ಬುಧವಾರ, ಫೆಬ್ರವರಿ 02, 2011

ಮಹಿಳೆಯೊಬ್ಬರೇ ಇದ್ದಾಗ ಮನೆಮುಂದೆ ಪ್ರತಿಭಟಿಸಿದರು: ಅಮಿತ್ ಸಿಂಗ್

ಪುತ್ತೂರು: ತಾನು ಕಾನೂನು ಬಿಟ್ಟು ಹೋಗಿಲ್ಲ. ಸರಿಯಾಗಿಯೇ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಬಂಟ್ವಾಳದಲ್ಲಿ ಸೊಮವಾರ ನಡೆದ ಬುಡಾ ಅಧ್ಯಕ್ಷರ ಮೇಲಿನ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಉಪವಿಭಾಗದ ಎಎಸ್‌ಪಿ ಅಮಿತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಸಿದ್ದಕಟ್ಟೆ ಕೆರೆಬಳಿ ಎಂಬಲ್ಲಿನ ಮಸೀದಿಗೆ ಕಲ್ಲು ಹೊಡೆದ ಪ್ರಕರಣಕ್ಕೆ ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಲು ಬಂಟ್ವಾಳ ಗ್ರಾಮಾಂತರ ಠಾಣೆಗೆ ತಾನು ಸೋಮವಾರ ಸಂಜೆ ಹೋಗಿದ್ದೆ. ಠಾಣೆಗೆ ಬಂದಿದ್ದ ಬಂಟ್ವಾಳ ಬುಡಾ ಅಧ್ಯಕ್ಷ ಗೋವಿಂದ ಪ್ರಭು ಮತ್ತು ರಾಯಿ ಗಾ. ಪಂ. ಅಧ್ಯಕ್ಷ ಹರೀಶ್ ಆಚಾರ್ಯ ಆರೋಪಿಗಳನ್ನು ಇಂದೇ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕೆಂದು ಕಿರಿಕಿರಿ ಮಾಡತೊಡಗಿದರು. ಆರೋಪಿಗಳನ್ನು ವಿಚಾರಣೆಗೊಳಪಡಿಸಲಿದ್ದು, ಇವತ್ತು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ. ವಿಚಾರಣೆ ನಡೆಸಿ ನಾಳೆ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಹೇಳಿದ್ದೆ. ಆದರೂ ಅವರು ಅಲ್ಲಿಂದ ತೆರಳದ ಕಾರಣ ಠಾಣೆಯಿಂದ ದೂಡಿ ಹೊರಕಳುಹಿಸಬೇಕಾಯಿತು.
ಆರೋಪಿಗಳು ಮತ್ತು ಅವರ ಪರವಾಗಿ ಬಂದಿದ್ದ ಗೋವಿಂದ ಪ್ರಭು ಹಲವು ಪ್ರಕರಣಗಳಲ್ಲಿ ಭಾಗಿಯಾದ ರೌಡಿ ಶೀಟರ್‌ಗಳಾಗಿದ್ದುದರಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಬಿಹಾರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಸಾಮಾನ್ಯ. ಆದರೆ ರಾಜ್ಯದಲ್ಲೂ ಈ ರೀತಿಯಾಗುತ್ತಿದೆ ಎಂಬುದು ಬೇಸರ ತರುತ್ತಿದೆ ಎಂದು ಅಮಿತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಮನೆ ಎದುರು ಪ್ರತಿಭಟನೆ ಅಗತ್ಯವಿತ್ತೇ?
ಪತ್ನಿಯೊಬ್ಬರೇ ಇರುವ ತನ್ನ ಮನೆಯ ಮುಂದೆ ಪ್ರತಿಭಟನೆ ನಡೆಸಿ ಹೆದರಿಸುವ ಕೆಲಸ ಮಾಡಲಾಗಿದೆ. ಆಕೆ ಮನೆಯಿಂದ ಹೊರಹೋಗದಂತಹ ಪರಿಸ್ಥಿತಿ ನಿರ್ಮಿಸಲಾಗಿದೆ ಎಂದು ಎಎಸ್‌ಪಿ ಅಮಿತ್ ಸಿಂಗ್ ಆರೋಪಿಸಿದ್ದಾರೆ.
ಕಚೇರಿ ಎದುರು ಅಥವಾ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸುವುದನ್ನು ಬಿಟ್ಟು ತನ್ನ ಮನೆಯ ಮುಂದೆ ಪ್ರತಿಭಟನೆ ನಡೆಸುವ ಅನವಾರ್ಯತೆ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಕಟ್ಟುನಿಟ್ಟಿನ ಕ್ರಮ: ಕೋಮು ಸೂಕ್ಷ್ಮ ಪ್ರದೇಶವಾದ ಪುತ್ತೂರಿನಲ್ಲಿ ಮತೀಯ ಮತ್ತು ಯುವಕ ಯುವತಿಯರ ವಿಚಾರದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಹಿತಕರ ಘಟನೆಗಳಿಗೆ ಮತ್ತು ಮತೀಯ ಗಲಭೆಗಳಿಗೆ ಕಡಿವಾಣ ಹಾಕಿರುವ ಎಎಸ್‌ಪಿ ಅಮಿತ್ ಸಿಂಗ್ ಅವರು ಕಾನೂನು ಚೌಕಟ್ಟಿನೊಳಗೆ ಪಾರದರ್ಶಕವಾಗಿ ಕೆಲಸ ಮಾಡಿರುವುದೇ ಕೆಲವರ ವೈರತ್ವ ಕಟ್ಟಿಕೊಳ್ಳಲು ಕಾರಣ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ.
 ಅಮಿತ್ ಸಿಂಗ್ ಪುತ್ತೂರಿಗೆ ಬಂದ ಬಳಿಕ ಪುತ್ತೂರಿನ ಪರಿಸ್ಥಿತಿ ಶಾಂತಿಯುತವಾಗಿದ್ದು, ಇತ್ತೀಚಿನ ದಿನಗಳಲ್ಲಿ ಪುತ್ತೂರಿನಲ್ಲಿ ನಡೆದ ಬಂದ್ ಸಂದರ್ಭಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿರಲು ಕೂಡ ಅವರ ಕಟ್ಟುನಿಟ್ಟಿನ ಕ್ರಮಗಳೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ನಾಚಿಕೆಗೇಡಿನ ರಾಜಕೀಯ: ಹೇಮನಾಥ ಶೆಟ್ಟಿ: ಅಧಿಕಾರದಲ್ಲಿದ್ದವರೇ ಅಧಿಕಾರಿಯೊಬ್ಬರ ಮನೆ ಮುಂದೆ ರಾತ್ರಿಯ ವೇಳೆ ಪ್ರತಿಭಟನೆ ನಡೆಸಿರುವುದು ರಾಜಕೀಯ ದುರಂತ. ಸಂಸದರು ಮತ್ತು ಶಾಸಕರೇ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರ ವಿರುದ್ದ ಹೇಳಿಕೆ ನೀಡಿರುವುದು ಮತ್ತು ಅಧಿಕಾರಿಗಳಿಗೇ ರಕ್ಷಣೆ ಬೇಕಾದ ಪರಿಸ್ಥಿತಿ ಬಂದಿರುವುದು ನಾಚಿಕೆಗೇಡು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ