* ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರುಪಡಿಸದೆ ಜೈಲಿನಲ್ಲಿ ಕೊಳೆಯುತ್ತಿರುವ ಆರೋಪಿಗಳು * ನ್ಯಾಯದ ನಿರೀಕ್ಷೆಯಲ್ಲಿ ಅತಂತ್ರಗೊಂಡ ಕುಟುಂಬಗಳು * ಗಂಭೀರ ಪ್ರಕರಣದ ವಿಚಾರಣೆ ಕುರಿತು ಘೋರ ನಿರ್ಲಕ್ಷ
ಮಂಗಳೂರು, ಜ.9: ಕರಾವಳಿ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ‘ಉಗ್ರ’ರ ಬಂಧನ ಪ್ರಕರಣ ನಡೆದು ಸುಮಾರು ಎರಡೂವರೆ ವರ್ಷಗಳಾದರೂ ಅದರ ವಿಚಾರಣೆಯೇ ಆರಂಭವಾಗಿಲ್ಲ ! ಈ ಅವಧಿಯಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಕೇವಲ ಒಮ್ಮೆ ಮಾತ್ರ !
2008ರ ಅಕ್ಟೋಬರ್ 3ರಂದು ಮುಂಬೈ ಹಾಗೂ ಮಂಗಳೂರಿನ ಪೊಲೀಸರು ವಿಶೇಷ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಹಾಗೂ ಸುತ್ತಮುತ್ತಲ ಕೆಲವೆಡೆ ಹಠಾತ್ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡರು.ಅಕ್ಟೋಬರ್ 16,2010ರಂದು ಮತ್ತೆ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಭಾರತೀಯ ದಂಡ ಸಂಹಿತೆ, ಅಕ್ರಮ ಚಟುವಟಿಕೆಗಳ ಕಾಯ್ದೆ, ಎಕ್ಸ್‌ಪ್ಲೊಸಿವ್ಸ್ ಆಕ್ಟ್ (1984), ಇಂಡಿಯನ್ ಎಕ್ಸ್‌ಪ್ಲೋಸಿವ್ ಸಬ್‌ಸ್ಟೆನ್ಸ್ ಆಕ್ಟ್ (1908) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಂತಹ ಕಠಿಣ ಕಾಯ್ದೆಗಳ ವಿವಿಧ ಕಲಂಗಳನ್ವಯ ಒಟ್ಟು 13 ಆರೋಪಿಗಳ ವಿರುದ್ಧ ದೋಷಾರೋಪಣೆ ಹೊರಿಸಲಾಗಿತ್ತು.
ಈ ಪೈಕಿ 7 ಆರೋಪಿಗಳ ಬಂಧನವಾಗಿದ್ದು ಉಳಿದ 6ಮಂದಿ ತಲೆಮರೆಸಿ ಕೊಂಡಿದ್ದಾರೆ ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿತ್ತು.ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಬಂಧಿತನಾದ ಆರೋಪಿ ಶಬ್ಬೀರ್‌ನನ್ನು ಪುಣೆಯ ಜೈಲಿನಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಇಂತಹ ಗಂಭೀರ ಪ್ರಕರಣವೊಂದರ ವಿಚಾರಣೆ ಮಾತ್ರ ಇಂದಿನವರೆಗೂ ಪ್ರಾರಂಭವಾಗಿಲ್ಲ. ವಿಚಾರಣೆ ಪ್ರಾರಂಭಿಸಲು ಎಲ್ಲ ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು.
ಅದನ್ನೂ ಪೊಲೀಸರು ಈವರೆಗೆ ಮಾಡಿಲ್ಲ ! ಪ್ರಕರಣದ ಮೊದಲ ಇಬ್ಬರು ಆರೋಪಿಗಳಾದ ಮಂಗಳೂರಿನ ಸುಭಾಶ್‌ನಗರದ ನೌಶಾದ್ ಹಾಗೂ ಹಳೆಯಂಗಡಿಯ ಅಹ್ಮದ್ ಬಾವಾರನ್ನು ಗುಜರಾತ್‌ನಲ್ಲಿ ನಡೆದ ಸ್ಫೋಟ ಪ್ರಕರಣಗಳಲ್ಲಿ ಪಾಲ್ಗೊಂಡ ಆರೋಪದಲ್ಲಿ ಗುಜರಾತ್ ಕಾರಾಗೃಹದಲ್ಲಿಡಲಾಗಿದೆ. ಉಳಿದ ಆರೋಪಿಗಳಲ್ಲಿ ಉಳ್ಳಾಲದ ತಂದೆ ಮಗ ಮುಹಮ್ಮದಲಿ-ಜಾವೇದ್ ಅಲಿ ಹಾಗೂ ಬೋಳಂತೂರಿನ ರಫೀಕ್ ಬೆಂಗಳೂರು ಜೈಲಿನಲ್ಲಿದ್ದರೆ ಉಚ್ಚಿಲದ ಫಕೀರ್‌ಗೆ ಶರತ್ತುಬದ್ಧ ಜಾಮೀನು ಸಿಕ್ಕಿದೆ.
ಇನ್ನೊಬ್ಬ ಆರೋಪಿ ಶಬ್ಬೀರ್ ಪುಣೆಯ ಜೈಲಿನಲ್ಲಿದ್ದಾನೆ. ಆದರೆ ಜೈಲಿನಲ್ಲಿರುವ ಆರೋಪಿಗಳನ್ನು ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸದೇ ಇರುವುದರಿಂದ ಇಂತಹ ಗಂಭೀರ ಪ್ರಕರಣದ ತನಿಖೆ ನನೆಗುದಿಗೆ ಬಿದ್ದಿದೆ. ವಿಚಾರಣೆಯೇ ನಡೆಯದೆ ಆರೋಪಿಗಳು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ನಾವು ಯಾರಲ್ಲಿ ನ್ಯಾಯ ಕೇಳಬೇಕು: ಮೈಮುನಾ ಪ್ರಶ್ನೆ
‘‘ ವಿಚಾರಣೆಯಿಲ್ಲದೆ ನನ್ನ ಪತಿ ಮುಹಮ್ಮದಲಿ ಮತ್ತು ಮಗ ಜಾವೆದ್ ಅಲಿ ಜೈಲಿನಲ್ಲಿ ಕೊಳೆಯುವಂತಾಗಿದೆ. ಮೊದಲೇ ಅನಾರೋಗ್ಯ ಪೀಡಿತರಾಗಿದ್ದ ಪತಿಯ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ರಕ್ತದೊತ್ತಡ, ಸಿಹಿ ಮೂತ್ರ ಕಾಯಿಲೆ ಉಲ್ಬಣಿಸಿರುವ ಬಗ್ಗೆ ಅವರನ್ನು ತಪಾಸಣೆ ನಡೆಸಿರುವ ವೈದ್ಯರೇ ಎಚ್ಚರ ವಹಿಸಲು ಸೂಚನೆ ನೀಡಿದ್ದಾರೆ ಎಂದು ಎರಡು ತಿಂಗಳ ಹಿಂದೆ ಜೈಲಿನಲ್ಲಿ ಭೇಟಿ ಮಾಡಿದಾಗ ಪತಿ ಹೇಳಿದರು.’’ ಎಂದು ಮುಹಮ್ಮದಲಿಯ ಪತ್ನಿ ಮೈಮೂನಾ ಅಳಲು ತೋಡಿಕೊಳ್ಳುತ್ತಾರೆ.
‘‘ಪೊಲೀಸರು ಏಕೆ ಬಂಧಿಸಿದ್ದಾರೆ ಎನ್ನುವುದೇ ಪ್ರಶ್ನೆ: ನನ್ನ ಗಂಡ ಆಟೋ ಚಾಲಕನಾಗಿ ಕಷ್ಟಪಟ್ಟು ದುಡಿಯುತ್ತಿದ್ದ ವ್ಯಕ್ತಿ, ಸಂಸಾರದ ಖರ್ಚು ನಿಭಾಯಿಸಲು ಎಲೆಕ್ಟ್ರಿಶಿಯನ್ ಜೊತೆಗೂ ದುಡಿಯುತ್ತಿದ್ದರು. ಇಲ್ಲೇ ಹಲವಾರು ವರ್ಷದಿಂದ ನೆಲೆಸಿದ್ದಾರೆ. ಉಳಿಸಿದ ಹಣದೊಂದಿಗೆ ಕಷ್ಟಪಟ್ಟು ಮನೆ ಕಟ್ಟಿ ಪೂರ್ತಿಯಾಗುವ ಮೊದಲೇ ಎರಡು ವರ್ಷ ನಾಲ್ಕು ತಿಂಗಳ ಹಿಂದೆ ಮುಂಜಾನೆ ಪೊಲೀಸರ ದಂಡೇ ಬಂದು ಗಂಡನನ್ನು ಬಂಧಿಸಿದ್ದಾರೆ.
ಕಾಲೇಜಿಗೆ ಹೋಗುತ್ತಿದ್ದ ಮಗ ಜಾವೆದ್‌ನನ್ನು ಮತ್ತೆ ಮನೆಗೆ ಕಳುಹಿಸುತ್ತೇವೆ ಎಂದು ತಂದೆಯ ಜೊತೆಗೆ ಕರೆದುಕೊಂಡು ಹೋದರು. ಇದುವರೆಗೆ ಯಾವುದೇ ವಿಚಾರಣೆ ನಡೆಸದೆ ಅವರನ್ನು ಜೈಲಿನಲ್ಲಿರಿಸಿದ್ದಾರೆ. ನ್ಯಾಯಾಲಯದಲ್ಲಾದರೂ ನ್ಯಾಯಸಿಗಬಹುದು ಎಂದು ನಾವು ಕಾದರೆ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸುತ್ತಿಲ್ಲ. ಎರಡು ವರ್ಷಗಳಲ್ಲಿ ನನಗೆ ಗೊತ್ತಿರುವಂತೆ ಒಂದು ಬಾರಿ ಮಾತ್ರ ಹಾಜರುಪಡಿಸಿದ್ದಾರೆ. ಎರಡು ವರ್ಷಗಳಿಂದ ಈ ಚಿಂತೆಯಲ್ಲೇ ನಾವು ಕೊರಗಿದ್ದೇವೆ.
ಕಾಲೇಜು ಸೇರಿ ಮಗ ಕಲಿತು ಸಂಪಾದಿಸಿ ಮನೆಯನ್ನು ನಿಭಾಯಿಸಬಹುದು ಎಂದು ಕನಸು ಕಾಣುತ್ತಿದ್ದೆವು. ಈಗವನ ಭವಿಷ್ಯವೇ ಹಾಳಾಯಿತು. ಮನೆಯಲ್ಲಿ ಜಾವೆದ್ ಸೇರಿ ಐದು ಜನ ಮಕ್ಕಳು. ದೊಡ್ಡ ಮಗಳು ಶಾಲೆಯಲ್ಲಿ ಪಾಠ ಹೇಳುವ ಮೂಲಕ ಬರುವ ಆದಾಯದಿಂದ ಸಂಸಾರ ನಡೆಯುತ್ತಿದೆ. ಪೊಲೀಸರು ಈ ರೀತಿ ದುಡಿದು ತಿನ್ನುವ ನಮ್ಮನ್ನು ಬಂಧಿಸಿ ವಿಚಾರಣೆಗೂ ಅವಕಾಶ ನೀಡದೆ ಜೈಲಲ್ಲಿಟ್ಟರೆ ನಾವು ನ್ಯಾಯಕ್ಕಾಗಿ ಯಾರ ಬಳಿ ಹೋಗಬೇಕು ?’’ ಎಂದು ಮೈಮೂನಾ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
‘ಮುಹಮ್ಮದಲಿ ಹಾಗೂ ಅವರ ಪುತ್ರ ಜಾವೆದ್ ಅಲಿಯನ್ನು ದಕ್ಷಿಣ ಕನ್ನಡದ ಪೊಲೀಸರ ಚಿತಾವಣೆಯಿಂದ ಬಂಧಿಸಲಾಗಿದೆ. ಪೊಲೀಸರು ಮಾಡಿರುವ ಗಂಭೀರ ಆರೋಪಗಳನ್ನು ಸಾಬೀತು ಮಾಡುವ ಯಾವುದೇ ರೀತಿಯ ವಸ್ತುಗಳು ಅವರ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿಲ್ಲ. ಆರೋಪಿಗಳನ್ನು ಏಕೆ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿಲ್ಲ ಎಂಬ ಪ್ರಶ್ನೆಗೆ ಅವರನ್ನು ಹಾಜರುಪಡಿಸಲು ಸಾಕಷ್ಟು ಪೊಲೀಸರು ಬೇಕಾಗುತ್ತದೆ, ಅವರು ‘ಉಗ್ರರು’ ಎನ್ನುವ ಹಾಸ್ಯಾಸ್ಪದ ಉತ್ತರವನ್ನು ಓರ್ವ ಇನ್ಸ್‌ಪೆಕ್ಟರ್ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಾಗ ನ್ಯಾಯಾಲಯದಲ್ಲಿ ನೀಡಿದರಂತೆ.
ಕಾನೂನಿನ ಪ್ರಕಾರ ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ವಿಚಾರಣೆಗೆ ಅವಕಾಶ ಮಾಡಿಕೊಡಬೇಕಾಗಿದೆ. ಎರಡು ವರ್ಷ ಕಳೆದರೂ ಬಂಧಿತರ ವಿಚಾರಣೆ ನಡೆಯಲಿಲ್ಲ ಎನ್ನುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಕಬೀರ್ ಪತ್ರಿಕೆಗೆ ತಿಳಿಸಿದ್ದಾರೆ.
‘‘ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಕಷ್ಟಪಟ್ಟು ದುಡಿದು ಸಂಸಾರವನ್ನು ನಿಭಾಯಿಸುತ್ತಿದ್ದ ನಮಗೇಕೆ ಈ ಶಿಕ್ಷೆ’ ಮುಹಮ್ಮದಲಿಯವರ ತಾಯಿ ಆಮಿನಮ್ಮ ಅಲವತ್ತುಕೊಳ್ಳುತ್ತಾರೆ. ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಬಂಟ್ವಾಳದ ಬೋಳಂತೂರಿನ ರಫೀಕ್ ಕುಟುಂಬವೂ ನ್ಯಾಯಕ್ಕಾಗಿ ಎದುರು ನೋಡುತ್ತಿದೆ.
ಇದ್ಯಾವ ನ್ಯಾಯ?: ಪುರುಷೋತ್ತಮ ಪೂಜಾರಿ
‘ಯಾವುದೇ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ ಬಳಿಕ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ವಿಚಾರಣೆ ನಡೆಸಬೇಕು. ಅದ್ಯಾವುದೂ ಇಲ್ಲ. ಹಾಗಾದರೆ ಕಾನೂನು ಏಕಿರುವುದು? ಕಾನೂನಿನಲ್ಲಿ ಯಾರಿಗೂ ತಾರತಮ್ಯವಿಲ್ಲ.
ಆದರೆ ಸರಕಾರ ಈ ಬಗ್ಗೆ ಗಮನಹರಿಸುತ್ತಿಲ್ಲ. ಇದರಿಂದಾಗಿ ಈ ರೀತಿ ಬಂಧಿತ ಆರೋಪಿಗಳು ವಿಚಾರಣೆ ಇಲ್ಲದೆ ಜೈಲಿನಲ್ಲಿ ಕೊಳೆಯುವಂತಾಗಿದೆ. ಅವರಿಗೆ ಜಾಮೀನಿಗಾಗಿ ಹಾಗಿದ ಅರ್ಜಿಯನ್ನು ಇಲ್ಲಿನ ನ್ಯಾಯಾಧೀಶರು ಅವರ ಮೇಲೆ ಬೇರೆ ಪ್ರಕರಣ ಇದೆ ಎಂದು ತಿರಸ್ಕರಿಸಿದ್ದಾರೆ.
ಹೀಗಾದರೆ ಅವರ ಕುಟುಂಬದ ಗತಿಯೇನು’’ ಎಂದು ಆರೋಪಿಗಳ ಪರ ನ್ಯಾಯವಾದಿ ಪುರುಷೋತ್ತಮ ಪೂಜಾರಿ ಕಳವಳ ವ್ಯಕ್ತಪಡಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ