ಬುಧವಾರ, ಡಿಸೆಂಬರ್ 15, 2010

ದೇವೇಗೌಡ ಕುಟುಂಬದ ಹೆಸರಲ್ಲಿ ಕೋಟ್ಯಂತರ ರೂ. ಅಕ್ರಮ ಆಸ್ತಿ’

ಚಾಮರಾಜನಗರ, ಡಿ. 15: ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಹಾಗೂ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬ ದವರು ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ ಅಕ್ರಮವಾಗಿ ಕೋಟ್ಯಂತರ ಬೆಲೆ ಬಾಳುವ ಜಮೀನು ಹೊಂದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ತಾಲೂಕಿನ ಪಣ್ಯದಹುಂಡಿಯಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಅಂಗವಾಗಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ರಾಜಧಾನಿ ಬೆಂಗಳೂರಿನಲ್ಲೂ ಸಹ ದೇವೇಗೌಡ ಮತ್ತು ಕುಮಾರ ಸ್ವಾಮಿಯವರು ತಮ್ಮ ಸಂಬಂಧಿಕರ ಮತ್ತು ಬೇನಾಮಿ ಹೆಸರಿನಲ್ಲಿ ನೂರಾರು ಎಕರೆ ಜಮೀನು ಮಾಡಿಕೊಂಡಿದ್ದಾರೆ. ಅಲ್ಲದೆ ಎಸ್.ಎಂಕೃಷ್ಣರ ಅವಧಿಯಲ್ಲೂ ಸಹ ಸಾಕಷ್ಟು ಭೂಹಗರಣ ನಡೆದಿವೆ. ಇವೆಲ್ಲವೂ ಸಾರ್ವಜನಿಕವಾಗಿ ಚರ್ಚೆಯಾಗಲಿ ಎಂದು ಹೇಳಿದರು.
ಮುಂಬರುವ ಜಿ.ಪಂ., ತಾ.ಪಂ. ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಮತದಾರರು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಶಾಶ್ವತವಾಗಿ ಹೋಗಲಾಡಿಸಲು ಮುಂದಾಗಬೇಕು ಎಂದು ತಿಳಿಸಿದರು.
ಈ ಹಿಂದೆ ಆಡಳಿತ ಚುಕ್ಕಾಣಿ ಹಿಡಿದವರು ರಾಜ್ಯದ ಬೊಕ್ಕಸವನ್ನು ಬರಿದು ಮಾಡಿದ್ದರು. ಆದರೆ ಬಿಜೆಪಿ ಸರಕಾರದ ಸಾಧನೆಯನ್ನು ಸಹಿಸದ ವಿಪಕ್ಷಗಳು ಭೂಹಗರಣದ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನ ಮಾಡುತ್ತಿವೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ತೋಂಟದಾರ್ಯ, ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ, ಚೂಡಾ ಅಧ್ಯಕ್ಷ ಆರ್.ಸುಂದರ್, ಮಾಜಿ ಶಾಸಕಿ ಪರಿಮಳಾನಾಗಪ್ಪ, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ನಿರಂಜನ್‌ಕುಮಾರ್, ಆಲೂರು ಪ್ರವೀಣ್, ವೇದಮೂರ್ತಿ, ಜಗನ್ನಾಥನಾಯ್ಡು, ಮುಖಂಡರಾದ ನೂರೊಂದು ಶೆಟ್ಟಿ, ಪರಶಿವಮೂರ್ತಿ, ಕೊಡಸೋಗೆ ಶಿವಬಸಪ್ಪ, ಎಚ್.ಎಸ್.ನಂಜಪ್ಪ, ಸುರೇಶ್, ಎ.ಸಿ.ರಾಜಶೇಖರ್, ಸೋಮನಾಯಕ, ಆರ್.ಮಹದೇವು, ಕಂದಹಳ್ಳಿನಂಜುಂಡಸ್ವಾಮಿ, ಕೆ.ಎಸ್.ನಾಗರಾಜಪ್ಪ ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ