ಶುಕ್ರವಾರ, ಜನವರಿ 21, 2011

ರಾಷ್ಟ್ರಧ್ವಜದ ದುರುಪಯೋಗಕ್ಕೆ ಅವಕಾಶ ಬೇಡ






ಅನಗತ್ಯ ವಿವಾದಗಳನ್ನು ಕೆರಳಿಸಿ ತಿಳಿ ನೀರಿನಲ್ಲಿ ಕಲ್ಲೆಸೆದು ರಾಡಿ ಎಬ್ಬಿಸುವುದು ಬಿಜೆಪಿ ಸೇರಿದಂತೆ ಸಂಘಪರಿವಾರ ಸಂಘಟನೆಗಳ ಜಾಯಮಾನ. ಅಯೋಧ್ಯೆ ಯಿಂದ ಹಿಡಿದು ಬಾಬಾಬುಡಾನ್‌ಗಿರಿ ವರೆಗೆ ಅವು ನಡೆಸುತ್ತಾ ಬಂದುದು ಇಂತಹ ದುಸ್ಸಾಹಸವನ್ನೇ. ತನ್ನ ದುಷ್ಟ ಕೋಮುವಾದಿ ರಾಜಕೀಯ ಉದ್ದೇಶಗಳಿಗಾಗಿ ಅದು ರಾಷ್ಟ್ರೀಯ ಸಂಕೇತಗಳನ್ನು ಬಳಸಿಕೊಳ್ಳುತ್ತಾ ಬಂದಿದೆ. ಭಾರತದ ರಾಷ್ಟ್ರೀಯತೆಯ ಗುತ್ತಿಗೆ ಹಿಡಿದಂತೆ ಅದು ಉದ್ಧಟತನದಿಂದ ವರ್ತಿಸುತ್ತಿದೆ. ಇದೀಗ ಅದರ ಕಣ್ಣು ಕಾಶ್ಮೀರದ ಲಾಲ್‌ಚೌಕದ ಮೇಲೆ ಬಿದ್ದಿದೆ. ಗಣರಾಜ್ಯೋತ್ಸವದ ದಿನ ಅಲ್ಲಿ ರಾಷ್ಟ್ರಧ್ಜಜ ಹಾರಿಸುವ ಹುನ್ನಾರ ನಡೆಸಿದೆ.

ಈ ಹಿಂದೆ ಅಡ್ವಾಣಿಯವರು ಆಯೋಧ್ಯೆಗೆ ರಥಯಾತ್ರೆ ನಡೆಸಿ ಅಲ್ಲಿ ಅನಾಹುತಕ್ಕೆ ಕಾರಣರಾದರು. ಆಗ ಸಹೋದ್ಯೋಗಿ ಮುರಳಿ ಮನೋಹರ್ ಜೋಷಿ ಕಾಶ್ಮೀರದ ಲಾಲ್‌ಚೌಕದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಸಾಹಸ ನಡೆಸಿದರು. ಕೇಂದ್ರದಲ್ಲಿ ಅಧಿಕಾರ ದೊರೆತ ನಂತರ ಈ ಕಾರ್ಯಕ್ರಮಗಳನ್ನು ಕೈಬಿಟ್ಟಿದ್ದ ಬಿಜೆಪಿ ಈ ವರ್ಷ ಮತ್ತೆ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮುಂಬರುವ ಲೋಕಾಸಭಾ ಮತ್ತು ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಹಗರಣಗಳಿಂದ ಕಳೆದುಹೋಗುತ್ತಿರುವ ತನ್ನ ಮಾನವನ್ನು ಮುಚ್ಚಿಕೊಳ್ಳಲು ರಾಷ್ಟ್ರಧ್ವಜವನ್ನು ಹಾರಿಸುವ ಹುನ್ನಾರ ನಡೆಸಿದೆ. ಇದರಿಂದ ಕಾಶ್ಮೀರದಲ್ಲಿ ಉರಿಯುವ ಬೆಂಕಿಗೆ ತೈಲ ಸುರಿದಂತಾಗಿದೆ.

ಭಾರತದ ಅವಿಭಾಜ ಅಂಗವಾಗಿರುವ ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸಲು ಯಾರದೇ ಅಭ್ಯಂತರವಿಲ್ಲ. ಅಲ್ಲಿನ ಚುನಾಯಿತ ಸರಕಾರವೇ ಪ್ರತಿ ವರ್ಷ ಆ ಕೆಲಸವನ್ನು ಮಾಡುತ್ತಿದೆ. ಈ ವರ್ಷದ ಗಣರಾಜ್ಯೋತ್ಸವದಂದು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಧ್ವಜಾರೋಹಣ ಮಾಡುತ್ತಾರೆ. ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಉಸಾಬರಿ ಬಿಜೆಪಿಗೆ ಬೇಕಾಗಿರಲಿಲ್ಲ. ಅದಕ್ಕೆ ಬೇಕಾಗಿರುವುದು ಕೋಮು ಕಿಡಿ ಹಚ್ಚುವುದಾಗಿದೆ. ಭಾರತದ ರಾಷ್ಟ್ರಧ್ವಜದ ಮೇಲೆ ಸಂಘಪರಿವಾರಕ್ಕೆ ಎಷ್ಟು ನಿಷ್ಠೆ ಮತ್ತು ಗೌರವವಿದೆ ಎಂಬುದು ಅದರ ಐದು ದಶಕಗಳ ನಡೆಯಿಂದಲೇ ಗೊತ್ತಾಗುತ್ತದೆ.

ಭಾರತದ ಸ್ವಾತಂತ್ರವನ್ನು ಮತ್ತು ರಾಷ್ಟ್ರಧ್ವಜವನ್ನು ಭಾರತೀಯರ ಹೆಮ್ಮೆಯ ಸಂಕೇತವೆಂದು ಆರೆಸ್ಸೆಸ್ ಎಂದೂ ಒಪ್ಪಿಕೊಂಡಿಲ್ಲ. ಬಿಜೆಪಿಯ ಆತ್ಮವಾಗಿರುವ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿಯ ಮೇಲೆ ಹಾರುತ್ತಿರುವುದು ರಾಷ್ಟ್ರಧ್ವಜವಲ್ಲ, ಅದು ಭಗವಾಧ್ವಜ. ಸ್ವಾತಂತ್ರ ಮತ್ತು ಗಣರಾಜ್ಯೋತ್ಸವ ದಿನಗಳನ್ನು ಈ ಪರಿವಾರ ಎಂದೂ ಸಂಭ್ರಮದಿಂದ ಆಚರಿಸಿಲ್ಲ. ಆದರೆ ಸಾಮಾಜಿಕ ಶಾಂತಿಯನ್ನು ಕದಡಲು ಈ ರಾಷ್ಟ್ರೀಯ ಸಂಕೇತಗಳನ್ನು ಬಳಸಿಕೊಳ್ಳುತ್ತಾ ಬಂದಿದೆ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರೋತ್ಸವದ ದಿನ ರಾಷ್ಟ್ರಧ್ವಜ ಹಾರಿಸುವ ಪ್ರಚೋದನಕಾರಿ ಕಾರ್ಯಕ್ರಮವನ್ನು ಸಂಘಪರಿವಾರ 90ರ ದಶಕದಲ್ಲಿ ಹಾಕಿಕೊಂಡಿತು. ಇದರಿಂದ ಹುಬ್ಬಳ್ಳಿ ಮತ್ತು ಧಾರವಾಡ ಮಾತ್ರವಲ್ಲ ಇಡೀ ಉತ್ತರ ಕರ್ನಾಟಕದಲ್ಲಿ ಉದ್ರಿಕ್ತ ವಾತಾವರಣ ಉಂಟಾಯಿತು. ಇವರ ರಾಜಕೀಯ ಸ್ವಾರ್ಥ ಸಾಧನೆಗಾಗಿ ಐವರು ಮುಗ್ಧ ನಾಗರಿಕರು ಗುಂಡಿಗೆ ಬಲಿಯಾಗ ಬೇಕಾಯಿತು. ಇದರಿಂದ ಲಾಭ ಪಡೆದುದು ಬಿಜೆಪಿ. ಆ ಪಕ್ಷದ ಪ್ರಹ್ಲಾದ್ ಜೋಷಿ ಲೋಕಸಭೆಗೆ ಮತ್ತು ಜಗದೀಶ್ ಶೆಟ್ಟರ್ ವಿಧಾನಸಭೆಗೆ ಆರಿಸಿ ಬಂದರು
.

ಈ ರೀತಿ ಸ್ವಾರ್ಥ ಸಾಧನೆಗೆ ರಾಷ್ಟ್ರಧ್ವಜವನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಯಾವುದೇ ಸಂಘಟನೆಗೆ ಅವಕಾಶ ನೀಡಬಾರದು. ಈ ಸಂಬಂಧದಲ್ಲಿ ಸುಪ್ರೀಂ ಕೋರ್ಟ್ 2004ರ ಸೆಪ್ಟಂಬರ್ 13ರಂದು ನೀಡಿದ ತೀರ್ಪಿನ ಪ್ರಕಾರ ರಾಷ್ಟ್ರಧ್ವಜದ ಹೆಸರಿನಲ್ಲಿ ರಾಜಕೀಯ ಲಾಭ ಮಾಡಿಕೊಳ್ಳಲು ಯಾರಿಗೂ ಅವಕಾಶ ಮಾಡಿ ಕೊಡಬಾರದು. ಕೇಂದ್ರ ಸರಕಾರ ಇಂತಹ ಪ್ರಚೋದನಕಾರಿ ಕಾರ್ಯಕ್ರಮ ಗಳನ್ನು ನಿಷೇಧಿಸಬೇಕಾಗಿದೆ. ಸ್ವಾತಂತ್ರೋತ್ಸವ ಮತ್ತು ಗಣರಾಜ್ಯೋತ್ಸವ ದಿನಗಳು ಭಾರತದ ನೂರು ಕೋಟಿ ಜನರ ಹೆಮ್ಮೆಯ ದಿನಗಳಾಗಿವೆ.

ಈ ದಿನಗಳನ್ನು ಯಾರು ಬೇಕಾದರೂ ಸಂಭ್ರಮದಿಂದ ಆಚರಿಸಬಹುದು. ಆದರೆ ಉದ್ದೇಶ ಪೂರ್ವಕವಾಗಿ ಅದೇ ದಿನದಂದು ಹಿಂಸೆಯನ್ನುಂಟು ಮಾಡುವ ಕಾರ್ಯಕ್ರಮ ನಡೆಸಲು ಯಾರಿಗೂ ಅವಕಾಶ ನೀಡಬಾರದು. ಜನರ ಬದುಕಿಗೆ ಕೊಳ್ಳಿ ಇಡಲು ರಾಷ್ಟ್ರಧ್ವಜವನ್ನು ಬಳಸಿಕೊಳ್ಳುವುದು ಹೇಯ ಅಪರಾಧವಾಗಿದೆ. ಬಿಜೆಪಿಯ ರಾಷ್ಟ್ರಪ್ರೇಮ ಎಂತಹದು ಎಂಬುದು ಗೊತ್ತಿರುವ ಜನ ಅದರ ವ್ಯರ್ಥ ಪ್ರಹಸನಕ್ಕೆ ಮೋಸ ಹೋಗುವುದಿಲ್ಲ.

ಬಿಜೆಪಿಯ ಕೇಂದ್ರ ನಾಯಕರ ನೀರಾ ರಾಡಿಯಾ ಹಗರಣ ಹಾಗೂ ಕರ್ನಾಟಕದ ಬಿಜೆಪಿ ಸರಕಾರದ ಭೂ ಹಗರಣ ಮತ್ತು ಗಣಿ ಹಗರಣಗಳನ್ನು ಮುಚ್ಚಿಕೊಳ್ಳಲು ಹಾಗೂ ಮತ್ತೆ ಅಧಿಕಾರಕ್ಕೆ ಬರಲು ಕಾಶ್ಮೀರದ ಲಾಲ್ ಚೌಕದಲ್ಲಿ ಧ್ವಜಾರೋಹಣದ ವಂಚನೆಯ ಪ್ರಹಸನವನ್ನು ಬಿಜೆಪಿ ನಡೆಸಿದೆ. ಈ ರಾಷ್ಟ್ರ ಘಾತಕ, ವಂಚಕ ಶಕ್ತಿಗಳಿಂದ ರಾಷ್ಟ್ರಧ್ವಜದ ರಕ್ಷಣೆ ತುರ್ತು ಅಗತ್ಯವಾಗಿದೆ.
ಸಂಪಾದಕೀಯ ವರ್ತಾ ಭಾರತಿ ಶನಿವಾರ , 22 ಜನವರಿ 2011

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ