ಬುಧವಾರ, ಏಪ್ರಿಲ್ 13, 2011

ದನದ ವ್ಯಾಪಾರಿ ದಯಾನಂದ ಶೆಟ್ಟಿ ಹತ್ಯೆ

ದನದ ವ್ಯಾಪಾರಿಯ ಕೊಲೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಧರಣಿ

ಉಡುಪಿ, : ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಡಿ ಗ್ರಾಮದ ದನದ ವ್ಯಾಪಾರಿ ದಯಾನಂದ ಶೆಟ್ಟಿ ಹತ್ಯೆ ಕುರಿತು ಶೀಘ್ರ ತನಿಖೆ ಹಾಗೂ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಧರಣಿ ನಡೆಸಲಾಯಿತು.

ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಚಿಂತಕ ಜಿ.ರಾಜಶೇಖರ್, ಬಡರೈತರು ಜಾನುವಾರು ಸಾಕುವುದು ಹಾಗೂ ಮಾರುವುದು ಅನಿವಾರ್ಯವಾಗಿದೆ. ಇದು ಜೀವನೋಪಾ ಯದ ಪ್ರಶ್ನೆಯೇ ಹೊರತು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿಸಿದರು.

ಕೋಮುವಾದಿ ಶಕ್ತಿಗಳು ಕೆಲವು ವಾಸ್ತವವನ್ನು ಮುಚ್ಚಿಹಾಕಿ ದನದ ವ್ಯಾಪಾರವನ್ನು ಮುಸ್ಲಿಮರು ಮಾತ್ರ ಮಾಡುತ್ತಿದ್ದಾರೆಂಬುದಾಗಿ ಹೇಳುತ್ತಿದ್ದಾರೆ. ಆದರೆ ಈ ವೃತ್ತಿಯನ್ನು ಎಲ್ಲ ಧರ್ಮದವರು ಕೂಡ ಮಾಡುತ್ತಿದ್ದಾರೆ ಎಂದ ಅವರು, ದಯಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಂಘಪರಿವಾರ ಮಾತ್ರವಲ್ಲದೆ ಶಂಕರನಾರಾಯಣ ಪೊಲೀಸರು ಕೂಡ ಶಾಮೀಲಾಗಿರುವುದು ಕಂಡು ಬರುತ್ತದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಯೋಗ್ಯ ಕಾರಣಗಳಿಗೆ ಹಾಗೂ ಸೂಕ್ತ ದಾಖಲೆಗಳೊಂದಿಗೆ ಜಾನುವಾರು ಸಾಗಾಟ ಮಾಡುವವರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಲೇ ಇವೆ. 2006ರಲ್ಲಿ ಕಾವ್ರಾಡಿಯ ಪಾಟಳಿ ಕೃಷ್ಣಯ್ಯ ಕೊಲೆ ಪ್ರಕರಣದಲ್ಲಿ ಯಾವುದೇ ಆರೋಪಿಗಳಿಗೆ ಶಿಕ್ಷೆ ಆಗಿಲ್ಲ. ಇದರಲ್ಲಿ ಹಾಗೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ. ಧರಣಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಫಣಿರಾಜ್, ದಸಂಸ ಮುಖಂಡ ಜಯನ್ ಮಲ್ಪೆ, ಅಲ್ಪಸಂಖ್ಯಾತ ವೇದಿಕೆ ಜಿಲ್ಲಾಧ್ಯಕ್ಷ ಅಬ್ದುಲ್ ಖತೀಬ್ ರಶೀದ್, ಕರ್ನಾಟಕ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಲೂವಿಸ್ ಲೋಬೊ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀರ್ ಹಂಝಾ, ದಿನಕರ ಬೆಂಗ್ರೆ, ಪ್ರೊ.ಸಿರಿಲ್ ಮಥಾಯಿಸ್, ಇದ್ರೀಸ್ ಹೂಡೆ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ