ಶುಕ್ರವಾರ, ಡಿಸೆಂಬರ್ 31, 2010

ಜಿಲ್ಲಾ ಪಂಚಾಯತ್-ತಾಲೂಕು ಪಂಚಾಯತ್ ಚುನಾವಣೆ: ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿ 67 ಶೇ. ಮತದಾನ

ಮಂಗಳೂರು-65 ಶೇ., ಬಂಟ್ವಾಳ-71 ಶೇ., ಪುತ್ತೂರು-69 ಶೇ., ಸುಳ್ಯ-72 ಶೇ., ಬೆಳ್ತಂಗಡಿ-64 ಶೇ., ಭಟ್ಕಳ-55 ಶೇ. ಮತದಾನ
ಮಂಗಳೂರು, ಡಿ.31: ಬಂಟ್ವಾಳ ತಾಲೂಕಿನ ಗೋಳ್ತಮಜಲು ಜಿ.ಪಂ. ಕ್ಷೇತ್ರದಲ್ಲಿ ಉಂಟಾದ ಗೊಂದಲದ ಹೊರತಾಗಿ ದ.ಕ. ಜಿಲ್ಲೆಯಲ್ಲಿ ಇಂದು 35 ಜಿ.ಪಂ. ಹಾಗೂ 129 ತಾ.ಪಂ. ಸ್ಥಾನಗಳಿಗೆ ಶಾಂತಿಯುತ ಮತದಾನ ನಡೆದಿದೆ. ಮಂಗಳೂರು ತಾಲೂಕಿನಲ್ಲಿ 65.22 ಶೇ. ಹಕ್ಕು ಚಲಾವಣೆಯಾಗಿದೆ. ದ.ಕ. ಜಿಲ್ಲೆಯಲ್ಲಿ 67.10 ಶೇ. ಮತದಾನವಾಗಿದೆ.

ಜಿಲ್ಲೆಯ ಒಟ್ಟು 1027 ಮತಗಟ್ಟೆ ಗಳಲ್ಲಿ ನಡೆದ ಮತದಾನ ಪ್ರಕ್ರಿಯೆಗೆ ಗರಿಷ್ಠ ಭದ್ರತೆ ಒದಗಿಸಲಾಗಿತ್ತು. 233 ಸೂಕ್ಷ್ಮ ಹಾಗೂ 174 ಅತಿ ಸೂಕ್ಷ್ಮ ಮತ ಗಟ್ಟೆಗಳಿಗೆ ಹೆಚ್ಚುವರಿ ಭದ್ರತೆ ನೀಡಿದ್ದು, 10 ಮತಗಟ್ಟೆಗೆ ಒಂದು ಮೊಬೈಲ್ ಸೆಕ್ಟರ್ ಹಾಗೂ 16 ಹಿರಿಯ ಅಧಿಕಾರಿಗಳ ನೇತೃತ್ವದ ತಂಡ ದಿನವಿಡೀ ಗಸ್ತು ತಿರುಗಾಟ ನಡೆಸಿದೆ. ಬಜ್ಪೆ ಜಿ.ಪಂ. ಕ್ಷೇತ್ರದ ಪೆರ್ಮುದೆಯಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನ ಪ್ರಕ್ರಿಯೆ 1 ಗಂಟೆ ತಡವಾಗಿ ಆರಂಭಗೊಂಡಿತು. ಇದೇ ರೀತಿಯ ಸಮಸ್ಯೆಯಿಂದಾಗಿ ಗುರುಪುರ, ಉಳ್ಳಾಲದ ಕೋಟೆಕಾರು ಕ್ಷೇತ್ರ, ಬಂಟ್ವಾಳದ ಶಂಭೂರು ಮತಗಟ್ಟೆಗಳಲ್ಲೂ ಮತದಾನ ಪ್ರಕ್ರಿಯೆ ಹಲವು ತಾಸು ವಿಳಂಬ ಗೊಂಡಿದ್ದವು. ಇದು ಮತದಾರರ ಆಕ್ರೋಶಕ್ಕೆ ಕಾರಣವಾಗಿತ್ತು.

ದ.ಕ.ದಲ್ಲಿ ಮತದಾನ ಶಾಂತಿಯುತ: ಜಿಲ್ಲಾಧಿಕಾರಿ
ಮಂಗಳೂರು, ಡಿ.31: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯುತ ಮತದಾನವಾಗಿದ್ದು, ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ. ಪೂರ್ವಸಿದ್ಧತೆಗಳು ಫಲಕಾರಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 7 ಕಡೆ ಮತಯಂತ್ರದಲ್ಲಿ ತೊಂದರೆ ವರದಿಯಾಗಿದ್ದರೂ ತಕ್ಷಣವೇ ಸೂಕ್ತ ಕ್ರಮಕೈಗೊಂಡಿದ್ದು, ಎಲ್ಲೆಡೆ ಮತದಾರರಿಂದ ಜಿಲ್ಲಾಡಳಿತದ ಕ್ರಮಗಳಿಗೆ ಶ್ಲಾಘನೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ