ಪ್ರಚೋದನಕಾರಿ ಭಾಷಣ, ಬ್ಯಾನರ್ ಹಾಗೂ ಇತರ ಚಟುವಟಿಕೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ್ದರ ಹೊರತಾಗಿಯೂ ಇಂತಹ ಬ್ಯಾನರ್‌ಗಳು ನಗರದಲ್ಲಿ ಅಲ್ಲಲ್ಲಿ ರಾರಾಜಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಶಾಂತಿ ವಾತಾವರಣವಿದೆ. ಸಮಾಜೋತ್ಸವದ ಹೆಸರಿನಲ್ಲಿ ಅದನ್ನು ಕದಡಲು ಅವಕಾಶ ನೀಡಬಾರದು ಎಂದು ಪ್ರಗತಿಪರ ಸಂಘಟನೆಗಳು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿವೆ.
ಮಂಗಳೂರಿನಲ್ಲಿ ನಡೆಯುವ ಸಮಾಜೋತ್ಸವದ ಪ್ರಧಾನ ಭಾಷಣಕಾರರಾಗಿರುವ ಪ್ರವೀಣ್ ಬಾ ತೋಗಾಡಿಯ ಪ್ರಚೋದನಕಾರಿ ಭಾಷಣ ಮಾಡದಿರುವಂತೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಇಲಾಖೆ ಸಾರ್ವಜನಿಕವಾಗಿ ಯಾವುದೇ ಮಾಹಿತಿ ನೀಡದಿರುವುದು ಶಾಂತಿಪ್ರಿಯರ ಆತಂಕ ಇನ್ನಷ್ಟು ಹೆಚ್ಚುವಂತೆ ಮಾಡಿದೆ.
ಇತ್ತೀಚೆಗೆ ಕುಂದಾಪುರದಲ್ಲಿ ಹಿಂದೂ ಸಮಾಜೋತ್ಸವದ ಮುಂಚಿತವಾಗಿ ಬೈಕ್ ರ್ಯಾಲಿ ಹಮ್ಮಿಕೊಂಡ ಸಂದರ್ಭದಲ್ಲಿ ಸಂಘ ಪರಿವಾರದ ಕಾರ್ಯ ಕರ್ತರೇ ದಾಂಧಲೆ ನಡೆಸಿದ ಕಾರಣ ಶಾಂತಿ ಕದಡಿದ ವಾತಾವರಣ ಉಂಟಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಈ ಹಿಂದೆ ಸಮಾಜೋತ್ಸವದ ಸಂದರ್ಭದಲ್ಲಿ ಕೋಮುದ್ವೇಷದ ಗಲಭೆಗಳಾಗಿವೆ.
ಆದುದರಿಂದ ಈ ಬಾರಿಯೂ ಇಂತಹ ಘಟನೆಗಳು ಸಂಭವಿಸದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಆಗ್ರಹಿಸಿದೆ. ಸಮಾಜೋತ್ಸವ ಚುನಾವಣೆಯ ದೃಷ್ಟಿಯಿಂದ ನಡೆಯುತ್ತಿರುವ ಗಿಮಿಕ್ಸ್‌ನ ಭಾಗ ಎಂದು ವೇದಿಕೆ ಆರೋಪಿಸಿದೆ.
ಆದರೂ ಮಂಗಳೂರು ನಗರದ ಪ್ರಮುಖ ಕೇಂದ್ರಗಳಲ್ಲಿ, ಪೊಲೀಸ್ ಕಚೇರಿಯ ಪಕ್ಕದಲ್ಲೇ ಅಂತಹ ಬ್ಯಾನರ್‌ಗಳು ರಾರಾಜಿಸುತ್ತಿವೆ. ಈಗಾಗಲೇ ಈ ಬಗ್ಗೆ ಚುನಾವಣಾಧಿಕಾರಿಗೆ ದೂರು ನೀಡಲಾಗಿದೆ ಎಂದು ವೇದಿಕೆಯ ಮುಖಂಡರು ತಿಳಿಸಿದ್ದಾರೆ.
ಪ್ರಚೋದನಕಾರಿ ಚಟುವಟಿಕೆಗೆ ಅವಕಾಶವಿಲ್ಲ: ಸೀಮಂತ್ ಕುಮಾರ್ ಸಿಂಗ್
ಮಂಗಳೂರು, ಡಿ.31: ಮಂಗಳೂರಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ. ಪ್ರಚೋದನಕಾರಿ ಭಾಷಣ, ಬ್ಯಾನರ್ ಹಾಗೂ ಇತರ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದಿಲ್ಲ. ಕಾನೂನು ಸುವ್ಯವಸ್ಥೆ ಸಂಬಂಧಿಸಿದಂತೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ.
ಹತ್ತು ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸರನ್ನು ಕರೆಸಿಕೊಳ್ಳಲಾಗುವುದು. ಇದುವರೆಗೆ ಸಮಾಜೋತ್ಸವಕ್ಕೆ ಸಂಬಂಧಿಸಿದಂತೆ ಕಾನೂನು ಉಲ್ಲಂಘನೆಯ ದೂರು ಬಂದಿಲ್ಲ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಮಂಗಳೂರು ನಗರದ ಪಂಪ್‌ವೆಲ್ ಸರ್ಕಲ್ ಬಳಿ ಇರುವ ಪೊಲೀಸ್ ಸುರಕ್ಷ ಕಚೆೇರಿಯ ಪಕ್ಕದಲ್ಲೇ ಸೌಹಾರ್ದಕ್ಕೆ ಧಕ್ಕೆ ತರುವಂತಹ ಪ್ರಚೋದನಕಾರಿ ಘೋಷಣೆಗಳಿರುವ ಬೃಹತ್ ಬ್ಯಾನರ್ ಹಾಕಲಾಗಿದೆ. ಇದೇ ರೀತಿಯ ಬ್ಯಾನರ್‌ಗಳು ನಗರದ ವಿವಿಧೆಡೆಗಳಲ್ಲಿ ಅಳವಡಿಸಲಾಗಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಗತಿಪರ ಸಂಘಟನೆಗಳು ಪೊಲೀಸ್ ಇಲಾಖೆಯನ್ನು ಆಗ್ರಹಿಸಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ