ತಿರುವನಂತಪುರಂ, ಡಿ. 11: ದಕ್ಷಿಣ ಭಾರತದ ರಾಜ್ಯಗಳು ‘‘ಗುಜರಾತ್ ಮಾದರಿ’’ಯನ್ನು ಅನುಸರಿಸುತ್ತಿವೆ ಎಂದು ದಿಲ್ಲಿ ವಿಶ್ವ ವಿದ್ಯಾಲಯದ ಪ್ರೊಫೆಸರ್, ಮಾನವ ಹಕ್ಕು ಹೋರಾಟಗಾರ ಮತ್ತು ಸಂಸತ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಒಂದು ಬಾರಿ ಮರಣ ದಂಡನೆಗೆ ಗುರಿಯಾಗಿ ಬಳಿಕ ಖುಲಾಸೆಗೊಳಗಾಗಿರುವ ಎಸ್‌ಎಆರ್ ಗೀಲಾನಿ ಎಚ್ಚರಿಕೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಾನವ ಹಕ್ಕು ದಿನಗಳ ಅಂಗವಾಗಿ ಮಅದನಿಗೆ ನ್ಯಾಯಕ್ಕಾಗಿ ವೇದಿಯು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೀಲಾನಿ, ‘‘ದಕ್ಷಿಣದ ರಾಜ್ಯಗಳು ಗುಜರಾತ್‌ನ ಹಾದಿಯಲ್ಲಿ ಸಾಗುತ್ತಿವೆ’’ ಎಂದು ಹೇಳಿದ್ದಾರೆ. ‘‘ಅದನ್ನು ತಡೆಯಬೇಕಾಗಿದೆ. ಇಲ್ಲಿನ ಜನರು ಈ ಬೆಳವಣಿಗೆಯನ್ನು ತಡೆಹಿಡಿಯಬೇಕಾಗಿದೆ’’ ಎಂದು ಅವರು ಆಗ್ರಹಿಸಿದರು.
ಕೊಚ್ಚಿಯಲ್ಲಿ ‘ಮಅದನಿಗೆ ನ್ಯಾಯಕ್ಕಾಗಿ ವೇದಿಕೆ’ಯು ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ದಿಲ್ಲಿ ವಿಶ್ವ ವಿದ್ಯಾಲಯದ ಪ್ರೊಫೆಸರ್ ಮತ್ತು ಮಾನವ ಹಕ್ಕು ಹೋರಾಟಗಾರ ಎಸ್‌ಎಆರ್ ಗೀಲಾನಿ ಮಾತನಾಡುತ್ತಿರುವುದು.
ದಕ್ಷಿಣ ಭಾರತವು ಸಹಜವಾಗಿ ಶಾಂತಿಯುತ ಪ್ರದೇಶವಾಗಿದೆ. ಆದರೆ ಇದೀಗ ಪರಿಸ್ಥಿತಿ ಬದಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ಬೆಂಗಳೂರು ಜೈಲಿನಲ್ಲಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷ ಅಬ್ದುನ್ನಾಸರ್ ಮಅದನಿಯನ್ನು ಕರ್ನಾಟಕ ಪೊಲೀಸರು 2008ರ ಬೆಂಗಳೂರು ಸರಣಿ ಸ್ಫೋಟ ಮತ್ತು 2010ರ ಸ್ಟೇಡಿಯಂ ಸ್ಫೋಟದಲ್ಲಿ ಸಿಲುಕಿಸಿದ್ದಾರೆ ಎಂದು ಗೀಲಾನಿ ಆಪಾದಿಸಿದ್ದಾರೆ.
ಯಾವುದೇ ತಪ್ಪಿಲ್ಲದೆ, ಮಅದನಿ ತಮಿಳುನಾಡು ಜೈಲಿನಲ್ಲಿ ಒಂಬತ್ತೂವರೆ ವರ್ಷ ಕಳೆದಿದ್ದರು. ಕೊಯಂಬತ್ತೂರ್ ಸ್ಫೋಟದಲ್ಲಿ ಅವರದೇನೂ ತಪ್ಪಿಲ್ಲ ಎಂಬುದು ಸಾಬೀತಾದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು. ‘‘ಅವರಲ್ಲಿ ಕ್ಷಮೆಯಾಚಿಸುವ ಬದಲು, ಅವರಿಗಾದ ನಷ್ಟಕ್ಕೆ ಪರಿಹಾರ ಸೂಚಿಸುವ ಬದಲು ವ್ಯವಸ್ಥೆಯು ಅವರನ್ನು ಮತ್ತೊಮ್ಮೆ ಪ್ರಕರಣ (ಬೆಂಗಳೂರು ಸ್ಫೋಟ ಪ್ರಕರಣಗಳು)ದಲ್ಲಿ ಸಿಲುಕಿಸಿವೆ’’ ಎಂದು ಗೀಲಾನಿ ವಿಷಾದ ವ್ಯಕ್ತ ಪಡಿಸಿದರು.
ಶೋಷಿತ ಮುಸ್ಲಿಮರು, ದಲಿತರು ಮತ್ತು ಆದಿವಾಸಿಗಳಿಗೆ ಬೆಂಬಲಿಸಿದುದೇ ಮಅದನಿ ಮಾಡಿದ ‘ನಿಜವಾದ ಅಪರಾಧ’ ಎಂದು ಗೀಲಾನಿ ಅಭಿಪ್ರಾಯಪಟ್ಟರು. ಆದುದರಿಂದಾಗಿಯೇ ಅವರನ್ನು ಭಯೋತ್ಪಾದಕ ಚಟುವಟಿಕೆಗಳ ಆರೋಪದಲ್ಲಿ ಸಿಲುಕಿಸಿ ಬಂಧಿಸಲಾಗಿದೆ ಮತ್ತು ಜಾಮೀನು ನಿರಾಕರಿಸಲಾಗಿದೆ ಎಂದು ಗೀಲಾನಿ ಆಪಾದಿಸಿದರು.
ತನ್ನ ಮತ್ತು ಮಅದನಿಯ ನಡುವೆ ಸಾಮ್ಯತೆಯನ್ನು ವ್ಯಕ್ತ ಪಡಿಸಿದ ಗೀಲಾನಿ, 2001ರ ಡಿಸೆಂಬರ್ 13ರಂದು ಸಂಸತ್ ಮೇಲಿನ ದಾಳಿಯ ಬಳಿಕ ಗುಪ್ತಚರ ಇಲಾಖೆ ಮತ್ತು ಮಾಧ್ಯಮಗಳು ತನ್ನನ್ನೂ ಉಗ್ರ ಭಯೋತ್ಪಾದಕನೆಂದು ಬಿಂಬಿಸಿದ್ದವು ಎಂದು ತಿಳಿಸಿದರು. ಅವರ ಚಿತ್ರಣ ಹೇಗಿತ್ತೆಂದರೆ, ಹಿರಿಯ ಪೊಲೀಸ್ ಅಧಿಕಾರಿಗಳೂ ತನ್ನ ಬಳಿ ಬರಲು ಹೆದರುತ್ತಿದ್ದರು.
ಮಅದನಿ ಪ್ರಕರಣದಲ್ಲೂ ಇಂತಹುದೇ ನಡೆದಿದೆ. ಮಾಧ್ಯಮ ಮತ್ತು ಪೊಲೀಸರು ಎಲ್ಲ ರೀತಿಯ ತಪ್ಪು ಅಭಿಪ್ರಾಯಗಳನ್ನು ಜನತೆಯ ನಡುವೆ ಹಂಚುತ್ತಿದ್ದಾರೆ ಎಂದು ಗೀಲಾನಿ ಆಪಾದಿಸಿದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಎರ್ನಾಕುಳಂ ಸಂಸದ, ಮಅದನಿಗೆ ನ್ಯಾಯಕ್ಕಾಗಿ ವೇದಿಕೆಯ ಅಧ್ಯಕ್ಷ ಸೆಬಾಸ್ಟಿಯನ್ ಪೌಲ್ ಮಾತನಾಡಿ, ತಾನು ಇತ್ತೀಚೆಗೆ ಬೆಂಗಳೂರು ಜೈಲಿಗೆ ಭೇಟಿ ನೀಡಿದ್ದೆ, ಅಲ್ಲಿ ಮಅದನಿಗೆ ಜೈಲುವಾಸಿಯೊಬ್ಬನಿಗೆ ನೀಡಲಾಗುವ ಸಾಮಾನ್ಯ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ಆಪಾದಿಸಿದರು. ಮಅದನಿಯನ್ನು ಹಿಂಸಿಸುವುದಕ್ಕಾಗಿ ಅವರ ಕೋಣೆಯಲ್ಲಿ ಎಲ್ಲ ಸಮಯವೂ ಬೆಳಕು ಮತ್ತು ಕ್ಯಾಮೆರಾಗಳನ್ನು ಚಾಲನೆಯಲ್ಲಿಡಲಾಗಿದೆ ಎಂದು ಸೆಬಾಸ್ಟಿಯನ್ ತಿಳಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ