ಗುರುವಾರ, ಮಾರ್ಚ್ 17, 2011

ಚುನಾವಣೆಯೊಂದೇ ದಾರಿ

ರಾಜ್ಯದಲ್ಲಿ ಉಪ ಚುನಾವಣೆಯ ಯುದ್ಧ ಘೋಷಣೆಯಾಗಿದೆ. ವಿರೋಧ ಪಕ್ಷದ ವಿರುದ್ಧ ತಮ್ಮ ಬಿಲ್ಲು ಬಾಣಗಳನ್ನು ಸಜ್ಜುಗೊಳಿಸ ಬೇಕಾಗಿದ್ದ ಬಿಜೆಪಿಯ ಅತಿರಥ ಮಹಾರಥರು, ತಮ್ಮ ಬಾಣಗಳನ್ನು ತಮ್ಮದೇ ಸೇನಾಪತಿಯ ಕಡೆಗೆ ಗುರಿ ಮಾಡಿರುವುದು ಈ ಬಾರಿಯ ‘ಮಿನಿ ಯುದ್ಧ’ದ ವಿಶೇಷ.
ರಾಜ್ಯದಲ್ಲಿ ಭಿನ್ನಮತದ ಕೊನೆಯ ಪರ್ವ ಇದಾಗುವ ಸಾಧ್ಯತೆಯಿದೆ. ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೋ, ಸೋಲುತ್ತದೋ ಎನ್ನುವುದಕ್ಕಿಂತ, ಈ ಭಿನ್ನಮತವನ್ನು ಯಡಿಯೂರಪ್ಪ ಗೆಲ್ಲುತ್ತಾರೆಯೋ ಎನ್ನುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲವನ್ನು ಸೃಷ್ಟಿಸಿದೆ. ಈ ಭಿನ್ನಮತವನ್ನೂ ಯಡಿಯೂರಪ್ಪ ಮೆಟ್ಟಿ ನಿಂತರೆ, ಮುಂದಿನ ಎರಡು ವರ್ಷಗಳನ್ನು ಅವರು ಪೂರ್ತಿಗೊಳಿಸುವುದು ಖಂಡಿತ. ಆದರೆ, ಇದನ್ನು ಗೆಲ್ಲುವುದು ಅಷ್ಟು ಸುಲಭದ ಕೆಲಸವಲ್ಲ.
ಈ ಹಿಂದಿನ ಭಿನ್ನರಿಗೂ, ಈ ಬಾರಿ ಬಂಡೆದ್ದವರಿಗೂ ವ್ಯತ್ಯಾಸವಿದೆ. ಹಿಂದೆ, ಬಂಡೆದ್ದು ಅನರ್ಹಗೊಂಡವರು ಬಿಜೆಪಿಯ ಮುಖ್ಯವಾಹಿನಿಯಲ್ಲಿದ್ದವರಲ್ಲ. ಹಲವರು ವಲಸಿಗರು. ಇನ್ನುಳಿದವರು ಅಂತಹ ವರ್ಚಸ್ಸನ್ನೇನೂ ಹೊಂದಿರಲಿಲ್ಲ. ಆದರೂ ಇವರೆಲ್ಲ ಒಂದಾಗಿ ಯಡಿಯೂರಪ್ಪನವರ ಮೂಗಿನವರೆಗೆ ತಂದಿಟ್ಟಿದ್ದರು. ಈ ಬಾರಿ ಯಡಿಯೂರಪ್ಪನವರ ವಿರುದ್ಧ ಬಿಜೆಪಿಯ ರಾಜ್ಯಾಧ್ಯಕ್ಷರೇ ಹಲ್ಲು ಮಸೆಯುತ್ತಿದ್ದಾರೆ. ಅವರಿಗೆ, ಸಿ.ಟಿ. ರವಿ, ಶೆಟ್ಟರ್, ಕಾರಜೋಳ, ಕಾಗೇರಿಯವರಂತಹ ನಾಯಕರು ಹೆಗಲು ನೀಡಿದ್ದಾರೆ. ಹಿಂದಿನ ಶಾಸಕರ ವಿರುದ್ಧ ಬಳಸಿದ ‘ಅನರ್ಹತೆ’ಯ ಆಯುಧವನ್ನು ಇವರ ವಿರುದ್ಧ ಬಳಸುವುದು ಯಡಿಯೂರಪ್ಪನವರಿಗೆ ಸಾಧ್ಯವಿಲ್ಲ. ಯಾಕೆಂದರೆ, ಆ ಆಯುಧದ ಹಿಡಿ, ಭಿನ್ನರ ಕೈಯಲ್ಲಿದೆ. ಅನರ್ಹಗೊಳ್ಳುವುದೇನಿದ್ದರೂ ಯಡಿಯೂರಪ್ಪನವರ ಸರದಿ. ಆದುದರಿಂದಲೇ, ಈ ಬಾರಿಯ ಭಿನ್ನಮತ ಎಲ್ಲಿಗೆ ತಲುಪುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಮೇಲ್ನೋಟಕ್ಕೆ ಈ ಬಾರಿಯ ಭಿನ್ನಮತಕ್ಕೆ ಮುಖ್ಯ ಕಾರಣ ಪ್ರೇರಣಾ ಟ್ರಸ್ಟ್ ಅವ್ಯವಹಾರ. ಭಿನ್ನರ ಪಾಲಿಗೆ ಇದೊಂದು ನೆಪ ಮಾತ್ರ. ಹಾಗೆ ನೋಡಿದರೆ, ಈ ಅವ್ಯವಹಾರದ ದಾಖಲೆಯನ್ನು ವಿರೋಧಿಗಳ ಕೈಗೆ ಕೊಟ್ಟವರು, ಬಿಜೆಪಿ ಯೊಳಗಿರುವ ‘ನಾಯಕರೇ’’ ಆಗಿದ್ದಾರೆ. ಅಂದರೆ, ವಿರೋಧ ಪಕ್ಷವನ್ನು ಮುಂದಿಟ್ಟು ಹಿಂದಿನಿಂದ ಬಾಣ ಬಿಡುತ್ತಿರುವುದು, ಬಿಜೆಪಿಯೊಳಗಿರುವ ಯಡಿಯೂರಪ್ಪನವರ ಸಹೋದ್ಯೋಗಿಗಳು. ಇದನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಿರುವವರು ರೆಡ್ಡಿ ಸಹೋದರರು. ಯಡಿಯೂರಪ್ಪ ಭ್ರಷ್ಟಾತಿಭ್ರಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇಂದಿನ ಭಿನ್ನಮತ ಆ ‘ಭ್ರಷ್ಟತೆ’ಯ ವಿರುದ್ಧವಲ್ಲ ಎನ್ನುವುದು ಖೇದಕರ ಅಂಶ.
ಇಂದು ಯಡಿಯೂರಪ್ಪನವರ ವಿರುದ್ಧ ನಿಂತಿರುವ ಬಿಜೆಪಿಯೊಳಗಿನ ನಾಯಕರೆಲ್ಲರಿಗೂ ಅವರದೇ ಆದ ಕೆಲವು ವೈಯಕ್ತಿಕ ಹಿತಾಸಕ್ತಿಗಳಿವೆ. ಅನಂತಕುಮಾರ್‌ಗೆ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣು. ಜೊತೆಗೆ, ಲಿಂಗಾಯತ ಲಾಬಿಯನ್ನು ಮಟ್ಟ ಹಾಕಿ, ಅಲ್ಲಿ ಬ್ರಾಹ್ಮಣ ಲಾಬಿಯನ್ನು ಪ್ರತಿಷ್ಠಾಪಿಸುವುದು. ಪರೋಕ್ಷವಾಗಿ ಆರೆಸ್ಸೆಸ್ ‘ಹಿರಿಯ’ರಿಗೂ ಈ ‘ಬ್ರಾಹ್ಮಣ ರಾಜಕೀಯ’ದ ಕುರಿತಂತೆ ಒಲವಿದೆ. ಆದರೆ ಲಿಂಗಾಯತ ಶಕ್ತಿಯ ಕುರಿತಂತೆ ಭಯವೂ ಇದೆ. ಉಳಿದಂತೆ ಸಿ.ಟಿ. ರವಿಯವರಂತಹ ನಾಯಕರ ಉದ್ದೇಶವೇ ಬೇರೆ. ಸಚಿವ ಸ್ಥಾನಕ್ಕೆ ಅಂಗಲಾಚಿ ಅವರ ಧ್ವನಿ ಉಡುಗಿದೆ.
ಪ್ರತಿ ಬಾರಿಯೂ ಅವರಿಗೆ ಭಾರೀ ಮುಖಭಂಗವನ್ನುಂಟು ಮಾಡಿದ್ದಾರೆ ಯಡಿಯೂರಪ್ಪ. ‘‘ಅಧಿಕಾರಕ್ಕೇರಲು ನಮ್ಮನ್ನು ಬಳಸಿಕೊಂಡು, ಇದೀಗ ಎಸೆಯುತ್ತಿದ್ದಾರೆ’’ ಎನ್ನುವುದು ರವಿಯಂತಹ ನಾಯಕರ ಆರೋಪ. ಜೊತೆಗೆ ಸಂಪುಟ ವಿಸ್ತರಣೆಯ ನಿರೀಕ್ಷೆಯಲ್ಲಿ ಕಣ್ಣು ಬೆಳ್ಳಗಾಗಿಸಿಕೊಂಡ ಬಿಜೆಪಿಯೊಳಗಿನ ಹಲವು ನಾಯಕರು ಒಳಗೊಳಗೇ ಕುದಿಯುತ್ತಿದ್ದಾರೆ. ಇದೀಗ, ನಿರ್ಣಾಯಕ ಹೊತ್ತಿನಲ್ಲಿ, ಅಂದರೆ ಉಪಚುನಾವಣೆ ಘೋಷಣೆಯಾದ ಬೆನ್ನಿಗೇ ಯಡಿಯೂರಪ್ಪನವರ ವಿರುದ್ಧ ಕತ್ತಿ ಮಸೆದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಸಂಪುಟ ವಿಸ್ತರಣೆ ಯಡಿಯೂರಪ್ಪನವರ ಪಾಲಿಗೆ ಉಗುಳಲೂ ಆಗದ, ನುಂಗಲೂ ಆಗದ ಬಿಸಿ ತುಪ್ಪವಾಗಿದೆ. ವಿಸ್ತರಣೆ ಮಾಡಿದರೂ ಭಿನ್ನಮತ ಭುಗಿಲೇಳುತ್ತದೆ, ಮಾಡದಿದ್ದರೂ ಭಿನ್ನಮತ ಸ್ಫೋಟಿಸುತ್ತದೆ. ಆದುದರಿಂದ, ಚುನಾವಣೆಯಿಂದ ಚುನಾವಣೆಗೆ ವಿಸ್ತರಣೆಯನ್ನು ಮುಂದೂಡುತ್ತಲೇ ಬರುತ್ತಿದ್ದಾರೆ. ಕೊನೆಗೂ ಅವರ ಸಹೋದ್ಯೋಗಿಗಳ ಸಹನೆಯ ಕಟ್ಟೆ ಒಡೆದಿದೆ. ಆದುದರಿಂದಲೇ, ಪ್ರೇರಣಾ ಟ್ರಸ್ಟ್ ಅವ್ಯವಹಾರ ವನ್ನು ಮುಂದಿಟ್ಟು, ಯಡಿ ಯೂರಪ್ಪನವರ ವಿರುದ್ಧ ಮುಗಿ ಬಿದ್ದಿದ್ದಾರೆ. ಅವರನ್ನು ಇಳಿಸಲು ಸಹಿ ಸಂಗ್ರಹಿಸುತ್ತಿದ್ದಾರೆ. ಆದರೆ ಯಡಿಯೂರಪ್ಪ ನವರನ್ನು ಇಳಿಸುವುದು ಅಷ್ಟು ಸುಲಭವಿದ್ದಿದ್ದರೆ, ಇಂದು ಈ ರಾಜ್ಯದ ಮುಖ್ಯಮಂತ್ರಿಯಾಗಿ ಅನಂತಕುಮಾರ್ ಅಥವಾ ಶೆಟ್ಟರ್ ರಾರಾಜಿಸುತ್ತಿದ್ದರು. ವರಿಷ್ಠರು ಅದಕ್ಕಾಗಿಯೇ ಕಬ್ಬಿಣ ಕಾಯುವುದನ್ನು ಸುತ್ತಿಗೆ ಹಿಡಿದು ಕಾಯುತ್ತಿದ್ದಾರೆ.
ಈ ಬಾರಿ, ಸುತ್ತಿಗೆ ಪೆಟ್ಟು ಬಿದ್ದರೂ ಬಿದ್ದೀತು. ಆದರೆ, ಯಡಿಯೂರಪ್ಪ ಅಷ್ಟು ಸುಲಭದಲ್ಲಿ ಸೋಲೊಪ್ಪುವವರಲ್ಲ. ಮುಂದಿನ ಎರಡು ವರ್ಷಗಳನ್ನು ಪೂರ್ತಿ ಗೊಳಿಸಿಯೇ ಕೆಳಗಿಳಿಯುತ್ತೇನೆ ಎಂದು ಯಡಿಯೂರಪ್ಪ ಈಗಾಗಲೇ ಸಾರ್ವಜನಿಕವಾಗಿ ಶಪಥ ಮಾಡಿದ್ದಾರೆ. ಒಂದು ವೇಳೆ, ಅಧಿಕಾರದಿಂದ ಕೆಳಗಿಳಿಯುವ ಅನಿವಾರ್ಯ ಸನ್ನಿವೇಶ ಎದುರಾದರೆ, ಸರಕಾರವನ್ನು ವಿಸರ್ಜಿಸಲೂ ಅವರು ಹಿಂಜರಿಯುವವರಲ್ಲ. ಇದನ್ನು ವರಿಷ್ಠರು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಈ ಬಾರಿಯೂ ಯಡಿಯೂರಪ್ಪನವರನ್ನು ಕೆಳಗಿಳಿಸಲು ವರಿಷ್ಠರು ವಿಫಲರಾದರೆ ಅದು ಬಿಜೆಪಿಯ ರಾಷ್ಟ್ರಮಟ್ಟದ ವರ್ಚಸ್ಸಿಗೆ ಭಾರೀ ಧಕ್ಕೆಯನ್ನು ಉಂಟು ಮಾಡಲಿದೆ. ತಮ್ಮ ವರ್ಚಸ್ಸನ್ನು ಉಳಿಸಿಕೊಳ್ಳಲು ವರಿಷ್ಠರು ಯಡಿಯೂರಪ್ಪನವರ ವಿರುದ್ಧ ಬಿಗಿ ಕ್ರಮ ಕೈಗೊಂಡರೆ, ಬಿಜೆಪಿ ರಾಜ್ಯದಲ್ಲಿ ನೆಲ ಕಚ್ಚಲಿದೆ. ಒಂದಂತೂ ನಿಜ, ಬಿಜೆಪಿಯೊಳಗೆ ಭಿನ್ನರು ನಡೆಸುತ್ತಿರುವ ಹೋರಾಟ ಭ್ರಷ್ಟತೆಯ ವಿರುದ್ಧವಲ್ಲ. ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಯಡಿಯೂರಪ್ಪನ ವರನ್ನು ಕೆಳಗಿಳಿಸಲು ಮುಂದಾಗಿದ್ದಾರೆ. ಒಂದು ವೇಳೆ, ಯಡಿಯೂರಪ್ಪ ಕೆಳಗಿಳಿದರೂ, ಅವರಿ ಗಿಂತ ಮಹಾಭ್ರಷ್ಟನೊಬ್ಬ ಮುಖ್ಯಮಂತ್ರಿ ಗಾದಿ ಯನ್ನೇರುವುದರಲ್ಲಿ ಅನುಮಾನವಿಲ್ಲ. ಆದುದರಿಂದ ಮುಖ್ಯಮಂತ್ರಿ ಬದಲಾವಣೆಗಿಂತ, ಚುನಾ ವಣೆಯೇ ರಾಜ್ಯದ ಭವಿಷ್ಯಕ್ಕೆ ಉತ್ತಮವಾಗಿದೆ.
--ವಾರ್ತಾ ಭಾರತಿ ಸಂಪಾದಕೀಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ