ಗುರುವಾರ, ಏಪ್ರಿಲ್ 07, 2011

ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸುವ, ನ್ಯಾಯ ಕೊಡಲು ಆಗದ, ರಾಜಕಾರಣಿಗಳ ಹಿಂಬಾಲಕರಾಗಿ ಕಾರ್ಯ ನಿರ್ವಹಿಸುವ ಜಿಲ್ಲಾಧಿಕಾರಿ, ತಹಶೀಲ್ದಾರ್ ಹುದ್ದೆಯನ್ನು ರದ್ದುಮಾಡಬೇಕು:ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

ರೈತರ ಮೇಲಿನ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಲ್ಲದೆ, ರೈತರ ಮನೆ, ಆಸ್ತಿಯೊಳಗೆ ನುಗ್ಗಿ ಜಪ್ತಿ ಮಾಡುವ ಕಾರ್ಯವನ್ನು ಅಧಿಕಾರಿಗಳು ತಕ್ಷಣಕ್ಕೆ ನಿಲ್ಲಿಸಬೇಕು. ರೈತರ ಈ ಪ್ರಮುಖ ಬೇಡಿಕೆಗಳಿಗೆ 20 ದಿನಗಳೊಳಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಉಗ್ರವಾದ ಚಳವಳಿಯನ್ನು ನಡೆಸುವುದಲ್ಲದೆ,ರೈತರ ಮನೆಗಳಿಗೆ ಜಪ್ತಿ ಮಾಡಲು ಬರುವ ಅಧಿಕಾರಿಗಳನ್ನು ಕಾನೂನಿನ ಪ್ರಕಾರ ಮರುಜಪ್ತಿ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ಡಿಸಿ, ತಹಶೀಲ್ದಾರ್ ಹುದ್ದೆ ರದ್ದಾಗಲಿ
 ಇಂದು ರೈತ ಸಂಘದಿಂದ ಮುತ್ತಿಗೆ ಕಾರ್ಯಕ್ರಮದ ಬಗ್ಗೆ ಜಿಲ್ಲಾಡಳಿತಕ್ಕೆ ಪೂರ್ವಭಾವಿಯಾಗಿ ಸೂಚನೆ ನೀಡಲಾಗಿದ್ದರೂ ರೈತರ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಸುಬೋದ್ ಯಾದವ್ ಕಚೇರಿಯಲ್ಲಿಲ್ಲ ಎಂಬ ಮಾಹಿತಿ ದೊರತಾಗ ಸಿಟ್ಟುಗೊಂಡ ಕೋಡಿಹಳ್ಳಿ ಚಂದ್ರಶೇಖರ್, ನಾಗರಿಕರ ಸಮಸ್ಯೆಗಳನ್ನು ಸರಕಾರಕ್ಕೆ ಮುಟ್ಟಿಸುವ, ನ್ಯಾಯ ಕೊಡಲು ಆಗದ, ರಾಜಕಾರಣಿಗಳ ಹಿಂಬಾಲಕರಾಗಿ ಕಾರ್ಯ ನಿರ್ವಹಿಸುವ ಜಿಲ್ಲಾಧಿಕಾರಿ, ತಹಶೀಲ್ದಾರ್ ಹುದ್ದೆಯನ್ನು ರದ್ದುಮಾಡಬೇಕು ಎಂದು ಹೇಳಿದರು.


ಮಾತ್ರವಲ್ಲದೆ, ತಹಶೀಲ್ದಾರ್ ಹುದ್ದೆಯನ್ನು ತಾಲೂಕು ಹೆಡ್ ಗುಮಾಸ್ತ, ಜಿಲ್ಲಾಧಿಕಾರಿ ಹುದ್ದೆಯನ್ನು ಜಿಲ್ಲಾ ಹೆಡ್ ಗುಮಾಸ್ತ ಎಂದು ಬದಲಾಯಿಸಬೇಕೆಂದು ಹೇಳಿದರು.

ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರಾದರೂ ಜಿಲ್ಲಾಧಿಕಾರಿ ಅಕ್ರಮ ಮರಳುಗಾರಿಕೆಗೆ ತೆರಳಿದ್ದಾರೆಂಬ ಮಾಹಿತಿಯನ್ನು ಪೊಲೀಸರು ನೀಡಿದಾಗ ಅಸಮಾಧಾನಗೊಂಡ ಕೋಡಿಹಳ್ಳಿ, ಜಿಲ್ಲಾಧಿಕಾರಿ ಬರುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದರು.

ಕೊನೆಗೆ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಸ್ಥಳಕ್ಕೆ ಆಗಮಿಸಿ, ರೈತರ ಬೇಡಿಕೆಗಳ ಕುರಿತಂತೆ ಜಿಲ್ಲಾಡಳಿತ ಹಾಗೂ ಸರಕಾರದ ಅವಗಾಹನೆಗೆ ತರುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆಯನ್ನು ಕೊನೆಗೊಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಮಧ್ಯಾಹ್ನ ಸುಮಾರು 12 ಗಂಟೆಯಿಂದ ಮೂರು ಗಂಟೆಯವರೆಗೆ ಉರಿ ಬಿಸಿಲಲ್ಲಿ ಕುಳಿತೇ ರೈತರು ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ ಸಾವಿರಾರು ಸಂಖ್ಯೆಯಲ್ಲಿ ರೈತರು ನಗರದ ಜ್ಯೋತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಮೆರವಣಿಗೆ ಸುಮಾರು 11:30ರ ವೇಳೆಗೆ ಜ್ಯೋತಿ ಸರ್ಕಲ್‌ನಿಂದ ಹೊರಟಿತ್ತು.

ಅಡಿಕೆ ಬೆಳೆಗಾರರು ಸೇರಿದಂತೆ ದ.ಕ. ಜಿಲ್ಲೆಯ ರೈತರ ವಿವಿಧ ಬೇಡಿಕೆಗಳು ಹಾಗೂ ಹಕ್ಕೊತ್ತಾಯಗಳನ್ನು ಮುಂದಿಟ್ಟು ಇಂದು ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಚಳವಳಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರೈತರು ಬೆಳೆಯುವ ಬೆಳೆಗಳ ಬಗ್ಗೆ ಖರ್ಚು ವೆಚ್ಚಗಳನ್ನು ಸರಕಾರ ವೈಜ್ಞಾನಿಕವಾಗಿ ಲೆಕ್ಕಹಾಕಿ ಸಮಗ್ರ ತೀರ್ಮಾನ ಕೈಗೊಳ್ಳಬೇಕು. ರೈತರ ಸಾಲ ಮನ್ನಾ ಮಾಡಲಾಗಿದೆ ಎಂಬ ಬಗ್ಗೆ ‘ಸಾಲ ಬಾಕಿ ಇಲ್ಲ’ ಎಂಬ ಪ್ರಮಾಣ ಪತ್ರವನ್ನು ಜಿಲ್ಲಾಡಳಿತ ದ.ಕ. ಜಿಲ್ಲೆಯ ರೈತರಿಗೆ ನೀಡಬೇಕು. ಎಪ್ರಿಲ್ 11, 18 ಮತ್ತು 19ರಂದು ಉಪ್ಪಿನಂಗಡಿಯ ಕೆಲ ರೈತರ ಮನೆ ಜಪ್ತಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಒಂದು ವೇಳೆ ಜಪ್ತಿಗೆ ಮುಂದಾದಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಪ್ರಾಣ, ಮಾನ ಹಾಗೂ ಆಸ್ತಿಯ ರಕ್ಷಣೆಗಾಗಿರುವ ಕಾನೂನಿನ ಪ್ರಕಾರ ಜಪ್ತಿಗೆ ಆಗಮಿಸುವ ಅಧಿಕಾರಿಗಳ ಪ್ರಾಣವನ್ನು ಹೊರತುಪಡಿಸಿ ರೈತರು ಮರು ಜಪ್ತಿ ಮಾಡುವ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

ಯಡಿಯೂರಪ್ಪ ಸರಕಾರದಿಂದ 85000 ಕೋಟಿ ರೂ. ಸಾಲ!: ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ರೈತರಿಗಾಗಿ ಮಾಡಿರುವ ಶೂನ್ಯ. ಆದರೆ, ಜನರ ಅಭಿವೃದ್ಧಿಯ ಹೆಸರಿನಲ್ಲಿ ಯಡಿಯೂರಪ್ಪ ಮಾಡಿರುವ ಸಾಲ 85,000 ಕೋಟಿ ರೂ.ಗಳು. ಇತ್ತೀಚೆಗೆ ಮಂಡಿಸಲಾದ ಬಜೆಟ್ ಅನುಷ್ಠಾನಕ್ಕೆ ತರಬೇಕಾದರೆ ಮುಖ್ಯಮಂತ್ರಿ ಮತ್ತೆ 15,000 ಕೋಟಿ ರೂ. ಸಾಲ ಮಾಡಬೇಕಾಗುತ್ತದೆ. ಈ ರೀತಿ ಯಡಿಯೂರಪ್ಪರ ಮೂಲಕ ರಾಜ್ಯವು ಒಂದು ಲಕ್ಷ ಕೋಟಿ ಸಾಲದಲ್ಲಿದೆ. ಹಾಗಾಗಿ ಅದರೊಂದಿಗೆ ಈ ರೈತರ ಸುಮಾರು 20000 ಕೋಟಿರೂ. ಸಾಲ ಸೇರಿದಂತೆ ಎಲ್ಲಾ ಸಾಲವನ್ನು ತೀರಿಸುವ ನಿರ್ಧಾರವನ್ನು ಸರಕಾರ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಕರ್ನಾಟಕದ ಇತಿಹಾಸದಲ್ಲಿ ಬದಲಾವಣೆ ತರುವ ಕೆಲಸ ಮಂಗಳೂರಿನಿಂದಲೇ ಆಗಲಿ ಎಂದು ಹೇಳಿದ ಅವರು, ರೈತರ ಮೇಲಿನ ಶೋಷಣೆ ಮುಂದುವರಿದರೆ ರೈತರು ಕಾಲಿನ ಚಪ್ಪಲಿ ಕೈಗೆತ್ತಿ ವಿಧಾನಸೌಧಕ್ಕೆ ಬರುವರು ಎಂದು ಖಾರವಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಅಣ್ಣಾ ಹಝಾರೆಗೆ ರೈತ ಸಂಘದ ಬೆಂಬಲ ವ್ಯಕ್ತಪಡಿಸಿದ ಅವರು, ಲೋಕಪಾಲ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ರೈತ ಸಂಘದಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ಹೇಳಿದರು.

11ರಂದು ಕೊಪ್ಪಳ ಎಸ್ಪಿ ಕಚೇರಿಗೆ ಬಾರ್‌ಕೋಲ್ ಚಾರ್ಜ್: ಕೊಪ್ಪಳದಲ್ಲಿ ಇತ್ತೀಚೆಗೆ ಕೂಲಿ ಕೇಳಲು ಹೋದ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಲ್ಲದೆ, ಬೂಟುಕಾಲಿನಿಂದ ತುಳಿಯುವ ಅಮಾನವೀಯ ಕೃತ್ಯವೆಸಗಿದ ಪೊಲೀಸರನ್ನು ಈಗಾಗಲೆ ಅಮಾನತು ಮಾಡಲಾಗಿದ್ದರೂ ಕೊಪ್ಪಳದ ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರರನ್ನು ಅಮಾನತು ಮಾಡಿಲ್ಲ. ಎ.11ರೊಳಗೆ ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ರೈತರು ಬಾರ್‌ಕೋಲ್ ಹಿಡಿದು ಎಸ್ಪಿ ಕಚೇರಿಗೆ ನುಗ್ಗಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಈ ಸಂದರ್ಭ ಎಚ್ಚರಿಕೆ ನೀಡಿದರು.

ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಮಾತನಾಡಿ, ಕೆಂಪು ಅಡಿಕೆ, ಬಿಳಿ ಅಡಿಕೆಯ ತಲಾ ಕೆಜಿ ಒಂದಕ್ಕೆ ತಲಾ 140 ರೂ. ಹಾಗೂ 104 ರೂ. ಉತ್ಪಾದನಾ ವೆಚ್ಚ ತಗಲುತ್ತಿದ್ದು, ಸರಕಾರ ನೀಡುವ ಬೆಂಬಲ ಬೆಲೆಯಿಂದ ಅಡಿಕೆ ರೈತರು ಬೆಳೆ ಬೆಳೆಯಲು ಅಸಾಧ್ಯ ಎಂದರು.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರವಿಕಿರಣ್ ಪುಣಚ ಮಾತನಾಡಿ, ವಿಧಾನಸಭೆ, ಸಂಸತ್ತಿನಲ್ಲಿ ರೈತರ ಸಂಕಷ್ಟಗಳ ಬಗ್ಗೆ ದನಿ ಎತ್ತಲು ಆಗದ ರಾಜಕಾರಣಿಗಳು ರಾಜೀನಾಮೆ ನೀಡಲಿ ಎಂದರು.

ಹಗಲು ರೈಲು ವಾರದ ಏಳು ದಿನಗಳಲ್ಲೂ ಓಡಾಡುವಂತಾಗಬೇಕು, ರೈಲೊಂದಕ್ಕೆ ತುಳುನಾಡು ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಬೇಕೆಂದು ರವಿಕಿರಣ ಪುಣಚ ಒತ್ತಾಯಿಸಿದರು.

ನಾಳೆ ಸಚಿವ ಆಚಾರ್ಯರ ಮನೆ ಎದುರು ಪ್ರತಿಭಟನೆ: ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರವನ್ನು ಮುಚ್ಚುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಎಸ್. ಆಚಾರ್ಯ ಅವರ ಮನೆ ಎದುರು ನಾಳೆ ರೈತ ಸಂಘದ ವತಿಯಿಂದ ಬಾರ್‌ಕೋಲ್ ಹಿಡಿದು ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಉಡುಪಿ ಜಿಲ್ಲಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ತಿಳಿಸಿದರು. ಉಡುಪಿಯಿಂದ ಕಲ್ಲಿದ್ದಲನ್ನು ರೈಲಿನ ಮೂಲಕ ಒಯ್ಯುವುದನ್ನು ನಿಲ್ಲಿಸದಿದ್ದರೆ ರೈಲು ತಡೆ ಮಾಡಲಾಗುವದು ಎಂದು ಅವರು ಈ ಸಂದರ್ಭ ಎಚ್ಚರಿಸಿದರು.








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ