ಶುಕ್ರವಾರ, ಜನವರಿ 14, 2011

ಸದನದ ಒಳಗೆ-ಹೊರಗೆ ಧರಣಿ



  • musthaqbil.blogspot.com
  • ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಂಗಲ್‌ಹನುಮಂತಯ್ಯ ಪ್ರತಿಮೆ ಬಳಿ ಧರಣಿ ಮಂದುವರೆಸಿದರು
    ಗದ್ದಲದ ನಡುವೆಯೇ ವಿಧಾನ ಮಂಡಲ ಕಲಾಪ

    * ಅಪ್ಪಚ್ಚು ರಂಜನ್‌ ವರದಿ ಮಂಡನೆ

    * ವರದಿ ಮಂಡನೆಗೆ ಆಕ್ಷೇಪ:ಹಕ್ಕುಚ್ಯುತಿ ನೋಟಿಸ್‌

    * ಪ್ರತಿಪಕ್ಷಗಳಿಂದ ಧರಣಿ, ಸಭಾತ್ಯಾಗ

    * ಕೆಂಗಲ್‌ ಪ್ರತಿಮೆ ಬಳಿ ಧರಣಿ ಮುಂದುವರೆಸಿದ ಪ್ರತಿಪಕ್ಷ

    * ಸದನದಲ್ಲಿ ಧಿಕ್ಕಾರಗಳ ಸುರಿಮಳೆ

    ಬೆಂಗಳೂರು:
    ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಿಲುವಳಿ ಸೂಚನೆ ಅನ್ವಯವೇ ಚರ್ಚೆಗೆ ಪಟ್ಟು ಹಿಡಿದಿರುವ ಪ್ರತಿಪಕ್ಷಗಳ ಧರಣಿ ಗುರುವಾರ ವಿಧಾನಸೌಧದ ಹೊರಗೆ ಕಾಲಿಟ್ಟಿತ್ತು. ಧರಣಿ, ಗದ್ದಲ, ಧಿಕ್ಕಾರಗಳ ಸುರಿಮಳೆ ನಡುವೆಯೇ ಉಭಯ ಸದನಗಳಲ್ಲಿ ಕಲಾಪ ಜರುಗಿತು.

    ವಿಧಾನಸಭೆಯಲ್ಲಿ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆಯೇ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಪಕ್ಷ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗದ ಬಾವಿಗೆ ತೆರಳಿ ಧರಣಿ ಮುಂದುವರೆಸಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಡಾ.ಶರಣ ಪ್ರಕಾಶ ಪಾಟೀಲ್‌, ವಿಧಾನಸಭೆಯಲ್ಲಿ ಈ ಹಿಂದೆ ನಡೆದ ಗದ್ದಲಕ್ಕೆ ಸಂಬಂಧಪಟ್ಟಂತೆ ಅಪ್ಪಚ್ಚುರಂಜನ್‌ ಅಧ್ಯಕ್ಷತೆಯ ಸದನ ಸಮಿತಿ ವರದಿ ಮಾಧ್ಯಮಗಳಲ್ಲಿ ಸೋರಿಕೆಯಾಗಿರುವುದನ್ನು ಪ್ರಸ್ತಾಪಿಸಿ ಹಕ್ಕುಚ್ಯುತಿ ಮಂಡಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್‌ ಕೆ.ಜಿ. ಬೋಪಯ್ಯ ಅವರು ಇದನ್ನು ಹಕ್ಕುಭಾದ್ಯತಾ ಸಮಿತಿಗೆ ಒಪ್ಪಿಸುವ ಭರವಸೆ ನೀಡಿದರು. ಆರೋಪಕ್ಕೆ ಧ್ವನಿಗೂಡಿಸಿದ ಸಿದ್ದರಾಮಯ್ಯ, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಲ್ಲಿ ತಮ್ಮ ಮತ್ತು ಡಿ.ಕೆ.ಶಿವಕುಮಾರ್‌ ಅವರ ಹೆಸರುಗಳೂ ಪ್ರಸ್ತಾಪವಾಗಿದೆ. ವಿಚಾರಣಾ ವರದಿಯನ್ನು ಸದನಕ್ಕೆ ಮಂಡಿಸಬೇಕು. ಅದಕ್ಕೂ ಮುನ್ನವೇ ಅದು ಹೇಗೆ ಮಾಧ್ಯಮಗಳಲ್ಲಿ ಸೋರಿಕೆ ಆಯಿತು. ಇದು ಪ್ರತಿಪಕ್ಷ ಸದಸ್ಯರನ್ನು ಬ್ಲಾಕ್‌ವೆುàಲ್‌ ಮಾಡುವ ತಂತ್ರ ಅಲ್ಲವೇ? ಎಂದು ಆಕ್ರೋಶಭರಿತರಾಗಿ ಸ್ವೀಕರ್‌ ಅವರನ್ನು ಕೇಳಿದರು. ನಮ್ಮ ನೋಟಿಸನ್ನು ಹಕ್ಕುಚ್ಯುತಿ ಸಮಿತಿಗೆ ಕಳುಹಿಸಿ ಅಲ್ಲಿಯವರೆಗೆ ವರದಿ ಮಂಡನೆ ಬೇಡ ಎಂದು ಆಗ್ರಹಿಸಿದರು.

    ಏನು ಅಧಿಕಾರ?

    ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ ಗುಂಪಿನ ನಾಯಕ ಎಚ್‌.ಡಿ.ರೇವಣ್ಣ, ಸದನ ನಡೆಯದೇ ಇರುವಾಗ ಸದನ ಸಮಿತಿ ರಚಿಸಲಾಗಿದೆ. ಈ ಅಧಿಕಾರ ನಿಮಗೆ ಇದೆಯೇ? ಎಂದು ಸ್ಪೀಕರ್‌ ಅವರನ್ನು ಕೇಳಿದರು. ನನ್ನ ಅಧಿಕಾರ ಪ್ರಶ್ನೆ ಮಾಡಬೇಡಿ ಎಂದು ಸ್ಪೀಕರ್‌ ಪ್ರತಿಕ್ರಿಯಿಸಿದರು.

    ಪೊಲೀಸ್‌ ಏಕೆ?:

    ನಂತರ ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು ವಿಧಾನಸೌಧದ ಸುತ್ತ ಭಾರೀ ಪೊಲೀಸ್‌ ಏಕೆ ಹಾಕಲಾಗಿದೆ. ನಾವೇನು ಟೆರರಿಸ್ಟ್‌ಗಳ? ಅಥವಾ ವಿಧಾನಸೌಧಕ್ಕೆ ಬಾಂಬ್‌ ಬೆದರಿಕೆ ಇದೆಯೇ? ತುರ್ತು ಪರಿಸ್ಥಿತಿಯಲ್ಲಿಯೂ ಇಂತಹ ಸನ್ನಿವೇಶ ಇರಲಿಲ್ಲ. ಇದೇನು ಪ್ರಜಾಪ್ರಭುತ್ವವಾ? ನಾವು ವಿಧಾನಸೌಧದ ಒಳಗೆ ಬರಲು ಅರ್ಧಗಂಟೆ ಬೇಕಾಯ್ತು. ಪೊಲೀಸ್‌ ರಾಜ್ಯ ಮಾಡಿದ್ದೀರಿ ಎಂದು ಗುಡುಗಿದರು. ಈ ಸಂದರ್ಭದಲ್ಲಿ ಸ್ಪೀಕರ್‌ ಮತ್ತು ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿಯೂ ನಡೆಯಿತು.

    ಸರ್ಕಾರದಲ್ಲಿ ಒಂದು ಲಕ್ಷ ಕೋಟಿ ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಆರೋಪಿಸಿದಾಗ ಅಡಳಿತ ಪಕ್ಷದ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಯಿತು. ಪ್ರತಿಪಕ್ಷ ಸದಸ್ಯರು ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಕಾಂಗ್ರೆಸ್‌, ಜೆಡಿಎಸ್‌ ವಿರುದ್ಧ ಧಿಕ್ಕಾರ ಸುರಿಮಳೆ ನಡೆಸಿದರು. ನಂತರ ಕಲಾಪ ಬಹಿಷ್ಕರಿಸಿ ಪ್ರತಿಪಕ್ಷ ಸದಸ್ಯರು ಹೊರ ನಡೆದರು.

    ವರದಿಗಳ ಮಂಡನೆ:

    ಪ್ರತಿಪಕ್ಷಗಳ ಬಹಿಷ್ಕಾರದ ಬಳಿಕ ಕಾರ್ಯಕಲಾಪ ಪಟ್ಟಿ ಕೈಗೆತ್ತಿಕೊಂಡ ಸ್ಪೀಕರ್‌, ಪ್ರಶ್ನೋತ್ತರವನ್ನು ಸದನದಲ್ಲಿ ಮಂಡಿಸಲು ಅವಕಾಶ ನೀಡಿದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಎರಡನೇ ಬಾರಿ ವಿಶ್ವಾಸಮತ ಯಾಚಿಸಿದ ವೇಳೆ ಸದನದಲ್ಲಿ ನಡೆದ ಗದ್ದಲಕ್ಕೆ ಸಂಬಂಧಪಟ್ಟ ವರದಿಯನ್ನು ಬಿಜೆಪಿ ಶಾಸಕ ಅಪ್ಪಚ್ಚುರಂಜನ್‌ ಮಂಡಿಸಿದರು.

    ಸ್ಪೀಕರ್‌ ಚುನಾವಣೆ ಸಂದರ್ಭದಲ್ಲಿ ಸದನದಲ್ಲಿ ಜರುಗಿದ ಗದ್ದಲಕ್ಕೆ ಸಂಬಂಧಪಟ್ಟ ವರದಿಯನ್ನು ಬಿಜೆಪಿ ಶಾಸಕ ಡಾ.ಹೇಮಚಂದ್ರಸಾಗರ್‌ ಸದನದಲ್ಲಿ ಮಂಡಿಸಿದರು. ನಂತರ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.

    ಮುಂದುವರೆದ ಧರಣಿ:

    ಸದನದಿಂದ ಹೊರಗೆ ನಡೆದ ಪ್ರತಿಪಕ್ಷ ಸದಸ್ಯರು ಸಿದ್ದರಾಮಯ್ಯ ನೇತೃತ್ವದಲ್ಲಿ ಕೆಂಗಲ್‌ಹನುಮಂತಯ್ಯ ಪ್ರತಿಮೆ ಬಳಿ ಧರಣಿ ಮಂದುವರೆಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ