ಶನಿವಾರ, ಜನವರಿ 22, 2011

ಕರ್ನಾಟಕ ಬಂದ್ ????? ಸಂಚಾರ ಅಸ್ತವ್ಯಸ್ತ | ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಹಂಸರಾಜ್‌ಭಾರದ್ವಾಜ್ ಅನುಮತಿ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಘಟಕ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ರಾಜ್ಯದ ಕೆಲವೆಡೆ ಹಿಂಸಾಚಾರಕ್ಕೆ ತಿರುಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ತಡರಾತ್ರಿ ಬಂದ್ ನಿರ್ಧಾರ ಕೈಗೊಂಡಿದ್ದರಿಂದ ಸಾರ್ವಜನಿಕರಿಗೆ ಈ ವಿಷಯದ ಅರಿವೇ ಇಲ್ಲ. ಮುಂಜಾನೆ ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸಲು ಮುಂದಾದ ಸಾರ್ವಜನಿಕ ವಾಹನಗಳ ಮೇಲೆ, ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚುವ ಪ್ರಕರಣ ಅಲ್ಲಲ್ಲಿ ನಡೆದಿದೆ.
ಕೆಲವೆಡೆ ಚಳವಳಿ ಹಿಂಸಾಚಾರಕ್ಕೆ ತಿರುಗಿದ್ದು, ಅಪಾರ ನಷ್ಟ-ಸಂಭವಿಸುವ ಸಾಧ್ಯತೆ ಇದೆ. ಸರಕಾರವೇ ಶಾಲಾ ಕಾಲೇಜುಗಳಿಗೆ ಪರೋಕ್ಷ ರಜೆ ಘೋಷಿಸಿರುವುದಲ್ಲದೆ ಸಾರಿಗೆ ವಾಹನ ಗಳನ್ನು ರಸ್ತೆಗೆ ಇಳಿಯಲು ಬಿಟ್ಟಿಲ್ಲ. ಇದು ಬಂದ್ ಯಶಸ್ಸಿಗೆ ಮೂಲ ಕಾರಣವಾಗಿದೆ. ಬಂದ್ ವಿರೋಧಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಲ್ಲಲ್ಲಿ ಪ್ರತಿಭಟನೆ ನಡೆಸಿದ್ದು, ಇದು ಹಿಂಸಾ ಚಾರಕ್ಕೆ ತಿರುಗಿದೆ. ಹೈಕೋರ್ಟ್‌ಗೆ ಮನವಿ
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಅನುಮತಿ ನೀಡುವ ಮೂಲಕ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಹೊಸ ಇತಿಹಾಸ ಸೃಷ್ಟಿಸಿದ್ದು, ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಿದೆ. ತನ್ಮೂಲಕ ರಾಜ್ಯಪಾಲ ಹಾಗೂ ಬಿಜೆಪಿ ನಡುವಿನ ಹಣಾಹಣೆಯು ಈಗ ಬೀದಿಕಾಳಗದ ಸ್ಪಷ್ಟ ಸ್ವರೂಪ ಪಡೆದಿದೆ. ಇದೇ ವೇಳೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದ ವಕೀಲರಾದ ಸೀರಾಜ್ ಭಾಷ ಹಾಗೂ ಕೆ.ಎನ್. ಬಾಲರಾಜ್ ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ಇದರಿಂದಾಗಿ ಬಿಜೆಪಿಗೆ ಮಾಡು ಇಲ್ಲವೇ ಮಡಿ ಪರಸ್ಥಿತಿ ತಲೆದೂರಿದ್ದು, ರಾಜ್ಯ ಸರ್ಕಾರದ ಮೇಲೆಯೇ ತೂಗುಕತ್ತಿ ಬೀಸಿದೆ. ಆದರೆ, ತಾಂತ್ರಿಕವಾಗಿ ದೂವೆ ಹೂಡಿದಷ್ಟಕ್ಕೆ ಮುಖ್ಯಮಂತ್ರಿ ರಾಜಿನಾಮೆ ನೀಡುವ ಅಗತ್ಯವಿಲ್ಲ. ಆದರೆಪ್ರತಿಪಕ್ಷಗಳು ನೈತಿಕ ಆಧಾರದ ಮೇಲೆ ರಾಜಿನಾಮೆಗೆದೊಡ್ಡ ದನಿಯಲ್ಲಿ ಆಗ್ರಹ ಆರಂಭಿಸಿದೆ. ಹೀಗಾಗಿ ಬಿಜೆಪಿಯು ಒಂದು ಕಡೆ ಬೀದಿ ಹೋರಾಟದ ಮೂಲಕ ರಾಜ್ಯಪಾಲರ ಕಿರುಕುಳವನ್ನು ಅನುಕಂಪವಾಗಿ ಬಳಸಲು ರಜ್ಯವ್ಯಾಪಿ ಹೋರಾಟ ನಡೆಸಲು ಮುಂದಾಗಿದೆ. ತಕ್ಷಣದ ಪ್ರತಿಕ್ರಿಯೆಯಾಗಿ ಇಂದಿನಿಂದಲೇ ರಾಜ್ಯವ್ಯಾಪಿ ಬಂದ್ ಕರೆ ನೀಡಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಪ್ರಕಟಿಸಿದ್ದಾರೆ. ತಮ್ಮ ವಿರುದ್ಧ ದೂರು ದಾಖಲುಮಾಡಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ರಾಜಕೀಯ ಪ್ರೇರಿತ, ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಹಾಡಹಗಲೇ ಹತ್ಯೆ ಮಾಡಿದಂತೆ ಎಂದು ತಿರುಗೇಟು ನೀಡಿರುವ ಸಿಎಂ ಯಡಿಯೂರಪ್ಪ, ನನ್ನನ್ನು ಸಂಪರ್ಕಿಸದೆ ನನ್ನ ಮೇಲೆ ದೂರು ದಾಖಲಿಸಲು ಅನುಮತಿ ನೀಡಿರುವುದು ದುರದೃಷ್ಟಕರ ಎಂದಿದ್ದಾರೆ.
ರಾಜ್ಯದಾದ್ಯಂತ ಬಿಜೆಪಿ ಬಂದ್‌ಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಅಲ್ಲಲ್ಲಿ ಹಿಂಸಾಚಾರ ನಡೆದಿದ್ದು, ಬೆಂಗಳೂರು, ಹಾಸನ , ಗುಲ್ಬರ್ಗ ಸೇರಿದಂತೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ಕಾರ‍್ಯಕರ್ತರು ಟೈರ್‌ಗಳಿಗೆ ಬೆಂಕಿ ಗೌರ‍್ನರ್ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಕೆಲವಡೆ ಕಿಡಿಗೇಡಿಗಳಿಂದ ವಾಹನಗಳಿಗೆ ಬೆಂಕಿ ಹಚಿ ಇಂದು ರಾಜ್ಯದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ್ಯಂತ ಬಿಗಿ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.
ಯಡಿಯೂರಪ್ಪ ಕಾನೂನು ತಜ್ಞರೊಂದಿಗೆ ಸಮಾಲೋಚನೆ
ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿ ಸಲು ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಪ್ರಶ್ಮಿಸಿ ರಾಜ್ಯ ಬಿಜೆಪಿ ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಇದರ ವಿರುದ್ಧ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
 
ಮಂಗಳೂರು-ಉಡುಪಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ
ಮಂಗಳೂರು: ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲೂ ಸಂಚಾರ ಅಸ್ತವ್ಯಸ್ಥಗೊಂಡಿದೆ. ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಬಸ್ ಸಂಚಾರಕ್ಕೆ ತಡೆವೊಡ್ಡಿದ್ದಾರೆ. ಕೆಲವೆಡೆ ಬಸ್‌ಗೆಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಮುಲ್ಕಿ ಸಮೀಪದ ಪಾವಂಜೆ ಬಳಿ ನಿನ್ನೆ ತಡ ರಾತ್ರಿ ರಸ್ತೆಯಲ್ಲಿ ಬೆಂಕಿ ಹಚ್ಚಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಲಾಗಿದೆ. ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.ಜಿಲ್ಲಾಧಿಕಾರಿ ಶುಭೋದ್ ಯಾದವ್ ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿದ್ದಾರೆ.
 
ಸಂಕಷ್ಟದಲ್ಲಿ ಸರಕಾರ
ಬೆಂಗಳೂರು: ಭ್ರಷ್ಟಾಚಾರದ ಆರೋಪ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂ ರಪ್ಪರವರ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನಲೆಯಲ್ಲಿ ೩೦ ತಿಂಗಳ ಬಿಜೆಪಿ ಸರಕಾರ ಸಂಕಷ್ಟಕ್ಕೆ ಸಿಲುಕಿದೆ.
ಪ್ರಕರಣ ದಾಖಲಾದ ತಕ್ಷಣವೇ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಬಿಜೆಪಿ ವರಿಷ್ಠರು ಈ ಸಂಬಂಧ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆಂಬುದನ್ನು ಕಾದು ನೋಡಬೇಕು. ವರಿಷ್ಠರಲ್ಲಿ ಬಹುತೇಕರು ಯಡಿಯೂರಪ್ಪರ ರಾಜೀನಾಮೆಗೆ ಒಲವು ಹೊಂದಿದ್ದಾರೆ. ಅವರು ರಾಜೀನಾಮೆ ನೀಡದಿದ್ದರೆ ಪ್ರತಿಪಕ್ಷಗಳು ರಾಷ್ಟ್ರಾದ್ಯಂತ ಬಿಜೆಪಿ ವಿರುದ್ಧ ಗದಾಪ್ರಹಾರ ಮಾಡಲಿದ್ದಾರೆ. ಯಡಿಯೂರಪ್ಪ ಈ ಸಂಬಂಧ ವರಿಷ್ಠರೊಟ್ಟಿಗೆ ಸಮಾಲೋಚನೆ ನಡೆಸುತ್ತಿದ್ದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ ರಾಜೀನಾಮೆ ಕೊಡುವ ಪರಿಸ್ಥಿತಿ ಬಂದರೆ ವಿಧಾನಸಭೆಯನ್ನೇ ವಿಸರ್ಜಿಸಿ ಚುನಾವಣೆಗೆ ತೆರಳುವ ಆಸಕ್ತಿ ಹೊಂದಿದ್ದಾರೆ. ತಾವು ಇಲ್ಲದೆ ಬೇರೆಯವರು ಅಧಿಕಾರಕ್ಕೆ ಬರಬಾರದೆಂಬ ಭಾವನೆ ಯಡಿಯೂರಪ್ಪರವರಲ್ಲಿದೆ. ಆದರೆ ಸರಕಾರವನ್ನು ಮುಂದುವರಿಸುವ ಆಸಕ್ತಿ ಬಿಜೆಪಿ ವರಿಷ್ಠರಿಗಿದೆ.ಒಟ್ಟಾರೆ ಈ ಎಲ್ಲಾ ಬೆಳವಣಿಗೆಗಳಿಗೆ ಇನ್ನೆರಡು ದಿನದಲ್ಲಿ ಸ್ಥೂಲ ಚಿತ್ರಣ ದೊರೆಯಲಿದೆ. ಈ ಮಧ್ಯೆ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿಯ ಬೇಕೇ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ತಮ್ಮ ಪಕ್ಷದ ಶಾಸಕರನ್ನು ಬೆಂಗಳೂರಿಗೆ ಬುಲಾವ್ ಮಾಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ