ಅಯೋಧ್ಯೆ: ಡಿ. 6: ಬಾಬರಿ ಮಸೀದಿ ಧ್ವಂಸದ 18ನೆ ವರ್ಷಾಚರಣೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಇಂದು ಶಾಂತವಾಗಿತ್ತು. ವಿವಾದಿತ ತಾಣವಿರುವ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಸರಿ ಸಂಘಟನೆಗಳು ಮತ್ತು ಮಸೀದಿ ಪುನರ್ ನಿರ್ಮಾಣಕ್ಕಾಗಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರಾದರೂ, ಪರಿಸ್ಥಿತಿ ಶಾಂತವಾಗಿತ್ತು ಎಂದು ಮೂಲಗಳು ತಿಳಿಸಿವೆ.
ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆಗಳು ವರಿದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಗಿ ಭದ್ರತೆಯ ನಡುವೆ ಅಯೋಧ್ಯೆ ಮತ್ತು ಫೈಝಾಬಾದ್ ಅವಳಿ ನಗರಗಳಲ್ಲಿ ವಿಎಚ್‌ಪಿ ಮತ್ತು ಬಜರಂಗ ದಳಗಳು ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ವಿವಾದಿತ ತಾಣದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಾರ್ಥಿಸಿ ಅವು ಕಾರ್ಯಕ್ರಮ ನಡೆಸಿದವು. ಮುಸ್ಲಿಮರು ಇಂದು ಸಂತಾಪ ದಿನವನ್ನಾಗಿ ಆಚರಿಸಿದರು.
ಮಸೀದಿ ಪುನರ್ ನಿರ್ಮಾಣಕ್ಕಾಗಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. 1992ರ ಡಿಸೆಂಬರ್ 6ರಂದು ನಡೆದ ಮಸೀದಿ ಧ್ವಂಸ ಕಾರ್ಯವನ್ನು ವಿರೋಧಿಸಿ ಬೆನಿಗಂಜ್‌ನ ಮಸೀದಿಯೊಂದರಲ್ಲಿ ಕಪ್ಪು ಬಾವುಟ ಹಾರಿಸಲಾಗಿತ್ತು. ಕರಸೇವಕ್‌ಪುರಂನಲ್ಲಿ ಈ ಸಂಬಂಧ ನಡೆದ ಕಾರ್ಯಕ್ರಮವೊಂದರಲ್ಲಿ ವಿಎಚ್‌ಪಿ ನಾಯಕ ಮಾಜಿ ಸಂಸದ ರಾಮ್ ವಿಲಾಸ್ ವೇದಾಂತಿ ಭಾಗವಹಿಸಿದರು. ಬಾಬರಿ ಮಸೀದಿ ಧ್ವಂಸದ 18ನೆ ವರ್ಷಾಚರಣೆಯ ಸಂದರ್ಭ ಉತ್ತರ ಪ್ರದೇಶದ ಯಾವುದೇ ಭಾಗದಲ್ಲಿ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಮೂಲಗಳು ಸ್ಪಷ್ಟ ಪಡಿಸಿವೆ.
ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಕಟ್ಟೆಚ್ಚರ ವಹಿಸಲಾಗಿತ್ತು. ಕ್ಷಿಪ್ರ ಕಾರ್ಯಾಚರಣಾ ಪಡೆ ಮತ್ತು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಅಯೋಧ್ಯೆ-ಫೈಝಾಬಾದ್‌ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಎಂದು ಮೂಲಗಳು ಹೇಳಿವೆ.ಫೈಝಾಬಾದ್‌ನಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ಹಿಂದೂ ಮಹಾಸಭಾದ 13 ಕಾರ್ಯಕರ್ತರನ್ನು ಬಂಧಿಸಲಾಗಿದೆ. ಬಳಿಕ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ