ಕಳೆದ ಸಲದ ಹಜ್ಜ್ ಯಾತ್ರೆಯು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಿಂದ ನೇರವಾಗಿ ಸೌದಿಗೇ ವಿಮಾನಯಾನವನ್ನು ಏರ್ಪಡಿಸಲು ಕರ್ನಾಟಕದಿಂದ ಆಯ್ಕೆಯಾದ ಕೇಂದ್ರ ಸರಕಾರದ ಜನಪ್ರತಿನಿಧಿಗಳು, ರಾಜಕಾರಣಿ ಗಳು, ಸ್ಥಳೀಯ ಮುಸ್ಲಿಂ ಮುಖಂಡರ ಅವಿರತ ಪ್ರಯತ್ನ, ಪರಿಶ್ರಮದ ಫಲವಾಗಿದೆ. ಮಂಗಳೂರಿನಿಂದ ಮೂರು ಬ್ಯಾಚ್‌ಗಳಲ್ಲಿ ಹಜ್ಜ್ ಯಾತ್ರಿಕರು ವಿಮಾನದಲ್ಲಿ ಪ್ರಯಾಣಿಸಿದ್ದರು.
ಪ್ರತಿಯೊಂದು ಬ್ಯಾಚ್ ಕೂಡಾ ೨೪ ಗಂಟೆ ವಿಮಾನ ನಿಲ್ದಾಣದಲ್ಲಿ ಉಳಿಯಬೇಕಾಯಿತು. ನಮ್ಮದೇ ಊರು ಆದುದರಿಂದ ಕೆಲವು ಸ್ವಯಂ ಸೇವಕರು ರಾತ್ರಿ ಹಗಲು ಎನ್ನದೆ ಊಟ ಉಪಚಾರ, ಮಲಗಲು ಬೆಡ್, ಬೆಡ್‌ಶೀಟ್, ಫಲವಸ್ತುಗಳನ್ನು ಒದಗಿಸಿ ಮಾನಯತೆ ಮೆರೆದರು. ನಮ್ಮ ಚಿಕ್ಕ ಚಿಕ್ಕ ಬ್ಯಾಗ್‌ಗಳನ್ನು ಕೂಡಾ ನಮ್ಮನ್ನು ಮುಟ್ಟಲು ಬಿಡಲಿಲ್ಲ. ಸ್ವಯಂ-ಸೇವಕರೇ ಅದನ್ನು ತಂದು ಕೊಡುತ್ತಿದ್ದರು. ಹಜ್ಜಾಜ್‌ಗಳು ಮಲಗಿ ನಿದ್ರೆ ಮಾಡಿದರೂ ಸ್ವಯಂ ಸೇವಕರು ನಿದ್ರೆ, ಊಟ ಮಾಡದೆ ಹಜ್ಜಾಜ್‌ಗಳ ಸೇವೆ ಮಾಡಿದರು. ಹೆಚ್ಚಿನ ಸ್ವಯಂ ಸೇವಕರು ನನ್ನ ಪರಿಚಯಸ್ಥರೇ ಆದುದರಿಂದ ನನಗೆ ಯಾವುದಕ್ಕೂ ಚಿಂತೆ ಇರಲಿಲ್ಲ.
ವಿಮಾನ ಯಾನವು ಒಂದೊಂದು ದಿವಸ ತಡವಾಗಲು ಕಾರಣ ಹುಡುಕಲು ಹೋದರೆ ನಮ್ಮ ಕೇಂದ್ರ ಸರಕಾರದ ವಿದೇಶಾಂಗ ಸಚಿವಾಲಯದ ವೈಫಲ್ಯ ಎದ್ದು ತೋರುತ್ತದೆ. ಕೇಂದ್ರ ಸರಕಾರದ ವಿದೇಶ ವ್ಯವಹಾರದ ಮಂತ್ರಿ ಎಸ್.ಎಂ.ಕೃಷ್ಣ ರವರು ಪ್ರತಿಯೊಂದು ರಾಜ್ಯದ ಮುಸ್ಲಿಂ ಸಮುದಾಯದ ಮಂತ್ರಿ ಹಾಗೂ ಮುಸ್ಲಿಂ ನೇತಾರರೊಂದಿಗೆ ಚರ್ಚಿಸಿ ಮಕ್ಕಾ, ಮದೀನಾಗಳಿಗೆ ನಿಯೋಗ ತೆರಳಿ ಹಜ್ಜಾಜ್ ಗಳಿಗೆ ಬೇಕಾದ ವ್ಯವಸ್ಥೆ ಮಾಡಬೇಕಿತ್ತು. ಹಾಗೆ ಮಾಡದ ಪರಿಣಾಮ ಹಜ್ಜಾಜ್‌ಗಳು ಕಷ್ಟ ಅನುಭವಿಸಬೇಕಾಯಿತು. ಎಸ್.ಎಂ. ಕೃಷ್ಣರಿ ಗಿಂತ ಮುಂಚೆ ವಿದೇಶಾಂಗ ವ್ಯವಹಾರಗಳ ಹೊಣೆ ಹೊತ್ತ ಇ.ಅಹ್ಮದ್‌ರವರ ಸಮಯದಲ್ಲಿ ಹಜ್ಜಾಜ್‌ಗಳು ಇಷ್ಟೊಂದು ಕಷ್ಟ ಅನುಭಸಿರಲಿಲ್ಲ.
ಅಂತಾರಾಷ್ಟ್ರೀಯ ವಿಮಾನವಾದುದರಿಂದ ಯಾತ್ರಿಗಳನ್ನು ಸೌದಿಗೆ ತಲುಪಿಸಿ ಅಲ್ಲಿಂದ ಖಾಲಿ ವಿಮಾನ ಬರಬೇಕಿತ್ತು. ಆದ್ದರಿಂದ ಭಾರತದ ಏರ್‌ಇಂಡಿಯಾ ಹಾಗೂ ಸೌದಿ ಏರ್‌ಲೈನ್ಸ್ ದುಬಾರಿ ರೇಟು ವಿಧಿಸಿದ ಪರಿಣಾಮ ವಿಧಿಯಿಲ್ಲದೆ ಅಂತಾರಾಷ್ಟ್ರೀಯ ಮಟ್ಟಕ್ಕಿಂತ ಕಡಿಮೆ ವ್ಯವಸ್ಥೆಯ ಟರ್ಕಿ ಏರ್‌ಲೈನ್ಸ್ ವಿಮಾನಕ್ಕೆ ಟೆಂಡರ್ ನೀಡಿತು. ಅದು ಕೂಡಾ ಒಂದೇ ವಿಮಾನ. ಇಲ್ಲಿಂದ ಹೊರಟ ವಿಮಾನ ಮಸ್ಕತ್‌ನಲ್ಲಿ ಇಂಧನ ಹಾಗೂ ನೀರು ತುಂಬಿಸಲು ಮುಕ್ಕಾಲು ಗಂಟೆ ಲ್ಯಾಂಡ್ ಮಾಡಬೇಕಾಯಿತು. ಮಂಗಳೂರಿ ನಿಂದ ಸೌದಿಗೆ ೫ ಗಂಟೆಯ ಅವಧಿಗೆ ತಲಪುವ ಬದಲು ೬ ಗಂಟೆ ಅವಧಿಗೆ ತಲುಪಿತು. ಅಲ್ಲಿ ಇಂಜಿನ್ ತಣಿಯಲು ಮೂರು ನಾಲ್ಕು ಗಂಟೆ ಕಾಲಾವಧಿ, ಇಂಧನ, ನೀರು ಹಾಗೂ ಕ್ಲೀನಿಂಗ್‌ಗೆ ಒಂದೆರಡು ಗಂಟೆ, ಅಂತೂ ೬ ಗಂಟೆಯ ನಂತರ ಪುನಃ ಖಾಲಿ ಫ್ಲೈಟ್ ಮಂಗಳೂರಿಗೆ. ಆದುದರಿಂದಲೇ ೨೪ ಗಂಟೆ ಕಾಯುವ ಯಾತನೆ ಅನುಭವಿಸಬೇಕಾಯಿತು. ಅದೇ ರೀತಿ ಪವಿತ್ರ ಹಜ್ಜ್ ಕರ್ಮ ಮುಗಿದು ಜಿದ್ದಾದಿಂದ ಬರುವಾಗ ಕೂಡಾ ಮಂಗಳೂರಿ ಗಿಂತ ಹೆಚ್ಚು ಕಷ್ಟ ಅನುಭವಿಸಬೇಕಾಯಿತು. ಊಟ ತಿಂಡಿಯ ಯಾವುದೇ ವ್ಯವಸ್ಥೆ ಇರಲಿಲ್ಲ. ಸರಕಾರದಿಂದ ಸಿಗುವ ಸಬ್ಸಿಡಿ ಒಂದು ಸಮಾಧಾನಕರ ವಿಷಯ.
ಮದೀನಾದಲ್ಲಿ ಸಿಕ್ಕಿದ ರೂಮುಗಳು ಸ್ವಚ್ಛತೆಯೇ ಕಾಣದ ಗೋದಾಮಿನಂತಿತ್ತು. “ತೋಟ ಶೃಂಗಾರ ಒಳಗೆ ಗೋಳಿ ಸೊಪ್ಪು” ಎಂಬಂತೆ ಕಟ್ಟಡ ನೋಡಲು ಸುಂದರವಾಗಿತ್ತು. ಮೂಲಭೂತ ಸೌಕರ್ಯಗಳಾದ ನೀರು ನಳ್ಳಿಯಲ್ಲಿ ಬಂದರೆ ಬಂತು ಇಲ್ಲದಿದ್ದರೆ ಇಲ್ಲ. ಗೀಸರ್ ಇತ್ತು ಆದರೆ ವಯರ್ ತುಂಡಾಗಿತ್ತು. ೯ ದಿವಸ ಬಾತ್ ರೂಮನ್ನು ಒಂದು ಬಾರಿಯೂ ಕ್ಲೀನ್ ಮಾಡಲಿಲ್ಲ. ರೂಮನ್ನು ಸ್ವಚ್ಛ ಮಾಡಲಿಲ್ಲ. ಬೆಡ್‌ಶೀಟ್ ಬದಲಿಸಲಿಲ್ಲ. ಸೆಲ್ ನಲ್ಲಿರುವ ಕೈದಿಗಳ ಬೆಡ್‌ಶೀಟ್ ವಾರಕ್ಕೊಂದು ಬಾರಿಯಾದರೂ ಬದಲು ಮಾಡುತ್ತಾರೆ. ಅಂತದ್ದರಲ್ಲಿ ಹಜ್ಜಾಜ್‌ಗಳು ಕೈದಿಗಳಿಗಿಂತಲೂ ನಿಕೃಷ್ಟರಾದರು. ೧೦x೧೦ ರೂಮಿನಲ್ಲಿ ೬ ಮಂದಿಯಿಂದ ೮ ಮಂದಿಯವರೆಗೆ ಕೂಡಿ ಹಾಕಲಾಯಿತು. ಹಜ್ಜ್ ಕ್ಲಾಸಿನಲ್ಲಿ ಎಲ್ಲದಕ್ಕೂ ‘ಸಬೂರ್’ನ ಮಹತ್ವ ತಿಳಿಸಿದ್ದರಿಂದ ಹಾಗೂ ನಮ್ಮದಲ್ಲದ ದೇಶವಾದ್ದರಿಂದ ಪ್ರತಿಭಟಿಸದೆ ಚಡಪಡಿಸಬೇಕಾಯಿತು.
ಮಕ್ಕಾದಲ್ಲಿ ಕೂಡಾ ಮದೀನಾದ ಸನ್ನಿವೇಶಕ್ಕಿಂತ ಭಿನ್ನವಾಗಿರಲಿಲ್ಲ. ೨೧ ದಿವಸಗಳು ರೂಮಿನಲ್ಲಿದ್ದರೂ ಕೇವಲ ಒಂದು ಬಾರಿ ಬೆಡ್‌ಶೀಟ್ ಬದಲಾಯಿಸಲು ಹಜ್ಜಾಜ್‌ಗಳು ಪಟ್ಟ ಕಷ್ಟ ಹೇಳತೀರದು. ಗ್ಯಾಸ್ ಮುಗಿದರೆ ಬದಲಿ ಗ್ಯಾಸೆಗೆ ಬೆಲೆ ತೆರಬೇಕು. ಸಿಲಿಂಡರ್‌ನಲ್ಲಿ ಗ್ಯಾಸ್ ಇರುವುದು ಅರ್ಧದಷ್ಟು ಮಾತ್ರ. ಕುಡಿಯಲು ಪ್ರತ್ಯೇಕ ನೀರಿನ ಕ್ಯಾನ್ ತಂದು ಫಿಲ್ಟರ್‌ಗೆ ಸುರಿಯುವ ಕ್ರಮ ಇದ್ದರೂ ರೂಮಿನ ಉಸ್ತುವಾರಿಯು ಬಾತ್‌ರೂಮಿನ ನೀರನ್ನೇ ಕ್ಯಾನಿನಲ್ಲಿ ಫಿಲ್ಟರ್‌ಗೆ ಹಾಕುವುದನ್ನು ರೆಡ್‌ಹ್ಯಾಂಡ್ ಆಗಿ ಹಿಡಿದರೂ ಹಜ್ಜಾಜ್‌ಗಳು ಅಸಹಾಯಕರಾಗಿದ್ದರು. ಮಕ್ಕಾದ ರೂಂ ಗಳೆಂದರೆ ಎಷ್ಟೊಂದು ಐಷಾರಾಮಿ ಇರಬಹು ದೆಂದು ಊಹಿಸಿದವರಿಗೆ ಸಿಕ್ಕಿದ ಕೊಠಡಿ ಗಳಿಗಿಂತ ಮಂಗಳೂರಿನ ಬಂದರಿನ ವೆಸ್ಟರ್ನ್ ಲಾಡ್ಜ್ ವಾಸಿ ಎಂದೆನಿಸಿದೆ.
ಇದಕ್ಕೆ ಸೌದಿ ಸರಕಾರವನ್ನು ದೂರುವುದಕ್ಕಿಂತ ನಮ್ಮ ಸರಕಾರದ ವೈಫಲ್ಯವನ್ನು ದೂರಬೇಕಾಗುತ್ತದೆ. ಯಾಕೆಂದರೆ ಹಜ್ಜಾಜ್‌ಗಳು ಭಾರತೀಯ ರಾಯಭಾರಿ ಕಛೇರಿಗೆ ಹೋಗಿ ದೂರು ಕೊಟ್ಟರೂ ರಾಯ ಭಾರಿ ಕಛೇರಿಯು ಹಲ್ಲಿಲ್ಲದ ಹಾವಿನಂತಾಗಿದೆ. ರೂಮುಗಳು ದೊಡ್ಡ ದೊಡ್ಡ “ಶೇಖ”ರಿಗೆ ಸೇರಿದ್ದು. ಅವರ ರೂಮಿನ ಉಸ್ತುವಾರಿ ನೋಡುವವರು ಬೇಜವಾಬ್ದಾರಿತನ ದಿಂದ ವರ್ತಿಸುತ್ತಿರುವುದೇ ಇದಕ್ಕೆ ಕಾರಣ ವಿರಬಹುದು ಅಥವಾ ಭಾರತೀಯರೆಂಬ ತಾತ್ಸಾರವೇ?
ಹಜ್ಜ್ ವಿಧಿ ವಿಧಾನ ಮುಗಿದ ಬಳಿಕ ಮರಳುವಾಗ ಕೂಡಾ ಜಿದ್ದಾದಲ್ಲಿ ಕೆಲವು ಬ್ಯಾಚ್‌ಗೆ ೨ ದಿವಸ ಹಾಗೂ ಲಾಸ್ಟ್ ಬ್ಯಾಚ್‌ಗೆ ಒಂದು ದಿವಸ ವಿಮಾನಯಾನ ವಿಳಂಬವಾಗಿದ್ದರಿಂದ ಮಂಗಳೂರಿನ ಹಾಜಿಯೊಬ್ಬರು ಸೌದಿ ಕಾನೂನಿನ ಪರಿವೆಯಿಲ್ಲದೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ ಘಟನೆಯೂ ನಡೆಯಿತು.
ಹಾಜ್ಜಾಜ್‌ಗಳು ಇಷ್ಟೆಲ್ಲ ಕಷ್ಟ ಅನುಭವಿಸಿದರೂ ಮನಸ್ಸಿಗೆ ನೆಮ್ಮದಿ ತರುವ ವಿಷಯಗಳೂ ಹಲವಾರು ಇದೆ. ಅರಬಿಗಳು ಹಾಗೂ ಅವರ ಮಕ್ಕಳು ಎಷ್ಟು ಕ್ರೂರಿಯಾದರೂ ಪವಿತ್ರ ಹಜ್ಜ್‌ನ ಸಮಯದಲ್ಲಿ ಅವರಷ್ಟು ಸಹನಾಶೀಲರು ಯಾರೂ ಇಲ್ಲ. ಹಜ್ಜಾಜ್‌ಗಳು ಏನು ಮಾಡಿದರೂ ಅಥವಾ ಕಾನೂನು ಉಲ್ಲಂಘಿಸಿದರೂ ಯಾವುದೇ ಕ್ರಮ ಜರಗಿಸುವುದಿಲ್ಲ. ಹಾಜಿಗಳಿಗೆ ಗೌರವ ಸೂಚಿಸುವ ಸಲುವಾಗಿ ಸಲಾಂ ಹೇಳುತ್ತಾ ಯೋಗ ಕ್ಷೇಮ ವಿಚಾರಿಸುತ್ತಾರೆ. ಹಜ್ಜಾಜ್‌ಗಳಿಗೆ ಬಿರಿಯಾನಿ, ತಿಂಡಿ, ಫಲವಸ್ತುಗಳನ್ನು ಯಥೇಚ್ಛವಾಗಿ ದಾನ ಮಾಡುತ್ತಾರೆ.
ಹಜ್ಜಾಜ್‌ಗಳು ಕಾನೂನು ಬಾಹಿರವಾಗಿ ವರ್ತಿಸಿದರೂ ಪೊಲೀಸರು ದರ್ಪವನ್ನು ತೋರಿಸದೆ ಹಾಜ್, ಹಾಜ್ ಎಂದಷ್ಟೆ ಹೇಳಿ ನಗುವೊಗದೊಂದಿಗೆ ನಮ್ಮ ತಪ್ಪನ್ನು ನಮಗೆ ತಿಳಿ ಹೇಳುತ್ತಾರೆ. ಎಲ್ಲೆಂದರೆಲ್ಲಿ ಕಸ, ನೀರಿನ ಬಾಟ್ಲಿ ಬಿಸಾಡಿದರೂ ಬಿಸಾಡಬೇಡಿ ಎಂದು ಯಾರೂ ಹೇಳುವುದಿಲ್ಲ. ಆಗಲೇ ಅದನ್ನು ಹೆಕ್ಕಲು ಕೆಲಸದ ಜನರು ರೆಡಿಯಿರುತ್ತಾರೆ. ಮಕ್ಕಾದಲ್ಲಿ ಹೊಗೆಬತ್ತಿ ಸೇದಲೇ ಬಾರದೆಂಬ ಕಟ್ಟುನಿಟ್ಟಾದ ನಿಯಮವಿದ್ದರೂ ಹಜ್ಜಾಜ್‌ಗಳು ಸಿಗರೇಟು ಸೇದಿದರೆ ಹಾಜೀ... ಎಂದು ಕಾನೂನು ಉಲ್ಲಂಘನೆಯನೆನಪು ಮಾಡುತ್ತಾರೆ. ವಿನಃ ಬಂಧಿಸುವ ಗೋಜಿಗೆ ಹೋಗುವುದಿಲ್ಲ. ಒಂದೇ ಒಂದು ತೊಡಕು ಎಂದರೆ ಅರಬಿಗಳಿಗೆ ಅವರು ಎಷ್ಟೇ ದೊಡ್ಡ ಅಧಿಕಾರಿಯಾದರೂ ಸರಿ ಅವರಿಗೆ ಇಂಗ್ಲಿಷ್ ಗೊತ್ತಿಲ್ಲ. ನಮಗೆ ಅರಬಿ ಬರುವುದಿಲ್ಲ. ಯಾವುದೇ ಒಂದು ಮಾಹಿತಿ ಕೇಳಿದರೂ ಸ್ತಂಭೀಭೂತರಾಗುತ್ತಾರೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ೨೦೧೧ರ ಸಾಲಿನ ಹಜ್ಜಾಜ್‌ಗಳಿಗೆ ಉತ್ತಮ ಸೌಕರ್ಯವನ್ನೊಳಗೊಂಡ ಹಜ್ಜ್ ಯಾತ್ರೆ ಕೈಗೊಳ್ಳಲು ಬೇಕಾದ ಏರ್ಪಾಡು ಮಾಡಬೇಕೆಂದು ಈ ಮೂಲಕ ತಿಳಿಸುತ್ತೇನೆ
- ಹುಸೈನ್ ಪಾವೂರು(ವಾರ್ತಾ ಭಾರತಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ