ಸೋಮವಾರ, ಮೇ 09, 2011

ಇದೊಂದು ವಿಚಿತ್ರ ತೀರ್ಪು: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ವ್ಯಂಗ್ಯ....... ಅಯೋಧ್ಯಾ ಮಾಲಕತ್ವ ವಿವಾದ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ

ಹೊಸದಿಲ್ಲಿ, ಮೇ 9: ಅಯೋಧ್ಯೆಯ ವಿವಾದಿತ ನಿವೇಶನವನ್ನು ಮೂರು ಪಾಲು ಮಾಡಿ ಹಂಚಿರುವ ಅಲಹಾಬಾದ್ ಹೈಕೋರ್ಟ್‌ನ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ವಿಧಿಸಿದೆ. ಯಾವುದೇ ಕಕ್ಷಿಯೂ ಭೂಮಿಯನ್ನು ಪಾಲು ಮಾಡುವಂತೆ ಕೇಳಿರದ ಕಾರಣ ಈ ತೀರ್ಪು ‘ವಿಚಿತ್ರವಾದುದು’ ಎಂದು ಅದು ವ್ಯಾಖ್ಯಾನಿಸಿದ್ದು, ಅದರ ಜಾರಿಗೆ ತಡೆ ನೀಡಿದೆ. ವಿವಾದಿತ ಕಟ್ಟಡದ ಸಮೀಪ ಕೇಂದ್ರ ಸರಕಾರ ವಶಪಡಿಸಿಕೊಂಡಿರುವ 67 ಎಕರೆ ಪ್ರದೇಶದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸಬಾರದೆಂದು ಆದೇಶಿಸಿರುವ ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಹಾಗೂ ಆರ್.ಎಂ. ಲೋಧಾರಿದ್ದ ಪೀಠವು, ಉಳಿದ ಭೂಮಿಗೆ ಸಂಬಂಧಿಸಿ ಯಥಾಸ್ಥಿತಿ ಕಾಯಬೇಕೆಂದು ಸೂಚಿಸಿದೆ.
ಯಾವುದೇ ಪಕ್ಷವೂ ಪಾಲಿಗೆ ಒತ್ತಾಯಿಸದಿದ್ದಾಗ ಇಂತಹ ತೀರ್ಪು ಹೇಗೆ ನೀಡುವುದಕ್ಕೆ ಸಾಧ್ಯ? ಎಂದು ಪ್ರಶ್ನಿಸಿದ ನ್ಯಾಯಪೀಠ, ಹೈಕೋರ್ಟ್ ತನ್ನ ಸ್ವಂತದ ನಿರ್ಧಾರ ಕೈಗೊಂಡಿದೆ. ಅದು ವಿಚಿತ್ರವಾಗಿದೆ. ಅಂತಹ ತೀರ್ಪಿನ ಜಾರಿಗೆ ಅವಕಾಶ ನೀಡಲಾಗದು ಎಂದಿದೆ. ಈಗ ಪರಿಸ್ಥಿತಿ ಕಠಿಣವಾಗಿದೆ. ಹೈಕೋರ್ಟ್‌ನ ತೀರ್ಪು ವ್ಯಾಜ್ಯದ ಶಾಂತಿ ಪಂಚಾತಿಗೆ ಮಾಡಿದಂತಿದೆ ಎಂದು ಅದು ಹೇಳಿದೆ.
ಹಿಂದೆ ವಿವಾದಿತ ಕಟ್ಟಡವಿದ್ದ 2.77 ಎಕ್ರೆ ಭೂಮಿಯನ್ನು ಮೂರು ಸಮಪಾಲು ಮಾಡಿ ಮುಸ್ಲಿಂ, ಹಿಂದೂ ಹಾಗೂ ನಿರ್ಮೋಹಿ ಅಖಾರಗಳಿಗೆ ಹಂಚುವಂತೆ ಹೈಕೋರ್ಟ್‌ನ ಲಕ್ನೊ ಪೀಠ ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ತೀರ್ಪು ನೀಡಿತ್ತು. ವಿವಾದಿತ ನಿವೇಶನ ಹಿಂದೂ, ಮುಸ್ಲಿಂ ಹಾಗೂ ನಿರ್ಮೋಹಿ ಅಖಾರಗಳ ಜಂಟಿ ಕಬ್ಜೆಯಲ್ಲಿತ್ತೆಂದು ಹೈಕೋರ್ಟ್‌ನಲ್ಲಿ ಯಾರೂ ಪ್ರಕರಣ ದಾಖಲಿಸಿರಲಿಲ್ಲ. ಮೂವರು ಕಕ್ಷಿದಾ ರರೂ ವಿವಾದಿತ ನಿವೇಶನ ಇಡಿಯಾಗಿ ತಮಗೆ ಸೇರಿದುದೆಂದು ಪ್ರತಿಪಾದಿಸಿದ್ದರು ಹಾಗೂ ಅದನ್ನು ಪಾಲು ಮಾಡಿ ಕೊಡುವಂತೆ ಯಾರೂ ಕೇಳಿ ರಲಿಲ್ಲವೆಂದು ಮೇಲರ್ಜಿಗಳನ್ನು ಸಲ್ಲಿಸಲಾಗಿತ್ತು. ಇನ್ನೊಂದೆಡೆ, ಹಿಂದೂ ಮಹಾಸಭಾ, ಹೈಕೋರ್ಟ್‌ನ ಬಹು ಸಂಖ್ಯಾತ ತೀರ್ಪನ್ನು ಭಾಗಶಃ ತಿದ್ದುಪಡಿ ಮಾಡಿ, ಮುಸ್ಲಿಮರಿಗೆ ಮೂರನೆ ಒಂದಂಶ ನೀಡುವಂತೆ ಆದೇಶಿಸಿರುವುದನ್ನು ರದ್ದು ಗೊಳಿಸಬೇಕು. ಇಡೀ ಪ್ರದೇಶವನ್ನು ಹಿಂದೂಗಳಿಗೇ ನೀಡುವುದಕ್ಕೆ ಒಲವು ಸೂಚಿಸಿದ್ದ ನ್ಯಾ. ಧರ್ಮವೀರ ಶರ್ಮಾರ ಸೆ.30ರ ಅಲ್ಪಮತ ತೀರ್ಪಿಗೆ ಸುಪ್ರೀಂ ಕೋರ್ಟ್ ಮುದ್ರೆಯೊತ್ತಬೇಕೆಂದು ಕೋರಿತ್ತು.
ಲಕ್ನೊ ಪೀಠದ ಮೂವರು ನ್ಯಾಯಾಧೀಶರು ಸೆ.30ರಂದು ಮೂರು ವಿಧವಾದ ತೀರ್ಪುಗಳನ್ನು ನೀಡಿದ್ದು, ರಾಮ ಲಲ್ಲಾನ ವಿಗ್ರಹವಿರುವ ಭಾಗ ಹಿಂದೂಗಳಿಗೆ ಸೇರಬೇಕೆಂದು ಬಹುಮತದ ಅಭಿಪ್ರಾಯ ಸೂಚಿಸಿದ್ದರು. ನ್ಯಾ. ಖಾನ್ ಹಾಗೂ ಅಗರ್ವಾಲ್, ವಿವಾದಿತ ನಿವೇಶನವನ್ನು 3 ಭಾಗ ಮಾಡಿ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಹಾಗೂ ರಾಮಲಲ್ಲಾ ವಿರಾಜಮಾನ್ ಪರ ದಾವೆದಾರರಿಗೆ ನೀಡುವಂತೆ ತೀರ್ಪಿತ್ತಿದ್ದರೆ, ನ್ಯಾ. ಶರ್ಮಾ ಸಂಪೂರ್ಣ ನಿವೇಶನ ಹಿಂದೂಗಳಿಗೆ ಸೇರಬೇಕು ಎಂದಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ