ಬೆಂಗಳೂರು : 'ಇದೇ ರೀತಿಯಲ್ಲಿ ಪದೇ ಪದೇ ಎದ್ದು ಮಾತನಾಡುತ್ತಿದ್ದರೆ, ಹೆಸರೇಳಿ ಹೊರ ಹಾಕಿಸಬೇಕಾಗುತ್ತದೆ ನೋಡಿ.'
ಸೋಮವಾರ ವಿಧಾನಸಭೆಯಲ್ಲಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರು ಆಡಳಿತ ಪಕ್ಷದ ಸದಸ್ಯರಿಗೆ ನೀಡಿದ ಎಚ್ಚರಿಕೆ ಇದು.
ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ಕುರಿತು ನಿಲುವಳಿ ಸೂಚನೆ ಮಂಡಿಸಲು ಪ್ರತಿಪಕ್ಷಗಳು ಮುಂದಾಗಿ ಪ್ರಾಥಮಿಕ ಚರ್ಚೆಯಲ್ಲಿ ತೊಡಗಿದ್ದಾಗ ಆಡಳಿತ ಪಕ್ಷದ ಸದಸ್ಯರಾದ ಸಿದ್ದು ಸವದಿ, ಸುನಿಲ್ ವಲ್ಯಾಪುರೆ, ಚಂದ್ರಣ್ಣ, ಕೆ.ಜಿ. ಕುಮಾರಸ್ವಾಮಿ, ಸುರೇಶ್‌ಗೌಡ, ಎಸ್.ಆರ್. ವಿಶ್ವನಾಥ್ ಹಾಗೂ ಇತರರು ಪದೇ ಪದೇ ಎದ್ದು ಕೆಲವು ಹಾಳೆಗಳನ್ನು ತೋರಿಸುತ್ತ ಅಡ್ಡಿ ಮಾಡುತ್ತಿದ್ದರು.
ಪ್ರತಿಪಕ್ಷಗಳ ಸದಸ್ಯರು ಇದಕ್ಕೆ ಪ್ರತಿರೋಧ ತೋರಿದಾಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಗುತ್ತಿತ್ತು. ಆಡಳಿತ ಪಕ್ಷದ ಸದಸ್ಯರು ಮಾತನಾಡಲು ಅವಕಾಶವನ್ನೇ ನೀಡುತ್ತಿಲ್ಲವೆಂದು ಪ್ರತಿಪಕ್ಷಗಳ ಸದಸ್ಯರು ಕೆರಳುತ್ತಿದ್ದರು. ಆಡಳಿತ ಪಕ್ಷದ ಸದಸ್ಯರನ್ನು ಸುಮ್ಮನಿರಿಸುವಂತೆ ಒತ್ತಡ ತರುತ್ತಲೇ ಇದ್ದರು.
ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಪದೇ ಪದೇ ಸುಮ್ಮನಿರುವಂತೆ ಕೇಳಿಕೊಂಡರು ಸಹ ಆಡಳಿತ ಪಕ್ಷದ ಸದಸ್ಯರ ವರ್ತನೆಯಲ್ಲಿ ಮಾತ್ರ ಯಾವುದೇ ಬದಲಾವಣೆಯಾಗುತ್ತಿರಲಿಲ್ಲ. ಸಭಾಧ್ಯಕ್ಷರು ಎದ್ದು ನಿಂತು ಎಚ್ಚರಿಕೆ ನೀಡಿದರೂ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರಿರಲಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯ ಸಚೇತಕ ಡಿ.ಎನ್. ಜೀವರಾಜ್ ಸಹ ತಮ್ಮ ಸದಸ್ಯರನ್ನು ನಿಯಂತ್ರಿಸಲು ಹೋಗುತ್ತಿರಲಿಲ್ಲ.
ಇದರಿಂದ ಒಂದು ಹಂತದಲ್ಲಿ ಕೆರಳಿದ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು, 'ಸುಮ್ಮನೆ ಕೂರದೇ ಹೋದರೆ, ಹೆಸರು ಹೇಳಿ ಹೊರ ಹಾಕಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು. ಆ ಕ್ಷಣಕ್ಕೆ ಸುಮ್ಮನಾದರೆ ಹೊರತು ನಂತರ ಅದೇ ವರ್ತನೆ ಮುಂದುವರೆದಿತ್ತು.
ಕಾಂಗ್ರೆಸ್‌ನ ಪಿ.ಎಂ. ಅಶೋಕ್ ಅವರು 'ಸಿದ್ದು ಸವದಿ ಪೈಲ್ಸ್‌ಗೆ ಆಪರೇಷನ್ ಮಾಡಿಸಿಕೊಂಡಿರಬೇಕು ಆದ್ದರಿಂದಲೇ ಸೀಟಿನಲ್ಲಿ ಕೂರಲಾಗದೇ ಪದೇ ಪದೇ ಎದ್ದೇಳುತ್ತಿದ್ದಾರೆ' ಎಂದು ಹಾಸ್ಯ ಚಟಾಕಿ ಹಾರಿಸಿದಾಗ ಸದನದಲ್ಲಿ ನಗುವಿನ ಅಲೆಗಳು ಎದ್ದವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ