ಬುಧವಾರ, ಡಿಸೆಂಬರ್ 01, 2010

ಅಮಾಯಕರಿಬ್ಬರ ಮೇಲೆ ಪೊಲೀಸರಿಂದ ದೌರ್ಜನ್ಯ


ಉಡುಪಿ, ಡಿ.1: ಕಾಪು ಹಾಗೂ ಪಡುಬಿದ್ರೆ ಪೊಲೀಸರು ವಿಚಾರಣೆಯ ನೆಪದಲ್ಲಿ ತಮ್ಮನ್ನು ಅಕ್ರಮ ಬಂಧನದಲ್ಲಿರಿಸಿ ದೌರ್ಜನ್ಯ ನಡೆಸಿರುವುದಾಗಿ ಯುವಕರಿಬ್ಬರು ಆರೋಪಿಸಿದ್ದಾರೆ. ಉಚ್ಚಿಲ ಪೊಲ್ಯ ನಿವಾಸಿಗಳಾದ ಇಬ್ರಾಹೀಂ ಎಂಬವರ ಪುತ್ರ ಇಮ್ರಾನ್(22) ಹಾಗೂ ನಾಸೀರ್ ಎಂಬವರ ಮಗ ಸಮೀಮ್(20) ಎಂಬವರೇ ಪೊಲೀಸ್ ದೌರ್ಜನ್ಯ ಕ್ಕೀಡದವರೆನ್ನಲಾಗಿದ್ದು, ಉಡುಪಿ ಅಜ್ಜರ ಕಾಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಮಂಗಳವಾರ ಬೆಳಗ್ಗೆ ಕಾಪು ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ತಮ್ಮನ್ನು ಕಾಪು ಮಾರಿಗುಡಿ ಎದುರು ತಡೆದ ಕಾಪು ಪೊಲೀಸ್ ಶಿವಣ್ಣ ಹಾಗೂ ಇನ್ನೋರ್ವರು ತಮ್ಮನ್ನು ಕಾಪು ರಾಜೀವ ಭವನದ ಹಿಂದೆ ಇರುವ ವಸತಿಗೃಹಕ್ಕೆ ಕರೆದುಕೊಂಡು ಹೋದರು. ಅಲ್ಲಿ ನಮ್ಮಿಬ್ಬರಿಗೂ ಮನ ಬಂದಂತೆ ಹಲ್ಲೆ ನಡೆಸಿದರು. ಬಳಿಕ ಅಲ್ಲಿಗೆ ಪಡುಬಿದ್ರೆ ಪೊಲೀಸ್ ಸಿಬ್ಬಂದಿ ಸುರೇಶ್ ಹಾಗೂ ಲೋಕೇಶ್‌ರನ್ನು ಕರೆಸಿ, ಅವರೆಲ್ಲರೂ ಒಟ್ಟಿಗೆ ಸೇರಿ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ’ ಎಂದು ಇಮ್ರಾನ್ ಹಾಗೂ ಸಮೀಮ್ ದೂರಿದ್ದಾರೆ. ‘‘ಅಲ್ಲಿಂದ ತಮ್ಮನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದ ಸುರೇಶ್ ಹಾಗೂ ಲೋಕೇಶ್ ಅವಾಚ್ಯ ಶಬ್ದಗಳಿಂದ ಬೈದು, ಜನಾಂಗೀಯವಾಗಿ ನಿಂದಿಸಿದರು. ಇದನ್ನು ಹೊರಗಡೆ ಹೋಗಿ ಹೇಳಿದರೆ ನಿಮ್ಮನ್ನು ಬೇರೆ ಬೇರೆ ಪ್ರಕರಣದಲ್ಲಿ ಫಿಕ್ಸ್ ಮಾಡಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ’’ ಎಂದು ಅವರು ಆರೋಪಿಸಿದ್ದಾರೆ.


ಯಾವುದೇ ಪ್ರಕರಣದಲ್ಲಿ ಭಾಗಿಯಾಗದ ಅಮಾಯಕರಾದ ತಮ್ಮನ್ನು ತನಿಖೆಯ ಹೆಸರಿನಲ್ಲಿ ಕರೆದುಕೊಂಡು ಹೋಗಿ ದೌರ್ಜನ್ಯ ಎಸಗಿರುವ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ದೌರ್ಜನ್ಯ ಎಸಗಿರುವ ಕಾಪು ಪೊಲೀಸ್ ಸಿಬ್ಬಂದಿ ಶಿವಣ್ಣ, ಪಡುಬಿದ್ರೆ ಪೊಲೀಸ್ ಸಿಬ್ಬಂದಿ ಸುರೇಶ್ ಹಾಗೂ ಲೋಕೇಶ್ ಸೇರಿದಂತೆ ಒಟ್ಟು ನಾಲ್ವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾನವ ಹಕ್ಕುಗಳ ಆಯೋಗ, ಗೃಹ ಇಲಾಖೆಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಪಶ್ಚಿಮ ವಲಯ ಐಜಿಪಿ, ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಲು ದೌರ್ಜನ್ಯಕ್ಕೀಡಾದ ಯುವಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.


ಅಮಾಯಕರ ಮೇಲೆ ದೌರ್ಜನ್ಯ ಎಸಗಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿವಿಧ ಪ್ರಗತಿಪರ ಹಾಗೂ ಅಲ್ಪಸಂಖ್ಯಾತ ಸಂಘಟನೆಗಳು ಆಗ್ರಹಿಸಿದ್ದು, ಇಲ್ಲದಿದ್ದರೆ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ