ಶುಕ್ರವಾರ, ಡಿಸೆಂಬರ್ 17, 2010

ಸೌದಿ ಅರೇಬಿಯಾದಲ್ಲಿ ಇಪ್ಪತ್ತು ಭಾರತೀಯ ಕಾರ್ಮಿಕರು ಅತಂತ್ರ ! ನ್ಯಾಯ ದೊರಕಿಸಿ ಕೊಟ್ಟ ಇಂಡಿಯಾ ಫ್ರಟೆರ್ನಿಟಿ ಫೋರಂ

ರಿಯಾದ್ : (ಸೌದಿ ಅರೇಬಿಯಾ) : ಭಾರತದಿಂದ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಸೌದಿ ಅರೇಬಿಯಾದ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಬಂದ ಭಾರತೀಯ ಕಾರ್ಮಿಕರು ಸಂಬಳವೂ ಇಲ್ಲದೆ ಖರ್ಚಿಗೆ ಹಣವೂ ಇಲ್ಲದೆ ಅಂತಂತ್ರವಾಗಿ ದಿನ ಕಳೆಯುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಾರತದ ವಿವಿಧ ಭಾಗಗಳಿಂದ ಮುತಫೀಲ್ ಇಂಡಸ್ಟ್ರಿಯಲ್ ಕಂಪೆನಿ ಎಂಬ ಕಂಪೆನಿಯೊಂದರ ವೀಸಾದಲ್ಲಿ ಕೆಲಸಕ್ಕೆ ಬಂದ ಈ ಇಪ್ಪತ್ತು ಕಾರ್ಮಿಕರಿಗೆ ಸಂದರ್ಶನ ಮಾಡುವಾಗ ಸೌದಿ ಅರೇಬಿಯಾದ ವಿಮಾನ ನಿಲ್ಧಾಣ ಮತ್ತು ಆಸ್ಪತ್ರೆಯಲ್ಲಿ ಕ್ಲೀನಿಂಗ್ ಕೆಲಸಕ್ಕೆ ತಮ್ಮನ್ನು ನೇಮಿಸಿಕೊಳ್ಳಲಾಗುತ್ತದೆ. ಜೊತೆಗೆ ತಿಂಗಳಿಗೆ ಒಂಬೈನೂರು ರಿಯಾಲ್ ಅಂದರೆ ಸುಮಾರು ಹನ್ನೆರಡು ಸಾವಿರ ಭಾರತೀಯ ರೂಪಾಯಿಗಳನ್ನು ಸಂಬಳ ನೀಡಲಾಗುತ್ತದೆ ಎಂಬ ಭರವಸೆಯನ್ನು ಇವರಿಗೆ ನೀಡಲಾಗಿತ್ತು. ಹಾಗೆ ಹಣ ಪಾವತಿಸಿ ಸೌದಿ ಅರೇಬಿಯಾಕ್ಕೆ ಬಂದ ಇವರನ್ನು ನೇರವಾಗಿ ತಬೂಕ್ ನಗರಕ್ಕೆ ಕಳುಹಿಸಲಾಯಿತು. ಅಲ್ಲಿ ಇವರಿಗೆ ಹೇಳಿದ ಕೆಲಸಕ್ಕೆ ವಿರುದ್ಧವಾಗಿ ಇಲ್ಲಿನ ಪುರಸಭೆಯಲ್ಲಿ ರಸ್ತೆ ಬದಿಯ ಕಸ ಎತ್ತುವ ಕೆಲಸವನ್ನು ಕೊಡಲಾಯಿತು.ಬಂದ ಸಂಕಷ್ಟಕ್ಕೆ ಕೆಲಸವನ್ನು ಅನಿವಾರ್ಯವಾಗಿ ಒಪ್ಪಿಕೊಂಡ ಇವರಿಗೆ ತಿಂಗಳ ಕೊನೆಯಲ್ಲಿ ನಿಮ್ಮ ಸಂಬಳ ಆರು ನೂರು ರಿಯಾಲ್ ಅಂದರೆ ಏಳು ಸಾವಿರ ಎಂದು ಹೇಳಲಾಯಿತು. ಆದರೆ ತಿಂಗಳ ಕೊನೆಗೆ ಕೇವಲ ಮುನ್ನೂರು ರೂಗಳನ್ನು ಕೊಡಲಾಯಿತು. ನಂತರದ ತಿಂಗಳಿನಲ್ಲಿ ಕೇವಲ ಇನ್ನೂರು ರೂ ಕೊಡಲಾಯಿತು . ಇದೀಗ ಕಳೆದ ನಾಲ್ಕು ತಿಂಗಳಿನಿಂದ ಇವರಿಗೆ ಸಂಬಳವೂ ಕೊಡದೆ , ಇವರ ಆರೋಗ್ಯದ ಕಡೆಗೆ ಗಮನವನ್ನೂ ಕೊಡದೆ ಜೊತೆಗೆ ಇಲ್ಲಿನ ಅನಿವಾಸಿ ನೌಕರರಿಗೆ ಕಡ್ಡಾಯವಾಗಿ ಮಾಡಿಸಬೇಕಾದ ಗುರುತಿನ ಪತ್ರವನ್ನೂ ಮಾಡಿಸದೇ ಇವರನ್ನು ಕೆಲಸಕ್ಕೆ ಹಚ್ಚಲಾಯಿತು. ಹೀಗಾದಾಗ ಇವರು ಇಲ್ಲಿನ ಕಾರ್ಮಿಕ ಇಲಾಖೆಗೆ ದೂರು ಕೊಟ್ಟರು .
ಅಲ್ಲಿಗೆ ಇವರ ಸಂಕಷ್ಟಗಳು ಮುಗಿಯಬಹುದು ಎಂದುಕೊಂಡವರಿಗೆ ಹೊಸತೊಂದು ಸಂಕಷ್ಟ ಎದುರಾಗಿತ್ತು. ಇವರು ಕೊಟ್ಟ ದೂರಿಗೆ ಹೆದರಿದ ಮಾಲೀಕ ನಾನು ಕಾರ್ಮಿಕ ನ್ಯಾಯಾಲಯದ ಮುಂದೆ ತನ್ನ ತಪ್ಪು ಒಪ್ಪಿಕೊಳ್ಳಬೇಕಾಗಬಹುದು ಎಂದು ಕೊಂಡು ಇವರನ್ನು ಸಂಪರ್ಕಿಸಿ ನಿಮ್ಮ ವ್ಯವಹಾರವನ್ನು ಎಲ್ಲಾ ಚುಕ್ತಾ ಮಾಡಿ ನಿಮ್ಮನ್ನು ಊರಿಗೆ ಕಳುಹಿಸುತ್ತೇನೆ ಎಂಬ ಸಬೂಬು ಹೇಳಿ ಇವರನ್ನು ಸರ್ಕಾರಿ ಬಸ್ ಮೂಲಕ ಸೌದಿ ಅರೇಬಿಯಾದ ರಾಜಧಾನಿ ರಿಯಾದಿಗೆ ಕಳುಹಿಸಿದ . ಅಲ್ಲಿ ಕಂಪೆನಿಯ ಕೇಂದ್ರ ಕಚೇರಿ ಇದ್ದು ಅಲ್ಲಿ ನಿಮ್ಮ ಬಾಕಿ ಹಣವನ್ನು ಕೊಟ್ಟು ನೇರವಾಗಿ ನಿಮ್ಮನ್ನು ಊರಿಗೆ ಕಳುಹಿಸುತ್ತೇವೆ ಎಂಬ ಭರವಸೆಯನ್ನೂ ಕೊಟ್ಟ. ಅದರಂತೆ ತಮ್ಮ ಸಾಮಾನುಗಳನ್ನು ಕಟ್ಟಿಕೊಂಡ ಇವರು ನೇರವಾಗಿ ರಿಯಾದ್ ಬಸ್ ನಿಲ್ಧಾಣಕ್ಕೆ ಬಂದಾಗ ಇವರನ್ನು ಸ್ವಾಗತಿಸಲು ಒಬ್ಬ ಬಾಂಗ್ಲಾದೇಶದ ನೌಕರ ಬಂದಿದ್ದ. ಅಲ್ಲಿ ಇವರಿಗೆ ಊಟ ಕೊಡಿಸಿದ ಆತ ಇವರನ್ನು ಐದು ಜನರ ನಾಲ್ಕು ಗುಂಪುಗಳಾಗಿ ಮಾಡಿ ಕಟ್ಟಡ ನಿರ್ಮಾಣ ಕೆಲವೊಂದಕ್ಕೆ ಹೋಗುವಂತೆ ತಿಳಿಸಿದ. ಇದರಿಂದ ವಿಚಲಿತರಾದ ಈ ನೌಕರರು ಮತ್ತೆ ತಾವು ಇನ್ನೊಮ್ಮೆ ಇಲ್ಲಿ ಮೋಸ ಹೋಗುತ್ತಿದ್ದೇವೆ ಎಂಬುವುದನ್ನು ಮನಗೊಂಡು ಆತ ಹೇಳಿದ ಕೆಲಸಕ್ಕೆ ಹೋಗಲು ನಿರಾಕರಿಸಿದರು. ಹೀಗಾಗಿ ಇವರನ್ನು ದಾರಿ ಮಧ್ಯೆ ಬಿಟ್ಟು ಹೋದ ಆ ವ್ಯಕ್ತಿ ಮರಳಿ ಬರಲೇ ಇಲ್ಲ. ಇತ್ತ ಕಂಪೆನಿಯಿಂದ ಯಾವುದೇ ಪ್ರತಿಕ್ರಿಯೆಯೂ ಇಲ್ಲ. ಹೀಗೆ ದಾರಿ ಕಾಣದಾದ ಇವರ ನೆರವಿಗೆ ಸಿಕ್ಕಿದ್ದೇ ಇಂಡಿಯಾ ಫ್ರಟೆರ್ನಿಟಿ ಫೋರಂ ರಿಯಾದ್ ಘಟಕದ ಕಾರ್ಯಕರ್ತರು.
ತಾತ್ಕಾಲಿಕ ನೆಲೆ ಒದಗಿಸಿ ಕೊಟ್ಟ ಇಂಡಿಯಾ ಫ್ರಟೆರ್ನಿಟಿ ಫೋರಂ ರಿಯಾದ್ ಘಟಕ
ಹೀಗೆ ದಾರಿ ಮಧ್ಯೆ ಯಾವುದೇ ಆಸರೆ ಇಲ್ಲದೇ ಇದ್ದ ಈ ಇಪ್ಪತ್ತು ಕಾರ್ಮಿಕರಿಗೆ ರಿಯಾದ್ ಕೇಂದ್ರ ಮಾರುಕಟ್ಟೆ ಪ್ರದೇಶವಾದ ಬತ್ತಾ ಎಂಬಲ್ಲಿ ತಾತ್ಕಾಲಿಕ ಆಶ್ರಯ ಕೊಟ್ಟ ಇಂಡಿಯಾ ಫ್ರಟೆರ್ನಿಟಿ ಫೋರಂ ರಿಯಾದ್ ಘಟಕ ಇವರ ಊಟೋಪಚಾರದ ಜೊತೆಗೆ ಇವರ ಪರವಾಗಿ ಕಾನೂನು ಹೋರಾಟ ನಡೆಸುವ ನಿಲುವನ್ನು ತೆಗೆದು ಕೊಂಡಿತು. ಇಂಡಿಯಾ ಫ್ರಟೆರ್ನಿಟಿ ಫೋರಂ ಮುಖಂಡರಾದ ಉಪ್ಪಿನಂಗಡಿಯ ಇಕ್ಬಾಲ್ ಕೆಂಪಿ , ಕೇರಳದ ಮುನೀಬ್ ಮತ್ತು ಶರೀಫ್ ಇವರ ಪರವಾಗಿ ಕಾರ್ಮಿಕ ನ್ಯಾಯಾಲಯದಲ್ಲಿ ಕಾನೂನು ಹೋರಾಟಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡರು. ಭಾರತೀಯ ರಾಯಭಾರಿ ಕಚೇರಿಯ ಸಹಕಾರವನ್ನು ಪಡೆದು ಅಲ್ಲಿನ ಪ್ರತಿನಿಧಿ ವಸೀವುಲ್ಲಾ ಅವರ ಸಹಕಾರದೊಂದಿಗೆ ಕಾರ್ಮಿಕ ನ್ಯಾಯಾಲಯದ ಮೊರೆ ಹೊಕ್ಕರು.
  ಕ್ರಪೆ :vknews

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ