ಬುಧವಾರ, ಡಿಸೆಂಬರ್ 15, 2010

ಮಅದನಿ ಜಾಮೀನು ಅರ್ಜಿ: ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಡಿ.15: ಕಳೆದ 2008ರಲ್ಲಿ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಕೇರಳದ ಪಿಡಿಪಿ ನಾಯಕ ಅಬ್ದುನ್ನಾಸರ್ ಮಅದನಿ ಸಲ್ಲಿಸಿದ ಜಾಮೀನು ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್. ಆನಂದ್, ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಒಂದು ವಾರ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಿದ್ದಾರೆ. ಜಾಮೀನು ಕೋರಿ ಮಅದನಿ ಡಿ.13ಕ್ಕೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಅದನಿಯವರನ್ನು ಬಂಧಿಸಿ ನಾಲ್ಕು ತಿಂಗಳು ಕಳೆದರೂ ಅವರ ವಿರುದ್ಧ ಯಾವುದೇ ಪ್ರಬಲ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ವಿಚಾರಣೆ ಪೂರ್ಣಗೊಂಡಿದ್ದು ಬಂಧನದಲ್ಲಿಡುವುದ ರಲ್ಲಿ ಯಾವುದೇ ಅರ್ಥವಿಲ್ಲ. ಅಲ್ಲದೆ ಮೊದಲ ಎರಡು ಆರೋಪ ಪಟ್ಟಿಗಳಲ್ಲಿ ಮಅದನಿಯವರ ಹೆಸರು ಇಲ್ಲ. ಮೂರನೆ ಆರೋಪ ಪಟ್ಟಿಯಲ್ಲಿ ಅವರನ್ನು 31ನೆ ಆರೋಪಿಯನ್ನಾಗಿಸಲಾಗಿದೆ. ಈ ಎಲ್ಲ ಆಧಾರಗಳಲ್ಲಿ ಜಾಮೀನು ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಅಂಗವೈಕಲ್ಯದ ಜೊತೆಗೆ ಮಧುಮೇಹ ಮತ್ತು ರಕ್ತದೊತ್ತಡದ ಕಾಯಿಲೆಯಿಂದ ಮಅದನಿ ಬಳಲುತ್ತಿದ್ದಾರೆ. ವೈದ್ಯಕೀಯ ಸೌಲಭ್ಯ ಸಮರ್ಪಕವಾಗಿ ನೀಡಲಾಗುತ್ತಿಲ್ಲ. ಅವರನ್ನು ಬಂಧಿಸಿಟ್ಟಿರುವ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮರಗಳನ್ನು ಅಳವಡಿಸಲಾಗಿದ್ದು, ದಿನದ ಇಪ್ಪತ್ತ್ನಾಲ್ಕು ಗಂಟೆಯೂ ಬೆಳಕು ಇರುತ್ತದೆ. ಇದರಿಂದ ಕಣ್ಣಿನ ಮೇಲೆ ಪರಿಣಾಮ ಬೀರುತ್ತಿದ್ದು, ಇತರ ರೋಗಗಳಿಗೂ ಅವರು ತುತ್ತಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹಿನ್ನೆಲೆ: 2008ರ ಜುಲೈ ತಿಂಗಳಲ್ಲಿ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಅ.17ಕ್ಕೆ ನಗರದ ಸಿಸಿಬಿ ಪೊಲೀಸರು ಕೇರಳದಲ್ಲಿ ಮಅದನಿ ಅವರನ್ನು ಬಂಧಿಸಿದ್ದರು. ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ ಸುಮಾರು 20 ಜನ ಗಾಯಗೊಂಡಿದ್ದರು. ಈ ಹಿಂದೆ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಅಧೀನ ನ್ಯಾಯಲಯ ತಳ್ಳಿ ಹಾಕಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ