ಬುಧವಾರ, ಏಪ್ರಿಲ್ 13, 2011

ಜೆಡಿಎಸ್ ಕಪಟ ಜಾತ್ಯತೀತ ಪಕ್ಷ: ಅಬ್ದುಲ್ ಮಜೀದ್ ಕೊಡ್ಲಿಪೇಟೆ

ಬೆಂಗಳೂರು: ಜೆಡಿಎಸ್ ಒಂದು ಕಪಟ ಜಾತ್ಯತೀತ ಪಕ್ಷವಾಗಿದೆ. ಇದನ್ನು ಜಾತ್ಯಾತೀತ ಪಕ್ಷವೆಂದು ಕರೆದುಕೊಳ್ಳುವ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಢೋಂಗಿ ಜಾತ್ಯತೀತವಾದಿಗಳು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಕಿಡಿಗಾರಿದರು. ಅವರು ಬೆಂಗಳೂರಿನ ಕ್ವೀನ್ಸ್ ರೋಡ್‌ನಲ್ಲಿರುವ ದಾರುಸ್ಸಲಾಮ್ ಹಾಲ್‌ನಲ್ಲಿ ಪಕ್ಷದ ರಾಜ್ಯ ಮಟ್ಟದ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು.

ಜಾತ್ಯತೀತವೆಂದು ಕರೆದುಕೊಳ್ಳುವ ಜೆಡಿಎಸ್ ಕೋಮುವಾದಿ ಬಿಜೆಪಿಯೊಂದಿಗೆ ಸೇರಿ ಆಡಳಿತ ನಡೆಸಿದ್ದು ಇವರ ಮೋಸದಾಟಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಅಧಿಕಾರಕ್ಕೆ ಬರಲು ನೇರ ಕಾರಣ ಜೆಡಿಎಸ್ ಆಗಿದೆ. ಹಿಂದೊಮ್ಮೆ ಪತ್ರಕರ್ತರು ಜಾತ್ಯತೀತತೆಯ ಬಗ್ಗೆ ಕೇಳಿದ್ದಕ್ಕೆ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ತನಗೆ ಜಾತ್ಯತೀತ ಪದದ ಅರ್ಥ ಗೊತ್ತಿಲ್ಲ ಎಂದಿದ್ದರು. ಇಂತಹ ಮುಖ್ಯಮಂತ್ರಿ ಈ ರಾಜ್ಯವನ್ನು ಆಳಿದ್ದು ಕರ್ನಾಟಕದ ದುರಂತವಾಗಿದೆ ಎಂದು ಅವರು ಗುಡುಗಿದರು.
ಬಿಜೆಪಿಯೊಂದಿಗೆ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಪ್ರಧಾನ ಮಂತ್ರಿ ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ಕರ್ನಾಟಕದ ಮದರಸಗಳಲ್ಲಿ ಭಯೋತ್ಪಾದನೆ ನಡೆಯುತ್ತಿದೆಯೆಂದು ಹೇಳಿಕೆ ನೀಡುವ ಮೂಲಕ ಕುಮಾರಸ್ವಾಮಿ ಕೋಮುವಾದದಲ್ಲಿ ತಾನೇನು ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಅವರು ಟೀಕಿಸಿದರು.
ಜೆಡಿಎಸ್‌ನ ವರಿಷ್ಠ ದೇವೇಗೌಡ ತಾನು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಆಗಾಗ್ಗೆ ಹೇಳುತ್ತಿರುತ್ತಾರೆ. ಅವರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವ ಅಗತ್ಯವಿಲ್ಲ. ಮುಸಲ್ಮಾನರ ಬಗ್ಗೆ ನಿಜವಾದ ಕಾಳಜಿಯಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ 50 ಮುಸ್ಲಿಮರಿಗೆ ಜೆಡಿಎಸ್‌ನಿಂದ ಟಿಕೆಟ್ ನೀಡಲಿ ಮತ್ತು ಹಾಸನ ನಗರದಲ್ಲಿ ಮುಸ್ಲಿಮ್ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಲಿ ಎಂದು ಅವರು ಸವಾಲೆಸೆದರು.
ಮುಸಲ್ಮಾನರ ಪರ ಎನ್ನುವ ಜೆಡಿಎಸ್ ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯ ವೇಳೆ ಹಾಸನ ಜಿಲ್ಲೆಯ 40 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಒಬ್ಬ ಮುಸ್ಲಿಮ್ ಅಭ್ಯರ್ಥಿಗೂ ಟಿಕೆಟ್ ನೀಡಿಲ್ಲ. ಇದು ಇವರ ಢೋಂಗಿ ಜಾತ್ಯತೀತವಾದಕ್ಕೆ ಸಾಕ್ಷಿ. ಮುಸ್ಲಿಮರ ಮತ ಪಡೆಯುವುದಕ್ಕಾಗಿ ಜಾತ್ಯತೀತ ಮುಖವಾಡವನ್ನು ಹಾಕಿಕೊಂಡಿರುವ ಇಂತಹ ಎಲ್ಲಾ ರಾಜಕಾರಣಿಗಳನ್ನೂ ತಿರಸ್ಕರಿಸಬೇಕೆಂದು ಅವರು ಕರೆಯಿತ್ತರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮಾತನಾಡಿ, ಇಷ್ಟರ ತನಕ ನಾವು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗಳ ಬಾಡಿಗೆ ಮನೆಗಳಲ್ಲಿದ್ದೆವು. ಈ ಬಾಡಿಗೆ ಮನೆಯ ಯಜಮಾನರು ಬಾಡಿಗೆದಾರರನ್ನು ಯಾವಾಗಲಾದರೂ ಅಟ್ಟುವ ಪರಿಸ್ಥಿತಿಯಿತ್ತು. ಇದೀಗ ಶೋಷಿತ, ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ವರ್ಗದವರು ಸೇರಿಕೊಂಡು ಎಸ್‌ಡಿಪಿಐ ಎಂಬ ಸ್ವಂತ ಮನೆಯೊಂದನ್ನು ಕಟ್ಟಿಕೊಂಡಿದ್ದೇವೆ. ಈ ಪಕ್ಷದಲ್ಲಿ ಜನರೇ ಪ್ರಭುಗಳು. ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಈ ಪಕ್ಷವು ಸಂವಿಧಾನದ ಜಾರಿಗೆ ಬದ್ಧವಾಗಿದೆ ಎಂದರು.
ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ ಆವಾಝ್ ಶರೀಫ್ ಮಾತನಾಡಿ, ಪಕ್ಷ ಪ್ರಾರಂಭವಾದ ಹಿನ್ನೆಲೆ, ಪಕ್ಷ ನಡೆಸಿಕೊಂಡು ಬಂದ ಹೋರಾಟ ಮತ್ತು ಚುನಾವಣಾ ಕಣದಲ್ಲಿ ಪಕ್ಷ ಮಾಡಿದ ಸಾಧನೆ ಇತ್ಯಾದಿಗಳನ್ನು ವಿವರಿಸಿದರು.
ರಾಜಕೀಯದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡುತ್ತಾ ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷೆ ಮತ್ತು ಬಿಬಿಎಂಪಿ ಕಾರ್ಪೊರೇಟರ್ ಪ್ರೊ ನಾಝ್ನೀನ್ ಬೇಗಂ,  ರಾಜಕೀಯ ಆಗುಹೋಗುಗಳಲ್ಲಿ ಮಹಿಳೆಯರು ಸಕ್ರಿಯವಾಗಬೇಕು. ಸರಕಾರ ಮಹಿಳೆಯರಿಗಾಗಿ ಮೀಸಲಿಟ್ಟ ಸ್ಥಾನಗಳ ಪ್ರಯೋಜನವನ್ನು ಕೇವಲ ಉನ್ನತ ಜಾತಿಗಳ ಮಹಿಳೆಯರು ಪಡೆಯುವಂತಾಗಿದೆ. ಆದ್ದರಿಂದ ಬಡ ಜನರ, ಶೋಷಿತ ಗ್ರಾಮೀಣ ಪ್ರದೇಶಗಳ ಮಹಿಳೆಯರ ನೈಜ ಸಮಸ್ಯೆಗಳ ಅರಿವಿರುವ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮಹಿಳಾ ಪ್ರತಿನಿಧಿಗಳು ಸ್ಥಳೀಯ ಸಂಸ್ಥೆಗಳಲ್ಲಿ, ವಿಧಾನಸಭೆಗಳಲ್ಲಿ, ಪಾರ್ಲಿಮೆಂಟ್‌ನಲ್ಲಿ ಪ್ರಾತನಿಧ್ಯ ಪಡೆಯಬೇಕು ಎಂದರು.
ಎಸ್‌ಡಿಪಿ ರಾಜ್ಯ ಕಾರ್ಯದರ್ಶಿ ಹೇಮಲತಾ ಮಾತನಾಡಿ ಎಸ್‌ಡಿಪಿಐ ನಿಜವಾದ ಜಾತ್ಯತೀತ ಪಕ್ಷವಾಗಿದೆ. ಇಲ್ಲಿ ಮಹಿಳೆಯರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು ವಿವಿಧ ಸೆಲ್‌ಗಳಾಗಿ ವಿಂಗಡಿಸದೆ, ಅಧಿಕಾರದಲ್ಲಿ ಇವರಿಗೆ ಸಮಾನ ಅವಕಾಶವನ್ನು ನೀಡಲಾಗುತ್ತದೆ ಎಂದರು.
ಸಿರಾಜ್, ಅಫ್ಸರ್ ಪಾಶ, ಬೆಂಗಳೂರು ಜಿಲ್ಲಾಧ್ಯಕ್ಷ ಇರ್ಫಾನ್ ಇಬ್ರಾಹೀಂ ಮತ್ತು ಜಿಲ್ಲೆಯ ಇತರ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
SDPI membership campaign in bangalore
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ