ಗುರುವಾರ, ಏಪ್ರಿಲ್ 14, 2011

‘‘ಬನ್ನಿ ಸಾರ್ ಬನ್ನಿ.. ಅಂಬೇಡ್ಕರ್‌ರ ಜೈ ಭೀಮ್ ವಂದನೆಗಳು.. ಬಿರಿಯಾನಿ ತಿನ್ನಿ.. ಸಂವಿಧಾನದ ಮೇಲೆ ನಂಬಿಕೆಯುಳ್ಳ ಜನರಿಗೆಲ್ಲ ಎಪ್ರಿಲ್ 14 ವಿಶೇಷವಾದ ದಿನ

‘‘ಬನ್ನಿ ಸಾರ್ ಬನ್ನಿ.. ಅಂಬೇಡ್ಕರ್‌ರ ಜೈ ಭೀಮ್ ವಂದನೆಗಳು.. ಬಿರಿಯಾನಿ ತಿನ್ನಿ.. ಸಂವಿಧಾನದ ಮೇಲೆ ನಂಬಿಕೆಯುಳ್ಳ ಜನರಿಗೆಲ್ಲ ಎಪ್ರಿಲ್ 14 ವಿಶೇಷವಾದ ದಿನ. ನಿಮ್ಮ ಮನೆಯಲ್ಲಿ ಹಬ್ಬ ಆಚರಣೆ ಮಾಡಿ, ಸಂವಿಧಾನ ಶಿಲ್ಪಿಯ ಜನ್ಮದಿನ ಇದು ಬನ್ನಿ...’’ ಹೀಗೆಂದು ದಸಂಸ ಕಾರ್ಯಕರ್ತರು ಸಾರ್ವಜನಿಕರನ್ನು ಕರೆದು ಅವರ ಕೈಗೊಂದು ಬಿಸಿ-ಬಿಸಿ ದನದ ಮಾಂಸದ ಬಿರಿಯಾನಿ ಪ್ಯಾಕೆಟ್ ನೀಡುತ್ತಿದ್ದುದು ನಿಜಕ್ಕೂ ಅಚ್ಚರಿ. ಇದು ಬೆಂಗಳೂರಿನ ಪುರಭವನದ ಮುಂಭಾಗದಲ್ಲಿ ಗುರುವಾರ ಕಂಡುಬಂದ ದೃಶ್ಯ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರ ಜಯಂತಿ ಯನ್ನು ವಿಚಾರ ಸಂಕಿರಣ, ಸಂವಾದ, ಜನಾಂದೋಲನ, ಪ್ರತಿಭಟನೆ, ಮೆರವಣಿಗೆ, ಜಾಥಾ, ಹಾರ-ತುರಾಯಿ, ಪುಷ್ಪ ನಮನದೊಂದಿಗೆ ಆಚರಿಸುವುದನ್ನು ಕಂಡಿದ್ದೇವೆ.
ಆದರೆ, ಎನ್.ಮೂರ್ತಿ ನೇತೃತ್ವದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಬಿಜೆಪಿ ಸರಕಾರ ಅಂಬೇಡ್ಕರ್‌ರನ್ನು ದೇವಮಾನವನ ನ್ನಾಗಿಸಿ ಜನಿವಾರ ತೊಡಿಸಲು ಹೊರಟಿದೆ ಎಂದು ಆರೋಪಿಸಿ, ಮಾಂಸ ಮಾರಾಟ ನಿಷೇಧ ಖಂಡಿಸಿ ದನದ ಮಾಂಸದ ಬಿರಿಯಾನಿ ತಿಂದು ವಿಶಿಷ್ಟ ರೀತಿಯಲ್ಲಿ ಆಚರಿಸಿತು.
 ನೂರಾರು ಕಾರ್ಯಕತರು ಪುರಭವ ನದ ಮುಂಭಾಗದಲ್ಲಿ ಒಂದು ಸಾವಿರಕ್ಕೂ ಹೆಚ್ಚು ದನದ ಮಾಂಸದ ಬಿರಿಯಾನಿ ಪ್ಯಾಕೆಟ್‌ಗಳನ್ನು ಹಂಚಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ರಾಜ್ಯ ಬಿಜೆಪಿ ಸರಕಾರದ ಅಂಬೇಡ್ಕರ್ ತತ್ತ್ವಾದರ್ಶ ಹಾಗೂ ದಲಿತ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆ ಕೂಗಿದರು. ಗೋಹತ್ಯೆ ನಿಷೇಧ ಮಸೂದೆ ಜಾರಿಗೆ ತರುವ ಮೂಲಕ ದಲಿತರು ತಿನ್ನುವ ಆಹಾರದ ಹಕ್ಕನ್ನು ಮನುವಾದಿ ಸರಕಾರ ಕಸಿದುಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ರಾಜ್ಯಾಧ್ಯಕ್ಷ ಎನ್.ಮೂರ್ತಿ, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು ತಿನ್ನುವ ಮಾಂಸಾ ಹಾರವನ್ನೇ ನಿಷೇಧಿಸಿದ ಬಿಜೆಪಿ ಸರಕಾರಕ್ಕೆ ಅಂಬೇಡ್ಕರ್ ಜನ್ಮ ದಿನವನ್ನು ಆಚರಣೆ ಮಾಡುವ ನೈತಿಕತೆ ಇಲ್ಲ ಎಂದು ಆಕ್ರೋಶದಿಂದ ನುಡಿದರು.
ಅಂಬೇಡ್ಕರ್‌ರನ್ನು ದೇವಮಾನವ ನನ್ನಾಗಿಸಿ ಜನಿವಾರ ತೊಡಿಸಲು ಬಿಜೆಪಿ ಮುಂದಾಗಿದ್ದು, ಅವರ ವಿಚಾರಗಳಿಗೆ ಮನುವಾದದ ಬಣ್ಣ ಲೇಪನ ಮಾಡುತ್ತಿದೆ ಎಂದು ಕಿಡಿಗಾರಿದ ಮೂರ್ತಿ, ಹಿಂದೂ ಧರ್ಮದ ವಿರುದ್ಧವಿದ್ದ ಅಂಬೇಡ್ಕರ್‌ರ ಹೆಸರಿನಲ್ಲಿ ಹಿಂದುತ್ವದ ವೈಭವೀಕರಣ ಮಾಡಲಾಗುತ್ತಿದೆ ಎಂದು ಆಪಾದಿಸಿದರು. ಎಪ್ರಿಲ್ 14 ಅಂಬೇಡ್ಕರ್ ಜಯಂತಿ ಮತ್ತು ಡಿಸೆಂಬರ್ 6 ಅವರ ಪರಿನಿರ್ವಾಣ ದಿನ ದಲಿತರಿಗೆ ಪವಿತ್ರ. ಆದರೆ, ಬಿಜೆಪಿ ಸರಕಾರ ಅಂಬೇಡ್ಕರ್ ರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಲು ಹೊರಟಿದೆ ಎಂದು ಆರೋಪಿಸಿದ ಅವರು, ಅಂಬೇಡ್ಕರ್ ಜನ್ಮದಿನಕ್ಕೆ ದಲಿತರಿಗೆ ಆಹ್ವಾನ ನೀಡಿಲ್ಲ ಎಂದು ದೂರಿದರು. ಆನಂತರ ಪುರಭವನದಿಂದ ವಿಧಾನಸೌಧದ ವರೆಗೆ ದ್ವಿಚಕ್ರ ವಾಹನ ರ್ಯಾಲಿ ನಡೆಸಲಾಯಿತು. ದಲಿತ ಮುಖಂಡರಾದ ನರಸಿಂಹಮೂರ್ತಿ, ಸುಬ್ರಹ್ಮಣ್ಯ ಹಾಗೂ ಶಂಕರ ಬಾಬು ಮತ್ತಿತರರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ