ಶುಕ್ರವಾರ, ಏಪ್ರಿಲ್ 15, 2011

ಜನತೆಯ ಪರವಾಗಿ ಧ್ವನಿ ಎತ್ತುವವರನ್ನು ಭಯೋತ್ಪಾದಕರೆ......?

ಅನ್ಯಾಯಕ್ಕೊಳಗಾದ ನೊಂದ ಜನತೆಯ ಪರವಾಗಿ ಮಾತನಾಡುವುದೇ ಈ ದೇಶದಲ್ಲಿ ಅಪರಾಧವಾಗಿದೆ. ಜನತೆಯ ಪರವಾಗಿ ಧ್ವನಿ ಎತ್ತುವವರನ್ನು ಭಯೋತ್ಪಾದಕರೆಂದು, ನಕ್ಸಲೀಯರೆಂದು ಜೈಲಿಗೆ ಅಟ್ಟುವುದು ನಮ್ಮ ಪ್ರಭುತ್ವದ ಚಾಳಿಯಾಗಿದೆ. ಹೆಸರಾಂತ ಮಾನವ ಹಕ್ಕು ಹೋರಾಟಗಾರ, ಶಿಶು ರೋಗ ತಜ್ಞ ಡಾ. ಬಿನಾಯಕ್ ಸೇನ್ ಈ ರೀತಿ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿ ಕಳೆದ 2 ವರ್ಷಗಳಿಂದ ಸೆರೆಮನೆಯಲ್ಲಿ ಯಾತನೆ ಅನುಭವಿಸಿದರು. ಇದೀಗ ಸುಪ್ರೀಂ ಕೋರ್ಟ್ ಡಾ. ಸೇನ್‌ರನ್ನು ಜಾಮೀನಿನ ಮೇಲೆ ಬಿಡುವ ಸಂಬಂಧ ತೀರ್ಪು ನೀಡಿದೆ. ಎಲ್ಲ ಪ್ರಜಾಪ್ರಭುತ್ವವಾದಿಗಳು, ಮಾನವ ಹಕ್ಕು ಹೋರಾಟಗಾರರು ಈ ತೀರ್ಪನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ.
ಡಾ. ಬಿನಾಯಕ್ ಸೇನ್ ವೈದಕೀಯ ಪದವಿಯನ್ನು ಪೂರೈಸಿ ಉಳಿದ ವೈದ್ಯರಂತೆ ತನ್ನದೇ ನರ್ಸಿಂಗ್‌ಹೋಂ ಆರಂಭಿಸಿ ಹಣ ಗಳಿಸಲು ಮುಂದಾಗಲಿಲ್ಲ. ಅವರು, ಛತ್ತೀಸ್‌ಗಡದ ಆದಿವಾಸಿ ಪ್ರದೇಶಗಳಲ್ಲಿ ಯಾವುದೇ ಕನಿಷ್ಠ ಸೌಕರ್ಯವಿಲ್ಲದ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಲು ತನ್ನ ಬದುಕನ್ನು ಮುಡಿಪಾಗಿಟ್ಟರು. ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದ ಅಲ್ಲಿಯ ಮಕ್ಕಳನ್ನು ಬದುಕಿಸಲು ಹಗಲಿರುಳು ದುಡಿದರು. ಅಂತಹ ಬಿನಾಯಕ್ ಸೇನ್‌ರನ್ನು ಛತ್ತೀಸ್‌ಗಡದ ಬಿಜೆಪಿ ಸರಕಾರ ನಕ್ಸಲೀಯ ಬೆಂಬಲಿಗನೆಂದು ಆರೋಪಿಸಿ ಜೈಲಿಗಟ್ಟಿತು. ಅವರ ಮೇಲೆ ದೇಶದ್ರೋಹದ ಆರೋಪವನ್ನೂ ಮಾಡಿತು.
ಇದನ್ನು ಪ್ರಶ್ನಿಸಿ ಛತ್ತೀಸ್‌ಗಡದ ವಿವಿಧ ನ್ಯಾಯಾಲಯಗಳಲ್ಲಿ ಬಿನಾಯಕ್ ಸೇನ್‌ರ ಪತ್ನಿ ಇಲಿನಾ ಸೇನ್ ಮತ್ತು ಮಾನವ ಹಕ್ಕು ಹೋರಾಟಗಾರರು ಕಾನೂನು ಬದ್ಧವಾದ ಹೋರಾಟವನ್ನು ನಡೆಸಿದರೂ ಕೂಡ ಅಲ್ಲಿನ ನ್ಯಾಯಾಲಯಗಳು ಸರಕಾರದ ವಾದವನ್ನು ಪುರಸ್ಕರಿಸಿದವು. ರಾಷ್ಟ್ರದ ಭದ್ರತೆಗೆ ಗಂಡಾಂತರಕಾರಿಯಾದ ಬಿನಾಯಕ್ ಸೇನ್‌ರನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸುವಂತೆ ತೀರ್ಪು ನೀಡಿದವು. ಈ ತೀರ್ಪು ಪ್ರಜಾಪ್ರಭುತ್ವವಾದಿಗಳನ್ನೆಲ್ಲ ಆಘಾತಕ್ಕೀಡುಮಾಡಿತು.ಡಾ. ಬಿನಾಯಕ ಸೇನ್‌ರನ್ನು ಬಂಧಿಸಿದಾಗ ಭಾರತದ ಮಾತ್ರವಲ್ಲ, ಜಗತ್ತಿನ ಮಾನವ ಹಕ್ಕು ಹೋರಾಟಗಾರರು ಒಕ್ಕೊರಲಿನಿಂದ ಪ್ರತಿಭಟಿಸಿದ್ದರು. ಅವರ ಬಿಡುಗಡೆಗೆ ಆಗ್ರಹಪಡಿಸಿದ್ದರು. ಭಾರತದ ವೈದ್ಯ ಸಮುದಾಯ ಡಾ. ಸೇನ್‌ರ ಬಿಡುಗಡೆಗೆ ಸಹಿ ಸಂಗ್ರಹ ಮಾಡಿ, ರಾಷ್ಟ್ರಾಧ್ಯಕ್ಷೆಗೆ ಮನವಿ ಸಲ್ಲಿಸಿತ್ತು. ಆದರೂ ಛತ್ತೀಸ್‌ಗಡದ ರಮಣ್ ಸಿಂಗ್ ಸರಕಾರದ ಕಲ್ಲು ಹೃದಯ ಕರಗಲಿಲ್ಲ.
ಡಾ. ಬಿನಾಯಕ್ ಸೇನ್ ಮಾಡಿದ ಅಪರಾಧವಾದರೂ ಏನು? ಬಡ ಆದಿವಾಸಿಗಳ ಪ್ರಾಣ ರಕ್ಷಣೆಗೆ ತನ್ನ ಬದುಕನ್ನು ಮೀಸಲಾಗಿಟ್ಟುದು ಅಪರಾಧವೇ? ಬತ್ತಾರ್‌ನ ಆದಿವಾಸಿ ಪ್ರದೇಶದಲ್ಲಿ ಶತಮಾನಗಳಿಂದ ನೆಲೆಸಿದ ಮೂಲ ನಿವಾಸಿಗಳನ್ನು ಅಲ್ಲಿಂದ ಎತ್ತಂಗಡಿ ಮಾಡಿ ಸಂಪದ್ಭರಿತವಾದ ಆ ಭೂಪ್ರದೇಶವನ್ನು ಬಹುರಾಷ್ಟ್ರೀಯ ಕಂಪೆನಿಗಳ ಲೂಟಿಗೆ ಅವಕಾಶ ಮಾಡಿಕೊಟ್ಟುದನ್ನು ಬಿನಾಯಕ ಸೇನ್ ಒಪ್ಪಲಿಲ್ಲವೆಂಬುದು ಅಪರಾಧವೇ ? ಇಲ್ಲವೇ ಸೆಲ್ವಾಜುಡುಂ ಎಂಬ ಗೂಂಡಾ ಪಡೆಯನ್ನು ಕಟ್ಟಿ ಆದಿವಾಸಿಗಳ ಗುಡಿಸಲಿಗೆ ಬೆಂಕಿ ಹಾಕಿ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಬಿಜೆಪಿ ಸರಕಾರ ಹುನ್ನಾರ ನಡೆಸಿದುದನ್ನು ಅವರು ಒಪ್ಪಲಿಲ್ಲವೆಂಬುದು ಅಪರಾಧವೇ? ಯಾವುದು ಅಪರಾಧ? ಇದೆಲ್ಲ ಅಪರಾಧವೆಂದಾದರೆ ಇಂದು ಬಿನಾಯಕ್ ಸೇನ್‌ಗೆ ಆದ ಗತಿ ನಾಳೆ ಜನತೆಯ ಪರವಾಗಿ ಧ್ವನಿಯೆತ್ತುವ ಮೇಧಾ ಪಾಟ್ಕರ್, ಅರುಂಧತಿ ರಾಯ್, ಸ್ವಾಮಿ ಅಗ್ನಿವೇಶ್ ಅವರಿಗೂ ಆಗದಿರದು.
ಜನತೆಯ ಪರವಾಗಿ ಧ್ವನಿಯೆತ್ತಿದುದನ್ನೇ ಅಪರಾಧವಾಗಿ ಬಿಂಬಿಸಿದ ಛತ್ತೀಸ್‌ಗಡ ಸರಕಾರ ಬಿನಾಯಕ್ ಸೇನ್ ನಕ್ಸಲ್ ಬೆಂಬಲಿಗರೆಂದೂ ನಕ್ಸಲೀಯ ನಾಯಕರನ್ನು ಅವರು ಭೇಟಿ ಮಾಡಿದ್ದಾರೆಂದೂ ಅವರ ಬಳಿ ಕ್ರಾಂತಿಕಾರಿ ಸಾಹಿತ್ಯ ದೊರೆಯಿತೆಂದು ಆರೋಪಿಸಿ ಅವರನ್ನು ದೇಶದ್ರೋಹಿಯೆಂದು ಹೆಸರಿಸಿ ಜೈಲಿಗೆ ಅಟ್ಟಿತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಗಮನಾರ್ಹವಾಗಿದೆ. ಡಾ. ಬಿನಾಯಕ್ ಸೇನ್‌ರನ್ನು ಜಾಮೀನಿನ ಮೇಲೆ ಬಿಡಲು ಆಕ್ಷೇಪಣೆ ಸಲ್ಲಿಸಿದ ಛತ್ತೀಸ್‌ಗಡ ಸರಕಾರದ ವಾದವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಯಾರೋ ನಕ್ಸಲ್ ನಾಯಕರನ್ನು ಭೇಟಿ ಮಾಡುವುದು ಅಪರಾಧವಲ್ಲವೆಂದು ಅದು ಹೇಳಿದೆ. ಬಿನಾಯಕ ಸೇನ್‌ರ ಮನೆಯಲ್ಲಿ ನಕ್ಸಲ್ ಸಾಹಿತ್ಯ ಸಿಕ್ಕಿತೆಂದ ಮಾತ್ರಕ್ಕೆ ಅವರನ್ನು ರಾಷ್ಟ್ರದ್ರೋಹಿ ಎಂದು ಕರೆಯಲು ಸಾಧ್ಯವಿಲ್ಲ ಎಂದಿದೆ.
ಅನ್ಯಾಯಕ್ಕೊಳಗಾದ ಜನತೆಯ ಪರವಾಗಿ ಹೋರಾಡುವ ಮಾವೊವಾದಿಗಳ ಬಗ್ಗೆ ಸಹಾನೂಭೂತಿ ಹೊಂದಿದ ಮಾತ್ರಕ್ಕೆ ಅವರನ್ನು ನಕ್ಸಲೀಯನೆಂದು ಪರಿಗಣಿಸಬೇಕಾಗಿಲ್ಲ. ಆ ರೀತಿ ಸಹಾನೂಭೂತಿ ಹೊಂದಿದವರು ಈ ದೇಶದಲ್ಲಿ ಸಾಕಷ್ಟಿದ್ದಾರೆಂದು ಸುಪ್ರೀಂ ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪು ಛತ್ತೀಸ್‌ಗಡದ ಬಿಜೆಪಿ ಸರಕಾರಕ್ಕೆ ಮಾತ್ರವಲ್ಲ, ಜನತೆಯ ಚಳವಳಿಯನ್ನು ದಮನ ಮಾಡಲು ಹೊರಟಿರುವ ಕೇಂದ್ರ ಸರಕಾರಕ್ಕೂ ಕಪಾಲಮೋಕ್ಷ ಮಾಡಿದಂತಾಗಿದೆ.ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ಕಳೆದ ಎರಡು ವರ್ಷಗಳಿಂದ ನೊಂದು ಬಸವಳಿದಿದ್ದ ಬಿನಾಯಕ್ ಕುಟುಂಬ ನೆಮ್ಮದಿಯ ಉಸಿರು ಬಿಡುವಂತಾಗಿದೆ. ಅವರ ವಯೋವೃದ್ಧೆ ತಾಯಿ ಈ ತೀರ್ಪಿನಿಂದ ಸಂತಸಗೊಂಡಿದ್ದಾರೆ. ಅವರು ಮಾತ್ರವಲ್ಲ, ಈ ದೇಶದ ಎಲ್ಲ ಮಾನವ ಹಕ್ಕು ಹೋರಾಟಗಾರರು ಪ್ರಜಾಪ್ರಭುತ್ವದ ಆಶಯಗಳಿಗೆ ಇನ್ನೂ ಭವಿಷ್ಯವಿದೆ ಎಂದು ಈ ತೀರ್ಪಿನಿಂದ ನಂಬುವಂತಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ