
ಸಂಸತ್ತಿನ ಪಾಲಿಗೆ ಕಳೆದ 14 ದಿನಗಳು ಕರಾಳ ದಿನಗಳಾಗಿ ಪರಿಣಮಿಸಿವೆ. ಈ ದೇಶದ ಕಷ್ಟ-ಸುಖಗಳನ್ನು ಚರ್ಚಿಸಬೇಕಾದ ಸಂಸತ್ ಕಲಾಪ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಕೊಚ್ಚಿ ಹೋಗಿದೆ. ಇದರಿಂದ ದೇಶಕ್ಕಾದ ನಷ್ಟ ಊಹಿಸಲಸದಳವಾಗಿದೆ. ಸರಕಾರ ಮತ್ತು ವಿಪಕ್ಷಗಳ ಹಗ್ಗ ಜಗ್ಗಾಟ ಮುಂದುವರಿದಿದೆ. ಅಂತಿಮವಾಗಿ ಹಗ್ಗ ಕಡಿಯುವವರೆಗೂ ಈ ಜಗ್ಗಾಟ ಮುಂದುವರಿಯಲಿದೆ. ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ವಿಪಕ್ಷಗಳು ಕಳೆದ 13 ದಿನಗಳಲ್ಲಿ ಯಾವುದೇ ಕಲಾಪ ನಡೆಯ ಗೊಡಲಿಲ್ಲ. ಈ ಕುರಿತಂತೆ ಸರಕಾರಕ್ಕೆ ಒಂದಿಷ್ಟು ವಿಷಾದವೂ ಇರುವಂತೆ ಕಾಣು ತ್ತಿಲ್ಲ. ಪರಿಸ್ಥಿತಿಯನ್ನು ತಹಬಂದಿಗೆ ತರುವಲ್ಲಿ ಅದು ಗಂಭೀರವಾಗಿ ಯತ್ನಿಸಿಯೇ ಇಲ್ಲ.
ಸಂಸತ್ ಕಲಾಪಕ್ಕೆ ಅದರದೇ ಆದ ಘನತೆಯಿದೆ. ಈ ಕಲಾಪದಲ್ಲಿ ಭಾಗವಹಿಸುವುದಕ್ಕೆ ನಾವು ಒಬ್ಬ ಸಂಸದನಿಗೆ ಅಪಾರ ಹಣವನ್ನು ವ್ಯಯಿಸುತ್ತೇವೆ. ಒಬ್ಬ ಸಂಸದನ ಮಾಸಿಕ ವೇತನ 50 ಸಾವಿರ ರೂ.ಗೆ ಏರಿದೆ. ಪೆನ್ಶನ್ ರೂಪದಲ್ಲಿ 20 ಸಾವಿರ ರೂಪಾಯಿಯನ್ನು ನೀಡಲಾಗುತ್ತದೆ.
ಕಲಾಪದ ಅವಧಿಯಲ್ಲಿ ಪ್ರತಿ ದಿನ 2000 ರೂ. ಭತ್ತೆಯನ್ನು ನೀಡಲಾಗುತ್ತದೆ. ಸಾಂವಿಧಾನಿಕ ಭತ್ತೆಯ ರೂಪದಲ್ಲಿ ಪ್ರತಿ ತಿಂಗಳೂ 45 ಸಾವಿರ ರೂ.ವನ್ನು ಕೊಡಲಾಗುತ್ತದೆ. ಕಚೇರಿ ಖರ್ಚಿಗೆಂದು ಪ್ರತಿ ತಿಂಗಳು ಇನ್ನೂ 45 ಸಾವಿರ ರೂ. ಇಷ್ಟೆಲ್ಲವನ್ನು ಪಡೆದುಕೊಂಡು ಸಂಸತ್ತಿಗೆ ಹಾಜರಾಗುವ ನಮ್ಮ ಸಂಸದ ಮಾಡುವುದಾದರೂ ಏನು? ಬರೇ ಗದ್ದಲ, ಸಭಾತ್ಯಾಗ ಇತ್ಯಾದಿಗಳನ್ನು ಮಾಡುವುದಕ್ಕಾಗಿ ಈ ಹಣವನ್ನು ಸಂಸದರಿಗೆ ನೀಡಲಾಗು ತ್ತದೆಯೇ? 2010-11ರ ಸಾಲಿನಲ್ಲಿ ಮೇಲ್ಮನೆ ಮತ್ತು ಕೆಳಮನೆಗಳ ಒಟ್ಟು ಬಜೆಟ್ 535 ಕೋಟಿ ರೂ. ಇದರ ಆಧಾರದಲ್ಲಿ ಲೆಕ್ಕ ಹಾಕುವುದಾದರೆ ಪ್ರತಿ ದಿನದ ಕಲಾಪಕ್ಕೆ 7.8 ಕೋಟಿ ರೂಪಾಯಿ ವೆಚ್ಚವಾಗುತ್ತದೆ.
ಅಂದರೆ ಕಳೆದ 14 ದಿನಗಳಲ್ಲಿ ಸುಮಾರು 110 ಕೋಟಿಯಷ್ಟು ಹಣ ಈ ಗದ್ದಲಕ್ಕೆ ವೆಚ್ಚವಾಗಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ. ವಿಪಕ್ಷಗಳ ಗದ್ದಲಕ್ಕೆ ಆಡಳಿತ ಪಕ್ಷ ಕಿವುಡುತನವನ್ನು ಪ್ರದರ್ಶಿಸಿದೆ. ಹಾಗಾದರೆ, ಈ 14 ದಿನಗಳ ಕಲಾಪದ ನಾಶ, ನಷ್ಟದ ಹೊಣೆಯನ್ನು ಹೊರುವವರು ಯಾರು?
ಕಲಾಪ ವ್ಯರ್ಥವಾದುದರಿಂದ ನಷ್ಟವಾದುದು ಬರೇ ಕೋಟಿಗಳಷ್ಟೇ ಅಲ್ಲ. ವ್ಯರ್ಥವಾದ ಸಮಯ, ಈ ದೇಶದ ಅಭಿವೃದ್ಧಿಯನ್ನು ಚರ್ಚಿಸಲು ಮೀಸಲಾಗಿಟ್ಟ ಸಮಯ. ದೇಶದ ವಿವಿಧ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಈ ಅವಧಿಯಲ್ಲಿ ಚರ್ಚಿಸಬೇಕಾಗಿತ್ತು. ಹಲವು ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿತ್ತು. ಆದರೆ, ಸಂಸದರ ಗದ್ದಲದಲ್ಲಿ ದೇಶದ ಅಭಿವೃದ್ಧಿ ಬದಿಗೆ ಸರಿಯಿತು. ಕಲಾಪಕ್ಕೆ ಪ್ರತಿ ದಿನ ವೆಚ್ಚವಾಗುವುದು ಎಂಟು ಕೋಟಿ ರೂ. ಇರಬಹುದು.
ಆದರೆ, ಈ ಅವಧಿಯಲ್ಲಿ ಚರ್ಚೆಯಾಗುವ ಅಭಿವೃದ್ಧಿಗೆ ಯಾವುದೇ ಬೆಲೆಯನ್ನು ಕಟ್ಟುವುದಕ್ಕಾಗುವುದಿಲ್ಲ. ಕಲಾಪ ಪೋಲಾದುದರ ನೇರ ಪರಿಣಾಮ ನಮ್ಮ ದೇಶದ ಜನತೆಯ ಮೇಲಾಗುವುದು. ಗದ್ದಲ ಮಾಡಿದವರು ನಮ್ಮ ಸಂಸದರಾದರೆ, ಅದಕ್ಕಾಗಿ ಶಿಕ್ಷೆ ಅನುಭವಿಸಬೇಕಾದವರು ಈ ದೇಶದ ಜನತೆ. ಇದು ಯಾವ ನ್ಯಾಯ? ಗದ್ದಲ ನಡೆಸಿದ ತಪ್ಪಿಗೆ, ಕಲಾಪ ನಡೆಯಗೊಡದ ತಪ್ಪಿಗೆ ಸಂಸದರಿಗೆ ಯಾವುದೇ ದಂಡವಿಲ್ಲವೇ? ಒಂದು ವೇಳೆ, ಕಲಾಪ ನಡೆಯಗೊಡದ ಸಂಸದರ ಭತ್ತೆಯನ್ನು ಕಡಿತ ಗೊಳಿಸುವ ನಿಯಮವಿದ್ದಿದ್ದರೆ ಸಂಸದರು ಈ ಪರಿಯ ಗದ್ದಲವನ್ನು ನಡೆಸುತ್ತಿದ್ದರೇ? ಕಲಾಪವನ್ನು ನಡೆಸಲು ಅವಕಾಶ ನೀಡುತ್ತಿರಲಿಲ್ಲವೇ?
2ಜಿ ಸ್ಪೆಕ್ಟ್ರಂ ಹಗರಣ ದೇಶ ಕಂಡ ಅತಿ ದೊಡ್ಡ ಹಗರಣಗಳಲ್ಲಿ ಒಂದು. ಆದರೆ ವಿಶೇಷವೆಂದರೆ, ಈ ಹಗರಣದ ಹೊಣೆಯನ್ನು ಹೊತ್ತುಕೊಳ್ಳಲು ಮಾತ್ರ ಯಾರೂ ಸಿದ್ಧರಿಲ್ಲ. ಇತ್ತೀಚೆಗೆ ರಾಜೀನಾಮೆ ನೀಡಿದ ರಾಜಾ ಕೂಡ, ತಾನು ನಿರಪರಾಧಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಸರಕಾರವೂ ಅವರನ್ನು ಸಮರ್ಥಿಸುತ್ತಿದೆ. ಆದರೆ ಈ ಹಗರಣದಿಂದ, ದೇಶಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿರುವುದಂತೂ ನಿಜ. ಆದರೆ ಸರಕಾರ ಮಾತ್ರ ಇನ್ನೂ ಇದನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ.
ಈ ಹಗರಣದ ಕುರಿತು, ಈಗಾಗಲೇ ಸುಪ್ರೀಂ ಕೋರ್ಟ್ ಸರಕಾರಕ್ಕೆ ಛೀಮಾರಿ ಹಾಕಿದೆ. ದೂರಸಂಪರ್ಕ ಸಚಿವಾಲಯದ ಬೇಜವಾಬ್ದಾರಿಯನ್ನು ಕೂಡ ಉಲ್ಲೇಖಿಸಿದೆ. ಹೀಗಿರುವಾಗ, ಸರಕಾರ ಯಾವುದೇ ಗಂಭೀರ ತನಿಖೆಗೆ ತನ್ನನ್ನು ಒಡ್ಡಿಕೊಳ್ಳುವುದು ಅತ್ಯಗತ್ಯವಾಗಿದೆ. ವಿಪಕ್ಷಗಳು ಜಂಟಿ ಸಂಸದೀಯ ಸಮಿತಿಯ ತನಿಖೆಯನ್ನು ಆಗ್ರಹಿಸಿ ಗದ್ದಲ ಎಬ್ಬಿಸುತ್ತಿವೆ. ಹಗರಣ ಇಷ್ಟೊಂದು ಗಂಭೀರವಾಗಿರುವಾಗ, ವಿಪಕ್ಷಗಳ ಎದುರು ತನ್ನ ಸಾಚಾತನವನ್ನು ಸಾಬೀತು ಮಾಡುವುದು ಸರಕಾರದ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ತನಿಖೆಗೆ ಅಸ್ತು ಎನ್ನಬೇಕಾಗಿದೆ. ಆದರೆ ಕೇಂದ್ರ ಸರಕಾರ ಪಲಾಯನ ವಾದವನ್ನು ಅನುಸರಿಸುತ್ತಿದೆ. ಅದರ ಫಲವಾಗಿ, ಈಗಾಗಲೇ 14 ದಿನಗಳ ಕಲಾಪ ವ್ಯರ್ಥವಾಗಿದೆ. ದೇಶ ಇನ್ನಷ್ಟು ನಷ್ಟವನ್ನು ಅನುಭವಿಸುವಂತಾಗಿದೆ.
ವಿಪಕ್ಷಗಳ ಆಗ್ರಹಕ್ಕೆ ಕೇಂದ್ರ ಇನ್ನಾದರೂ ಮಣಿಯಬೇಕು. ತನಿಖೆ, ಕೇವಲ ರಾಜಾ ಅವರನ್ನು ಮಾತ್ರ ಕೇಂದ್ರೀಕರಿಸಬೇಕಾಗಿಲ್ಲ. ಈ ಹಿಂದಿನ ಬಿಜೆಪಿ ಸಚಿವರೂ ಸೇರಿದಂತೆ ಎಲ್ಲ ಸಚಿವರನ್ನೂ ತನಿಖೆ ಒಳಗೊಳ್ಳಲಿ. ಈ ಅವ್ಯವಹಾರ ಹೇಗೆ ನಡೆಯುತ್ತಾ ಬಂತು? ಇದರ ಹಿಂದೆ ರಾಜಕಾರಣಿಗಳ ಕೈವಾಡವಿದೆಯೇ? ಉದ್ಯಮಿಗಳು ಎಷ್ಟು ಸಾಚಾಗಳು? ಎನ್ನುವುದು ಹೊರ ಬರಲಿ. ತನಿಖೆಗೆ ಹಿಂದೇಟು ಹಾಕಿದಷ್ಟು, ಸರಕಾರದ ಮೇಲಿರುವ ಗುಮಾನಿ ಹೆಚ್ಚುತ್ತಾ ಹೋಗುತ್ತದೆ. ತನಿಖೆಗೆ ಸಂಸದೀಯ ಸಮಿತಿಯನ್ನು ನೇಮಿಸಿ, ತನ್ನ ಸಾಚಾತನವನ್ನು ಸರಕಾರ ಸಾಬೀತು ಮಾಡಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ