ಬುಧವಾರ, ಡಿಸೆಂಬರ್ 15, 2010

ಆತ್ಮಾಹುತಿ ದಾಳಿಗೆ ಕನಿಷ್ಠ 38 ಬಲಿ

ಟೆಹ್ರಾನ್, ಡಿ.15: ಆಗ್ನೇಯ ಇರಾನ್‌ನಲ್ಲಿರುವ ಮಸೀದಿಯೊಂದರ ಬಳಿ ಬುಧವಾರ ಇಬ್ಬರು ಆತ್ಮಾಹುತಿ ದಾಳಿಕಾರರು ನಡೆಸಿದ ಬಾಂಬ್ ದಾಳಿಗೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಕನಿಷ್ಠ 38 ಮಂದಿ ಅಸುನೀಗಿರುವುದಾಗಿ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಂದರು ಪಟ್ಟಣ ಚಬಾಹರ್‌ನಲ್ಲಿರುವ ಇಮಾಮ್ ಹುಸೈನ್ ಮಸೀದಿಯ ಹೊರಭಾಗದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ‘ಇರ್ನಾ’ ಸುದ್ದಿ ಸಂಸ್ಥೆ ತಿಳಿಸಿದೆ.

ಅತ್ಯಂತ ಪ್ರೀತಿಪಾತ್ರ ಶಿಯಾ ಇಮಾಮರಲ್ಲೊಬ್ಬರಾದ 7ನೆ ಶತಮಾನದಲ್ಲಿ ಮರಣ ಹೊಂದಿರುವ ಪ್ರವಾದಿ ಮುಹಮ್ಮದರ ಮೊಮ್ಮಗ ಹುಸೈನ್‌ರ ಸ್ಮರಣಾರ್ಥ ನಡೆಯುವ ಆಶೂರಾ ದಿನಕ್ಕೆ ಮುನ್ನಾದಿನ ಶ್ರದ್ಧಾಂಜಲಿ ಸಭೆಯೊಂದರಲ್ಲಿ ಭಾಗವಹಿಸಿದ್ದ ಜನರ ಗುಂಪನ್ನು ಗುರಿಯಾಗಿಸಿ ದುಷ್ಕರ್ಮಿಗಳು ಬಾಂಬ್‌ದಾಳಿ ನಡೆಸಿದ್ದಾರೆ ಎಂದು ವರದಿ ವಿವರಿಸಿದೆ.

ಇರಾನ್‌ನಲ್ಲಿ ಶಿಯಾ ಹಾಗೂ ಸುನ್ನಿ ಪಂಗಡಗಳ ನಡುವೆ ಆಗಾಗ ಸಂಘರ್ಷ ಭುಗಿಲೇಳುವುದು ಸಾಮಾನ್ಯವಾಗಿ ಬಿಟ್ಟಿದೆ. ದಾಳಿಕಾರರಲ್ಲಿ ಓರ್ವನು ಮಸೀದಿಯ ಹೊರಭಾಗದಲ್ಲಿ ಸ್ಫೋಟ ನಡೆಸಿದ್ದರೆ, ಇನ್ನೋರ್ವ ದಾಳಿಕಾರನು ಜನರ ಗುಂಪಿನ ಮಧ್ಯೆ ಸ್ಫೋಟಿಸಿಕೊಂಡಿದ್ದಾನೆ ಎಂದು ಸರಕಾರಿ ಟಿವಿ ವಾಹಿನಿ ತಿಳಿಸಿದೆ. ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ಕನಿಷ್ಠ 38 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಧಿ ವಿಜ್ಞಾನ ಅಧಿಕಾರಿ ಫರಿಬೋರ್ಝ್ ಆಯತಿ ತಿಳಿಸಿರುವುದಾಗಿ ‘ಇರ್ನಾ’ ವರದಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಕೆಲವು ಅನಾಮಿಕ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ತುರ್ತು ಸೇವೆಗಳನ್ನು ಜಾಗೃತಗೊಳಿಸಲಾಗಿದೆ ಎಂದು ಇರಾನ್‌ನ ರೆಡ್ ಕ್ರೆಸೆಂಟ್ ಸೊಸೈಟಿಯ ಹಿರಿಯ ಅಧಿಕಾರಿ ಮಹ್ಮೂದ್ ಮುಝಫ್ಫರ್ ತಿಳಿಸಿರುವುದಾಗಿ ‘ಇಸ್ನಾ’ ಸುದ್ದಿಸಂಸ್ಥೆ ತಿಳಿಸಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ