ಮಂಗಳವಾರ, ಫೆಬ್ರವರಿ 01, 2011

ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ದಲಿತರು ಜೈಲಿಗೆ

ಭಾರತಕ್ಕೆ ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ಅಸ್ಪೃಶ್ಯತೆ ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ಇದಕ್ಕೆ ಮತ್ತೆ ಸಾಕ್ಷಿಯಾಗಿರುವುದು ತಮಿಳುನಾಡು. ದಲಿತರಿಗೆ ಪ್ರವೇಶ ನಿಷೇಧವಿರುವ ಮಧುರೈ ಸಮೀಪದ ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ನೂರಕ್ಕೂ ಹೆಚ್ಚು ಮಂದಿ ದಲಿತರನ್ನು ಜೈಲಿಗಟ್ಟಲಾಗಿದೆ.
ತಮಿಳುನಾಡು ಮಧುರೈ ಸಮೀಪದ ಉತ್ತಾಪುರಂ ಗ್ರಾಮದಲ್ಲಿನ ಮುತ್ತಾಲಮ್ಮನ್ ದೇಗುಲದಲ್ಲಿ ಈ ಘಟನೆ ನಡೆದಿದೆ. ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ಅನಿಷ್ಠ ಸಂಪ್ರದಾಯವನ್ನು ಮುರಿದು ಹಾಕಲು ಭಾರತೀಯ ಕಮ್ಯೂನಿಸ್ಟ್ ಪಕ್ಷವೂ ಬೆಂಬಲ ನೀಡಿತ್ತು. ಅದರಂತೆ ಸಿಪಿಎಂ ನೇತೃತ್ವದಲ್ಲಿ ದಲಿತರು ಸೋಮವಾರ ಬೆಳಿಗ್ಗೆ ದೇವಸ್ಥಾನಕ್ಕೆ ಪ್ರವೇಶಿಸುವ ನಿರ್ಧಾರಕ್ಕೆ ಬರಲಾಗಿತ್ತು. ಈ ಸಮಾಜಮ ಖಿ ಕಾರ್ಯಕ್ಕೆ ಸುಮಾರು ೮೦೦ ಮುಂದಿ ಕೈ ಜೋಡಿಸಿದ್ದರು.
ಈ ನಿಟ್ಟಿನಲ್ಲಿ ದಲಿತರು ಮತ್ತು ಇತರ ಮೇಲ್ಜಾತಿಗಳ ನಡುವೆ ಭಾರೀ ವೈಷಮ್ಯ ಹೊಂದಿರುವ ದೇವಸ್ಥಾನಕ್ಕೆ ಭಾರೀ ಭದ್ರತೆಯನ್ನು ನಿಯೋಜಿಸಲಾಗಿತ್ತು. ಸೆಕ್ಷನ್ ೧೪೪ನ್ನು ಹೇರಿ ಸಾವಿರಾರು ಪೊಲೀಸರ ಪಹರೆ ಹಾಕಲಾಗಿತ್ತು. ನಿಯಮದಂತೆ ನಾಲ್ಕಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಹೋಗುವಂತಿರಲಿಲ್ಲ. ಇದನ್ನೇ ಮುಂದಿಟ್ಟುಕೊಂಡು ಪೊಲೀಸರು ದಲಿತರು ದೇವಸ್ಥಾನದ ಹತ್ತಿರಕ್ಕೆ ಬರುವುದಕ್ಕೆ ಮೊದಲೇ ಬಂಧಿಸಿದ್ದಾರೆ. ಸುಮಾರು ೮೦೦ ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ನೂರಕ್ಕೂ ಹೆಚ್ಚು ಮಂದಿ ದಲಿತರಿದ್ದರು ಎಂದು ವರದಿಗಳು ಹೇಳಿವೆ.
ಉನ್ನತ ಜಾತಿಯವರ ಹಿಡಿತದಲ್ಲಿರುವ ಈ ದೇವಸ್ಥಾನ ಪ್ರವೇಶಿ ಸುವುದರ ಮೇಲೆ ಕಳೆದ ನಾಲ್ಕು ದಶಕಗಳ ಹಿಂದೆ ನಿಷೇಧ ಹೇರಲಾಗಿತ್ತು. ಅಲ್ಲದೆ ೨೦೦೮ರಲ್ಲಿ         ದಲಿತರ ಕಾಲೊನಿ ಮತ್ತು ಗ್ರಾಮದ ಇತರರ ನಡುವೆ ತಡೆಗೋಡೆಯನ್ನು ಮೇಲ್ಜಾತಿಯವರು ನಿರ್ಮಿಸಿದ್ದರು. ಆದರೆ ಇದನ್ನು ಮುಖ್ಯಮಂತ್ರಿ ಕರುಣಾನಿಧಿ ಆದೇಶದಂತೆ ಧ್ವಂಸಗೊಳಿಸಲಾಗಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ