ಗುರುವಾರ, ಏಪ್ರಿಲ್ 07, 2011

ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಮತ್ತು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಂಡಿದೆ

ಕೇಸರಿ ಭಯೋತ್ಪಾದನಾ ಜಾಲದ ಕೈವಾಡವಿದೆ ಎಂದು ಶಂಕಿಸಲಾಗಿರುವ ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಮತ್ತು ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೈಗೆತ್ತಿಕೊಂಡಿದೆ. ಪ್ರಕರಣಗಳಿಗೆ ಸಂಬಂಧಿಸಿದ ಶಂಕಿತರ ಪಾತ್ರದ ಕುರಿತು ಎನ್‌ಐಎ ತನಿಖೆ ಆರಂಭಿಸಿದೆ ಎಂದು ಮೂಲಗಳು ಇಂದು ಹೇಳಿವೆ. ತನಿಖೆಯನ್ನು ಹಸ್ತಾಂತರಿಸುವ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಸಿಬಿಐ ಮತ್ತು ರಾಜಸ್ಥಾನ ಸರಕಾರ ಸಮ್ಮತಿ ಸೂಚಿಸಿದ ಬಳಿಕ ಎನ್‌ಐಎ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಮತ್ತು 2006ರ ಮಾಲೆಗಾಂವ್ ಸ್ಫೋಟ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಮೂಲಗಳು ಹೇಳಿವೆ. ಅಭಿನವ್ ಭಾರತ್‌ನ ಕೈವಾಡವಿದೆ ಎಂದು ಆಪಾದಿಸಲಾಗಿರುವ 2008ರ ಮಾಲೆಗಾಂವ್ ಸ್ಫೋಟ ಪ್ರಕರಣವನ್ನು ಮುಂದಿನ ದಿನಗಳಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದು ಅವು ಸ್ಪಷ್ಟಪಡಿಸಿವೆ.
ಆದಾಗ್ಯೂ, ಕೇಸರಿ ಭಯೋತ್ಪಾದನಾ ಜಾಲದ ಶಂಕೆಯಿರುವ ಎಲ್ಲ ಪ್ರಕರಣಗಳ ತನಿಖೆಯನ್ನು ಜಂಟಿಯಾಗಿ ನಿರ್ವಹಿಸುವ ಕೇಂದ್ರ ಗೃಹ ಸಚಿವಾಲಯದ ಇಚ್ಛೆಗೆ ಮಧ್ಯಪ್ರದೇಶ ಸರಕಾರ ನಿರಾಸಕ್ತಿ ತೋರಿಸಿದೆ. ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಆರೆಸ್ಸೆಸ್ ನಾಯಕ ಸುನೀಲ್ ಜೋಶಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಲು ಮಧ್ಯಪ್ರದೇಶ ಸರಕಾರ ನಿರಾಕರಿಸಿದೆ. ಪ್ರಕರಣದ ತನಿಖೆ ಮುಗಿದಿದೆ ಮತ್ತು ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದೆ.

ಕೇಸರಿ ಭಯೋತ್ಪಾದನಾ ಜಾಲದ ಶಂಕೆಯಿರುವ ಮೂರು ಪ್ರಕರಣಗಳ ತನಿಖೆಯ ಕುರಿತು ಗೃಹ ಸಚಿವಾಲಯವು ಸುತ್ತೋಲೆ ಹೊರಡಿಸಿದೆ ಮತ್ತು ಇದು ಎನ್‌ಐಎಯಿಂದ ತನಿಖೆ ನಡೆಯಲಿದೆ. ಸುಮಾರು 65 ಮಂದಿಯ ಸಾವಿಗೆ ಕಾರಣವಾದ ಸಂಜೋತಾ ಸ್ಫೋಟ ಪ್ರಕರಣದ ತನಿಖೆಯನ್ನು ಎನ್‌ಐಎ ಈಗಾಗಲೇ ನಿರ್ವಹಿಸುತ್ತಿದೆ. 2006ರ ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಎಟಿಎಸ್ 9 ಮಂದಿಯ ವಿರುದ್ಧ ದೋಷಾರೋಪ ದಾಖಲಿಸಿದೆ ಮತ್ತು ಅವರು ನಿಷೇದಿತ ಸಿಮಿ ಹಾಗೂ ಲಷ್ಕರೆ ತಯ್ಯಿಬ ಕಾರ್ಯಕರ್ತರೆಂದು ಆಪಾದಿಸಿದೆ. ಆದಾಗ್ಯೂ, ಕೇಸರಿ ಭಯೋತ್ಪಾದನಾ ಜಾಲದ ರೂವಾರಿ ಎಂದು ಪರಿಗಣಿಸಲಾಗಿರುವ ಸ್ವಾಮಿ ಅಸೀಮಾನಂದ ನ್ಯಾಯಾಲಯವೊಂದರಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದರಲ್ಲಿ ಈ ಪ್ರಕರಣದಲ್ಲೂ ಕೇಸರಿ ಭಯೋತ್ಪಾದಕರ ಕೈವಾಡವಿದ್ದುದು ಬೆಳಕಿಗೆ ಬಂದಿದೆ. ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿಯೂ ಹೆಚ್ಚಿನ ಸುಳಿವೇನೂ ದೊರಕಿಲ್ಲ. ಆದರೆ ಅಜ್ಮೀರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಎಟಿಎಸ್ ಅಸೀಮಾನಂದ ಸಹಿತ ನಾಲ್ವರನ್ನು ಬಂಧಿಸಿದೆ. ಇದೀಗ ಹೆಚ್ಚಿನ ತನಿಖೆಗಾಗಿ ಈ ಮೂರು ಪ್ರಕರಣಗಳನ್ನು ಎನ್‌ಐಎ ವಶಕ್ಕೆ ಅಧಿಕೃತವಾಗಿ ಒಪ್ಪಿಸಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ