ಸೋಮವಾರ, ಫೆಬ್ರವರಿ 14, 2011

ದಾರಿಮಿಗೆ ಹಲ್ಲೆಗೈದ ಆರೋಪಿಗಳು ಸಿಬಿಐ ವಶಕ್ಕೆ

ಮಂಗಳೂರು: ಚೆಂಬರಿಕ ಖಾಝಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಪೊಲೀಸರು ಈಗ ತಮ್ಮ ತನಿಖೆಯನ್ನು ದಕ್ಷಿಣ ಕನ್ನಡಕ್ಕೆ ವಿಸ್ತರಿಸಿದ್ದು, ಕೂರ ತಂಙಳ್ ವಿವಾದದಲ್ಲಿ ಹಲ್ಲೆಗೊಳಗಾಗಿದ್ದ ಹುಸೈನ್ ದಾರಿಮಿಗೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳು ಹಾಗೂ ಹುಸೈನ್ ದಾರಿಮಿ ಅವರನ್ನು ವಿಚಾರಣೆಗಾಗಿ ಕೇರಳಕ್ಕೆ ಕರೆದೊಯ್ದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಕೂರ ತಂಙಳ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಹುಸೈನ್ ದಾರಿಮಿ ಅವರನ್ನು ತಂಡವೊಂದು ಕರೆದೊಯ್ದು ಹಲ್ಲೆ ನಡೆಸಿದ್ದು, ಈ ವೇಳೆ ಉಸ್ತಾದರನ್ನು ಕೊಲೆಗೈದಿರುವಂತೆ ನಿಮ್ಮನ್ನು ಕೂಡ ಕೊಲೆ ಮಾಡುವುದಾಗಿ ತಂಡದಲ್ಲಿದ್ದ ಇಬ್ಬರು ಬೆದರಿಕೆ ಹಾಕಿದ್ದರು. ಇದನ್ನು ಹುಸೈನ್ ದಾರಿಮಿ ಆಸ್ಪತ್ರೆಯಲ್ಲಿ ಮಾಧ್ಯಮದವರಿಗೆ ತಿಳಿಸಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಿಬಿಐ ಪೊಲೀಸರು ದಾರಿಮಿ ಹಾಗೂ ಅವರಿಗೆ ಹಲ್ಲೆ ನಡೆಸಿದ ಇಬ್ಬರನ್ನು ಶನಿವಾರ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಕರೆದುಕೊಂಡು ಹೋಗಿದೆ ಎಂದು ಮೂಲಗಳು ಹೇಳಿವೆ.
ಚೆಂಬರಿಕ ಖಾಝಿ ಕೊಲೆಯಾಗಿರುವುದು ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಸಿಬಿಐ ಈಗಾಗಲೇ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ. ದಾರಿಮಿ ಹೇಳಿಕೆಯಿಂದಾಗಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡ ಸಿಬಿಐ ಪೊಲೀಸರು ತನಿಖೆಗೆ ಒಳಪಡಿಸಿದ್ದು, ಖಾಝಿ ಕೊಲೆ ಪ್ರಕರಣ ತಿರುವು ಪಡೆಯುವ ಸಾಧ್ಯತೆಗಳಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ