ಶುಕ್ರವಾರ, ಜನವರಿ 21, 2011

ಈಗ ಪ್ರಾಯಶ್ಚಿತ್ತ ಕಾಲ!




ಮಾಲೆಗಾಂವ್, ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟ ಘಟನೆಗಳು ನಡೆದು ಮೂರು ವರ್ಷಗಳೇ ಸಂದರೂ ಈ ಪ್ರಕರಣಗಳ ನಿಗೂಢತೆಯು ದಿನದಿಂದ ದಿನಕ್ಕೆ ದಟ್ಟವಾಗುತ್ತಲೇ ಹೋಗುತ್ತಿತ್ತು. ಸ್ವಘೋಷಿತ ಧಾರ್ಮಿಕ ನಾಯಕ ಸ್ವಾಮಿ ದಯಾನಂದ ಪಾಂಡೆಯ ಲ್ಯಾಪ್‌ಟಾಪ್ ನಿಂದ ಆಡಿಯೋ ಟೇಪ್‌ಗಳನ್ನು ವಶಪಡಿಸಿ ಕೊಂಡ ಬಳಿಕ ಈ ದುಷ್ಕೃತ್ಯಗಳಲ್ಲಿ ಕೇಸರಿ ಭಯೋತ್ಪಾದಕರ ಕೈವಾಡವಿರುವ ಬಗ್ಗೆ ಬಲವಾದ ಸಂಶಯಗಳು ಮೂಡಿದ್ದವು. ಆದರೆ ಇತ್ತೀಚೆಗೆ ತೀಸ್ ಹಝಾರಿ ನ್ಯಾಯಾಲಯದಲ್ಲಿ ಸ್ಫೋಟ ಪ್ರಕರಣಗಳ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ನೀಡಿದ ತಪ್ಪೊಪ್ಪಿಗೆಯು ಹಲವು ತಿಂಗಳುಗಳಿಂದ ಹೊಗೆಯಾಡುತ್ತಿದ್ದ ಊಹಾಪೋಹಗಳಿಗೆ ಕಾನೂನಿನ ಅಂದಕಾರದ ಮುದ್ರೆಯನ್ನೊತ್ತಿತು.




ಮಾಲೆಗಾಂವ್ (2006 ಹಾಗೂ 08), ಸಂಜೋತಾ ಎಕ್ಸ್‌ಪ್ರೆಸ್ (2007), ಅಜ್ಮೀರ್ ಶರೀಫ್ (2007) ಹಾಗೂ ಮಕ್ಕಾ ಮಸೀದಿ (2007) ಸ್ಫೋಟ ಸೇರಿದಂತೆ ದೇಶಾದ್ಯಂತ ನಡೆದ ಹಲವು ಸರಣಿ ಬಾಂಬ್ ಸ್ಫೋಟಗಳಲ್ಲಿ ಹಿಂದುತ್ವವಾದಿ ಉಗ್ರರ ಕೈವಾಡವಿರುವುದು ಈಗ ನಿಚ್ಚಳವಾಗಿ ಬಯಲಾಗಿದೆ.

ಆದಾಗ್ಯೂ, ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ನಮ್ಮ ಪೊಲೀಸರು ಈ ಪ್ರಕರಣಗಳ ತನಿಖೆಯ ಲ್ಲಿಯೂ ಅನುಸರಿಸಲು ಮರೆತಿ ರಲಿಲ್ಲ. ಈ ಸ್ಫೋಟ ಪ್ರಕರಣಗಳ ತನಿಖೆಗೆ ಸಂಬಂಧಿಸಿ ಡಜನ್ ಗಟ್ಟಲೆ ಅಮಾಯಕ ಮುಸ್ಲಿಂ ಯುವಕರನ್ನು ಪೊಲೀಸರು ತಿಂಗಳುಗಟ್ಟಲೆ ಬಂಧಿಸಿ,ಅವರ ಮೇಲೆ ದೌರ್ಜನ್ಯ ವೆಸಗಿದ್ದಾರೆ ಹಾಗೂ ಅವರ ವಿರುದ್ಧ ಚಾರ್ಜ್ ಶೀಟ್‌ಗಳನ್ನು ಸಲ್ಲಿಸಿದ್ದಾರೆ. ಮಾತ್ರವಲ್ಲ ಬಂಧಿತ ಮುಸ್ಲಿಂ ಯುವಕರಿಗೆ ಚಿತ್ರಹಿಂಸೆ ನೀಡಿ, ಅವರಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದುಕೊಳ್ಳುವುದಕ್ಕೂ ಪೊಲೀಸರು ಹೇಸಲಿಲ್ಲ. ಮಹಾರಾಷ್ಟ್ರ ಹಾಗೂ ಆಂಧ್ರ ಪೊಲೀಸರು ಉದ್ದೇಶಪೂರ್ವಕ ವಾಗಿಯೇ ಈ ಪ್ರಕರಣಗಳನ್ನು ‘ಹಿಂದುತ್ವವಾದಿ ಭಯೋ ತ್ಪಾದನೆ’ಯ ಆಂಗಲ್‌ನಿಂದ ನೋಡಲು ನಿರಾಕರಿಸಿದರು. ಬದಲಾಗಿ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ, ಜೈಲಿಗೆ ತಳ್ಳ ತೊಡಗಿದರು.

ದೇಶದಲ್ಲಿ ಕೇಸರಿ ಭಯೋ ತ್ಪಾದನೆಯ ಕಾಳಸರ್ಪ ಹೆಡೆಯೆತ್ತಿರುವುದನ್ನು ಪ್ರಪ್ರಥಮ ಬಾರಿಗೆ ಪತ್ತೆಹಚ್ಚಿದ ಕೀರ್ತಿ 26/11ರ ಮುಂಬೈ ದಾಳಿಯ ಸಂದರ್ಭದಲ್ಲಿ ಹತರಾದ ಆಗಿನ ಎಟಿಎಸ್ ವರಿಷ್ಠ ಹೇಮಂತ್ ಕರ್ಕರೆಯವರಿಗೆ ಸಲ್ಲಬೇಕು. ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡ ಅವರಿಗೆ ಪ್ರಕರಣದಲ್ಲಿ ಕೇಸರಿ ಭಯೋತ್ಪಾದಕರ ಕೈವಾಡವಿರುವುದು ಸ್ಪಷ್ಟವಾಯಿತು. ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದ ಹೈದರಾಬಾದ್ ಪೊಲೀಸರನ್ನು ಸಂಪರ್ಕಿಸಿದ ಅವರು, ಮಾಲೆಗಾಂವ್ ಸ್ಫೋಟದ ಬಂಧಿತ ಉಗ್ರ, ಕ. ಪುರೋಹಿತ್ 2006ರಲ್ಲಿ ಜಮ್ಮುವಿನಲ್ಲಿ ಸೇನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿ ದ್ದಾಗ, ಅಲ್ಲಿರುವ ಮಿಲಿಟರಿ ಸಂಶೋಧನಾ ಕೇಂದ್ರದಿಂದ ಆರ್‌ಡಿಎಕ್ಸ್ ಸಂಪಾದಿಸಿದ್ದನೆಂಬುದಾಗಿ ಮಾಹಿತಿ ನೀಡಿದರು. ಆದರೆ ಹೈದರಾಬಾದ್ ಪೊಲೀಸರು ಮಾತ್ರ ಕರ್ಕರೆ ಮಾತಿಗೆ ಕವಡೆ ಕಿಮ್ಮತ್ತನ್ನೂ ನೀಡಲಿಲ್ಲ. ಮಾತ್ರವಲ್ಲ 70ಕ್ಕೂ ಅಧಿಕ ಮುಸ್ಲಿಂ ಯುವಕರನ್ನು ವಶಕ್ಕೆ ತೆಗೆದುಕೊಂಡು ಅವರಿಗೆ ಖಾಸಗಿ ವ್ಯಕ್ತಿಗಳ ಫಾರ್ಮ್‌ಹೌಸ್‌ಗಳಲ್ಲಿ ಚಿತ್ರಹಿಂಸೆ ನೀಡಿದರು ಹಾಗೂ ಅವರಿಂದ ಬಲಾತ್ಕಾರವಾಗಿ ತಪ್ಪೊಪ್ಪಿಗೆ ಹೇಳಿಕೆಗಳನ್ನು ಪಡೆದುಕೊಂಡರು. ಇಷ್ಟಕ್ಕೂ ಕ. ಪುರೋಹಿತ್‌ನನ್ನು ತಮ್ಮ ಕಸ್ಟಡಿಗೆ ತೆಗೆದುಕೊಳ್ಳಬೇಕೆಂಬ ಯೋಚನೆ ಅವರಿಗೆ ಬರಲೇ ಇಲ್ಲ.

ಇನ್ನು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ತನಿಖೆ ನಡೆ ಸಿದ ಹರ್ಯಾಣ ಎಟಿಎಸ್‌ನದು ಬೇರೆಯೇ ಕಥೆ. ದಯಾ ನಂದ ಪಾಂಡೆಯನ್ನು ನೆಪಮಾತ್ರಕ್ಕೆ ಪ್ರಶ್ನಿಸಿದ ಬಳಿಕ ಅದು ಪ್ರಕರಣವನ್ನು ಭೇದಿಸಲು ಅಸಾಧ್ಯವಾಗಿದೆಯೆಂದು ಹೇಳಿ ಕೈತೊಳೆದುಕೊಂಡಿತ್ತು. ಸಂಜೋತಾ ಸ್ಫೋಟದಲ್ಲಿ ಆರ್ ಡಿಎಕ್ಸ್ ಬಳಕೆಯು, ಈ ದುಷ್ಕೃತ್ಯದಲ್ಲಿ ಪಾಕ್ ಕೈವಾಡವಿದೆ ಯೆಂಬುದಕ್ಕೆ ಪ್ರಬಲವಾದ ಪುರಾವೆಯೆಂದು ತನಿಖಾ ಸಂಸ್ಥೆ ಗಳು, ಮಾಧ್ಯಮಗಳು ಡಂಗುರ ಸಾರಿದ್ದವು. ಆದರೆ ಈ ಬಾಂಬನ್ನು ಒಯ್ಯುತ್ತಿದ್ದ ಸೂಟ್‌ಕೇಸನ್ನು ಇಂದೋರ್‌ನ ಕೊಠಾರಿ ಮಾರುಕಟ್ಟೆಯಲ್ಲಿ ಖರೀದಿಸಲಾಗಿತ್ತೆಂಬ ಮಹತ್ವದ ಸುಳಿವು ಲಭಿಸಿದ್ದರೂ, ಆ ಬಗ್ಗೆ ಎಟಿಎಸ್ ತಲೆಕೆಡಿಸಿಕೊಳ್ಳ ಲೇ ಇಲ್ಲ. ಪ್ರಕರಣದ ತನಿಖೆಯನ್ನು ಕೈಬಿಡುವುದಕ್ಕೆ ಒಂದೋ ಹರ್ಯಾಣ ಎಟಿಎಸ್‌ಗೆ ಕಾಣದ ಕೈಗಳಿಂದ ಒತ್ತಡವಿತ್ತೇ ಅಥವಾ ಹಿಂದುತ್ವವಾದಿ ಉಗ್ರರ ಕೈವಾಡದ ಸಾಧ್ಯತೆಯಿರು ವುದು ಅರಿವಾದ ಬಳಿಕ ಅವರು ತನಿಖೆಗೆ ಹಿಂದೇಟು ಹಾಕಿದರೇ ಎಂಬುದು ಇನ್ನೂ ಬಿಡಿಸಲಾಗದ ಒಗಟಾಗಿದೆ.

ಈ ಕಾಮಾಲೆಗೆ ಮದ್ದೆಲ್ಲಿ?

ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿದೆಯಾದರೂ, ತನಿಖೆಯ ಮೇಲೆ ತಮ್ಮ ಹಿಡಿತವನ್ನು ಇನ್ನೂ ಇಟ್ಟುಕೊಳ್ಳುವ ಉದ್ದೇಶದೊಂದಿಗೆ ಹೈದರಾಬಾದ್ ಪೊಲೀಸರು, ಸ್ಫೋಟ ಸಂಚಿಗೆ ಸಂಬಂಧಿಸಿ ಇನ್ನೂ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬಾಂಬ್ ಸ್ಫೋಟಗಳು ಹಾಗೂ ಭಯೋತ್ಪಾದಕ ದಾಳಿ ಪ್ರಕರಣಗಳ

ತನಿಖೆಯಲ್ಲಿ ವಿಶೇಷ ತನಿಖಾ ತಂಡ (ಸಿಟ್) ಹಾಗೂ ವಿಶೇಷ ಸೆಲ್‌ಗಳಂತಹ ತನಿಖಾ ಸಂಸ್ಥೆಗಳಿಗೆ ದೊಡ್ಡ ಲಾಭವಿರುವುದೇ ಇದಕ್ಕೆ ಮುಖ್ಯ ಕಾರಣ. ದಿqsರ್ ಆಗಿ ಪದಕಗಳನ್ನು ಸಂ


ದಯಾನಂದ ಪಾಂಡೆ


ಪಾದಿಸಲು, ಭಡ್ತಿ ಪಡೆಯಲು ಮತ್ತು ಪ್ರಶಸ್ತಿ ಗಿಟ್ಟಿಸಲು ಇದೊಂದು ರಾಜಮಾರ್ಗವಾಗಿದೆ. ಒಂದಿಷ್ಟು ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ ನ್ಯಾಯಾಲಯ ದಲ್ಲಿ ಹಾಜರುಪಡಿದ ನಂತರ ಅವರಿಗೆ ಸಂಚುಕೋರರೆಂದು, ಪಾತಕಿಗಳ ಸಹಚರರೆಂಬ ಹಣೆಪಟ್ಟಿ ಕಟ್ಟಿದರೆ ಸಾಕು. ಆಗ ಅವರ (ದುರು) ಉದ್ದೇಶ ಈಡೇರಿದಂತೆಯೇ!.

ಈ ಸ್ಫೋಟ ಪ್ರಕರಣಗಳಿಗೆ ಸಂಬಂಧಿಸಿ ಪ್ರಸ್ತುತ ದೇಶದ ವಿವಿಧ ಜೈಲುಗಳಲ್ಲಿ ಹಲವು ವರ್ಷಗಳಿಂದ ಬಂಧಿತರಾದವರ ಒಟ್ಟು ಸಂಖ್ಯೆಯ ಬಗ್ಗೆ ಗೃಹ ಸಚಿವಾಲಯ ಶ್ವೇತಪತ್ರ ವೊಂದನ್ನು ಹೊರಡಿಸಬೇಕಾಗಿದೆ. ಈಗಲೂ ಜೈಲುಗಳಲ್ಲಿ ಬಂಧಿಯಾಗಿರುವ ಅಮಾಯಕರನ್ನು ಯಾವುದೇ ವಿಳಂಬ ವಿಲ್ಲದೆ ಬಿಡುಗಡೆಗೊಳಿಸುವುದು ಸರಕಾರದ ತುರ್ತು ಜವಾಬ್ದಾರಿಯಾಗಿದೆ. ಹೀಗೆ ಯಾವುದೇ ಅಪರಾಧವೆಸಗದಿದ್ದರೂ, ಅನ್ಯಾಯವಾಗಿ ಜೈಲು ಸೇರಿ ಬದುಕು ನಾಶಗೊಂಡವರ,ಮಾನಸಿಕವಾಗಿ ಜರ್ಝರಿತರಾದವರ ಮತ್ತು ಸುಳ್ಳು ಆರೋಪಗಳಿಂದಾಗಿ ಸಾಮಾಜಿಕ ಕಳಂಕವನ್ನು ಹೊತ್ತುಕೊಂಡವರಿಂದ ರಾಜ್ಯ ಸರಕಾರಗಳು ಹಾಗೂ ಕೇಂದ್ರ ಗೃಹ ಸಚಿವಾಲಯ ಕ್ಷಮೆ ಯಾಚಿಸಬೇಕು. ಮಾತ್ರವಲ್ಲ ಅವರ ಬದುಕನ್ನು ಮರಳಿ ಕಟ್ಟುವ ಕಾರ್ಯವನ್ನು ಆರಂಭಿಸಬೇಕು.

ಭಯೋತ್ಪಾದಕ ಕೃತ್ಯಗಳ ಬಗ್ಗೆ ಪೊಲೀಸರಷ್ಟೇ ನಮ್ಮ ಘನವೆತ್ತ ಸಚಿವರು, ರಾಜಕಾರಣಿಗಳು ಕೂಡಾ ಪೂರ್ವಾಗ್ರಹ ಪೀಡಿತ ರಾಗಿದ್ದಾರೆಂಬುದಕ್ಕೆ ಇಲ್ಲಿ ನೀಡಿರುವ ಉದಾಹರಣೆಗಳು ಸಾಕು. ೨೦೦೯ರಲ್ಲಿ ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ೨೦೦೯ರಲ್ಲಿ ಪೊಲೀಸರು ಅಮಾಯಕರಾದ ಮೌಲವಿಗಳು ಹಾಗೂ ಮದ್ರಸ ಶಿಕ್ಷಕರನ್ನು ವಶಕ್ಕೆ ತೆಗೆದು ಕೊಂಡಾಗ ತನಿಖೆಯ ಪ್ರಗತಿಯ ಬಗ್ಗೆ ಆಗಿನ ಗೃಹ ಸಚಿವ ಶಿವರಾಜ್ ಪಾಟೀಲ್ ತೃಪ್ತಿ ವ್ಯಕ್ತಪಡಿಸಿದ್ದರು. ಅಷ್ಟೇ ಏಕೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಕೂಡಾ ಮಕ್ಕಾ ಮಸೀದಿ ಸ್ಫೋಟದ ರೂವಾರಿ ಶಹೀದ್ ಬಿಲಾಲ್‌ನ ಸಾವಿನೊಂದಿಗೆ, ಪ್ರಕರಣದ ತನಿಖೆ ಅಂತ್ಯ ಕಂಡಿದೆಯೆಂದು ಸಾರಿದ್ದರು. ತೀರಾ ಇತ್ತೀಚೆಗೆ ಪುಣೆ ಬೇಕರಿ ಸ್ಫೋಟದ ಹಿಂದೆ ಹಿಂದುತ್ವವಾದಿ ಉಗ್ರರ ಕೈವಾಡದ ಶಂಕೆಯನ್ನು ಮಹಾರಾಷ್ಟ್ರ ಎಟಿಎಸ್ ವ್ಯಕ್ತಪಡಿಸಿದಾಗ, ಮಹಾರಾಷ್ಟ್ರ ಗೃಹ ಸಚಿವ ಆರ್.ಆರ್. ಪಾಟೀಲ್ ಎಟಿಎಸ್ ವರಿಷ್ಠರ ವಿರುದ್ಧ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದರು.

ಹೀಗೆ ಅನ್ಯಾಯವಾಗಿ ಬಂಧಿಸಲ್ಪಟ್ಟು, ಪೊಲೀಸ್ ದೌರ್ಜನ್ಯ ಅನುಭವಿಸಿದವರಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತುರ್ತು ಗಮನ ಹರಿಸಬೇಕು. ಈ ಸ್ಫೋಟ ಪ್ರಕರಣಗಳ ತನಿಖೆಯನ್ನು ಭದ್ರತಾ ಸಂಸ್ಥೆಗಳು ಹಾಗೂ ರಾಜ್ಯ ಸರಕಾರಗಳು ಹಳಿ ತಪ್ಪಿಸದಂತೆ ದೇಶದ ಜನತೆ ಕಟ್ಟೆಚ್ಚರ ವಹಿಸಬೇಕು.

ಆಸ್ಟ್ರೇಲಿಯದಲ್ಲಿ ಭಾರತೀಯ ಮೂಲದ ವೈದ್ಯ ಡಾ. ಹನೀಫ್‌ರನ್ನು ಭಯೋತ್ಪಾದನೆಯ ಸುಳ್ಳು ಆರೋಪದಲ್ಲಿ ಬಂಧಿಸಿದ್ದಕ್ಕಾಗಿ, ಅಲ್ಲಿನ ಸರಕಾರ ಸ್ವಲ್ಪವೂ ಮುಜುಗರ ಪಡದೆ ಕ್ಷಮೆಯಾಚಿಸಿತು, ಮಾತ್ರವಲ್ಲ ದೊಡ್ಡ ವೊತ್ತದ ಪರಿಹಾರ ನೀಡಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡಿತು. ಆಸ್ಟ್ರೇಲಿ ಯದ ಈ ನಡೆ ನಮಗೆ ಮಾದರಿಯಾಗಬೇಕು. ಆದರೆ ಮಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವರ್ಷಗಟ್ಟಲೆ ಜೈಲುಗಳಲ್ಲಿ ದಿನಗಳೆದ ಅಮಾಯಕ ಮುಸ್ಲಿಂ ಯುವಕರಿಗೆ ಆಂಧ್ರ ಸರಕಾರದ ಪುನರ್ವಸತಿ ಪ್ಯಾಕೇಜ್‌ನ ಕೊಡುಗೆ ಎಷ್ಟು ಗೊತ್ತೇ? ಕೇವಲ ೩೦ ಸಾವಿರ ರೂ. ಅವರ ಪುನರ್ವಸತಿಗೆಂದು ಘೋಷಿಸಲಾಗಿದ್ದ ಸಾಲದ ನೆರವಿನ ಯೋಜನೆ ಕೂಡಾ ಇನ್ನೂ ಕಾರ್ಯಗತಗೊಂಡಿಲ್ಲ. ತಮಗೆ ತಲಾ ೨೦ ಲಕ್ಷ ರೂ. ಪರಿಹಾರ ದೊರೆಯಬೇಕೆಂದು ಕೋರಿ ಸಂತ್ರಸ್ತರು ಸಲ್ಲಿಸಿದ ಅರ್ಜಿಗಳ ವಿರುದ್ಧ ರಾಜ್ಯ ಸರಕಾರ ಹೈದರಾಬಾದ್‌ನ ನಗರ ಸಿವಿಲ್ ಕೋರ್ಟ್‌ನಲ್ಲಿ ಕಾನೂನು ಸಮರ ನಡೆಸುತ್ತಿದೆ.

ಕಟ್ಟಕಡೆಯದಾಗಿ, ಈ ಸ್ಫೋಟ ಪ್ರಕರಣಗಳ ತನಿಖೆಯನ್ನು ಮುಚ್ಚಿಹಾಕಲು ಹಾಗೂ ತಪ್ಪುದಾರಿಗೆಳೆಯಲು ಯತ್ನಿಸಿದಂತಹ ತನಿಖಾಧಿಕಾರಿಗಳು, ರಾಜಕಾರಣಿಗಳು, ಪೊಲೀಸ್ ಅಧಿಕಾರಿ ಗಳು ಮತ್ತಿತರರ ವಿರುದ್ಧವೂ ಕಾನೂನುಕ್ರಮ ಜರಗಿಸಬೇಕು. ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಬಗ್ಗೆ ಕಸ್ಟಡಿಯಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಸಿದ, ಸುಳ್ಳು ಮಂಪರು ಪರೀಕ್ಷೆ ನಡೆಸಿದ ಹಾಗೂ ಅವರಿಂದ ಬಲವಂತವಾಗಿ ತಪ್ಪೊಪ್ಪಿಗೆ ಪಡೆದುಕೊಂಡ ಅಪರಾಧಗಳಿಗಾಗಿ ಹೈದರಾ ಬಾದ್‌ನ ಜಂಟಿ ಪೊಲೀಸ್ ಆಯುಕ್ತ (ಆಡಳಿತ) ಹರೀಶ್ ಗುಪ್ತಾರನ್ನು ಹೊಣೆಗಾರರನ್ನಾಗಿಸಬೇಕು. ನಿರಪರಾಧಿ ಯುವಕರನ್ನು ಹಿಂಸಿಸಿದ ಹಾಗೂ ಬಾಂಬ್ ಸ್ಫೋಟದಂತಹ ಗಂಭೀರ ಅಪರಾಧದ ತನಿಖೆಯನ್ನು ತಪ್ಪುಹಾದಿಗೆಳೆಯುವ ಮೂಲಕ, ಕರ್ತವ್ಯಚ್ಯುತಿಯೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ದೋಷಾರೋಪ ಹೊರಿಸಿ ವಿಚಾರಣೆ ನಡೆಸಬೇಕು. ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಅಮಾಯಕರು ಜೈಲುಯಾತನೆ ಅನುಭವಿಸುತ್ತಿರುವುದನ್ನು ಕಂಡು ಸ್ವತಃ ಪ್ರಕರಣದ ಪ್ರಧಾನ ಆರೋಪಿ ಅಸೀಮಾನಂದನ ಮನಸ್ಸೇ ಪರಿವರ್ತನೆಯಾಗಿರುವಾಗ, ನಾವು ಇಷ್ಟರವರೆಗೆ ಕಾಯ ಬೇಕಾಗಿರಲಿಲ್ಲ.

ಮಂಪರು ಪರೀಕ್ಷೆಯೆಂಬ ಕಪಟ ನಾಟಕ

ಎಪ್ರಿಲ್ ೨೦೦೮ರಲ್ಲಿ ಸಿಮಿ ಕಾರ್ಯಕರ್ತರಾದ ಸಫ್ದರ್ ನಾಗೋರಿ, ಆತನ ಸೋದರ ಕಮರುದ್ದೀನ್ ನಾಗೋರಿ ಹಾಗೂ ಅಮಿಲ್ ಪರ್ವೇಝ್ ಮೇಲೆ ನಡೆಸಲಾಯಿತೆನ್ನಲಾದ ಮಂಪರು ಪರೀಕ್ಷೆಯ ವರದಿಯು ತನಿಖಾಧಿಕಾರಿ ಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಜುಲೈ 11, 2006ರ ಮುಂಬೈ ರೈಲು ಬಾಂಬ್ ಸ್ಫೋಟ ಹಾಗೂ ಜನ ವರಿ 7, 2006ರ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಗಳನ್ನು ನಡೆಸಲು ಸಿಮಿ ಕಾರ್ಯಕರ್ತರು ನೆರವಾಗಿದ್ದರು. ಮಾತ್ರವಲ್ಲ ನೆರೆಯ ರಾಷ್ಟ್ರ ಪಾಕ್ ಪ್ರಜೆಗಳೂ ಈ ಕೃತ್ಯದಲ್ಲಿ ಭಾಗಿಗಳಾಗಿದ್ದರೆಂದು ಈ ಸೋದರರು ಮಂಪರು ಪರೀಕ್ಷೆಯ ವೇಳೆ ತಿಳಿಸಿದ್ದ ರೆಂದು ಪೊಲೀಸರು ಹೇಳಿಕೊಂಡಿದ್ದರು. ದೇಶದ ಪ್ರತಿಷ್ಠಿತ ಆಂಗ್ಲ ಪತ್ರಿಕೆ ‘ಇಂಡಿಯಾ ಟುಡೇ’ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂಬೈ ರೈಲು ಸ್ಫೋಟ ಹಾಗೂ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಸಿಮಿ ನೇರವಾದ ಪಾತ್ರ ವಹಿಸಿದೆಯೆಂದು ಪ್ರಕಟಿಸಿಯೇ ಬಿಟ್ಟಿತು.

ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಬಾಂಬಿರಿಸಲು ಬಳಸಿದ ಸೂಟ್‌ಕೇಸನ್ನು ಪಾಕಿಸ್ತಾನದ ಕೆಲವು ವ್ಯಕ್ತಿಗಳು ಇಂದೋರ್‌ನ ಕಟಾರಿಯಾ ಮಾರುಕಟ್ಟೆಯಿಂದ ಖರೀದಿಸಿದ್ದರು. ಸೂಟ್‌ಕೇಸ್‌ನ ಕವರ್ ಹೊಲಿಯಲು ಸಿಮಿ ಕಾರ್ಯಕರ್ತನೊಬ್ಬ ನೆರವು ನೀಡಿದ್ದನೆಂದು ನಾಗೋರಿ ಬಾಯಿ ಬಿಟ್ಟಿದ್ದಾನೆಂದು ಪೊಲೀಸರು ಘೋಷಿಸಿದ್ದರು. ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲೂ ಕೆಲವು ಮುಸ್ಲಿಮರು ಶಾಮೀಲಾಗಿದ್ದ ರೆಂದು ನಾಗೋರಿ ಒಪ್ಪಿಕೊಂಡಿದ್ದ. ಇದರ ಜೊತೆಗೆ ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟದ ಹಿಂದೆ ನಾಸೀರ್ ಎಂಬವ ನಿದ್ದಾನೆಂದು ಆತ ಮಂಪರುಪರೀಕ್ಷೆ ಯಲ್ಲಿ ಹೇಳಿದ್ದನೆಂದು ಪ್ರಚಾರ ಮಾಡಲಾಗಿತ್ತು.

ಇದೀಗ ಈ ಮೂರು ಸ್ಫೋಟಗಳಲ್ಲಿ ಕೇಸರಿ ಉಗ್ರರ ಕೈವಾಡವಿರುವುದು ಜಗಜ್ಜಾಹೀರಾಗಿದ್ದು, ಈ ಮಂಪರು ಪರೀಕ್ಷೆಯು ಪೊಲೀಸರೇ ಹೆಣೆದ ಕಟ್ಟುಕಥೆಯೆಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಮಾಧ್ಯಮಗಳು ಪೊಲೀಸರ ಕೈಗೊಂಬೆಯಾದವೇ?
ಹಾಗಾದರೆ ‘ಇಂಡಿಯಾ ಟುಡೇ’ಯಂತಹ ರಾಷ್ಟ್ರೀಯ ಮಟ್ಟದ ಪತ್ರಿಕೆಯೊಂದು ಈ ಮಂಪರು ಪರೀಕ್ಷೆಯ ಸಾಚಾತನವನ್ನು ಪರಾಂಬರಿಸದೆ, ಪೊಲೀಸರು ಹೇಳಿದ್ದನ್ನೇ ಯಾಕೆ ನಂಬಿತು? ಮಾತ್ರವಲ್ಲ ಅದನ್ನೊಂದು ದೊಡ್ಡ ಸುದ್ದಿಯಾಗಿ ಯಾಕೆ ಪ್ರಕಟಿಸಿತು?. ಹೈದರಾಬಾದ್‌ನ ಮಕ್ಕಾ ಮಸೀದಿ ಸ್ಫೋಟದ ಬಳಿಕ ಮೂಸಾರಾಂ ಭಾಗ್‌ನಂತಹ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ ಯುವಕರನ್ನು ಠಾಣೆಗೆಳೆದುಕೊಂಡು ಹೋಗಲಾ ಯಿತು.

ಪೊಲೀಸರ ಈ ಮತಿಗೇಡಿತನದ ಕೃತ್ಯಕ್ಕೆ ಸುದ್ದಿ ಮಾಧ್ಯಮಗಳು ಪ್ರಕಟಿಸಿದ ವರದಿಗಳೂ ಪರೋಕ್ಷ ಕಾರಣವಾಗಿದ್ದವು. (ಮಕ್ಕಾ ಸ್ಫೋಟದ ಹಿಂದೆ: ಆಂಧ್ರದ ರಾಜಧಾನಿಯಲ್ಲಿ ಕೋಮು ಹಿಂಸೆ, ಸಂಘಟಿತ ಅಪರಾಧ ಹಾಗೂ ಜಾಗತಿಕ ಜಿಹಾದ್‌ನ ಅಡ್ಡ ಪ್ರವೇಶ’’ ಎಂಬರ್ಥದ ಶಿರೋನಾಮೆಯ ಆಂಗ್ಲ ಲೇಖನವೊಂದು ಮೇ 23, 2007ರ ಫ್ರಂಟ್‌ಲೈನ್‌ನಲ್ಲಿ ಪ್ರಕಟವಾಗಿತ್ತು). ಇಂತಹ ವರದಿಗಳಿಂದ ಪೊಲೀಸರ ದುಂಡಾವರ್ತನೆಗಳಿಗೆ ಸಮರ್ಥನೆ ದೊರೆತಂತಾಗುತ್ತದೆ. ಅಕ್ಟೋಬರ್ 11,2007ರಲ್ಲಿ ಕೇಂದ್ರ ಗೃಹ ಸಚಿವಾಲಯವು ಹೇಳಿಕೆ ನೀಡಿ, ಅಜ್ಮೀರ್ ಶರೀಫ್ ಸ್ಫೋಟದಲ್ಲಿ ಲಷ್ಕರೆ ತಯ್ಯೆಬಾದ ಕೈವಾಡವಿದೆಯೆಂದು ತಿಳಿಸಿತು.ಲಷ್ಕರ್ ಸಂಘಟನೆಯು ಸೂಫಿ ಪಂಥವನ್ನು ಕಡುವಾಗಿ ವಿರೋಧಿಸುತ್ತಿರುವುದರಿಂದ ಆ ಪಂಥದ ಪ್ರಧಾನ ಹೆಗ್ಗುರುತುಗಳಲ್ಲೊಂದಾಗಿರುವ ಅಜ್ಮೀರ್ ದರ್ಗಾ ಶರೀಫ್‌ನ ಮೇಲೆ ಅದು ಭಯೋತ್ಪಾದಕ ದಾಳಿಯನ್ನು ನಡೆಸಿದೆಯೆಂದು ಸಚಿವಾಲಯ ತಿಳಿಸಿತ್ತು.

ಮಾರನೆಯ ದಿನವೇ ಪ್ರವೀಣ್ ಸ್ವಾಮಿ ಎಂಬ ವರದಿಗಾರ ಬರೆದ ‘‘ಜನಪ್ರಿಯ ಇಸ್ಲಾಂ ವಿರುದ್ಧ ಸಮರ’’ ಎಂಬ ಲೇಖನವೊಂದನ್ನು ‘ದಿ ಹಿಂದೂ’ ಪತ್ರಿಕೆ ಪ್ರಕಟಿಸಿತು. ಅಜ್ಮೀರ್ ದರ್ಗಾ, ಮಕ್ಕಾ ಮಸೀದಿ ಹಾಗೂ ಮಾಲೆಗಾಂವ್‌ನ ಸೂಫಿ ಮಂದಿರದ ಮೇಲೆ ನಡೆದ ಸ್ಫೋಟಗಳು ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಜನಪ್ರಿಯವಾಗಿರುವ ಸೂಫಿ ಇಸ್ಲಾಂ ವಿರುದ್ಧ ಕರ್ಮಠ ಮುಸ್ಲಿಂ ತೀವ್ರವಾದಿಗಳು ನಡೆಸಿದ ಆಕ್ರಮಣವೆಂದು ಲೇಖನ ಪ್ರತಿಪಾದಿಸಿತ್ತು. ಆದರೆ ಈ ಎರಡೂ ಲೇಖನಗಳ ಪೊಳ್ಳುತನ ಈಗ ಬಯಲಾಗಿದೆ.ಇಲ್ಲಿ ನಿಜವಾಗಿಯೂ ನಡೆದಿರುವುದು ಭಾರತದ ಧಾರ್ಮಿಕ ಸಾಮರಸ್ಯದ ವಿರುದ್ಧ ಉಗ್ರ ಹಿಂದುತ್ವವಾದಿಗಳ ದಾಳಿಯಾಗಿದೆ. ಅಜ್ಮೀರ್ ಶರೀಫ್ ದರ್ಗಾಕ್ಕೆ ಹಿಂದೂಗಳು ಕೂಡಾ ಶ್ರದ್ಧಾಭಕ್ತಿಯಿಂದ ಭೇಟಿ ನೀಡುತ್ತಿರುವುದು ಕೇಸರಿ ಉಗ್ರರ ಹೊಟ್ಟೆಯುರಿಸಿದೆ. ‘‘ಅಜ್ಮೀರ್‌ನಲ್ಲಿ ಬಾಂಬ್ ಸ್ಫೋಟಿಸಿದಲ್ಲಿ ಅಲ್ಲಿಗೆ ಹಿಂದುಗಳು ಭೇಟಿ ನೀಡಲು ಹಿಂಜರಿಯುವರು ಎಂಬ ತರ್ಕ ನಮ್ಮದಾಗಿತ್ತು’’ ಎಂದು ಆಸೀಮಾನಂದ ಮ್ಯಾಜಿಸ್ಟ್ರೇಟರ ಮುಂದೆ ನೀಡಿದ ತಪ್ಪೊಪ್ಪಿಗೆಯಲ್ಲಿ ತಿಳಿಸಿದ್ದಾನೆ.

ತೀರಾ ಇತ್ತೀಚೆಗೆ, ವಾರಣಾಸಿಯಲ್ಲಿ ನಡೆದ ಬಾಂಬ್ ಸ್ಫೋಟದ ಸಂದರ್ಭದಲ್ಲೂ ಮಾಧ್ಯಮಗಳು ಪುಂಖಾನುಪುಂಖ ಲೇಖನ ಮಾಲೆಗಳನ್ನು ಹರಿಸಿದವು. ಬೇಹುಗಾರಿಕಾ ಸಂಸ್ಥೆಗಳ ಮಾಹಿತಿಯನ್ನಾಧರಿಸಿದ ಈ ಲೇಖನಗಳಲ್ಲಿ ಸ್ಫೋಟ ನಡೆಸಿದ ಇಂಡಿಯನ್ ಮುಜಾಹಿದೀನ್ ಉಗ್ರರು, ದೇಶದಿಂದ ಪರಾರಿಯಾಗಿದ್ದು ವಿದೇಶಗಳಲ್ಲಿ ತಲೆಮರಿಸಿಕೊಂಡಿದ್ದಾರೆ. ಆದರೆ ಅವರ ಸಹಚರರು ಆಝಂಘರ್ ಹಾಗೂ ಭಟ್ಕಳ ಮತ್ತಿತರ ನಗರಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆಂದು ಈ ಮಾಧ್ಯಮಗಳು ಸುಳಿವು ಕೂಡಾ ನೀಡಿದ್ದವು!.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ