ್ಪಾದಕರ ಕೈವಾಡವಿರುವುದು ಇದೀಗ ನಿಚ್ಚಳಗೊಂಡಿರುವ ಹಿನ್ನೆಲೆಯಲ್ಲಿ , ವಿವಿಧ ಭಯೋತ್ಪಾದಕ ಕೃತ್ಯಗಳ ಆರೋಪಗಳಲ್ಲಿ ಅನ್ಯಾಯವಾಗಿ ಬಂಧಿಸಲ್ಪಟ್ಟ ಮುಸ್ಲಿಂ ಯುವಕರ ಪುನರ್ವಸತಿಗೆ ಸಹಾಯ ಹಸ್ತ ನೀಡಲು ಕೇಂದ್ರ ಸರಕಾರ ಮುಂದೆ ಬಂದಿದೆ.
ಭಯೋತ್ಪಾದಕರೆಂಬ ಶಂಕೆಯಲ್ಲಿ ಎರಡು ವರ್ಷಗಳಿಗೂ ಅಧಿಕ ಸಮಯದಿಂದ ಬಂಧನ ದಲ್ಲಿದ್ದು, ಈಗ ಅಮಾಯಕರೆಂದು ದೃಢಪಟ್ಟಿರುವ ಮುಸ್ಲಿಂ ಯುವಕರಿಗೆ ಆರ್ಥಿಕ, ಕಾನೂನು ಮತ್ತಿತರ ನೆರವನ್ನು ನೀಡುವ ಪ್ರಸ್ತಾಪ ಕೇಂದ್ರ ಸರಕಾರದ ಮುಂದಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂತ್ರಸ್ತ ಯುವಕರ ಪುನರ್ವಸತಿ ಹಾಗೂ ಅವರ ಕುಟುಂಬಗಳಿಗೆ ಪರಿಹಾರಕ್ಕಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಭಾರತ ಸರಕಾರ ಕೈಗೊಳ್ಳಲಿದೆ ಯೆಂದು ಅವು ಹೇಳಿವೆ. ಒಂದು ವೇಳೆ ಈ ಪ್ರಸ್ತಾಪ ಅನುಷ್ಠಾನಗೊಂಡಲ್ಲಿ, ದೀರ್ಘ ಸಮಯದಿಂದ ಅನ್ಯಾಯವಾಗಿ ಜೈಲುವಾಸ ಅನುಭವಿಸುತ್ತಿರುವ ನಿರಪರಾಧಿ ಯುವಕರಿಗೆ ಮಾತ್ರ ಪರಿಹಾರವನ್ನು ನೀಡಲಾಗುವುದೆಂದು ಮೂಲಗಳು ಸ್ಪಷ್ಟಪಡಿಸಿವೆ.
ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಹಾಗೂ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿ ಈ ಯುವಕರನ್ನು ತನಿಖಾ ಸಂಸ್ಥೆಗಳು ಬಂಧಿಸಿದ್ದವು. ಅವರಲ್ಲಿ ಈಗ ಹೆಚ್ಚಿನವರು ಜಾಮೀನು ಬಿಡುಗಡೆ ಪಡೆದಿದ್ದಾರೆ. ಈ ಯುವಕರ ಸಂಖ್ಯೆ ಸುಮಾರು 50ರಷ್ಟಿದೆಯೆಂದು ಅಂದಾಜಿಸ ಲಾಗಿದೆ.
ಈ ಸ್ಫೋಟ ಪ್ರಕರಣಗಳಲ್ಲಿ ಹುಜಿ, ಲಷ್ಕರೆ ತಯ್ಯಬಾ ಹಾಗೂ ಸಿಮಿ ಸಂಘಟನೆಗಳ ಕೈವಾಡವಿದೆ ಯೆಂದು ಭದ್ರತಾ ಸಂಸ್ಥೆಗಳು ಈ ಮೊದಲು ಶಂಕಿಸಿದ್ದವು. ಆದರೆ ರಾಷ್ಟ್ರೀಯ ತನಿಖಾ ಸಂಸ್ಥೆಯೂ ಸೇರಿದಂತೆ ವಿವಿಧ ವಿಚಾರಣಾ ಸಂಸ್ಥೆಗಳು ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದ ಸಂಗತಿಗಳು, ಈ ಭಯೋತ್ಪಾದಕ ಪ್ರಕರಣಗಳಲ್ಲಿ ಅಭಿನವ್ ಭಾರತ್ ಮತ್ತಿತರ ಕೇಸರಿ ಉಗ್ರಗಾಮಿ ಗುಂಪುಗಳ ಕೈವಾಡವಿರುವುದನ್ನು ದೃಢಪಡಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ