ಭಾನುವಾರ, ಜನವರಿ 16, 2011

ಅಮಾನತು ಮಾಡಿದರೆ, ಎಲ್ಲ ವಿಪಕ್ಷ ಶಾಸಕರ ರಾಜೀನಾಮೆ: ಸ್ಪೀಕರ್ ವಿರುದ್ಧ ಉಗ್ರಪ್ಪ ಕಿಡಿ

ಮಂಗಳೂರು, ಜ.16: ರಾಜ್ಯ ವಿಧಾನ ಸಭೆಯ ಸ್ಪೀಕರ್ ಕೆ.ಜಿ. ಬೋಪಯ್ಯನವರ ವಿರುದ್ಧ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ವಿಧಾನ ಪರಿಷತ್‌ನ ಮಾಜಿ ಪ್ರತಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ ಕಿಡಿಗಾರಿದ್ದಾರೆ. ರವಿವಾರ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರ ಹೇಳಿದಂತೆ ಕೇಳುವ ಇಂತಹ ‘ಎಸ್. ಮಾಸ್ಟರ್’ ಸ್ಪೀಕರನ್ನು ತಾನು ಹಿಂದೆಂದೂ ಕಂಡಿಲ್ಲ. ಪಕ್ಷೇತರರ ಸಹಿತ ಬಿಜೆಪಿಯ 16 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಇದೀಗ ಪ್ರತಿಪಕ್ಷಗಳ 15 ಶಾಸಕರನ್ನು ಅಮಾನತು ಮಾಡಲು ಹೊರಟಿದ್ದಾರೆ.
ಒಂದು ವೇಳೆ ಅಮಾನತು ಮಾಡಿದರೆ, ವಿಪಕ್ಷಗಳ ಎಲ್ಲ ಸದಸ್ಯರು ರಾಜೀನಾಮೆ ನೀಡಲಿದ್ದಾರೆ. ಜತೆಗೆ ರಾಜ್ಯ ಸರಕಾರವೂ ಶೀಘ್ರದಲ್ಲೇ ಪತನಗೊಳ್ಳಲಿದೆ ಎಂದರು. ಸದನವೇ ನಡೆಯದಿರುವಾಗ ಅಪ್ಪಚ್ಚು ರಂಜನ್ ಸಮಿತಿಯನ್ನು ನೇಮಿಸಿದುದು ಸರಿಯಲ್ಲ. ವಿಪಕ್ಷಗಳು ನೀಡಿದ ದೂರನ್ನು ಪರಿಗಣಿಸದೆ ಸರಕಾರ ತನಗೆ ಬೇಕಾದಂತೆ ವರದಿ ತರಿಸಿಕೊಳ್ಳುತ್ತಿರುವುದು ಖಂಡನೀಯ. ಸಮಿತಿಯು ಸದನದ ಬಹುಮತದ ಮೂಲಕ ಪ್ರಾಪ್ತವಾಗಬೇಕೇ ವಿನಾ ಏಕಪಕ್ಷೀಯವಾಗಿಯಲ್ಲ. ಇದರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಉಗ್ರಪ್ಪ ಆಪಾದಿಸಿದರು.

ಯಡ್ಡಿ ಜೈಲಿಗೆ: ಬಳ್ಳಾರಿಯಲ್ಲಿ ರಾಜ್ಯದ ಸಂಪತ್ತು ಲೂಟಿಯಾಗಿದೆ. ಇದನ್ನು ಲೋಕಾಯುಕ್ತ ಸಹಿತ ಎಲ್ಲ ಸಮಿತಿಗಳ ವರದಿಗಳಲ್ಲೂ ಉಲ್ಲೇಖಿಸಲಾಗಿದೆ. ಆದರೆ, ಅದನ್ನು ಒಪ್ಪಿಕೊಳ್ಳದ ಮುಖ್ಯಮಂತ್ರಿ ಸಿಬಿಐ ತನಿಖೆಗೆ ಆದೇಶ ನೀಡದೆ ನ್ಯಾ. ಪದ್ಮರಾಜ್ ನೇತೃತ್ವದ ಆಯೋಗಕ್ಕೆ ಪ್ರಕರಣವನ್ನು ವಹಿಸಿಕೊಡುವ ಮೂಲಕ ಅಪಾಯದಿಂದ ಪಾರಾಗಲು ಯತ್ನಿಸುತ್ತಿದ್ದಾರೆ ಎಂದು ಉಗ್ರಪ್ಪ ದೂರಿದರು.
ಸೈಕಲ್ ಹಗರಣ: ಸೈಕಲ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಅದನ್ನು ಮುಚ್ಚಿ ಹಾಕಲು ಮುಖ್ಯಮಂತ್ರಿ ಯಡಿಯೂರಪ್ಪ ಹೆಣಗಾಡುತ್ತಿದ್ದಾರೆ. ಗಣಿ, ಭೂ, ಸೈಕಲ್ ಮತ್ತಿತರ ಎಲ್ಲ ಹಗರಣಗಳ ಬಗ್ಗೆ ಸಿಬಿಐಯಿಂದ ತನಿಖೆ ನಡೆಸಿದರೆ, ಖಂಡಿತ ಮುಖ್ಯಮಂತ್ರಿ ಜೈಲು ಪಾಲಾಗಲಿದ್ದಾರೆ. ಆ ಭಯದಿಂದ ತತ್ತರಿಸಿರುವ ಅವರು ಕಾಲಹರಣ ಮಾಡಿ ಅಧಿಕಾರ ಉಳಿಸಿಕೊಳ್ಳಲು ನಾನಾ ರೀತಿಯ ತಂತ್ರ ಹೂಡುತ್ತಿದ್ದಾರೆ ಎಂದು ಉಗ್ರಪ್ಪ ಆಪಾದಿಸಿದರು.
ಹೈಕಮಾಂಡ್‌ಗೆ ಪಾಲು: ಮುಖ್ಯಮಂತ್ರಿ ಮತ್ತವರ ಸಂಪುಟದ ಸಚಿವರ ಹಗರಣಗಳಲ್ಲಿ ಬಿಜೆಪಿಯ ಹೈಕಮಾಂಡ್‌ಗೆ ಪಾಲು ಹೋಗುತ್ತಿದೆ. ಅದನ್ನು ಮತ್ತೆ ಪುನರುಚ್ಚರಿಸುತ್ತೇನೆ. ಒಂದು ವೇಳೆ ಈ ಹೈಕಮಾಂಡ್‌ಗೆ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮನಸ್ಸಿದ್ದರೆ, ಮೊದಲು ಗಣಿಧಣಿಗಳು ಮತ್ತು ಮುಖ್ಯಮಂತ್ರಿಗೆ ಸೂಕ್ತ ದಾರಿ ತೋರಿಸುತ್ತಿತ್ತು ಎಂದು ಉಗ್ರಪ್ಪ ಲೇವಡಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೊಯ್ದಿನ್ ಬಾವಾ, ಪಕ್ಷದ ಪದಾಧಿಕಾರಿಗಳಾದ ಟಿ.ಕೆ.ಸುಧೀರ್, ಶರೀಫ್ ದೇರಳಕಟ್ಟೆ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ