ಮಂಗಳವಾರ, ಫೆಬ್ರವರಿ 01, 2011

ನಮ್ಮದು ಸಂಪತ್ತು ವೃದ್ಧಿಯಾಗಬೇಕಾದ ಸಂಸ್ಥೆಯಲ್ಲ, ಅಕ್ರಮ ಸಂಪತ್ತು ಬಯಲಿಗೆಳೆಯುವ ಸಂಸ್ಥೆ.

ಮಂಗಳೂರು: ನಮ್ಮದು ಸಂಪತ್ತು ವೃದ್ಧಿಯಾಗಬೇಕಾದ ಸಂಸ್ಥೆಯಲ್ಲ. ಅಕ್ರಮ ಸಂಪತ್ತು ಬಯಲಿಗೆಳೆಯುವ ಸಂಸ್ಥೆ ಹೀಗೆಂದು ಹೇಳಿ ದಕ್ಷಿಣ ಕನ್ನಡ ಜಿಲ್ಲೆಯ ಲೋಕಾಯುಕ್ತ ಕಚೇರಿ ಕಟ್ಟಡದ ಶಿಲಾನ್ಯಾಸ, ಭೂಮಿಪೂಜೆ ಮಾಡುವ ಸಂದರ್ಭದಲ್ಲಿ ಪಂಚಲೋಹದ ಚಿಕ್ಕ ತುಂಡು ಭೂಮಿಯಲ್ಲಿಡುವುದಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ನಿರಾಕರಿಸಿದ ಘಟನೆ ನಿನ್ನೆ ನಡೆದಿದೆ.
ಸೋಮವಾರ ಬೆಳಿಗ್ಗೆ ಮಂಗಳೂರಿನ ದ.ಕ. ಜಿಲ್ಲಾ ಪಂಚಾಯತ್ ಸಮೀಪದಲ್ಲಿ ಲೋಕಾಯುಕ್ತ ಕಚೇರಿ ಕಟ್ಟಡಕ್ಕೆ ಭೂಮಿಪೂಜೆ ಏರ್ಪಡಿಸಲಾಗಿತ್ತು. ಪುರೋಹಿತರು ಆಗಮಿಸಿದ್ದರು. ಮುಹೂರ್ತದ ಸಂದರ್ಭದಲ್ಲಿ ಇಟ್ಟಿಗೆಯನ್ನಿರಿಸಿ ಶಿಲಾನ್ಯಾಸ ಮಾಡುವಾಗ ವಾಡಿಕೆಯಂತೆ ಪಂಚಲೋಹದ ತುಂಡನ್ನು ಶಿಲೆಯ ಅಡಿಯಲ್ಲಿ ಇರಿಸಬೇಕಿತ್ತು. ಅದಕ್ಕಾಗಿ ಪುರೋಹಿತರು ತುಂಡನ್ನು ಲೋಕಾಯುಕ್ತರಿಗೆ ನೀಡಿ ಇದನ್ನು ಇಟ್ಟಿಗೆಯೊಂದಿಗೆ ಇರಿಸಿ ಎಂದರು.
ಆಗ ಅದು ಯಾಕೆ ಎಂದು ಲೋಕಾಯುಕ್ತರು ಪ್ರಶ್ನಿಸಿದಾಗ, ಇದನ್ನಿರಿಸಿದರೆ ಸಂಪತ್ತು ವೃದ್ಧಿಯಾಗು ತ್ತದೆ ಎಂದು ಪುರೋಹಿತರು ಹೇಳಿದಾಗ, ನಮ್ಮದು ಸಂಪತ್ತು ವೃದ್ಧಿಯಾಗಬೇಕಾದ ಸಂಸ್ಥೆಯಲ್ಲ, ಅಕ್ರಮ ಸಂಪತ್ತು ಬಯಲಿಗೆಳೆಯುವ ಸಂಸ್ಥೆ. ಹಾಗಾಗಿ ಅದೆಲ್ಲ ಬೇಡವೇ ಬೇಡ ಎಂದು ಹೆಗ್ಡೆ ಹೇಳಿದರು. ಪುರೋಹಿತರು ಇದಕ್ಕೆ ಒಪ್ಪಿದರು.
ಶಿಲಾನ್ಯಾಸದ ಬಳಿಕ ಸಭಾ ಕಾರ‍್ಯಕ್ರಮದಲ್ಲಿ ಮಾತನಾಡುವಾಗ ಹೆಗ್ಡೆ ಸ್ವಲ್ಪ ಕೋಪದಿಂದ ಇದ್ದರು. ಆಮಂತ್ರಣ ಪತ್ರಿಕೆಯಲ್ಲಿದ್ದ ಹಲವು ಜನಪ್ರತಿನಿಧಿಗಳು ನಾಪತ್ತೆಯಾಗಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಾಗರಾಜ ಶೆಟ್ಟರು ಶಿಲಾನ್ಯಾಸಕ್ಕೆ ಬಾರದೆ ಸಭೆಗೆ ಬಂದಿದ್ದರು. ಈ ಬಗ್ಗೆ ಪ್ರಸ್ತಾವಿಸಿದ ಹೆಗ್ಡೆ, ಶಿಲಾನ್ಯಾಸ ಮಾಡುವಾಗ ಇದ್ದವರ ಹೆಸರು ಮಾತ್ರವೇ ಕಲ್ಲಿನಲ್ಲಿ ಬರೆಸಬೇಕು. ಬಾರದವರ ಹೆಸರೇಕೆ? ಎಂದು ಪ್ರಶ್ನಿಸಿದರು. ಅಲ್ಲಿಲ್ಲದವರ ಹೆಸರನ್ನು ಅಳಿಸಿಹಾಕಿ. ನಾಗರಾಜ ಶೆಟ್ಟಿಯವರು ಹೆಸರಿನೊಂದಿಗೆ ಆವರಣದಲ್ಲಿ ತಡವಾಗಿ ಬಂದಿದ್ದಾರೆ ಎಂದೂ ಹಾಕಬೇಕು ಎಂದು ಸಂಘಟಕರಿಗೆ ತಿಳಿಸಿದರು. ಸಚಿವ ಕೃಷ್ಣ ಪಾಲೆಮಾರ್ ಸೇರಿದಂತೆ ಬಹುತೇಕ ಜನಪ್ರತಿನಿಧಿಗಳು ಆಗಮಿಸಿರಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ