ಶುಕ್ರವಾರ, ಜನವರಿ 14, 2011

ರಾಹುಲ್ ಗಾಂಧಿ ಹತ್ಯೆಗೆ ಮುಲಾಯಂ ಪಕ್ಷ ಸಂಚು: ಅಮರ್ ಸಿಂಗ್

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹತ್ಯೆಗೈಯಲು ಸಮಾಜವಾದಿ ಪಕ್ಷ ಸಂಚು ರೂಪಿಸಿದೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶಕ್ಕೆ ಬಂದಿದ್ದ ಸಂದರ್ಭದಲ್ಲಿ ಯುವ ನಾಯಕನ ಮೇಲೆ ಮಾರಣಾಂತಿಕ ದಾಳಿ ಮಾಡಲು ತಾನಿದ್ದ ಪಕ್ಷವು ಯತ್ನಿಸಿತ್ತು ಎಂದು ಆ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಆರೋಪಿಸಿದ್ದಾರೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಮತ್ತು ತನ್ನ ಕಟ್ಟಾ ಎದುರಾಳಿ ಆಜಂ ಖಾನ್ ಹೆಸರನ್ನು ಪ್ರಸ್ತಾಪಿಸದೆ ಅವರ ಉಲ್ಲೇಖಗಳನ್ನು ಮಾಡಿರುವ ಅಮರ್ ಸಿಂಗ್, ತನ್ನ ಬ್ಲಾಗಿನಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
PTI

ತನ್ನ ಲಾಭಕ್ಕಾಗಿ ಪಕ್ಷವು ನನ್ನನ್ನು ಬಳಸಿಕೊಂಡು ನಂತರ ಎಸೆದಿದೆ ಎಂದೂ ಅಮರ್ ಸಿಂಗ್ ತನ್ನ ಮೂಲ ಪಕ್ಷದ ಮೇಲೆ ಕಿಡಿ ಕಾರಿದ್ದಾರೆ.

ದೇಶದ ಜನಪ್ರಿಯ ನಟಿಯೊಬ್ಬರ (ಜಯಪ್ರದಾ) ವಾಹನದ ಮೇಲೆ ಕಪ್ಪು ಬಲೂನುಗಳನ್ನು ಎಸೆಯಲಾಗುತ್ತದೆ. ಯುನಿವರ್ಸಿಟಿ ಸಂಕೀರ್ಣದಲ್ಲಿ ಸಂವಾದಕ್ಕಾಗಿ ಸುಮ್ಮನೆ ಹೋಗುತ್ತಿದ್ದಾಗ ರಾಹುಲ್ ಗಾಂಧಿ ಮೇಲೆ ಮಾರಣಾಂತಿಕ ದಾಳಿ ನಡೆಸಲು ಯತ್ನಿಸಲಾಗುತ್ತದೆ. ಇದೆಲ್ಲ ಗಾಂಭೀರ್ಯವಿಲ್ಲದ, ಅಯೋಗ್ಯವೆನಿಸುವ ರಾಜಕೀಯ ಎಂದು ಬ್ಲಾಗಿನಲ್ಲಿ ಅವರು ಬರೆದುಕೊಂಡಿದ್ದಾರೆ.

ಅಲಹಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟವನ್ನು ಮರು ಜಾರಿಗೊಳಿಸಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ವಿಫಲವಾಗಿದೆ ಎಂದು ಆರೋಪಿಸಿದ್ದ ಸಮಾಜವಾದಿ ಪಕ್ಷದ ಯುವವಾಹಿನಿ ಕಾರ್ಯಕರ್ತರು, ಯುನಿವರ್ಸಿಟಿಗೆ ಬಂದಿದ್ದ ರಾಹುಲ್ ಗಾಂಧಿ ಕಾರಿನ ಮೇಲೆ ಮುತ್ತಿಗೆ ಹಾಕಿದ್ದರು. ಇದನ್ನೇ ಅಮರ್ ಸಿಂಗ್ ಉಲ್ಲೇಖಿಸಿರುವುದು.

ಸಾಕಷ್ಟು ಆರೋಪಗಳನ್ನು ಅಮರ್ ಮಾಡಿದರೂ, ಎಲ್ಲೂ ಕೂಡ ತನ್ನ ಮಾಜಿ ನಾಯಕ ಮುಲಾಯಂ ಸಿಂಗ್ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ.

ಒಬ್ಬ ವ್ಯಕ್ತಿ 14 ವರ್ಷಗಳ ಕಾಲ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಇದ್ದರೆ, ಆತನಿಗೆ ಎರಡನೇ ಸ್ಥಾನ ಸಿಗುತ್ತದೆ. ಆದರೆ ಕಂಪ್ಯೂಟರುಗಳು, ಇಂಗ್ಲೀಷ್ ಮತ್ತು ಟ್ರಾಕ್ಟರುಗಳನ್ನು ವಿರೋಧಿಸುವುದನ್ನು ವಿರೋಧಿಸಿದ್ದಕ್ಕೆ, 'ತಲೆಹಿಡುಕ ಮತ್ತು ಪೂರೈಕೆದಾರ' ಎಂಬ ಬಿರುದನ್ನು ನೀಡಲಾಗಿದೆ ಎಂದೂ ಅಮರ್ ಸಿಂಗ್ ಹೇಳಿಕೊಂಡಿದ್ದಾರೆ.

2009ರ ಲೋಕಸಭಾ ಚುನಾವಣೆಯ ಸಮಾಜವಾದಿ ಪಕ್ಷದ ಪ್ರಣಾಳಿಕೆಯಲ್ಲಿ ಕಂಪ್ಯೂಟರ್, ಇಂಗ್ಲೀಷ್ ಭಾಷೆ ಮತ್ತು ಉಳುಮೆಗೆ ಟ್ರಾಕ್ಟರ್ ಬಳಸುವುದನ್ನು ಮುಲಾಯಂ ವಿರೋಧಿಸಿದ್ದರು. ಇದನ್ನೇ ತನ್ನ ಬ್ಲಾಗಿನಲ್ಲಿ ಅಮರ್ ಉಲ್ಲೇಖಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ