ಗುರುವಾರ, ಜನವರಿ 06, 2011

ನಮ್ಮ ಹಾಗೂ ಪೊಲೀಸರ ಮಂಪರು ಪರೀಕ್ಷೆ ನಡೆಯಲಿ ಪಿಎಫ್‌ಐ ಸದಸ್ಯರ ಸವಾಲ್

ಪತ್ರಿಕಾ ಗೋಷ್ಟಿ
ಮಂಗಳೂರು: ಸಮಾವೇಶಕ್ಕೆ ಹೊರಟ ನಮ್ಮನ್ನು ಬಂಧಿಸಿದ ಡಿಸಿ ಐಬಿ ಮತ್ತು ಬಂಟ್ವಾಳ ಪೊಲೀಸರು ನಮ್ಮ ಮೇಲೆ ಹಿಂದೂ ಮುಖಂಡರ ಕೊಲೆ ಯತ್ನ ಆರೋಪ ಹೊರಿಸಿ ಚಿತ್ರಹಿಂಸೆ ನೀಡಿದ್ದಾರೆ. ನಮ್ಮ ಮೇಲಿ ರುವ ಆರೋಪ ಸಾಬೀತುಪಡಿಸಲು ನಮ್ಮನ್ನು ಮತ್ತು ಪೊಲೀಸರನ್ನೂ ಮಂಪರು ಪರೀಕ್ಷೆ ಮಾಡಲಿ ಹೀಗೆಂದು ಬಹಿರಂಗವಾಗಿ ಸವಾಲು ಹಾಕಿದ್ದಾರೆ ಬಂಧನಕ್ಕೊಳಗಾಗಿ ಜಾಮೀನಿನಲ್ಲಿ ಹೊರಬಂದಿರುವ ಪಿ.ಎಫ್.ಐ. ಸದಸ್ಯರು.
ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪಿ.ಎಫ್.ಐ. ಜಿಲ್ಲಾ ಸಮಿತಿ ಸದಸ್ಯ ಮಹಮ್ಮದ್ ಶರೀಫ್ ಕಳೆದ ತಿಂಗಳು ಏಳರಂದು ಮೈಸೂರಿ ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ಸಮಾವೇಶ ಇತ್ತು. ಇದರಲ್ಲಿ ಭಾಗವಹಿಸಲೆಂದು ಆರರಂದು ರಾತ್ರಿ ನನ್ನ ಸಹಿತ ನವಾಝ್ ಉಳ್ಳಾಲ, ರಶೀದ್, ರಿಯಾಝ್, ನೌಶಾದ್, ಸೈಫುಲ್ಲಾ, ನೂರುಲ್ಲಾ, ಮಹಮ್ಮದ್ ಅನ್ಸಾರ್ ಮತ್ತು ಅಶ್ರಫ್ ಒಂದೇ ವಾಹನದಲ್ಲಿ ಹೊರಟಿದ್ದೆವು. ಕೈಕಂಬ ಪೊಳಲಿ ದ್ವಾರದ ಬಳಿ ತಲುಪಿದಾಗ ಎದುರಿಗೆ ಬಂದ ಪೊಲೀಸ್ ವಾಹನವೊಂದು ನಾವಿದ್ದ ವಾಹನಕ್ಕೆ ಅಡ್ಡವಾಗಿ ನಿಂತಿತ್ತು. ಅದರಲ್ಲಿದ್ದ ಬಂಟ್ವಾಳ ಇನ್ಸ್‌ಪೆಕ್ಟರ್ ನಂಜುಂಡೇಗೌಡ, ಸಿಬ್ಬಂದಿಗಳಾದ ಪಳಲಿ, ಸಂಜೀವ, ವಿಶ್ವನಾಥ್, ವಾಸು ಮತ್ತು ಡಿಸಿಐಬಿ ಪೊಲೀಸರ ಸಹಿತ ೧೫ರಷ್ಟು ಪೊಲೀಸರು ರಿವಾಲ್ವರ್ ತೋರಿಸಿ ನಮ್ಮನ್ನು ಬೆದರಿಸಿ ತಮ್ಮ ವಾಹನಕ್ಕೆ ಹಾಕಿ ಠಾಣೆಗೆ ಕೊಂಡೊಯ್ದರು.
ದಾರಿಯುದ್ದಕ್ಕೂ ನಮ್ಮ ಮೇಲೆ ಹಲ್ಲೆ ಮಾಡಿ, ಚಿತ್ರಹಿಂಸೆ ನೀಡುತ್ತಾ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಇದ್ದರು. ನಮ್ಮ ಮೇಲೆ ಹಿಂದೂ ನಾಯಕರ ಕೊಲೆ ಯತ್ನ ಆರೋಪದಡಿ ೩೫೩, ೧೨೦, ೩೪೧ ಐಪಿಸಿ ಮತ್ತು ೩೦೨ ಸೆಕ್ಷನ್ನಿನಡಿ ಕೇಸು ಹಾಕಿ ಮೂರು ಖಾಲಿ ಕಾಗದಗಳಿಗೆ ಬಲವಂತದಿಂದ ಸಹಿ ಹಾಕಿಸಿ ಮೂರು ದಿನದ ಬಳಿಕ ಮೆಜಿಸ್ಟ್ರೇಟರ ಮನೆಗೆ ಹಾಜರು ಪಡಿಸಿದರು. ಅಲ್ಲದೆ ನಮ್ಮ ಜೊತೆ ಇದ್ದ ರಿಯಾಝ್ ಎಂಬ ಪೋಲಿಯೋ ಪೀಡಿತನ ಬಳಿ ಸೋಂಟೆ ಇತ್ತೆಂದು ಕೇಸು ಹಾಕಿದರು. ರಿಯಾಝ್ ನಡೆಯಬೇಕಾದರೂ ಇತರರ ನೆರವು ಬೇಕು. ಅಂತಹದ್ದರಲ್ಲಿ ಆತನ ಬಳಿ ಸೋಂಟೆ ಇದೆಯೆಂದು ಪೊಳ್ಳು ನೆವ ಹೇಳಲಾಗಿದೆ ಎಂದು ಶರೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಜಿಸ್ಟ್ರೇಟರ ಎದುರು ಹಾಜರು ಪಡಿಸಲು ಕರೆದೊಯ್ಯುವ ವೇಳೆ ಠಾಣೆಯಲ್ಲಿ ನಡೆದ ಘಟನೆಗಳನ್ನು ಹೇಳದಂತೆ ಬೆದರಿಸಿದರು. ಆದರೂ ನಾವು ಎಲ್ಲಾ ವಿಷಯವನ್ನು ತಿಳಿಸಿದ್ದೇವೆ. ಅನ್ಯಾಯದ ವಿರುದ್ಧ ಹೋರಾಟ ಮಾಡುವ ಉದ್ದೇಶದಿಂದ ಪಿ.ಎಫ್.ಐ. ಸೇರಿರುವ ನಮ್ಮ ಮೇಲೆ ಇದುವರೆಗೂ ಯಾವುದೇ ಕೇಸು ಇಲ್ಲ. ಆದರೆ ಪೊಲೀಸರು ನಮ್ಮನ್ನು ಬಂಧಿಸಿ ಕ್ರಿಮಿನಲ್ ಕೇಸು ಹಾಕುವ ಮೂಲಕ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ. ನಮಗಾದ ಅನ್ಯಾಯದ ವಿರುದ್ಧ ಸಂಘಟನೆ ಮತ್ತು ವೈಯಕ್ತಿಕವಾಗಿಯೂ ಕೇಸು ಹಾಕಿ ನ್ಯಾಯಕ್ಕಾಗಿ ಹೋರಾಟ ಮಾಡಲಾಗುವುದು ಎಂದು ಮುಂದಿನ ನಿಲುವನ್ನು ತಿಳಿಸಿದ್ದಾರೆ.
ನಮ್ಮನ್ನು ಬಂಧಿಸಿದ ಬಳಿಕ ಮೂರು ದಿನಗಳವರೆಗೆ ಠಾಣೆಯಲ್ಲಿಟ್ಟ ಪೊಲೀಸರು ಚಿತ್ರಹಿಂಸೆ ನೀಡಿದರಲ್ಲದೆ, ಸಾಧ್ಯವಿದ್ದಷ್ಟು ಜಾತಿ ನಿಂದನೆ ಮಾಡಿದ್ದಾರೆ. ಮರುದಿನ ರಂಗೋಲಿ ಹಾಲಿನ ಬಳಿ ಕರೆದೊಯ್ದು ಸಂಜೆಯವರೆಗೆ ನಿಲ್ಲಿಸಿ, ಬಳಿಕ ಕೆಂಪುಗುಡ್ಡೆಗೆ ಕರೆದೊಯ್ದು ಎಂಟು ಗಂಟೆಯವರೆಗೆ ನಿಲ್ಲಿಸಿದರು. ಮೂರು ದಿನಗಳ ಬಳಿಕ ಮೆಜಿಸ್ಟ್ರೇಟರ ಬಳಿ ಕರೆದೊಯ್ಯುವ ವೇಳೆ ನಿನ್ನೆ ಕೆಂಪುಗುಡ್ಡೆಯಲ್ಲಿ ಬಂಧಿಸಲಾಗಿದೆ ಎಂದು ಹೇಳುವಂತೆ ಗದರಿಸಿದರು. ನಾವಿದ್ದ ಸೆಲ್ ಅದು ಪೊಲೀಸ್ ಠಾಣೆಯಾಗಿರದೆ ಬಜರಂಗದಳದ ಕಚೇರಿಯಂತೆ ಕಂಡಿತ್ತು ಎಂದು ದೌರ್ಜನ್ಯಕ್ಕೊಳಗಾದ ಮಹಮ್ಮದ್ ಅಶ್ರಫ್ ವಿವರಿಸಿದ್ದಾರೆ.
ನಮ್ಮನ್ನು ಬಂಧಿಸುವ ಎರಡು ದಿನಗಳ ಹಿಂದೆ ಕುಂಪಲ ಮಸೀದಿಗೆ ಮಾಂಸ ಎಸೆದ ಪ್ರಕರಣ ನಡೆದಿತ್ತು. ನನ್ನ ಹೆಸರನ್ನು ಕೇಳಿದ ನಂಜುಂಡೇಗೌಡ, ಅದನ್ನು ನಾನೇ ಹಾಕಿದ್ದು ಎಂದು ಒಪ್ಪಿಕೊಳ್ಳುವಂತೆ ಹೇಳಿ, ಒಪ್ಪದಿದ್ದಾಗ ವಿದ್ಯುತ್ ಶಾಕ್ ನೀಡಿದರಲ್ಲದೆ, ಬೆಂಚಿನಲ್ಲಿ ಮಲಗಿಸಿ ರೋಲ್ ಹಾಕುವ ಮೂಲಕ ಎರಡು ದಿನಗಳವರೆಗೆ ನಾನಾ ರೀತಿಯಲ್ಲಿ ಚಿತ್ರಹಿಂಸೆ ನೀಡಿದರು ಎಂದು ನವಾಝ್ ಉಳ್ಳಾಲ ಗದ್ಗತಿಕರಾಗಿ ತಮಗಾದ ಅನ್ಯಾಯವನ್ನು ವಿವರಿಸಿದರು. ಗೋಷ್ಟಿಯಲ್ಲಿ ರಶೀದ್, ನೌಶಾದ್, ಸೈಫುಲ್ಲಾ, ನೂರುಲ್ಲಾ, ಅನ್ಸಾರ್ ಮತ್ತು ಅಶ್ರಫ್ ಉಪಸ್ಥಿತರಿದ್ದರು.
ಆರೋಪಿಗಳೆಂಬ ಕಲ್ಪನೆಂiಲ್ಲಿ ಅಮಾಯಕರಿಗೆ ಶಿಕ್ಷೆ
ಯಾವುದೇ ಕ್ರಿಮಿನಲ್ ಕೃತ್ಯಗಳು ನಡೆಯುವ ಮೊದಲು ಅಥವಾ ನಡೆದ ಬಳಿಕ ಪೊಲೀಸರು ನೈಜ ಆರೋಪಿಗಳನ್ನು ಸರೆ ಹಿಡಿಯಲು ಹರಸಾಹಸ ಪಡುತ್ತಾರೆ. ಅದರಲ್ಲಿ ವಿಫಲರಾದರೆ ಅಮಾಯಕರನ್ನು ಠಾಣೆಗೆ ಕರೆಯಿಸಿ ಅಥವಾ ಬಂಧಿಸಿ ವಿಚಾರಣೆಯ ನೆಪದಲ್ಲಿ ಚಿತ್ರಹಿಂಸೆ ನೀಡಿ ಠಾಣೆಯಲ್ಲಿ ಬಾಕಿಯಿರುವ ಎಲ್ಲಾ ಕೇಸು ಗಳನ್ನು ಅವರ ಮೇಲೆ ಹಾಕಿ ಆತನನ್ನು ಕ್ರಿಮಿನಲ್ ಮಾಡಿ ಬಿಡುವ ಮೂಲಕ ಕೈತೊಳೆದುಕೊಳ್ಳುವ ಪೊಲೀಸರು ನೈಜ ಆರೋಪಿಗಳಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಬಹುತೇಕ ಪ್ರಕರಣಗಳ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಪೊಲೀಸರು ವಿಫಲರಾಗಿದ್ದು ಹಿರಿಯ ಅಧಿಕಾರಿಗಳ ಒತ್ತಡ ಹೆಚ್ಚಾದಂತೆ ಯಾವುದೋ ನೆಪದಲ್ಲಿ ಜೈಲನ್ನೇ ನೋಡದವರನ್ನು ಬಂಧಿಸಿ ಅವರ ಮೇಲೆ ಬಲಪ್ರಯೋಗಿಸಿ ಇಲ್ಲ-ಸಲ್ಲದ ಆರೋಪಗಳನ್ನು ಹೇರಿ ಅವರನ್ನೇ ಅಪರಾಧಿಗಳನ್ನಾಗಿಸಲಾಗುತ್ತಿದೆ. ಹಿಂದೂ ನಾಯಕರು, ವಕೀಲರುಗಳ ಹತ್ಯೆಗೆ ಸಿದ್ಧತೆ ನಡೆಸಲಾಗಿದೆ ಎಂಬ ಆರೋಪದಲ್ಲಿ ಪಿ.ಎಫ್.ಐ. ಕಾರ್ಯಕರ್ತರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗಿದ್ದು ಇದರಿಂದಾಗಿ ಮುಂದೆ ನಡೆಯುವ ಘಟನೆಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂಬ ಆರೋಪ ಸಾರ್ವಜನಿಕರದ್ದಾಗಿದ್ದು ಕಮಿಷನರ್ ಮತ್ತು ಎಸ್.ಪಿ. ಯವರು ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಜನರು ಪೊಲೀಸರ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳಲಿದ್ದಾರೆಂಬ ಅಸಮಾಧಾನ ಸಾರ್ವಜನಿಕರದ್ದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ