ಭಾನುವಾರ, ಜನವರಿ 02, 2011

‘ಶಸ್ತ್ರಾಸ್ತ್ರ ರವಾನೆ ವದಂತಿ’ಯ ಬೋಟ್‌ಗೆ ಸಿಗದ ಮುಕ್ತಿ: ಒಂಬತ್ತು ದಿನಗಳಿಂದ ಸಂಕಷ್ಟದಲ್ಲಿರುವ ಬೋಟ್ ಸಿಬ್ಬಂದಿ

‘ಶಸ್ತ್ರಾಸ್ತ್ರ ರವಾನೆ ವದಂತಿ’ಯ ಬೋಟ್‌ಗೆ ಸಿಗದ ಮುಕ್ತಿ: ಒಂಬತ್ತು ದಿನಗಳಿಂದ ಸಂಕಷ್ಟದಲ್ಲಿರುವ ಬೋಟ್ ಸಿಬ್ಬಂದಿ

 ಮಂಗಳೂರು, ಜ.1: ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಲಕ್ಷದ್ವೀಪ ದಿಂದ ಮಂಗಳೂರಿಗೆ ಸರಕು ಹೇರಿ ಕೊಂಡು ಬಂದ ‘ಅಲ್ ಜಝೀರಾ’ ಎಂಬ ಹೆಸರಿನ ಬೋಟನ್ನು ಕರಾವಳಿ ತಟರಕ್ಷಣಾ ಪಡೆ ವಶಕ್ಕೆ ತೆಗೆದುಕೊಂಡು ಇಂದಿಗೆ 9 ದಿನಗಳಾಗಿವೆ. ಆದರೆ ಇನ್ನೂ ಕೂಡ ಈ ದೋಣಿಗೆ ಮುಕ್ತಿ ಸಿಕ್ಕಿಲ್ಲ ಎನ್ನುವ ಬೋಟ್‌ನ 7 ಮಂದಿ ಸಿಬ್ಬಂದಿ ಕಷ್ಟದ ಬದುಕನ್ನು ಕಳೆಯುತ್ತಿದ್ದು, ತಮ್ಮ ಗೋಳನ್ನು ಯಾರೂ ಕೇಳುವವರಿಲ್ಲ ಎಂದು ಹತಾಶೆ ವ್ಯಕ್ತಪಡಿಸುತ್ತಿದ್ದಾರೆ.
ಅಲ್ ಜಝೀರಾ ಬೋಟ್‌ನಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಾಗಿಸಲಾ ಗುತ್ತಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಕರಾವಳಿ ತಟರಕ್ಷಣಾ ಪಡೆಯ ಸಿಬ್ಬಂದಿ ಪಣಂಬೂರು ಪೊಲೀಸರು ಶ್ವಾನದಳ ಹಾಗೂ ಶಸ್ತ್ರಾಸ್ತ್ರ ಪತ್ತೆ ಉಪಕರಣಗಳ ಮೂಲಕ ಡಿ.24ರಂದು ಬೆಳಗ್ಗೆ 8 ಗಂಟೆಯ ವೇಳೆಗೆ ನಗರದ ಹಳೆ ಬಂದರ್‌ನಲ್ಲಿ ಕಾರ್ಯಾಚರಣೆ ನಡೆಸಿ ಹಡಗನ್ನು ವಶಕ್ಕೆ ತೆಗೆದುಕೊಂಡಿದ್ದರು.

ಬೋಟಿನ ಪರಿಶೀಲನೆ ಬಳಿಕ ಅವರಿಗೆೆ ಬಂದ ಮಾಹಿತಿ ಸಂಪೂರ್ಣ ಸುಳ್ಳೆಂದು ಮನವರಿಕೆಯಾಗಿತ್ತು. ಬೋಟಿನ ಸಿಬ್ಬಂದಿಯನ್ನು ಅಕ್ರಮ ಬಂಧನದಿಂದ ಆಗಲೇ ಮುಕ್ತಿಗೊಳಿಸಿದ್ದರು. ಆದರೆ ಪೊಲೀಸರು ಬೋಟ್‌ನ್ನು ಇನ್ನೂ ಬಿಟ್ಟುಕೊಡದಿರುವುದರಿಂದ ನಾವು ಕೆಲಸವೂ ಮಾಡಲಾಗದೆ ಹಾಗೂ ಊರಿಗೂ ಮರಳಲಾಗದೆ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಹತಾಶೆ ವ್ಯಕ್ತಪಡಿಸುವ ಬೋಟ್‌ನ ಸಿಬ್ಬಂದಿ ಬಂದರ್‌ನ ಖಾಸಗಿ ಹೊಟೇಲೊಂದರಲ್ಲಿ ವಾಸವಾಗಿದ್ದು, ದಿನ ದೂಡುತ್ತಿದ್ದಾರೆ.
ಈ ಬಗ್ಗೆ ವಾರ್ತಾಭಾರತಿಯ ಜತೆ ಮಾತನಾಡಿದ ಬೋಟಿನ ಮಾಲಕ ಮುಹಮ್ಮದ್ ಹನೀಫ್‌ರ ಸಹೋದರ ಅಬ್ದುಲ್ ಕಲಾಂ, ‘ಡಿ.24ರಂದು ಬೆಳಗ್ಗೆ ನಮ್ಮನ್ನು ಅಕ್ರಮವಾಗಿ ಬಂಧಿಸಿ ಪಣಂಬೂರಿನಲ್ಲಿರುವ ಕರಾವಳಿ ತಟರಕ್ಷಣಾ ಪಡೆಯ ಕಚೇರಿಗೆ ಕರೆದೊಯ್ದು ಭಯೋತ್ಪಾದಕರಂತೆ ಚಿತ್ರಿಸಿದರು.

ಎ.ಕೆ.47 ಉಂಟಾ? ಬಾಂಬ್ ಉಂಟಾ?ಎಂದು ಅಸಂಬದ್ಧ ವಾಗಿ ಪ್ರಶ್ನಿಸಿದರು. ಬಟ್ಟೆಬರೆ ಕಳಚಿ ಒಳ ಉಡುಪಿನಲ್ಲಿ ನಿಲ್ಲಿಸಿ ಅಮಾನ ವೀಯವಾಗಿ ಕಂಡರು. ಊಟ ತಿಂಡಿ ಕೊಡದೆ ಸತಾಯಿಸಿದರು. ಕೊನೆಗೆ ನಮ್ಮ ಹಣದಿಂದಲೇ ತಿಂಡಿ ತಿಂದು ಹಸಿವು ನೀಗಿಸಬೇಕಾಯಿತು. ನಾವು ಭಯೋತ್ಪಾದಕರಲ್ಲ, ನಮ್ಮಲ್ಲಿ ಬಾಂಬಿಲ್ಲ ಎನ್ನುವುದು ಮನವರಿಕೆಯಾದಾಗ ಡಿ.25ರಂದು ರಾತ್ರಿ ನಮ್ಮನ್ನು ಬಿಡುಗಡೆ ಗೊಳಿಸಿದ್ದಾರೆ. ಆದರೆ, ನಮಗಾದ ಮಾನಸಿಕ ಹಿಂಸೆ ಹಾಗೂ ನಷ್ಟಕ್ಕೆ ಯಾರು ಹೊಣೆ? ಎಂದು ಅವರು ಪ್ರಶ್ನಿಸಿದ್ದಾರೆ.
  ಅಣ್ಣ ವಿದೇಶದಲ್ಲಿ ದುಡಿದ ಹಣವನ್ನು ಹೊಂದಿಸಿ ಸಾಲ ಮಾಡಿ ಈ ಯಾಂತ್ರೀಕೃತ ದೋಣಿ (ಮಂಜಿ) ಯನ್ನು ನಾಲ್ಕು ವರ್ಷದ ಹಿಂದೆ ಖರೀದಿಸಿದ್ದರು. ಬಳಿಕ ಅದನ್ನು ನಾನೇ ನಿರ್ವಹಿಸುತ್ತಿದ್ದೇನೆ. ನಾನು ಸಹಿತ 7 ಮಂದಿ ಸಿಬ್ಬಂದಿ ಕಳೆದ 9 ದಿನದಿಂದ ಇಲ್ಲೇ (ಮಂಗಳೂರಿನ ಬಂದರ್) ರೂಮ್ ಮಾಡಿದ್ದೇವೆ. ಊಟ, ತಿಂಡಿ ಅಂತ ಸಾಕಷ್ಟು ಖರ್ಚಾಗಿವೆ. ಕೆಲ ಸವಿಲ್ಲದೆ ಸಮಸ್ಯೆಯಾಗಿದೆ. ಮನೆಗೂ ಹೋಗದೆ ಪರಿತಪಿಸುವಂತಾಗಿದೆ. ಯಾರದೋ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಾಗಿದೆ’ಎಂದು ಅಬ್ದುಲ್ ಕಲಾಂ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ.

‘ನಾವು ಬಿಟ್ಟುಕೊಟ್ಟಿದ್ದೇವೆ’
ನಮಗೆ ಬಂದ ಮಾಹಿತಿಯ ಮೇರೆಗೆ ಬೋಟ್‌ನ ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು ನಿಜ. ಆದರೆ, ಅದರಲ್ಲಿ ಸತ್ಯಾಂಶವಿಲ್ಲ ವೆಂದು ಮನದಟ್ಟಾಗುತ್ತಲೇ ಎಲ್ಲರನ್ನೂ ಬಿಟ್ಟ್ಟಿದ್ದೇವೆ. ಅಷ್ಟೇ ಅಲ್ಲ, ಮೂರು ದಿನದ ಹಿಂದೆ ಬೋಟನ್ನೂ ಬಿಟ್ಟುಕೊಟ್ಟಿದ್ದೇವೆ. ಅದೀಗ ನಮ್ಮ ವಶದಲ್ಲಿಲ್ಲ ಎಂದು ಕರಾವಳಿ ಕಾವಲು ಪೊಲೀಸ್ ಪಡೆಯ ಇನ್ಸ್‌ಪೆಕ್ಟರ್ ಮುಕುಂದ ನಾಯಕ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಅಬ್ದುಲ್ ಕಲಾಂ ‘ಬೋಟನ್ನು ಯಾರು ಸುರ್ಪದಿಯಲ್ಲಿಟ್ಟುಕೊಂಡಿದ್ದಾರೆ ಎಂದು ನಮಗೆ ತಿಳಿಯುತ್ತಿಲ್ಲ. ಅದನ್ನು ಬಿಟ್ಟು ಬಿಡಿ ಎಂದು ನಾವು ಸಂಬಂಧಪಟ್ಟ ಇಲಾಖೆಯ ಕಚೇರಿಗೆ ಅಲೆದಾಡುತ್ತಿದ್ದೇವೆ. ಇಂದು ಕೂಡ ಬಂದರ್ ಠಾಣೆಗೆ ತೆರಳಿದೆವು. ಆದರೂ ಅಲ್ಲಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲ. ಒಟ್ಟಿನಲ್ಲಿ ನಾವು ಅಸಹಾಯಕರಾಗಿದ್ದೇವೆ, ಗೊಂದಲಕ್ಕೆ ಸಿಲುಕಿದ್ದೇವೆ’ ಎಂದಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ