ಹೈದರಾಬಾದ್, ಡಿ. 6: ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ 18ನೆ ವರ್ಷಾಚರಣೆಯ ಹಿನ್ನೆಲೆಯಲ್ಲಿ ಸಂಘಟನೆಯೊಂದು ನೀಡಿದ್ದ ಕರೆಯನ್ವಯ ಹೈದರಾಬಾದ್‌ನ ಕೆಲವೆಡೆ ಇಂದು ಬಂದ್ ಆಚರಿಸಲಾಗಿತ್ತು. ಅಂಗಡಿ, ಉದ್ಯಮ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಇಂದು ಮುಚ್ಚಲ್ಪಟ್ಟಿದ್ದವು ಮತ್ತು ವಾಹನ ಸಂಚಾರ ವಿರಳವಾಗಿತ್ತು. ಚಾರಿತ್ರಿಕ ಚಾರ್‌ಮಿನಾರ್ ಮಾರುಕಟ್ಟೆ ಜನವಿಲ್ಲದೆ ಬಿಕೋ ಎನ್ನುತ್ತಿತ್ತು.
ಯಾವಾಗಲೂ ಜನ ನಿಭಿಡ ಪ್ರದೇಶವಾದ ಲಾಡ್ ಬಾಝಾರ್, ಗುಲ್ಝಾರ್ ಹೌಸ್, ಪತ್ತೇರ್‌ಗಟ್ಟಿ ಮತ್ತು ಮದೀನಾ ಪ್ರದೇಶಗಳಲ್ಲಿ ಇಂದು ಜನ ಸಂಚಾರವೂ ವಿರಳವಾಗಿತ್ತು. ಮಾಲಕ್‌ಪೇಟ್, ನಂಪಳ್ಳಿ, ಮೆಹಿದ್‌ಪಟ್ಣಂ ಮತ್ತು ತೋಲಿ ಚೌಕ್‌ನಲ್ಲೂ ಬಂದ್‌ನ ಪರಿಣಾಮ ಗೋಚರಿಸಿತ್ತು. ಆದಾಗ್ಯೂ ಸಿಕಂದರಾಬಾದ್ ಮತ್ತು ಐಟಿ ನಗರ ಸೈಬರಾಬಾದ್‌ನಲ್ಲಿ ಜನಜೀವನ ಎಂದಿನಂತೆ ಸಾಗಿತ್ತು ಎಂದು ಹೇಳಲಾಗಿದೆ.
ಮಜ್ಲಿಸೆ ಇತ್ತಿಹದುಲ್ ಮುಸ್ಲಿಮೀನ್ (ಎಂಐಎಂ), ಮಜ್ಲಿಸ್ ಬಚಾವೊ ತಹ್ರೀಕ್, ತಮೀರೆ ಮಿಲ್ಲತ್ ಮತ್ತು ವಿವಿಧ ಮುಸ್ಲಿಮ್ ರಾಜಕೀಯ ಹಾಗೂ ಧಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಮಸೀದಿಯನ್ನು ಅದರ ಮೂಲ ತಾಣದಲ್ಲಿ ಮರು ನಿರ್ಮಿಸುವಂತೆ ಬಂದ್‌ಗೆ ಕರೆ ನೀಡಿರುವ ಸಂಘಟನೆಗಳು ಆಗ್ರಹಿಸಿವೆ.ಮಸೀದಿ ಪುನರ್ ನಿರ್ಮಾಣಕ್ಕಾಗಿ ಮುಸ್ಲಿಮರು ಇಂದು ವಿಶೇಷ ಪ್ರಾರ್ಥನೆ ಸಲ್ಲಿಸುವಂತೆ ಸಂಘಟನೆಗಳು ಕರೆ ನೀಡಿದ್ದವು. ಶಾಂತಿಯುತ ಬಂದ್ ಆಚರಿಸುವಂತೆ ಅವು ವಿನಂತಿಸಿದ್ದವು. ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸಲು ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಮಂಗಳವಾರದ ವರೆಗೆ ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.
ಯಾವುದೇ ಸಂಘಟನೆಗಳು ಪ್ರತಿಭಟನೆ, ರ್ಯಾಲಿಗಳನ್ನು ನಡೆಸುವುದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಸಹಿತ, ಕ್ಷಿಪ್ರ ಕಾರ್ಯಾಚರಣಾ ಪಡೆಯ ಸಿಬ್ಬಂದಿಯನ್ನು ಸೇವೆಗೆ ನಿಯೋಜಿಸಲಾಗಿತ್ತು. ಪ್ರಾರ್ಥನಾ ಮಂದಿರಗಳಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ