* ಸುನೀಲ್ ಜೋಶಿ ಹತ್ಯೆಯ ನಿಗೂಢ ಬಯಲು
* ಸ್ಫೋಟದ ಕುರಿತು ಭಾರೀ ಮಾಹಿತಿ ಹೊಂದಿದ್ದ ಜೋಶಿ
ಹೊಸದಿಲ್ಲಿ, ಡಿ. 18: ಅಜ್ಮೀರ್ ಸ್ಫೋಟ ಪ್ರಕರಣದ ರೂವಾರಿ, ಹಿರಿಯ ಆರೆಸ್ಸೆಸ್ ನಾಯಕ ಸುನೀಲ್ ಜೋಶಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಮಧ್ಯಪ್ರದೇಶ ಪೊಲೀಸರು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆಯೆಂದು ತಿಳಿಸಿದ್ದಾರೆ. ಆರೆಸ್ಸೆಸ್ ಪ್ರಚಾರಕ, ಕೇಸರಿ ಭಯೋತ್ಪಾದಕ ಸುನೀಲ್ ಜೋಶಿ ಆತನ ಸಹಚರರಿಂದಲೇ ಕೊಲೆಯಾಗಿದ್ದಾನೆಂದು ಮಧ್ಯಪ್ರದೇಶ ಪೊಲೀಸರು ಹೇಳಿದ್ದಾರೆ.
ಅಜ್ಮೀರ್, ಮಕ್ಕಾ ಮಸೀದಿ ಸ್ಫೋಟದ ರೂವಾರಿ ಎಂದು ಶಂಕಿಸಲಾಗಿರುವ ಸುನೀಲ್ ಜೋಶಿ 2007 ಡಿಸೆಂಬರ್ 29ರಂದು ದಿವಾಸ್‌ನಲ್ಲಿ ಅಪರಿಚಿತರ ಗುಂಡಿಗೆ ಬಲಿಯಾಗಿದ್ದನು. ಹರ್ಷದ್ ಸೋಳಂಕಿ ಎಂಬ ಆರೋಪಿಯು, ಪ್ರಕರಣದ ಕುರಿತ ತಪ್ಪೊಪ್ಪಿಗೆಯನ್ನು ನೀಡಿದ್ದು, ಈಗಾಗಲೇ ಬಂಧಿಸಲ್ಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವನ ಜೊತೆಗೆ ಮಧ್ಯಪ್ರದೇಶದ ವಾಸುದೇವ್ ಪರ್ಮಾರ್ ಮತ್ತು ಇಂಧೋರ್‌ನ ಆನಂದ್ ರಾಜ್ ಎಂಬ ಆರೆಸ್ಸೆಸ್ ಕಾರ್ಯಕರ್ತರನ್ನೂ ಬಂಧಿಸಲಾಗಿದೆ. ಜೋಶಿಯು ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಕಾರಣಕ್ಕೆ ರೊಚ್ಚಿಗೆದ್ದು ತಾನವನ ಹತ್ಯೆ ಮಾಡಿದ್ದೆನೆಂದು ಹರ್ಷದ್ ಸೋಳಂಕಿ ಹೇಳಿರುವುದಾಗಿ ಪೊಲೀಸರು ಹೇಳಿದ್ದಾರೆ. ಸೋಳಂಕಿ ಎರಡು ವಾರಗಳ ಹಿಂದೆ ಬಂಧಿತನಾಗಿದ್ದು, ಪೊಲೀಸರ ವಶದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ.
ಮಧ್ಯಪ್ರದೇಶ ಪೊಲೀಸರು ಇದಕ್ಕೂ ಮುನ್ನ ಸೂಕ್ತ ಸಾಕ್ಷಗಳಿಲ್ಲದ ಹಿನ್ನೆಲೆಯಲ್ಲಿ ಜೋಶಿ ಹತ್ಯೆ ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಹೇಳಿದ್ದರು. ಆದರೆ ರಾಜಸ್ಥಾನ ಎಟಿಎಸ್ ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ ಬಳಿಕ ಎಚ್ಚೆತ್ತುಕೊಂಡ ಮಧ್ಯಪ್ರದೇಶ ಪೊಲೀಸರು ಆರೋಪಿಯನ್ನು ಬಂಧಿಸಿರುವುದು ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ.
ಸುನೀಲ್ ಜೋಶಿ 2007 ಡಿಸೆಂಬರ್‌ನಲ್ಲಿ ಹತ್ಯೆಯಾಗಿದ್ದರೂ, ಆರೋಪಿಯನ್ನು ಈ ವರೆಗೆ ಯಾಕೆ ಬಂಧಿಸಲಾಗಿಲ್ಲ? ಸೂಕ್ತ ಸಾಕ್ಷಗಳಿಲ್ಲ ಎಂದು ಪ್ರತಿಪಾದಿಸುವುದಾದರೆ, ಮಧ್ಯಪ್ರದೇಶ ಪೊಲೀಸರು ಸೋಳಂಕಿಯನ್ನು ಬಂಧಿಸಿರುವುದು ಯಾಕೆ? ವೈಯಕ್ತಿಕ ನಿಂದನೆ ಜೋಶಿಯ ಹತ್ಯೆಗೆ ನಿಜವಾಗಿಯೂ ಕಾರಣವಾಯಿತೇ? ಜೋಶಿಯ ಹತ್ಯೆಗೆ ಬಳಸಲಾದ ಅಸ್ತ್ರ ಎಲ್ಲಿದೆ? ಎಂಬ ಪ್ರಶ್ನೆಗಳು ಇದೀಗ ಸಹಜವಾಗಿ ತಲೆ ಎತ್ತಿವೆ.
ಕೇಸರಿ ಭಯೋತ್ಪಾದನೆ ಚಟುವಟಿಕೆಗಳ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿರುವ ಸುನೀಲ್ ಜೋಶಿಯ ಹತ್ಯೆಗೆ ಸಂಬಂಧಿಸಿ ಸಾಕ್ಷಗಳಿಲ್ಲದೆ ಪ್ರಕರಣದ ಮುಕ್ತಾಯ ಗೊಳಿಸಲಾಗಿರುವುದು ಸಂಶಯಕ್ಕೆ ಕಾರಣವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ