ಕುಂದಾಪುರ: ಆಗತಾನೇ ಜ್ವರದಿಂದ ಎದ್ದು ಹೋದ ಮಗ ಸಂಜೆ ತಾನೇ ಹಿಂತಿ ರುಗುತ್ತಾನೆಂದು ಭಾವಿಸಿದ ಮನೆಯವರಿಗೆ ಆ ಶಾಲೆಯೇ ತಮ್ಮ ಮಗನ ಅಂತ್ಯಕ್ಕೆ ಅಂಕಿತ ಹಾಕಲಿದೆಯೆಂದು ಯಾವ ತಂದೆ-ತಾಯಿ ಭಾವಿಸಿಯಾರು? ಆದರೆ ಮೊನ್ನೆ ಸೋಮವಾರ ಹೊನ್ನಾವರದ ನ್ಯೂ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಜರಗಿ ಹೋದದ್ದು ಅದೇ.
ಅಫ್ಜಲ್ (೧೪) ಎಂಟನೇ ತರಗತಿಯ ವಿದ್ಯಾರ್ಥಿ. ಎರಡು-ಮೂರು ದಿನಗಳ ಕಾಡಿದ ಜ್ವರದಿಂದ ಶಾಲೆಯನ್ನು ತಪ್ಪಿಸಿಕೊಂಡಿದ್ದ. ಮೊನ್ನೆ ಸೋಮವಾರ ಶಾಲೆಗೆ ಹೋದವನು ರಜಾ ಕಾರಣ ತೋರಿಸಿದರೂ ಮುಖ್ಯೋಪಾಧ್ಯಯರಿಗೂ ತೃಪ್ತಿಯಾಗಿರಲಿಲ್ಲ. ಅವರು ದೈಹಿಕ ಶಿಕ್ಷಕ ಕೆ.ಡಿ. ನಾಯ್ಕರಿಗೆ ವಿದ್ಯಾರ್ಥಿಯನ್ನು ವಿಚಾರಿಸಿಕೊಳ್ಳುವಂತೆ ಹೇಳಿದ್ದಾರೆ. ಜ್ವರ ಗಿರ ಎನ್ನುವುದು ವಿದ್ಯಾರ್ಥಿಗೆ ಮಾಮೂಲೇ ಎನ್ನುವ ತರ್ಕಕ್ಕೆ ಬಿದ್ದ ಪಿ.ಟಿ. ಮಾಸ್ಟರ್ ಅಫ್ಜಲ್‌ಗೆ ಮೈದಾನದಲ್ಲಿ ನಾಲ್ಕು ಸುತ್ತು ಓಡುವ ಶಿಕ್ಷೆ ವಿಧಿಸಿದ್ದಾರೆ. ಆದರೆ ಎರಡನೇ ಸುತ್ತಿಗೆ ನರ್ವಸ್ ಆಗಿ ಹೋದ ಅಫ್ಜಲ್ ಇನ್ನು ಓಡಲು ಸಾಧ್ಯವಿಲ್ಲ ಎಂದು ಅಧ್ಯಾಪಕನಲ್ಲಿ ಅಳವತ್ತು ಕೊಂಡಿದ್ದಾನೆ. ಅಷ್ಟಕ್ಕೇ ಸಹನೆ ಕಳೆದು ಕೊಂಡು ಪಿ.ಟಿ. ಮಾಸ್ಟರ್ ಕೆ.ಡಿ. ನಾಯ್ಕ ವಿದ್ಯಾರ್ಥಿಯ ಕಪಾಳಕ್ಕೆ ಬಾರಿಸಿದ್ದಾರೆ ಅಷ್ಟೇ. ಕೆಳಕ್ಕೆ ಉರುಳಿದ ವಿದ್ಯಾರ್ಥಿ ಮತ್ತೆ ಮೇಲೆ ಏಳಲಿಲ್ಲ. ಅಷ್ಟರಲ್ಲಿ ಸಾವಿನ ಸುದ್ದಿ ಶಾಲೆಯ ಆವರಣವನ್ನು ದಾಟಿ ಊರಿಗೆ ತಲುಪಿದೆ. ಪರಿಣಾಮ ತಂಡೋಪತಂಡವಾಗಿ ಬಂದ ಸಾರ್ವಜನಿಕರಲ್ಲಿ ಶಾಲಾ ಅಧ್ಯಾಪಕರು ಆತ ಓಡುವಾಗಲೇ ಬಿದ್ದು ಸತ್ತಿದ್ದಾನೆ ಎಂದು ಕಥೆ ಕಟ್ಟಿದ್ದಾರೆ.
ಈ ವೇಳೆ ಆಗಮಿಸಿದ ಎಸೈ ಕೂಡ ಅಧ್ಯಾಪಕರ ಪರವಾಗಿ ನಿಂತು ಸಾರ್ವಜನಿಕ ರನ್ನು ತಳ್ಳಿದ್ದು ಪ್ರಕರಣ ಕೆರಳುವಂತೆ ಮಾಡಿದೆ. ಸಾರ್ವಜನಿಕರ ಆಕ್ರೋಶಕ್ಕೆ ಶಾಲೆಯ ಪೀಠೋಪಕರಣಗಳು ಧ್ವಂಸಗೊಂಡಿದ್ದು ಕೊನೆಗೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಒಂದಷ್ಟು ಶಾಂತಿ ನೆಲೆಸಿದರೂ ಹಂತಕ ಅಧ್ಯಾಪಕರನ್ನು ಅಮಾನತುಗೊಳಿಸಬೇಕೆಂದು ಸಾರ್ವಜನಿಕರು ಹಿಡಿದ ಪಟ್ಟಿಗೆ ಕ್ರಮ ಜರುಗಿಸುವುದಾಗಿ ಭರವಸೆ ಸಿಕ್ಕಿದರಿಂದ ಗುಂಪು ಚದುರಿ ಹೋಗಿದೆ. ಆದರೆ ಬೆಳಿಗ್ಗೆ ಶಾಲೆಗೆ ಹೋದ ಮಗ ಇನ್ನೇನು ಮನೆಗೆ ಮರಳಿಯಾನು ಎಂದು ನಿರೀಕ್ಷೆಯಲ್ಲಿದ್ದ ಹೆತ್ತವರು ಮಾತ್ರ ಹಂತಕ ಅಧ್ಯಾಪಕನಿಂದಾಗಿ ಮಗನ ಅಂತ್ಯಕ್ರಿಯಾದಿಗಳನ್ನು ಮಾಡಿ ಮುಗಿಸಿದ್ದಾರೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ