ಭಾನುವಾರ, ಜನವರಿ 09, 2011

ಅಜ್ಮೀರ್ ದರ್ಗಾಕ್ಕೆ ಹಿಂದೂಗಳ ಭೇಟಿ ತಡೆಯಲು ಬಾಂಬ್ ಸ್ಫೋಟಿಸಲಾಯಿತು: ಅಸೀಮಾನಂದ

‘‘ಬಾಂಬ್ ಸ್ಫೋಟ ನಡೆಸಲು ಮೂರು ತಂಡಗಳನ್ನು ರಚಿಸಬೇಕು ಎಂದು ಜೋಶಿ ಹೇಳಿದ. ಒಂದು ತಂಡ ಹಣಕಾಸು ಪೂರೈಸಬೇಕು ಮತ್ತು ತಂತ್ರಗಾರಿಕೆಯನ್ನು ರೂಪಿಸಬೇಕು. ಎರಡನೆ ತಂಡ ಸ್ಫೋಟಕಗಳನ್ನು ಸಂಗ್ರಹಿಸಬೇಕು ಮತ್ತು ಮೂರನೆ ತಂಡ ಬಾಂಬ್‌ಗಳನ್ನು ಅಳವಡಿಸಬೇಕು. ಒಂದು ತಂಡದ ಸದಸ್ಯರಿಗೆ ಇನ್ನುಳಿದ ಎರಡು ತಂಡಗಳ ಸದಸ್ಯರ ಪರಿಚಯ ಇರಲೇ ಕೂಡದು. ಯಾಕೆಂದರೆ, ಯಾರಾದರೂ ಬಂಧಿತನಾದರೆ, ಇನ್ನುಳಿದವರು ಸುರಕ್ಷಿತವಾಗಿರಬೇಕು ಎಂದೂ ಆತ ಹೇಳಿದ್ದ’’ ಎಂಬ ಭೀಕರ ವಿವರಣೆಗಳು ಅಸೀಮಾನಂದ ಮ್ಯಾಜಿಸ್ಟ್ಟ್ರೆಟರಿಗೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ದೊರೆಯುತ್ತದೆ. ದ್ವೇಷ ಮತ್ತು ಆಕ್ರೋಶ ಇಂತಹ ಒಂದು ಅಪಾಯಕಾರಿ ನಡೆಗೆ ಕಾರಣವಾಯಿತು. ‘‘ಅಜ್ಮೀರ್ ಶರೀಫ್ ದರ್ಗಾಕ್ಕೆ ಹಿಂದೂಗಳು ಬೃಹತ್ ಸಂಖ್ಯೆಯಲ್ಲಿ ಹೋಗುವುದರಿಂದ, ಅಲ್ಲಿ ಬಾಂಬ್ ಸ್ಫೋಟಿಸುವ ಮೂಲಕ ಹಿಂದೂಗಳು ಅಲ್ಲಿಗೆ ತೆರಳುವುದನ್ನು ತಡೆಯಬಹುದು ಎಂದು ನಾವು ಚಿಂತಿಸಿದೆವು’’ ಎಂದು ಸ್ವಾಮಿ ಹೇಳುತ್ತಾನೆ.
2006 ಸೆಪ್ಟಂಬರ್ 8ರಂದು ಮಧ್ಯಾಹ್ನ 1:30ಕ್ಕೆ ಮಹಾರಾಷ್ಟ್ರದ ಕೋಮು ಸೂಕ್ಷ್ಮತೆಯ ನಗರ ಮಾಲೆಗಾಂವ್‌ನಲ್ಲಿ ನಾಲ್ಕು ಬಾಂಬ್‌ಗಳು ಸಿಡಿದವು. ಅಂದು ಶುಕ್ರವಾರ ಮಾತ್ರವಲ್ಲದೆ, ಮುಸ್ಲಿಮರ ಶಬೆ ಬರಾತ್‌ಹಬ್ಬವೂ ಇತ್ತು. ಮೂರು ಬಾಂಬ್‌ಗಳು ಹಾಮಿದಿಯ ಮಸೀದಿ ಮತ್ತು ಬಡಾ ಖಬರಸ್ತಾನ್ ಆವರಣದಲ್ಲಿ ಸ್ಫೋಟಿಸಿದವು. ನಾಲ್ಕನೆ ಬಾಂಬ್ ಮುಶಾವರತ್ ಚೌಕ್‌ನಲ್ಲಿ ಸ್ಫೋಟಿಸಿತು. ಮೂರು ಬಾಂಬ್‌ಗಳಲ್ಲಿ ಒಂದನ್ನು ಹಾಮಿದಿಯ ಮಸೀದಿಯ ಪ್ರವೇಶ ದ್ವಾರದಲ್ಲಿ ಅಳವಡಿಸ ಲಾಗಿತ್ತು. ಎರಡನೆ ಬಾಂಬ್ ಆವರಣ ದೊಳಗಿನ ವಾಹನ ನಿಲುಗಡೆ ಪ್ರದೇಶದಲ್ಲಿ ಸೈಕಲ್ ಒಂದರಲ್ಲಿ ಅಳವಡಿಸಲಾಗಿತ್ತು ಮತ್ತು ಮೂರನೆ ಬಾಂಬ್ ಆವರಣದೊಳಗಿರುವ ವುಝೂಖಾನದ ಮುಂದಿನ ವಿದ್ಯುತ್ ಪೂರೈಕೆ ಕೋಣೆಯ ಗೋಡೆಗೆ ತೂಗು ಹಾಕಲಾಗಿತ್ತು. ನಾಲ್ಕನೆ ಬಾಂಬ್ ಜನ ನಿಬಿಡ ಪ್ರದೇಶವಾದ ಮುಶಾವರತ್ ಚೌಕ್‌ನಲ್ಲಿ ಸ್ಫೋಟಿಸಿತ್ತು. ಅಲ್ಲಿನ ವಿದ್ಯುತ್ ಕಂಬವೊಂದರ ಪಕ್ಕದಲ್ಲಿ ಸೈಕಲ್ ವೊಂದರಲ್ಲಿ ಬಾಂಬ್ ಅಳವಡಿಸಲಾಗಿತ್ತು.
ದಾಳಿಯನ್ನು ಅತಿ ಎಚ್ಚರಿಕೆಯಿಂದ ಯೋಜಿಸಲಾ ಗಿತ್ತು. ಬಾಂಬ್‌ಗಳು ಒಂದರ ಹಿಂದೆ ಒಂದು ಶೀಘ್ರಗತಿಯಲ್ಲಿ ಸ್ಫೋಟಿಸಿದ್ದವು. ಘಟನೆಯಲ್ಲಿ 31 ಮುಸ್ಲಿಮರು ಸಾವನ್ನಪ್ಪಿದ್ದರು ಮತ್ತು ಸುಮಾರು 312 ಮಂದಿ ಗಾಯಗೊಂಡಿದ್ದರು. ಘಟನೆಯ ಬಳಿಕ ತ್ವರಿತಗತಿಯ ತನಿಖೆಯಲ್ಲಿ 90 ದಿನಗಳೊಳಗಾಗಿ ಮಹಾರಾಷ್ಟ್ರ ಎಟಿಎಸ್ ಸಂಶಯದ ಆಧಾರದಲ್ಲಿ ಮಾಲೆಗಾಂವ್‌ನ 9 ಮುಸ್ಲಿಮ್ ಹುಡುಗರನ್ನು ಬಂಧಿಸಿತ್ತು. ಅವರಲ್ಲಿ ಎಂಟು ಮಂದಿ ನಿಷೇಧಿತ ಮುಸ್ಲಿಂ ಸಂಘಟನೆ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಕಾರ್ಯಕರ್ತರೆಂದು ಹೇಳಲಾಗಿತ್ತು. ಇನ್ನು ಮೂವರು ಮಾಲೆಗಾಂವ್ ಯುವಕರು ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿತ್ತು. ಬಂಧಿತರ ವಿರುದ್ಧ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಂ ಆಕ್ಟ್ (ಎಂಸಿಒಸಿಎ) ಎಂಬ ಕಠಿಣ ಕಾಯ್ದೆಯ ಕಲಂಗಳಡಿ ಪ್ರಕರಣ ದಾಖಲಿಸಲಾಗಿತ್ತು.
2006, ಡಿಸೆಂಬರ್ 21ರಂದು ಮಹಾರಾಷ್ಟ್ರ ಎಟಿಎಸ್ 9 ಮುಸ್ಲಿಮರ ವಿರುದ್ಧ ದೋಷಾ ರೋಪ ಪಟ್ಟಿ ದಾಖಲಿಸಿದ ಸಂದರ್ಭವೇ, ಅದೇ ದಿನ ಮಹಾರಾಷ್ಟ್ರ ಸರಕಾರ ಪ್ರಕರಣದ ತನಿಖೆ ಯನ್ನು ಸಿಬಿಐಗೊಪ್ಪಿಸಿತ್ತು. ಅದಕ್ಕೆ ಪ್ರತಿಯಾಗಿ, ಪ್ರಕರಣವನ್ನು ಈಗಾಗಲೇ ಭೇದಿಸಲಾಗಿದೆ, ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಸಿಬಿಐ ಕೂಡ ಹೇಳಿತು.
ಒಂದು ವರ್ಷಗಳ ಹಿಂದೆ ಸಿಬಿಐ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ ಯಾವುದೇ ಬಲವಾದ ಸಾಕ್ಷ ಒದಗಿಸುವಲ್ಲಿ ಅದು ವಿಫಲವಾಗಿದೆ. ನಾಲ್ಕು ವರ್ಷಗಳಿಗೂ ಅಧಿಕ ಕಾಲ, ಈ 9 ಮಾಲೆಗಾಂವ್ ಮುಸ್ಲಿಂ ಯುವಕರು ಜೈಲಿನಲ್ಲಿ ಸೊರಗುವಂತಾಯಿತು. ಅಸೀಮಾನಂದನ ತಪ್ಪೊಪ್ಪಿಗೆಯು ಇದೀಗ ಈ ಯುವಕರು ಮುಗ್ಧರು ಎಂಬುದನ್ನು ಸಾಬೀತು ಪಡಿಸಿದೆ. ಈ ಬಂಧನ ಕೇವಲ ಟೀಕೆಯಿಂದ ತಪ್ಪಿಸಿಕೊಳ್ಳಲು ಮತ್ತು ಪ್ರಕರಣಗಳನ್ನು ‘ಭೇದಿಸಲಾಗಿದೆ’ ಎನ್ನುವ ಮೂಲಕ, ಭಾರತೀಯ ನಾಗರಿಕರಲ್ಲಿ ಹುಸಿ ಭದ್ರತೆಯ ಭರವಸೆಯನ್ನು ಹುಟ್ಟುಹಾಕುವ ಉದ್ದೇಶವನ್ನು ಹೊಂದಿದೆ. ಸ್ವಾಮಿ ಅಸೀಮಾನಂದನ ಪ್ರಕಾರ, ಸ್ಫೋಟದ ನಿಜವಾದ ರೂವಾರಿ ಸುನೀಲ್ ಜೋಶಿಯಾಗಿ ದ್ದಾನೆ. ಅದೇ ರೀತಿ ಮಾಲೆಗಾಂವ್‌ನಲ್ಲಿ ಬಾಂಬ್ ಸ್ಫೋಟಿಸಲು ಜೋಶಿಗೆ ಪ್ರಚೋದನೆ ನೀಡಿದವನು ಅಸೀಮಾನಂದನೇ ಆಗಿದ್ದಾನೆ.
ಹೀಗಾಗಿಯೇ ಅಸೀಮಾನಂದ ಮ್ಯಾಜಿಸ್ಟ್ರೇಟ ರಲ್ಲಿ, ‘‘2006ರ ದೀಪಾವಳಿಯ ಸಂದರ್ಭ ಜೋಶಿ ಶಬರಿ ಆಶ್ರಮಕ್ಕೆ ನನ್ನನ್ನು ಭೇಟಿಯಾ ಗಲು ಬಂದಿದ್ದ. ಬಾಂಬ್ ಸ್ಫೋಟವನ್ನು ನಮ್ಮ ಜನರು ನಡೆಸಿದ್ದು ಎಂದು ಸುನೀಲ್ ನನಗೆ ತಿಳಿಸಿದ್ದ. ಸ್ಫೋಟದಲ್ಲಿ ಮುಸ್ಲಿಮರ ಕೈವಾಡವಿದೆ ಮತ್ತು ಕೆಲವು ಮುಸ್ಲಿಮರನ್ನು ಬಂಧಿಸಲಾಗಿದೆ ಎಂದು ಸುದ್ದಿ ಪತ್ರಿಕೆಗಳಲ್ಲಿ ಬಂದಿದೆ ಎಂದು ನಾನು ಹೇಳಿದೆ. ಬಾಂಬ್ ಸ್ಫೋಟಿಸಿರುವುದು ತಾನೇ ಎಂಬುದನ್ನು ಸುನೀಲ್ ನನಗೆ ಭರವಸೆ ಹುಟ್ಟಿಸಿದನು. ಆದರೆ ಬಾಂಬ್ ಅಳವಡಿಸಿದ ನಮ್ಮವರು ಯಾರು ಎಂಬ ಮಾಹಿತಿಯನ್ನು ನೀಡಲು ಆತ ನಿರಾಕರಿಸಿದನು’’ ಎಂದು ಹೇಳಿರುತ್ತಾನೆ.
ಪಾಕಿಸ್ತಾನಿ ವಿದೇಶಾಂಗ ಸಚಿವ ಖುರ್ಷಿದ್ ಕಸುರಿ, ಶಾಂತಿ ಮಾತುಕತೆ ಕುರಿತಂತೆ ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದ್ದ ಹಿನ್ನೆಲೆಯಲ್ಲಿ, 2007ರ ಫೆಬ್ರವರಿ 18ರಂದು ಮಧ್ಯ ರಾತ್ರಿ ದಿಲ್ಲಿ-ಲಾಹೋರ್ ನಡುವೆ ಗಡಿಯಾಚೆಗೆ ಪ್ರಯಾಣಿಸುವ ಸಂಜೋತಾ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ, ಎರಡು ಶಕ್ತಿಶಾಲಿ ಬಾಂಬ್‌ಗಳನ್ನು ಸ್ಫೋಟಿಸಲಾಯಿತು. ದಿಲ್ಲಿಯಿಂದ 80 ಕಿ.ಮೀ. ದೂರದ ಪಾಣಿಪತ್‌ನ ದಿವಾನದ ಸಮೀಪ ರೈಲು ತಲುಪಿತ್ತು. ರೈಲಿನ ಬೋಗಿಗಳು ಭೀಕರ ಬೆಂಕಿಗೆ ಆಹುತಿಯಾದವು. ಇನ್ನೊಂದು ಬೋಗಿಯಲ್ಲಿ ಅಳವಡಿಸಲಾಗಿದ್ದ ಮೂರನೆ ಬಾಂಬ್ ಸ್ಫೋಟಿಸಲಿಲ್ಲ. ಘಟನೆಯಲ್ಲಿ 68 ಮಂದಿ ಸಾವನ್ನಪ್ಪಿದ್ದರು, ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದರು. ಶಾಂತಿ ಮಾತುಕತೆಗೆ ತೀವ್ರ ಹಿನ್ನಡೆಯಾಯಿತು.
ಡಿಟೋನೇಟರ್, ಟೈಮರ್, ಸ್ಫೋಟಕಗಳನ್ನೊಳಗೊಂಡ ಕಬ್ಬಿಣದ ಪೈಪ್‌ಗಳು, ಪೆಟ್ರೋಲ್ ಮತ್ತು ಸೀಮೆ ಎಣ್ಣೆ ತುಂಬಿದ ಬಾಟಲಿಗಳು ತುಂಬಿದ ಮೂರು ಸೂಟ್‌ಕೇಸ್‌ಗಳನ್ನು ಮೂರು ಬೋಗಿಗಳಿಗೆ ಗುಪ್ತವಾಗಿ ಸಾಗಿಸಲಾಗಿತ್ತು ಎಂದು ತನಿಖೆದಾರರು ಬಹಿರಂಗ ಪಡಿಸಿದ್ದಾರೆ. ಘಟನೆ ನಡೆದ ತಕ್ಷಣಕ್ಕೆ ಪಾಕಿಸ್ತಾನಿ ಉಗ್ರವಾದಿಗಳ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿತ್ತು. ತನಿಖಾ ಸಂಸ್ಥೆಗಳು ಈ ಸ್ಫೋಟಕ್ಕೂ ಪಾಕಿಸ್ತಾನಿ ಮೂಲದ ಭಯೋತ್ಪಾದನೆ ಸಂಘಟನೆಗಳೆನ್ನಲಾದ ಹರ್ಕತುಲ್ ಜಿಹಾದ್ ಇಸ್ಲಾಮಿ (ಹುಜಿ) ಮತ್ತು ಲಷ್ಕರೆ ತಯ್ಯಿಬಾ(ಎಲ್‌ಇಟಿ)ಗಳನ್ನು ಹೊಣೆಯ ನ್ನಾಗಿಸಿದವು. ಸ್ಫೋಟವನ್ನು ಹುಜಿ ಮತ್ತು ಎಲ್‌ಇಟಿಗಳನ್ನು ಜಂಟಿಯಾಗಿ ನಡೆಸಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯೂ ಹೇಳಿತು. ಸ್ಫೋಟಕ್ಕೆ ಬಳಸಲಾದ ಕೆಲವು ವಸ್ತು ಗಳನ್ನು ಇಂದೋರ್‌ನ ಮಾರುಕಟ್ಟೆಯಲ್ಲಿ ಖರೀದಿಸ ಲಾದ ಸಾಕ್ಷಗಳನ್ನು ಹರ್ಯಾಣ ಪೊಲೀಸರು ಸಂಗ್ರಹಿಸಿದ್ದರು. ಆದರೆ ಈ ಕುರಿತಂತೆ ತನಿಖೆ ಮುಂದುವರಿಯದೆ, ಅದು ಅಲ್ಲಿಗೆ ತಣ್ಣಗಾಗಿತ್ತು. 2006ರಲ್ಲಿ, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಜಮ್ಮು-ಕಾಶ್ಮೀರದಿಂದ ಸುಮಾರು 60 ಕೆಜಿ ಆರ್‌ಡಿಎಕ್ಸ್‌ನ್ನು ಸಂಗ್ರಹಿಸಿದ್ದ.
ಇದನ್ನು ಸಂಜೋತಾ ಸ್ಫೋಟದಲ್ಲಿ ಬಳಸಲಾಗಿರುವ ಬಗ್ಗೆ ಶಂಕೆಯಿದೆ ಎಂದು 2008ರ ನವೆಂಬರ್‌ನಲ್ಲಿ ಮಹಾರಾಷ್ಟ್ರ ಎಟಿಎಸ್ ನಾಸಿಕ್‌ನ ನ್ಯಾಯಾಲಯವೊಂದಕ್ಕೆ ತಿಳಿಸಿತ್ತು. ಆದರೆ ತನ್ನ ಪ್ರತಿಪಾದನೆಯನ್ನು ಸಾಬೀತುಪಡಿಸುವಲ್ಲಿ ಸಾಕ್ಷಗಳನ್ನು ಪೂರೈಸಲು ಎಟಿಎಸ್ ವಿಫಲವಾಗಿ ದ್ದುದರಿಂದ, ಅದು ತನ್ನ ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದು ಅನಿವಾರ್ಯವಾಗಿತ್ತು. ಹರ್ಯಾಣ ಪೊಲೀಸರು ಮುಂಬೈಗೆ ಆಗಮಿಸಿ ಪುರೋಹಿತ್ ಮತ್ತು ಇತರ ಮಾಲೆಗಾಂವ್ ಸ್ಫೋಟ ಆರೋಪಿಗಳ ವಿಚಾರಣೆ ನಡೆಸಿತ್ತು. ಸಂಜೋತಾ ಸ್ಫೋಟಕ್ಕೆ ಸಂಬಂಧಿಸಿ ಯಾವುದೇ ಸಾಕ್ಷಗಳನ್ನು ಸಂಗ್ರಹಿಸಲು ಅವರು ವಿಫಲರಾಗಿದ್ದರು ಎಂದು ಹೇಳಲಾಗಿತ್ತು. ಆದಾಗ್ಯೂ, 2010ರಲ್ಲಿ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಲಾ ಯಿತು. ಈ ಕುರಿತಂತೆ ಇನ್ನೂ ಕೆಲವು ಪ್ರಶ್ನೆಗಳು ಇವೆಯಾದರೂ, ಅಸೀಮಾನಂದನ ತಪ್ಪೊಪ್ಪಿಗೆಯು ಸಂಜೋತಾ ಸ್ಫೋಟಕ್ಕೆ ಸಂಬಂಧಿಸಿ ಇದೀಗ ಇತರ ಹಲವು ವಿಷಯಗಳನ್ನು ಬಹಿರಂಗ ಪಡಿಸಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ