ಶುಕ್ರವಾರ, ಜನವರಿ 14, 2011

ರಿಯಾದ್‌ನಲ್ಲಿ ಕೇರಳದ 30 ಮಂದಿ ಸಂಕಷ್ಟದಲ್ಲಿ

ಕಾಸರಗೋಡು ಸೌದಿ ಅರೇಬಿಯಾದ ರಿಯಾದ್‌ನ ನಗರ ಶುಚೀಕರಣ ಸಂಸ್ಥೆಯೊಂದರಲ್ಲಿ ವಾಹನ ಚಾಲಕರಾಗಿ ನೇಮಕಗೊಂಡಿರುವ ಕಾಸರಗೋಡು ನಿವಾಸಿಗಳೂ ಸೇರಿದಂತೆ ಕೇರಳದ 30 ಮಂದಿ ಅರ್ಹ ಸವಲತ್ತು ಲಭಿಸದೆ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಈ ಸಂಸ್ಥೆಯಲ್ಲಿ 300 ಮಂದಿ ಭಾರತೀಯರು ದುಡಿಯುತ್ತಿದ್ದು ಅವರೂ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕೇರಳದ ಪ್ರತಿಪಕ್ಷ ನಾಯಕ ಉಮ್ಮನ್‌ಚಾಂಡಿ ಅವರಿಗೆ ಪ್ರಸ್ತುತ ಸಂಸ್ಥೆಯಲ್ಲಿ ದುಡಿಯುವ ಕೇರಳದ ಕಾರ್ಮಿಕರು ಪತ್ರ ಬರೆದಿದ್ದು, ತಮ್ಮನ್ನು ರಕ್ಷಿಸುವಂತೆ ವಿನಂತಿಸಿದ್ದಾರೆ.

ದಾಖಲೆಪತ್ರ ಮುಟ್ಟುಗೋಲು

ಮೂವತ್ತು ಮಂದಿ ಕೇರಳೀಯರು ಒಂದು ವರ್ಷದ ಹಿಂದಷ್ಟೇ ರಿಯಾದ್‌ನ ಈ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರ್ಪಡೆಗೊಂಡಿದ್ದರು. ನೇಮಕಾತಿ ಸಂದರ್ಭ ನೀಡಲಾದ ವೇತನ ಮತ್ತು ಇತರ ಸವಲತ್ತುಗಳ ಭರವಸೆಗಳನ್ನು ಕಂಪೆನಿ ಅಧಿ ಕಾರಿಗಳು ನೀಡಲು ಇನ್ನೂ ಮುಂದಾಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕೆಲಸಕ್ಕೆ ಸೇರಿದ ದಿನವೇ ಕಂಪೆನಿ ಅಧಿ ಕಾರಿಗಳು ತಮ್ಮ ವಾಹನ ಚಾಲನಾ ಪರವಾನಿಗೆ ಮತ್ತಿತರ ದಾಖಲೆಪತ್ರಗಳನ್ನು ತಮ್ಮ ವಶದಲ್ಲಿ ಇರಿಸಿಕೊಂಡಿದ್ದಾರೆ. ವಿಮಾ ಸವಲತ್ತುಗಳಿಲ್ಲದೆ ಕೆಲಸ ಮಾಡುವಂತೆ ಸಂಸ್ಥೆಯು ಸ್ಥಳೀಯ ಪೊಲೀಸರ ಮೂಲಕ ನಮ್ಮ ಮೇಲೆ ಒತ್ತಡ ಹೇರುತ್ತಿದೆ. ಸರಿಯಾದ ದಾಖಲೆ ಪತ್ರಗಳಿಲ್ಲದೆ ವಾಹನಗಳನ್ನು ಚಲಾಯಿಸಲು ತಮಗೆ ನೀಡಲಾಗುತ್ತಿದೆ. ಇಂತಹ ವಾಹನಗಳು ಅಪಘಾತಕ್ಕೀಡಾದಲ್ಲಿ ಅದರ ಹೊಣೆಗಾರಿಕೆಯನ್ನೂ ನಾವೇ ವಹಿಸಬೇಕು.

ಚಾಲಕನಿಗೆ ಜೈಲು

ಇಂತಹ ವಾಹನವೊಂದು ಇತ್ತೇಚೆಗೆ ಅಪಘಾತಕ್ಕೀಡಾಗಿದ್ದು, ಅದರ ಚಾಲಕ ಕಡುತುರುತ್ತಿ ನಿವಾಸಿ ಸಿಬಿ ಯಾನೆ ಪ್ರಸಾದ್‌ ಈಗ ಸೆರೆಮನೆಯಲ್ಲಿದ್ದಾರೆ. ಕಂಪೆನಿ ಅಧಿ ಕಾರಿಗಳು ಆತನಿಗೆ ಯಾವುದೇ ರೀತಿಯ ನೆರವನ್ನು ನೀಡಲು ಮುಂದಾಗಿಲ್ಲ.

ತಮ್ಮ ವಾಸಕ್ಕೆಂದು ಸಂಸ್ಥೆ ನೀಡಿದ ಕಟ್ಟಡದಲ್ಲಿ ಯಾವುದೇ ಸೌಕರ್ಯಗಳು ಇಲ್ಲ. ದಿನಕ್ಕೆ 15ರಿಂದ 18 ತಾಸು ತನಕ ನ‌ಮ್ಮನ್ನು ದುಡಿಸಲಾಗುತ್ತಿದೆ. ರಜೆಯೂ ಇಲ್ಲ ಎಂದು ಕಾರ್ಮಿಕರು ತಮ್ಮ ಸಂಕಷ್ಟವನ್ನು ವಿವರಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ