ಗುರುವಾರ, ಜನವರಿ 06, 2011

‘ನಮ್ಮನ್ನು ನಕ್ಸಲ್ ಮಾಡಬೇಡಿ’ ಸೆಝ್ ನಿರ್ವಸಿತರ ಎಚ್ಚರಿಕೆ ಉದ್ಯೋಗ ಭರವಸೆ ನೀಡಿ ವಂಚನೆ ವಿರುದ್ದ ಪ್ರತಿಭಟನೆ

  • ಪ್ರತಿಭಟನೆ ನಡೆಯುತ್ತಿದ್ದಾಗ ಮಾಧ್ಯಮದವರನ್ನು ಒಳ ಪ್ರವೇಶಿಸಲು ಬಿಟ್ಟದ್ದಕ್ಕೆ ಕಚೇರಿ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ಕೇಳಿಸಿಕೊಂಡ ಅಧಿಕಾರಿಯೊಬ್ಬ ಮಾಧ್ಯಮದವರು ಇರಲಿ ಅವರನ್ನು ನಾವು ಸಮಾಧಾನಪಡಿಸಿ ವರದಿ ನಮಗೆ ಬೇಕಾದಂತೆ ಬರೆಸೋಣ ಎಂಬ ಮಾತು ಕೇಳಿಬಂತು.
ಮಂಗಳೂರು: ಎಕ್ರೆಗೆ ಎಂಟು ಲಕ್ಷ, ತಾತ್ಕಾಲಿಕವಾಗಿ ಬಾಡಿಗೆ ಮನೆ ಮಾಡುವವರಿಗೆ ಬಾಡಿಗೆ ಮೊತ್ತ, ೧೫ ಸಾವಿರ ವೇತನ ಸಿಗುವ ಉದ್ಯೋಗ ಆರು ತಿಂಗಳೊಳಗೆ ನೀಡುವುದು... ಹೀಗೆ ಸಾಲು ಸಾಲು ಭರವಸೆ ನೀಡಿದ್ದ ಎಂಎಸ್‌ಇಝಡ್ ಇದೀಗ ತಮಗೆ ವಂಚಿಸುತ್ತಿದೆ ಎಂದು ಆರೋಪಿಸಿದ ನಿರ್ವಸಿತರು ಎಂಎಸ್‌ಇಝಡ್ ಕಚೇರಿಗೆ ಮುತ್ತಿಗೆ ಹಾಕಿ, ನಮ್ಮನ್ನು ನಕ್ಸಲ್ ಮಾಡಬೇಡಿ ಎಂಬ ಎಚ್ಚರಿಕೆ ನೀಡಿದ ಘಟನೆ ನಿನ್ನೆ ನಡೆದಿದೆ.
ನಿರ್ವಸಿತರ ಪ್ರತಿಭಟನೆಗೆ ಅಂಜಿದ ಎಂಎಸ್‌ಇಝಡ್ ಅಧಿಕಾರಿಗಳು ಸ್ಥಳಕ್ಕೆ ಪೊಲೀಸರನ್ನು ಕರೆಸಿಕೊಂಡಿದ್ದು, ಇದರಿಂದ ಆಕ್ರೋಶಗೊಂಡ ನಿರ್ವಸಿ ತರು ನಾವು ಉಗ್ರರಲ್ಲ ನಿಮ್ಮ ಮಾತು ನಂಬಿ ಭೂಮಿ ಕೊಟ್ಟ ಅಮಾಯಕರು. ನಮಗೆ ಕೊಡಬೇಕಾದುದನ್ನು ಕೊಡಿ ಎಂದು ಕೇಳುತ್ತಿರುವವರು. ನಮ್ಮ ಕೃಷಿ ಭೂಮಿ ಕಸಿದು ಊಟಕ್ಕೂ ಗತಿ ಇಲ್ಲ ದಂತೆ ಮಾಡಿ ನಮ್ಮ ಗೋರಿ ಮೇಲೆ ಸಿಂಹಾಸನ ಕಟ್ಟಲು ಹೋದ ಉಗ್ರರು ನೀವು ಎಂದು ಪ್ರತಿಭಟನಾಕಾರರು ಟೀಕಿಸಿದರು.
ಎಂಎಸ್‌ಇಝಡ್‌ನ ವಂಚನೆ ಯಿಂದ ರೊಚ್ಚಿಗೆದ್ದಿರುವ ನೂರಾರು ಸಂತ್ರಸ್ತರು ಕಚೇರಿ ಮುಂದೆ ಕುಳಿತು ಘೆರಾವ್ ಹಾಕಿದ್ದು ಒಂದು ಕಡೆ ಯಾದರೆ, ಇನ್ನು ಕೆಲವರು ಕಂಪೆನಿ ತನ್ನ ನಿಲುವು ಪ್ರಕಟಿಸದೆ ತಾವು ಹೋಗುವುದಿಲ್ಲ ಎಂದು ಕಚೇರಿ ಒಳಭಾಗದಲ್ಲೇ ಕುಳಿತ್ತಿದ್ದರು. ಇದು ಪರಿಸ್ಥಿತಿ ಉದ್ರಿಕ್ತವಾಗಲು ಕಾರಣವಾ ಯಿತಾದರೂ, ನಿರ್ವಸಿತರ ಯಾವುದೇ ಪ್ರಶ್ನೆಗೂ ಸಮರ್ಥನೆ ನೀಡಲಾಗದ ಎಂ.ಜಿ. ಪೈ ಕೊನೆಗೂ ಎರಡು ದಿನದ ಗಡುವು ಕೇಳಿದ ಕಾರಣ ಪರಿಸ್ಥಿತಿ ತಿಳಿಯಾಯಿತು.
ಉದ್ದೇಶಿತ ವಿಶೇಷ ಆರ್ಥಿಕ ವಲಯಕ್ಕೆ ಪೆರ್ಮುದೆ, ಕಳವಾರು ಈ ಭಾಗದ ಭೂಮಿಯನ್ನು ಸ್ವಾಧೀನ ಪಡಿಸುವಾಗ ಮನೆಗೊಂದು ಉದ್ಯೋಗ ಅದೂ ಆರು ತಿಂಗಳೊಳಗೆ ನೀಡುವ ಭರವಸೆಯನ್ನು ವಿಶೇಷ ಸವಲತ್ತುಗಳ ಜೊತೆಗೆ ಕಂಪೆನಿ ಪ್ರಕಟಿಸಿತ್ತು.
ಆದರೆ ಜನ ಭೂಮಿ ನೀಡಿದ ಬಳಿಕ ತಗಾದೆ ತೆಗೆದ ಕಂಪೆನಿ, ಉನ್ನತ ವಿದ್ಯಾರ್ಹತೆ ಉಳ್ಳವರಿಗೆ ನೇರ ನೇಮಕಾತಿ ಅಡಿಯಲ್ಲಿ ಉದ್ಯೋಗ ನೀಡುವುದಾಗಿಯೂ ಉಳಿದವರು ವಿವಿಧ ವೃತ್ತಿ ನೈಪುಣ್ಯತೆಗಾಗಿ ಒಂದು ವರುಷದ ತರಬೇತಿಯನ್ನು ಕೆ.ಪಿ.ಟಿ. ಯಲ್ಲಿ ಪಡೆಯಬೇಕೆಂದು ಸೂಚಿಸಿತ್ತು. ಅದಕ್ಕೂ ಸೈ ಎಂದ ಸಂತ್ರಸ್ತರು ತರಬೇತಿಗಾಗಿ ಸೇರಿದ್ದರು. ಒಂದು ವರ್ಷದ ತರಬೇತಿ ಎರಡು ವರ್ಷವಾ ಯಿತು, ಮೂರು ವರ್ಷವಾಯಿತು ಆದರೂ ಉದ್ಯೋಗ ನೀಡಲು ಮನಸ್ಸು ಮಾಡದ ಕಂಪೆನಿ ತರಬೇತಿ ಮುಂದು ವರಿಸುತ್ತಲೇ ಹೋಯಿತು. ಇಷ್ಟರಲ್ಲಿ ಕಂಪೆನಿ ವಂಚಿಸುತ್ತಿದೆ ಎಂದು ಗೊತ್ತಾದಾಗ ಸಂತ್ರಸ್ತರು ಬೀದಿಗಿಳಿ ದರು. ಆಗ ಕಣ್ಣೊರೆಸುವ ನಾಟಕವಾಡಿದ ಎಂಎಸ್‌ಇಝಡ್ ೩೮ ಮಂದಿಗೆ ಉದ್ಯೋಗ ನೀಡಿತು. ಉಳಿದವರಿಗೆ ಸದ್ಯವೇ ಉದ್ಯೋಗ ನೀಡುವ ಭರವಸೆ ನೀಡಿತು. ಆದರೆ ಆ ಸದ್ಯ, ವರುಷ ಕಳೆದರೂ ಬರದಾಗ ಜನ ಜಿಲ್ಲಾಧಿಕಾರಿಯ ಮೊರೆ ಹೋದರು. ಉದ್ಯೋಗ ಭರವಸೆ ನೀಡಿದ ಎಲ್ಲರಿಗೂ ಉದ್ಯೋಗವನ್ನು ನೀಡುವಂತೆ ಜಿಲ್ಲಾಧಿಕಾರಿ ಎಂಎಸ್ ಇಝಡ್‌ಗೆ ಆದೇಶಿಸಿದ್ದರು. ಆದರೆ ಅದಾಗಿ ತಿಂಗಳು ಆರು ಕಳೆದರೂ ಕಂಪೆನಿಯು ಉದ್ಯೋಗ ನೀಡುವ ಗೋಜಿಗೆ ಹೋಗಲಿಲ್ಲ. ಮೂರು ವರುಷ ಕೇವಲ ಒಂದು ಸಾವಿರ ಶಿಷ್ಯ ವೇತನ ನೀಡಿ ತರಬೇತಿ ಪಡೆಯುವಂತೆ ಮಾಡಿ ಈಗ ಅವರತ್ತ ಕಣ್ಣೆತ್ತಿಯೂ ನೋಡದ ಎಂಎಸ್‌ಇಝಡ್, ಕಂಪೆನಿ ಯೊಳಗೆ ಅನ್ಯರಾಜ್ಯವನ್ನು ಸೇರಿಸಿ ಕೊಳ್ಳಲು ಮುಂದಾಗುತ್ತಿರುವುದನ್ನು ಕಂಡು ನಿರ್ವಸಿತರು ಉಗ್ರ ಪ್ರತಿಭಟನೆ ಗಿಳಿದಿದ್ದಾರೆ.
ಬೇರೆ ಬೇರೆ ಕಂಪೆನಿಗಳಿಗೆ ಉದ್ಯೋಗ ಪ್ರಸ್ತಾವಣೆ ಕಳುಹಿಸಿದ್ದೇವೆ. ಅವರಿಂದ ಉತ್ತರ ಬಂದಿಲ್ಲ, ಎಂಆರ್ ಪಿಎಲ್ ನೇಮಕಾತಿ ಬಗ್ಗೆ ಪತ್ರಿಕಾ ಜಾಹೀರಾತು ನೀಡುತ್ತೆ ಆಗ ಹೇಳು ತ್ತೇವೆ, ಲಿಖಿತ ಪರೀಕ್ಷೆ ಬರೆದು ಪಾಸಾಗಿ ಎಂದೆಲ್ಲ ಎ.ಜಿ ಪೈ ಹೇಳ ತೊಡಗಿದಾಗ ನಿರ್ವಸಿತರ ಕೋಪ ನೆತ್ತಿಗೇರಿತು. ನಮಗೆ ಎಂಎಸ್‌ಇಝಡ್ ಉದ್ಯೋಗ ಭರವಸೆ ನೀಡಿದ್ದು ಅವರೇ ನೇಮಕಾತಿ ಮಾಡಬೇಕು, ಬೇರೆ ಕಂಪೆನಿಯನ್ನು ನಾವು ನಂಬುವುದಿಲ್ಲ. ಅದು ನಿಮ್ಮಿಂದ ಆಗುವುದಿಲ್ಲವಾದರೆ ನಮ್ಮ ಜಾಗ ನಮಗೆ ನೀಡಿ ಎಂದು ಪಟ್ಟು ಹಿಡಿದಿದ್ದು, ಎಂಎಸ್‌ಇಝಡ್ ಉನ್ನತ ಅಧಿಕಾರಿಗಳು ಜ. ೭ ರಂದು ತಾವು ಬರುವ ಬಗ್ಗೆ ಭರವಸೆ ನೀಡಿದ ಕಾರಣ ಪ್ರತಿಭಟನೆಯನ್ನು ತಾತ್ಕಾಲಿಕ ವಾಗಿ ಹಿಂಪಡೆದಿದ್ದಾರೆ.
ಅಂದು ಗ್ರೆಗರಿಗೆ ಹೆಗಲು ಕೊಡುತ್ತಿದ್ದರೆ?
ಎಲ್ಲರೂ ಕಂಪೆನಿಯ ಆಮಿಷಕ್ಕೆ ಬಲಿಯಾಗಿ ಭೂಮಿ ನೀಡಿ ಊರು ಬಿಟ್ಟಾಗಲೂ ತಾನೂ ಮಾತ್ರ ಪ್ರಾಣ ಹೋದರೂ ಕಂಪೆನಿಗೆ ಭೂಮಿ ನೀಡಲಾರೆ, ಎಂದು ಪಟ್ಟು ಹಿಡಿದು ಕುಳಿತು, ಕಂಪೆನಿಯಿಂದಾಗಿ ಮನೆ ಮಠ ಕಳೆದುಕೊಂಡು ರಸ್ತೆ ಬದಿ ಅನ್ನ ನೀರು ಬಿಟ್ಟು ಕುಳಿತ ಗ್ರೆಗರಿಗೆ ಅಂದು ಹೆಗಲು ಕೊಟ್ಟ ನಿರ್ವಸಿತರು ಕೆಲವರು ಮಾತ್ರ. ಒಂದು ವೇಳೆ ಅಂದು ಗ್ರೆಗರಿಗೆ ನಿರ್ವಸಿತರೆಲ್ಲ ಹೆಗಲು ಕೊಡುತ್ತಿದ್ದರೆ ಇಂದು ಎಲ್ಲರ ಹೋರಾಟಕ್ಕೂ ಬೆಲೆ ಬರುತ್ತಿತ್ತು, ಕಂಪೆನಿಗೂ ಹೆದರಿಕೆ ಇರುತ್ತಿತ್ತು ಎಂಬ ಮಾತು ಕೇಳಿ ಬಂದಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ