ಭಾನುವಾರ, ಡಿಸೆಂಬರ್ 12, 2010

ಕುಂದಾಪುರದಲ್ಲಿ ಸಂಘಪರಿವಾರ ಕಾರ್ಯಕರ್ತರಿಂದ ದಾಂಧಲೆ: ಸಮಾಜವಿರೋಧಿ ಕೃತ್ಯಕ್ಕೆ ಸಾಕ್ಷಿಯಾದ ಸಮಾಜೋತ್ಸವ

ಕುಂದಾಪುರ, ಡಿ.12: ಕುಂದಾಪುರದ ಗಾಂಧಿ ಮೈದಾನದಲ್ಲಿ ಡಿ.13ರಂದು ಆಯೋಜಿಸಲಾಗಿರುವ ಹಿಂದೂ ಸಮಾಜೋತ್ಸವದ ಅಂಗವಾಗಿ ಕೋಡಿಯಿಂದ ಕುಂದಾಪುರದವರೆಗೆ ಇಂದು ಮಧ್ಯಾಹ್ನ ಹಮ್ಮಿಕೊಳ್ಳಲಾದ ಬೈಕ್ ರ್ಯಾಲಿಯ ವೇಳೆ ಗುಂಪು ಘರ್ಷಣೆ ನಡೆದ ಬಗ್ಗೆ ವರದಿಯಾಗಿದೆ.
ಘಟನೆಯಲ್ಲಿ ಸಂಘಪರಿವಾರದ ಕಾರ್ಯಕರ್ತರೆನ್ನಲಾದವರು ಕೋಡಿ ಹಾಗೂ ಕುಂದಾಪುರಗಳಲ್ಲಿ ಹಲವು ಮನೆ ಹಾಗೂ ಅಂಗಡಿಗಳಿಗೆ ನುಗ್ಗಿ ದಾಂಧಲೆಗೈದು ಹಲವು ಮಂದಿಗೆ ಹಲ್ಲೆ ನಡೆಸಿದ್ದಾರೆನ್ನ ಲಾಗಿದೆ. ಇದರಿಂದ ಲಕ್ಷಾಂತರ ರೂ. ಸೊತ್ತುಗಳು ಹಾನಿಗೊಂಡಿವೆ.
ಕೋಡಿಯಲ್ಲಿ ಆರಂಭಗೊಂಡ ಬಜರಂಗದಳದ ಬೈಕ್ ರ್ಯಾಲಿಯಲ್ಲಿ ಕಾರ್ಯಕರ್ತರು ಉದ್ರೇಕಕಾರಿ ಘೋಷಣೆಗಳನ್ನು ಕೂಗುತ್ತಿದ್ದರೆನ್ನಲಾಗಿದೆ. ಈ ವಿಚಾರದಲ್ಲಿ ಕೋಡಿಯಲ್ಲಿ ಎರಡು ಸಮುದಾಯಗಳ ಮಧ್ಯೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾ ಯಿತೆನ್ನಲಾಗಿದೆ. ಇದನ್ನು ಮುಂದುವರಿಸಿ ಕೊಂಡು ಬಂದ ಬಜರಂಗದಳದ ಕಾರ್ಯಕರ್ತರು ರ್ಯಾಲಿಯುದ್ದಕ್ಕೂ ಹಲವು ಕಡೆ ದಾಂಧಲೆ ನಡೆಸಿ, ಕೆಲವರಿಗೆ ಹಲ್ಲೆ ನಡೆಸಿದ್ದಾರೆ.
ಕುಂದಾಪುರದಲ್ಲಿ ದುಷ್ಕರ್ಮಿಗಳ ದಾಳಿಗೆ ತುತ್ತಾಗಿರುವ ಅಂಗಡಿ.
ಕುಂದಾಪುರದಲ್ಲಿ ಸುಮಾರು ಏಳೆಂಟು ತಂಡಗಳಾಗಿ ಬೈಕ್‌ನಲ್ಲಿ ಬಂದ ಕಾರ್ಯಕರ್ತರು, ಏಕ ಕಾಲದಲ್ಲಿ ಶಾಸ್ತ್ರೀ ಸರ್ಕಲ್ ಹಾಗೂ ಕಾಲೇಜು ರಸ್ತೆಯ ಸುತ್ತಮುತ್ತಲಿರುವ ಒಟ್ಟು 12 ಅಂಗಡಿ ಗಳು ಹಾಗೂ ಎರಡು ಮನೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದಾರೆ. ಇದರಿಂದ ಇಡೀ ಪರಿಸರ ದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಕುಂದಾಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಹಣ, ಸೊತ್ತು ಲೂಟಿ: ಕುಂದಾಪುರ ಕಾಲೇಜು ರಸ್ತೆಯಲ್ಲಿರುವ ಬ್ಯೂಟಿ ಕ್ವಿನ್‌ಗೆ ಮಧ್ಯಾಹ್ನ ಸುಮಾರು 12:30ರ ವೇಳೆಗೆ ನುಗ್ಗಿದ ದುಷ್ಕರ್ಮಿ ಗಳು ಅಂಗಡಿಯ ಗಾಜು ಪುಡಿಗೈದು, ಡ್ರಾವರ್‌ನಲ್ಲಿದ್ದ 6,500ರೂ. ನಗದು ಹಾಗೂ ಹಲವು ಸೊತ್ತುಗಳನ್ನು ಲೂಟಿ ಗೈದು ಪರಾರಿಯಾಗಿದ್ದಾರೆ. ಇದರಿಂದ ಸುಮಾರು ಮೂರು ಲಕ್ಷ ರೂ. ನಷ್ಟ ಉಂಟಾಗಿದೆಂದು ಅಂಗಡಿ ಮಾಲಕ ಹುಸೈನ್ ಹೈಕಾಡಿ ತಿಳಿಸಿದ್ದಾರೆ.
‘ಪಾದುಕಾಲಯ’ ಚಪ್ಪಲಿ ಅಂಗಡಿಗೆ ದಾಳಿ ನಡೆಸಿದ ತಂಡವೊಂದು ಅಂಗಡಿ ಮಾಲಕ ಮುಹಮ್ಮದ್ ಗೌಸ್ ಹಾಗೂ ಅವರ ಮಗನ ಮೇಲೆ ಹಲ್ಲೆ ನಡೆಸಿ, ಅಂಗಡಿ ಧ್ವಂಸಗೊಳಿಸಿದ್ದಾರೆ. ಅದೇ ರೀತಿ ಬ್ಯೂಟಿ ಫೂಟ್‌ವೇರ್, ಶಾಸ್ತ್ರೀಯ ಸರ್ಕಲ್‌ನಲ್ಲಿರುವ ಬ್ಯೂಟಿ ಕ್ವೀನ್, ಡಿಸೈರ್, ಅಪ್ಸರಾ ಪ್ಯಾಶನ್ ಕಾರ್ನರ್, ರುಬಿ ಡ್ರೆಸ್ ಸೆಂಟರ್, ನಿಶಾ ಫೂಟ್‌ವೇರ್, ಕೋಡಿಯ ಝಬೈರ್ ಎಂಬವರ ಅಂಗಡಿಗಳನ್ನು ಹಾನಿಗೊಳಿಸಲಾಗಿದೆ. ಇದರಿಂದ ಸುಮಾರು 7-8 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲಕರು ದೂರಿದ್ದಾರೆ.
ಕುಂದಾಪುರ ಸೀಮಾ ಹೊಟೇಲ್ ಮಾಲಕರ ದ್ವಿಚಕ್ರ ವಾಹನವೊಂದನ್ನು ಬೆಂಕಿ ಹಚ್ಚಿ ಸುಡಲಾಗಿದೆ. ಕುಂದಾಪುರದ ಬ್ಯಾಂಕ್ ಉದ್ಯೋಗಿ ಶಫಿ ಹಾಗೂ ಅಬ್ದುಲ್ ಅಝ್ಗರ್ ಎಂಬವರ ಮನೆಗಳಿಗೂ ದಾಳಿ ನಡೆಸಿ, ಕಿಟಕಿ ಗಾಜುಗಳನ್ನು ಒಡೆದು ದಾಂಧಲೆ ನಡೆಸಿದ್ದಾರೆ. ಹೀಗೆ ಒಟ್ಟು 15 ಮಂದಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಗಂಗೊಳ್ಳಿಯಲ್ಲೂ ದಾಳಿ: ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಂಗೊಳ್ಳಿ ಯಲ್ಲೂ ಗಲಭೆ ಉಂಟಾಗಿ, ಒಂದು ಅಂಗಡಿ ಹಾಗೂ ಮನೆಗಳಿಗೆ ಕಲ್ಲು ತೂರಾಟ ಮಾಡಲಾಗಿದೆ. ಎರಡು ಕಾರುಗಳ ಗಾಜುಗಳನ್ನು ಪುಡಿಗೈಯಲಾಗಿದೆ.
ಗಂಗೊಳ್ಳಿಯ ಮುಹಮ್ಮದ್ ರಾಫಿ (18) ಎಂಬ ಯುವಕನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಪರಾರಿಯಾಗಿದೆ. ಗಾಯಗೊಂಡ ರಾಫಿಯನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿಯ ನರೇಶ್ ಕಿಣಿ ಎಂಬವರ ಅಂಗಡಿಗೆ ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ.
ತಂಡವೊಂದು ಮೂವರಿಗೆ ಹಲ್ಲೆ ನಡೆಸಿರುವ ಬಗ್ಗೆಯೂ ವರದಿಯಾಗಿದೆ. ಈ ಸಂಬಂಧ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗಂಗೊಳ್ಳಿ ಪರಿಸರದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಪಿ ಪವಾರ್ ಭೇಟಿ: ಗಲಭೆ ಸಂಭವಿಸಿದ ಕೋಡಿ, ಕುಂದಾಪುರ, ಗಂಗೊಳ್ಳಿಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರವೀಣ್ ಮಧುಕರ್ ಪವಾರ್ ಭೇಎಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
‘ಕೋಡಿಯಲ್ಲಿ ಗುಂಪು ಘರ್ಷಣೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಅಂಗಡಿಗಳ ಮೇಲೆ ಕಲ್ಲು ತೂರಾಟ ಮಾಡಿ ದಾಳಿ ನಡೆಸಲಾಗಿದೆ. ಇದರಿಂದ ಕೆಲವರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರದಲ್ಲಿ ಒಟ್ಟು 11 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ’ ಎಂದು ಪವಾರ್ ತಿಳಿಸಿದ್ದಾರೆ.
ಗಂಗೊಳ್ಳಿಯಲ್ಲಿಯೂ ಕೂಡ ಮನೆ ಹಾಗೂ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಇದಕ್ಕೆ ಸಂಬಂಧಿದಂತೆ ಮೂವರನ್ನು ಬಂಧಿಸ ಲಾಗಿದೆ. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಸುದ್ದಿಗಾರರಿಗೆ ವಿವರಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ