ಅಬ್ದುನ್ನಾಸರ್ ಮಅದನಿ ಕುರಿತು ತೆಹಲ್ಕಾಗೆ ವರದಿ ಸಂಗ್ರಹಕ್ಕೆ ತೆರಳಿದ್ದ ಶಾಹಿನ ವಿರುದ್ಧ ಎರಡು ಪ್ರಕರಣ ದಾಖಲಿಸಿರುವ ಕರ್ನಾಟಕ ಪೊಲೀಸರು
ಹೊಸದಿಲ್ಲಿ, ನ. 30: ತನಿಖಾ ವರದಿಗಳ ಬೆನ್ನುಬಿದ್ದು, ಸತ್ಯ ಬಹಿರಂಗಕ್ಕೆ ಯತ್ನಿಸುತ್ತಿರುವ ಖ್ಯಾತ ಪತ್ರಕರ್ತೆ ಕೆ.ಕೆ. ಶಾಹಿನ ವಿರುದ್ಧ ಕರ್ನಾಟಕ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಜಾಮಿಯ ಟೀಚರ್ಸ್ ಸಾಲಿಡಾರಿಟಿ ಅಸೋಸಿಯೇಶನ್ (ಜೆಟಿಎಸ್‌ಎ) ಆಗ್ರಹಿಸಿದೆ.
ಹೊಸದಿಲ್ಲಿ, ನ. 30: ತನಿಖಾ ವರದಿಗಳ ಬೆನ್ನುಬಿದ್ದು, ಸತ್ಯ ಬಹಿರಂಗಕ್ಕೆ ಯತ್ನಿಸುತ್ತಿರುವ ಖ್ಯಾತ ಪತ್ರಕರ್ತೆ ಕೆ.ಕೆ. ಶಾಹಿನ ವಿರುದ್ಧ ಕರ್ನಾಟಕ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಜಾಮಿಯ ಟೀಚರ್ಸ್ ಸಾಲಿಡಾರಿಟಿ ಅಸೋಸಿಯೇಶನ್ (ಜೆಟಿಎಸ್‌ಎ) ಆಗ್ರಹಿಸಿದೆ.
ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ ಅಬ್ದುನ್ನಾಸರ್ ಮಅದನಿ ಕುರಿತು ಸತ್ಯಶೋಧನಾ ವರದಿಯನ್ನು ತೆಹಲ್ಕಾ ಪತ್ರಿಕೆಗಾಗಿ ಸಂಪಾದಿಸಲು ತೆರಳಿದ್ದ ಕೆ.ಕೆ. ಶಹೀನಾ ಮತ್ತು ಇತರ ನಾಲ್ವರ ವಿರುದ್ಧ ಕರ್ನಾಟಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ವರದಿಗಳನ್ನು ನೇರವಾಗಿ ಒಪ್ಪಿಕೊಂಡು ಹಾಗೆಯೇ ಪ್ರಕಟಿಸದೆ, ಆ ಬಗ್ಗೆ ಸಂಶೋಧನಾತ್ಮಕ ವರದಿ ಪ್ರಕಟಿಸುವ ಆಕೆಯ ವಿರುದ್ಧ ಹೂಡಲಾಗಿರುವ ಪ್ರಕರಣವನ್ನು ತಕ್ಷಣವೇ ಹಿಂದಕ್ಕೆ ಪಡೆಯುವಂತೆ ಜೆಟಿಎಸ್‌ಎ ಆಗ್ರಹಿಸಿದೆ.
ದೇಶದಲ್ಲಿ ಇಸ್ಲಾಂ ಭಯೋತ್ಪಾದನೆಯ ಕುರಿತು ಮಾಧ್ಯಮಗಳಲ್ಲಿ ಸಾಮಾನ್ಯ ನಿಲುವೊಂದಿತ್ತು. ಆದರೆ ಭದ್ರತಾ ಸಂಸ್ಥೆಗಳು ಕೇಸರಿ ಭಯೋತ್ಪಾದನಾ ಜಾಲವನ್ನು ಬಹಿರಂಗಗೊಳಿಸಿದ ಬಳಿಕ ಭಯೋತ್ಪಾದನೆಯ ಇನ್ನೊಂದು ಮುಖ ಬಹಿರಂಗಗೊಂಡಿತ್ತು. ಅದಕ್ಕೂ ಹಿಂದೆ ಯಾವುದೇ ಸ್ಫೋಟ ಪ್ರಕರಣಗಳು ನಡೆದರೆ ಆ ಘಟನೆಗಳಿಗೆ ಸಂಬಂಧಿಸಿ ಮುಸ್ಲಿಮ್ ಯುವಕರನ್ನು ಸಾರಾಸಗಟವಾಗಿ ಪೊಲೀಸರು ಎಳೆದೊಯ್ದು ತನಿಖೆ ನಡೆಸುತ್ತಿದ್ದರು. ಈ ವರದಿಗಳನ್ನು ಮಾಧ್ಯಮಗಳು ಅತಿ ರಂಜಿತವಾಗಿ ಪ್ರಕಟಿಸುತ್ತಿದ್ದವು. ಈ ಸಂಬಂಧ ಪೊಲೀಸರೂ ಮುಸ್ಲಿಂ ಯುವಕರನ್ನು ಬಂಧಿಸಿ ತನಿಖೆಯ ಹೆಸರಲ್ಲಿ ಹಿಂಸಾಚಾರ ಎಸಗುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಮಾಲೆಗಾಂವ್, ಮಕ್ಕಾ ಮಸೀದಿ, ಅಜ್ಮೀರ್ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣಗಳಲ್ಲಿ ಕೇಸರಿ ಭಯೋತ್ಪಾದಕ ಸಂಘಟನೆಗಳ ಕೈವಾಡವಿರುವುದನ್ನು ಭದ್ರತಾ ದಳಗಳು ಬಹಿರಂಗಗೊಳಿಸಿದ ಬಳಿಕ ಇಂತಹ ವರದಿಗಾರರಿಗೆ ಮುಜುಗರವನ್ನುಂಟು ಮಾಡಿತ್ತು. ಅದಕ್ಕೂ ಮೊದಲೂ ಇದೇ ಪ್ರಕರಣಗಳಿಗೆ ಸಂಬಂಧಿಸಿ ಹುಜಿ, ಎಲ್‌ಇಟಿ ಮತ್ತು ಸಿಮಿ ಸಂಘಟನೆಗಳ ಪಾತ್ರವಿರುವುದಾಗಿ ಮಾಧ್ಯಮದ ದೊಡ್ಡ ವರ್ಗವೊಂದು ತುಂಬಾ ಸಾಮಾನ್ಯವೆಂಬಂತೆ ವರದಿ ಮಾಡಿಕೊಂಡು ಬಂದಿತ್ತು.
ಆದರೆ ಇನ್ನೊಂದೆಡೆ, ಪ್ರತಿ ಸ್ಫೋಟದ ಬಳಿಕ ರಾಷ್ಟ್ರಪ್ರೇಮದ ಹೆಸರಿನಲ್ಲಿ ನಡೆಯುತ್ತಿದ್ದ ಮಾಧ್ಯಮ ಪ್ರಚಾರಗಳ ಬೃಹತ್ ಅಲೆಯ ನಡುವೆಯೂ ಕೆಲವೊಂದು ಪತ್ರಕರ್ತರು ಪೂರ್ವಾಗ್ರಹ ಪೀಡಿತ ಸಿದ್ಧಾಂತವೊಂದನ್ನು ಸಾರಾಸಗಟವಾಗಿ ತಿರಸ್ಕರಿಸುತ್ತಲೇ ಬಂದಿದ್ದಾರೆ. ಅಂತಹವರಲ್ಲಿ ಕೆ.ಕೆ. ಶಾಹಿನ ಮುಂಚೂಣಿಯಲ್ಲಿದ್ದ ಪರ್ತಕರ್ತೆಯಾಗಿದ್ದಾರೆ. ಇಂತಹ ಪ್ರಕ್ರಿಯೆಯಲ್ಲಿ ಆಕೆಯ ಇತ್ತೀಚಿನ ಬೆಂಗಳೂರು ಸ್ಫೋಟ ಆರೋಪಿ ಅಬ್ದುನ್ನಾಸರ್ ಮಅದನಿ ಕುರಿತ ತೆಹಲ್ಕಾ ವರದಿಯು ಹೆಚ್ಚಿನ ಬೆಳಕು ಚೆಲ್ಲುತ್ತದೆ. ದುರ್ಬಲ, ಅಸ್ಥಿತ್ವದಲ್ಲೇ ಇರದ ಮತ್ತು ಸುಳ್ಳು ಸಾಕ್ಷಗಳ ಆಧಾರದಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕ ಅಬ್ದುನ್ನಾಸರ್ ಮಅದನಿಯನ್ನು ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಹೇಗೆ ಸಿಲುಕಿಸಲಾಯಿತು ಎಂಬುದು ಕೆ.ಕೆ. ಶಾಹಿನ ವರದಿಯು ಬಹಿರಂಗ ಪಡಿಸಿದೆ.
ಶಾಹಿನ ಕುಂಬೂರು, ಹೊಸದೋಟ ಮತ್ತು ಐಗೂರು (ಕರ್ನಾಟಕ)ದಲ್ಲಿ ಪ್ರವಾಸ ಮಾಡಿದ್ದಾರೆ. ಬೆಂಗಳೂರು ಸ್ಫೋಟ ಪ್ರಕರಣದ ಸಂಚು ರೂಪಿಸಿದೆಯೆನ್ನಲಾದ ಲಕ್ಕೇರಿ ಎಸ್ಟೇಟ್‌ಗೂ ಶಾಹಿನ ಭೇಟಿ ನೀಡಿ ಸಾಕ್ಷಿಗಳು ಮತ್ತು ಗ್ರಾಮಸ್ಥರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. ಪೊಲೀಸರ ಆರೋಪಗಳ ಬಗ್ಗೆ ಶಾಹಿನರ ವರದಿಯು ಸಂಶಯ ಮೂಡುವಂತೆ ಮಾಡಿದೆ. ಬಿಜೆಪಿ ಕಾರ್ಯಕರ್ತರು ಸಹಿತ ಹಲವಾರು ಗ್ರಾಮಸ್ಥರು, ಆ ಪ್ರದೇಶದಲ್ಲಿ ಮಅದನಿಯು ವಾಸಿಸಿದ್ದ ಊಹಾಪೋಹಗಳನ್ನು ತಳ್ಳಿ ಹಾಕಿದ್ದಾರೆ ಎಂದು ಶಾಹಿನ ವರದಿ ಮಾಡಿದ್ದಾರೆ ಎಂಬ ವಿರವಣೆಗಳನ್ನು ಜೆಟಿಎಸ್‌ಎಯು ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯೊಂದರಲ್ಲಿ ನೀಡಲಾಗಿದೆ.
ಶಾಹಿನ ಮತ್ತು ಆಕೆಯ ಸಹಚರರು ಸಾಕ್ಷಿಗಳನ್ನು ಭೇಟಿಯಾಗಲು ತೆರಳಿದ್ದ ವೇಳೆ ಪೊಲೀಸರು ಅವರನ್ನು ರಹಸ್ಯವಾಗಿ ಹಿಂಬಾಲಿಸಿದ್ದರು ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ಅವರಿಗೆ ಕರೆ ಮಾಡಿ ಶಾಹಿನ ‘ಭಯೋತ್ಪಾದಕಿ’ಯೇ ಎಂದು ತನಿಖೆ ನಡೆಸಿದ್ದರು! ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದೀಗ ಕರ್ನಾಟಕ ಪೊಲೀಸರು ಶಾಹಿನ ಮತ್ತು ನಾಲ್ಕು ಮಂದಿಯ ವಿರುದ್ಧ ಬೆಂಗಳೂರು ಸ್ಫೋಟ ಪ್ರಕರಣದ ಸಾಕ್ಷಿಗಳನ್ನು ಬೆದರಿಸಿದ ಆರೋಪದ ಮೇರೆಗೆ ಐಪಿ 506ರ ಅನ್ವಯ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ. ಸಾಕ್ಷಿಗಳನ್ನು ಬೆದರಿಸುವುದಕ್ಕಿಂತ ಮೇಲಾಗಿ, ಇದೊಂದು ಪರ್ತಕರ್ತರನ್ನು ಬೆದರಿಸುವ ಸ್ಪಷ್ಟ ಪ್ರಕರಣವಾಗಿದೆ ಎಂದು ಜೆಟಿಎಸ್‌ಎ ಪ್ರಕಟಣೆಯು ಅಭಿಪ್ರಾಯ ಪಟ್ಟಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ