ಬುಧವಾರ, ಫೆಬ್ರವರಿ 09, 2011

ನೀಲಾಕಾಶದಲ್ಲಿ ಚಿತ್ತಾರ ಬಿಡಿಸುವ ವಿಮಾನಗಳು, ಬಣ್ಣ ಬಣ್ಣದ ಹೊಗೆ ಉಗುಳುತ್ತಾ ಹಾರಾಡಲಿರುವ ವರ್ಣಮಯ ಬಾನಾಡಿಗಳು

ವೈಮಾನಿಕ ಪ್ರದರ್ಶನಕ್ಕೆ ಇಂದು ಚಾಲನೆ

ಬೆಂಗಳೂರು : ನೀಲಾಕಾಶದಲ್ಲಿ ಚಿತ್ತಾರ ಬಿಡಿಸುವ ವಿಮಾನಗಳು, ಬಣ್ಣ ಬಣ್ಣದ ಹೊಗೆ ಉಗುಳುತ್ತಾ ಹಾರಾಡಲಿರುವ ವರ್ಣಮಯ ಬಾನಾಡಿಗಳು, ಗಗನದಲ್ಲಿ ರುದ್ರನರ್ತನ ನಡೆಸುತ್ತಾ ನೋಡುಗರ ಮೈನವಿರೇಳಿಸುವ ರೌದ್ರಾವತಾರಿಗಳು, ಕೇಸರಿಬಿಳಿ ಹಸಿರು ಪ್ಯಾರಾಚೂಟ್‌ ಕಟ್ಟಿಕೊಂಡು ಮುಗಿಲಲ್ಲಿ ನೃತ್ಯ ಮಾಡುವ ಸಾಹಸಿಗರು, ಭೂಮಿಯಿಂದ ನಭದತ್ತ ಜಿಗಿದು ಚೆಲ್ಲಾಟವಾಡುವ ಲೋಹದ ಹಕ್ಕಿಗಳು, ರಕ್ಷಣಾ ಕ್ಷೇತ್ರದಲ್ಲಾದ ಕ್ರಾಂತಿಕಾರಕ ಬದಲಾವಣೆಯ ದಾಖಲೆಯನ್ನು ಬರೆವ ರಕ್ಷಣಾ ವಿಮಾನಗಳು. . .

ಹೀಗೆ ಗಗನದಲ್ಲಿ ತರಹೇವಾರಿ, ಬಣ್ಣಬಣ್ಣದ ವಿಮಾನಗಳ ತನನನಾ ನೋಡಬೇಕಾದರೆ ನೀವು ಬೆಂಗಳೂರಿನ ಹೊರವಲಯದಲ್ಲಿರುವ ಯಲಹಂಕದ ವಾಯುನೆಲೆಗೆ ಬರಬೇಕು. ಏಷ್ಯದ ಅತಿದೊಡ್ಡ ವೈಮಾನಿಕ ಪ್ರದರ್ಶನ-ವಿಮಾನಗಳ ವರ್ಣರಂಜಿತ ಹಾರಾಟದ ದರ್ಶನ ಎಂದು ಕರೆಯಲಾಗುವ '8ನೇ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ'ವು ಫೆ.9ರಿಂದ 13ರವರೆಗೆ ರಾಜಧಾನಿಯ ಜನತೆಯ ಕಣ್ಮನಗಳಿಗೆ ಹಬ್ಬವನ್ನು ತರಲಿದೆ. ನೋಡುಗರ ಎದೆ ಝಲ್ಲೆನಿಸುವಂತೆ ಪೈಲಟ್‌ಗಳು ಆಕಾಶದಲ್ಲಿ ವಿಮಾನಗಳ ಜತೆ ಚೆಲ್ಲಾಟ ಮಾಡಲಿದ್ದಾರೆ.

ಫೆ.9ರಂದು ಬೆಳಗ್ಗೆ 9ಗಂಟೆಗೆ ಉದ್ಘಾಟನೆಯಾಗಲಿರುವ ವೈಮಾನಿಕ ಪ್ರದರ್ಶನ ದೇಶವಿದೇಶಗಳ ವೈಮಾನಿಕ ಹಾಗೂ ಬಾಹ್ಯಾಕಾಶ ಕ್ಷೇತ್ರದ ಸಾಧನೆಯನ್ನು ಇಡೀ ವಿಶ್ವಕ್ಕೆ ತೋರಿಸಲಿದೆ. ವೈಮಾನಿಕ ಕ್ಷೇತ್ರದ ನೂರಾರು ಸಂಸ್ಥೆಗಳು ಇದರಲ್ಲಿ ಪಾಲ್ಗೊಂಡು ತಮ್ಮ 2 ವರ್ಷದ ಸಾಧನೆಯನ್ನು ಜಗತ್ತು ನಿಬ್ಬೆರಗಾಗುವಂತೆ ಪ್ರಸ್ತುತ ಪಡಿಸಲಿವೆ.

ಏಷ್ಯದಲ್ಲಿ 2 ವರ್ಷಕ್ಕೊಮ್ಮೆ ನಡೆಯುವ ಈ ಪ್ರದರ್ಶನವು ಭಾರತ ಮಾತ್ರವಲ್ಲದೇ ವಿಶ್ವದ ಕಂಪನಿಗಳು ತಮ್ಮ ಸಾಧನೆಯನ್ನು ಜಗತ್ತಿನ ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ತೋರಿಸಲು ವೇದಿಕೆಯಾಗಲಿದೆ.

2009ರ ಫೆಬ್ರವರಿಯಲ್ಲಿ ನಡೆದ ವೈಮಾನಿಕ ಪ್ರದರ್ಶನದಲ್ಲಿ ವಿದೇಶದ 303 ಹಾಗೂ ಭಾರತದ 289 ಕಂಪನಿಗಳು ಸೇರಿ 592 ಪ್ರದರ್ಶಕರು ಪಾಲ್ಗೊಂಡಿದ್ದರು. ಈ ವರ್ಷದ 675 ಪ್ರದರ್ಶಕರು ಭಾಗವಹಿಸಲಿದ್ದಾರೆ. ಶೇ.16 ರಷ್ಟು ಪ್ರಮಾಣದಲ್ಲಿ ಪ್ರದರ್ಶಕರ ಸಂಖ್ಯೆ ಜಾಸ್ತಿಯಾಗಿದೆ. ಕಳೆದ ಸಾಲಿನಲ್ಲಿ 56 ವಿಮಾನಗಳು ತಮ್ಮ ಪ್ರದರ್ಶನ ಶಕ್ತಿ ಸಾಮರ್ಥಯ ಪ್ರದರ್ಶಿಸಲಿದ್ದರೆ ಈ ವರ್ಷ ಇದರ ಸಂಖ್ಯೆ ನೂರರಷ್ಟಿದೆ. 2009ರಲ್ಲಿ 50,121 ವ್ಯವಹಾರ ಪ್ರತಿನಿಧಿಗಳು ಭೇಟಿ ನೀಡಿದ್ದರೆ, 2,50,210 ಮಂದಿ ವೀಕ್ಷಕರು ಭಾಗವಹಿಸಿದ್ದರು.

29 ದೇಶಗಳ 380 ಕಂಪನಿಗಳು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಅದರಲ್ಲಿ ಅಮೆರಿಕದ 250 ಕಂಪನಿಗಳು, ಜರ್ಮನಿಯ 35, ಇಟಲಿಯ 10, ಉಳಿದ ದೇಶಗಳ 35 ಕಂಪನಿಗಳು ಭಾಗವಹಿಸಲಿವೆ. ಭಾರತದ 295 ಕಂಪನಿಗಳು ಪ್ರದರ್ಶನದಲ್ಲಿರಲಿವೆ.

ಏನು ವಿಶೇಷ: ಭಾರತವು 2 ದಶಕಗಳ ನಿರಂತರ ಯತ್ನದ ನಂತರ ರೂಪಿಸಿದ ಎಡಿಇ ತಯಾರಿಕೆಯ ತೇಜಸ್‌ ಲಘು ಯುದ್ಧವಿಮಾನವು ಈ ಬಾರಿ ತನ್ನ ಸಾಹಸವನ್ನು ಪ್ರದರ್ಶಿಸಲಿದೆ. ಎಚ್‌ಎಎಲ್‌ನ ರೂಪಿಸಿದ ಲಘು ಯುದ್ಧ ಹೆಲಿಕಾಪ್ಟರ್‌ ತನ್ನ ಶಕ್ತಿಯನ್ನು ತೋರಿಸಲಿದ್ದು, ಆಯುಧ ಎಸೆಯುವ ಪ್ರಯೋಗವನ್ನು ಕಾಣಿಸಲಿದೆ. ತರಬೇತಿ ಯುದ್ಧ ವಿಮಾನವಾದ ಕಿರಣದ ಸುಧಾರಿತ ರೂಪವಾದ ಸಾರಂಗ್‌ ಕೂಡ ಗಗನದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸಲಿದೆ.

ಅಮೆರಿಕದ ಮಧ್ಯಮ ತೂಕದ ಬಹು ಆಯಾಮಗಳ ಯುದ್ಧವಿಮಾನ(ಎಂಎಂಆರ್‌ಸಿಎ)ಗಳು ಈ ಬಾರಿಯ ವಿಶೇಷ ಆಕರ್ಷಣೆ. ಇದರ ಜತೆಗೆ ಅಮೆರಿಕದ ಬೋಯಿಂಗ್‌ ಎಫ್/ಎ-18 ಸೂಪರ್‌ ಹಾರ್ನೆಟ್‌, ಲಾಕ್‌ಹೀದ್‌ ಮಾರ್ಟಿನ್ಸ್‌ ಎಫ್-16 ಸೂಪರ್‌ ವೈಪರ್‌, ರಷ್ಯಾದ ಮಿಗ್‌-35, ಫಾÅನ್‌ಲೆ ದಸ್ಸಾಲ್ಟ್$Õ ರಾಯಫಾಲೆ, ಯುರೋಪಿಯನ್‌ ಯೂನಿಯನ್‌ನ ಯೂರೋ ಫೈಟರ್‌ ತೈಫ‌ೂನ್‌, ಸ್ವೀಡನ್‌ನ ಗ್ರಿಪ್ಪನ್‌ ಕುತೂಹಲಿಗರು ನೋಡಲೇಬೇಕಾದ ಹಾರಾಟ ನಡೆಸಲಿವೆ.


ಯಾರಿಗೆ ಹೇಗೆ ಪ್ರವೇಶ
ಐದು ದಿನಗಳ ಕಾಲ ನಡೆಯಲಿರುವ ವೈಮಾನಿಕ ಪ್ರದರ್ಶನ ವೀಕ್ಷಿಸಲು ಆಸಕ್ತಿಯಿರುವ ಸಾರ್ವಜನಿಕರಿಗೆ ವೈಮಾನಿಕ ಹಾರಾಟ ವೀಕ್ಷಣಾ ಪ್ರದೇಶಕ್ಕೆ ಮಾತ್ರ ಅವಕಾಶವಿದೆ. ಪ್ರತಿಯೊಬ್ಬರೂ ಬ್ಯಾಂಕ್‌ನಲ್ಲಿ ಖರೀದಿಸಲಾದ ಟಿಕೆಟ್‌ ಜತೆಗೆ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ, ಪಾಸ್‌ಪೋರ್ಟ್‌ ಅಥವಾ ಸರ್ಕಾರ ನೀಡಿದ ಯಾವುದಾದರೂ ಐಡಿ ಕಾರ್ಡ್‌ ಹೊಂದಿರಬೇಕಾದುದು ಕಡ್ಡಾಯ.

*ಪ್ರದರ್ಶನ ಆರಂಭವಾಗುವ 1 ಗಂಟೆ ಮೊದಲು ಗೇಟಿನೊಳಗೆ ಬಿಡಲಾಗುತ್ತದೆ.

*ಖರೀದಿಸಿದ ಟಿಕೆಟ್‌ ತೋರಿಸಿ ಪ್ರವೇಶ ಪತ್ರ ಪಡೆಯಬೇಕು.

*ಪ್ರತಿಯೊಬ್ಬರೂ ಸುರಕ್ಷತಾ ತಪಾಸಣೆಗೆ ಒಳಗಾಗಬೇಕು.

*ಯಾವುದೇ ಆಹಾರ ಪದಾರ್ಥ ಒಯ್ಯುವಂತಿಲ್ಲ.

*ಚಾಕು-ಚೂರಿ, ಬ್ಯಾಗು, ಬ್ರಿàಫ್ಕೇಸ್‌, ಹ್ಯಾಂಡ್‌ಬ್ಯಾಗ್‌, ಆಯುಧಗಳನ್ನು ಕೊಂಡೊಯ್ಯವಂತಿಲ್ಲ.

*ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶ.


ಟಿಕೆಟ್‌ ದರ:

ಬುಧವಾರ, ಗುರುವಾರ, ಶುಕ್ರವಾರ 400 ರೂ.

ಶನಿವಾರ-ಭಾನುವಾರ 500 ರೂ.


ಟಿಕೆಟ್‌ ದೊರೆವ ಸ್ಥಳ:
ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಈ ಶಾಖೆಗಳು: ಎಡಿಇ, ಎಲೆಕ್ಟ್ರಾನಿಕ್ಸ್‌ ಸಿಟಿ, ಇಂದಿರಾನಗರ, ಜೆ.ಪಿ. ನಗರ, ಜಯನಗರ 2 ಬ್ಲಾಕ್‌, ಕೋರಮಂಗಲ, ಎಂ.ಜಿ. ರಸ್ತೆ, ಮಲ್ಲೇಶ್ವರಂ, ಆರ್‌.ಟಿ. ನಗರ, ರಾಜಾಜಿನಗರ 4 ನೇ ಬ್ಲಾಕ್‌, ವೈಟ್‌ ಫೀಲ್ಡ್‌, ಯಲಯಂಕ ಉಪನಗರ.

ಪ್ರದರ್ಶನದ ಅವಧಿ: ಫೆ.9ರಂದು 2 ರಿಂದ 5ಗಂಟೆ

ಉಳಿದೆಲ್ಲಾ ದಿನ: ಬೆಳಗ್ಗೆ 10ರಿಂದ ಸಂಜೆ 5ಗಂಟೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ